ADVERTISEMENT

ತುರ್ತಿಗೊಂದು ಮುರ್ಗಿ ಸಂತಿ

ಸುದೇಶ ದೊಡ್ಡಪಾಳ್ಯ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

ಆಕೆ ಗುಲ್ಬರ್ಗ ಸಮೀಪದ ಪಟ್ಟಣ ಗ್ರಾಮದ ಸುಮಿತ್ರಾ ಈರಣ್ಣ ನಿಕ್ಸಿ. ದೀಪಾವಳಿ ಹಬ್ಬಕ್ಕೆ ಹೋಳಿಗೆ ಮಾಡಲು ಹಣ ಇರಲಿಲ್ಲ. ಮನೆಯಲ್ಲಿದ್ದ ಕೋಳಿಗಳನ್ನು ಸಂತೆಯಲ್ಲಿ ಬಿಕರಿ ಮಾಡಲು ತಂದಿದ್ದಳು. ಆಕೆ ಮುಂದೆ ಎಂಟು ಕೋಳಿಗಳಿದ್ದವು. ಅವುಗಳನ್ನು ಮಾರಾಟ ಮಾಡಲು ಬಜಾರ್‌ಗೆ ಹೋಗಬೇಕು. ಇಲ್ಲದೇ ಹೋದರೆ ಹಬ್ಬಕ್ಕೆ ಮನೆಯಲ್ಲಿ ಹೋಳಿಗೆಯೇ ಇಲ್ಲದಂತಾಗುತ್ತದೆ.

ಈತ ಗುಲ್ಬರ್ಗದ ಬ್ರಹ್ಮಪುರ ಬಡಾವಣೆಯ ಬಸವರಾಜು ಗೋಳಾದ್‌. ಕರೆಂಟು ಬಿಲ್ ಹಾಗೂ ಶಾಲೆಗೆ ಹೋಗುವ ನಾಲ್ಕು ಮಕ್ಕಳ ಶುಲ್ಕ ಕಟ್ಟಬೇಕು. ಕೈಯಲ್ಲಿ ರೊಕ್ಕ ಇರಲಿಲ್ಲ. ಆಗ ನೆನಪಿಗೆ ಬಂದಿದ್ದು ತನ್ನ ಬಳಿ ಇದ್ದ ‘ಕೋಳಿ ಅಂಕ’ದಲ್ಲಿ ಕಾದಾಡುವ ಕೋಳಿ. ಅದನ್ನೇ ಮಾರಾಟ ಮಾಡಲು ಸಂತೆಗೆ ಬಂದಿದ್ದ.

ಗುಲ್ಬರ್ಗದ ಕೋಟೆ ರಸ್ತೆಯಲ್ಲಿ ಪ್ರತಿ ಶನಿವಾರ ಮುಂಜಾನೆ ಆರರಿಂದ ಮಧ್ಯಾಹ್ನ ಮೂರರವರೆಗೆ ನಡೆಯುವ ‘ಮುರ್ಗಿ ಸಂತೆ’ಯಲ್ಲಿ ಇಂತಹ ಹತ್ತಾರು ಚಿತ್ರಗಳು ಸಿಗುತ್ತವೆ.

ಮುರ್ಗಿ ಸಂತೆಯ ವಿಶೇಷ ಎಂದರೆ ನಾಟಿಕೋಳಿಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಇಲ್ಲಿ ಕೋಳಿಗಳನ್ನು ಮಾರಲು ಬರುವವರಿಗೆ ಹಣದ ತುರ್ತು ಇರುತ್ತದೆ.

ಈ ಅಪರೂಪದ ‘ಮುರ್ಗಿ ಸಂತಿ’ಗೆ ಗುಲ್ಬರ್ಗದ ಅಕ್ಕಪಕ್ಕದ ಹತ್ತಾರು ಹಳ್ಳಿಗಳ ಮಹಿಳೆಯರು ಹೆಚ್ಚಾಗಿ ಬರುತ್ತಾರೆ. ತಾವೇ ಸಾಕಿದ ಕೋಳಿಗಳಿಂದ ಮೊಟ್ಟೆ ಇಡಿಸಿ, ಅವುಗಳಿಗೆ ಕಾವು ಕೊಡಿಸಿ, ಮರಿ ಮಾಡಿಸಿ, ಸಾಕಿ, ಸಂರಕ್ಷಿಸಿ ದೊಡ್ಡದು ಮಾಡಿ ಇಲ್ಲಿ ಮಾರಾಟಕ್ಕೆ ತರುತ್ತಾರೆ. ಮಹಿಳೆಯರ ನಡುವೆ ಗಂಡಸರೂ, ಮಕ್ಕಳು ಮರಿಗಳೂ ಇರುತ್ತವೆ.

ಈ ಸಂತೆಯಲ್ಲಿ ಅಂದಾಜು 500 ಕೋಳಿಗಳು ಕೈ ಬದಲಾಗುತ್ತವೆ. ಆದರೆ ಯಾರ ಬಳಿಯೂ ತಕ್ಕಡಿ ಇರುವುದಿಲ್ಲ! ಗಿರಾಕಿಗಳೂ ಕೇಳುವುದಿಲ್ಲ. ಕೋಳಿಯನ್ನು ಕೈಯಲ್ಲಿ ಎತ್ತಿ ಹಿಡಿದು ತೂಕ ಅಂದಾಜು ಮಾಡಲಾಗುತ್ತದೆ. ಕೊಡುವವರು, ಕೊಳ್ಳುವವರು ಇಬ್ಬರೂ ಇದಕ್ಕೆ ಬದ್ಧ. ಮಾರುವವರು ಒಂದು ರೇಟ್ ಹೇಳುತ್ತಾರೆ. ಕೊಳ್ಳುವವರು ಮತ್ತೊಂದು ರೇಟ್‌ಗೆ  ಕೇಳುತ್ತಾರೆ. ಒಂದಷ್ಟು ಹೊತ್ತು ಚೌಕಾಸಿ ಜಾರಿಯಲ್ಲಿರುತ್ತದೆ.

ಹೆಂಗಸರಿಗೆ ಕೋಳಿ ಸಾಕುವುದು ಉಪ ಕಸುಬು. ತಲೆಗೋಳಿಯಿಂದ ಮೊಟ್ಟೆ ಇಡಿಸಿ ಮರಿ ಮಾಡಿಸುತ್ತಾರೆ. ಒಂದೊಂದು ಕೋಳಿ ಹದಿನೈದರಿಂದ ಇಪ್ಪತ್ತು ಮರಿಗಳನ್ನು ಮಾಡುತ್ತವೆ. ಅವುಗಳಲ್ಲಿ ಎಷ್ಟು ಉಳಿಯುತ್ತವೆಯೋ ಅಷ್ಟೇ ಲಾಭ. ಏಕೆಂದರೆ ಮರಿಗಳನ್ನು ನಾಯಿ, ಬೆಕ್ಕು, ಮುಂಗುಸಿ, ಹದ್ದು, ಕಾಗೆಗಳಿಂದ ರಕ್ಷಿಸುವುದೇ ದೊಡ್ಡ ಸವಾಲು. ಅವುಗಳ ಬಾಯಿಂದ ರಕ್ಷಿಸಿ, ಪೋಷಿಸಿದ ಕೋಳಿ ಮರಿಗಳು ಒಂದು, ಒಂದೂವರೆ, ಎರಡು ಕೆ.ಜಿ ತೂಗುವಾಗ ಮಾರಾಟಕ್ಕೆ ತರುತ್ತಾರೆ.

‘ನಾವು ಕೋಳಿ ಸಾಕುತ್ತೇವೆ. ಆದರೆ ನಾವೇ ಉಣ್ಣುವುದು ಅಪರೂಪ. ನಾವೇ ಕೊಯ್ದು ಉಂಡರೆ ತುರ್ತು ಸಂದರ್ಭದಲ್ಲಿ ಮಾರಾಟ ಮಾಡಲು ಕೋಳಿಗಳೇ ಇಲ್ಲದಂತಾಗುತ್ತವೆ’ ಎನ್ನುತ್ತಾರೆ ಮನೋಹರ ಅಮೃತ ಕಾಂಬ್ಲೆ.

ಈ ಸಂತೆಯಲ್ಲಿ ಏಜೆಂಟರೂ ಇರುತ್ತಾರೆ. ಅವರು ಹಳ್ಳಿಗರಿಂದ ಕೋಳಿಗಳನ್ನು ಖರೀದಿಸಿ, ಬಳಿಕ ಹೆಚ್ಚಿನ ಲಾಭಕ್ಕೆ ಮಾರುತ್ತಾರೆ.
‘ಮುರ್ಗಿ ಸಂತಿ’ಯಲ್ಲಿ ಖರೀದಿಗೆ ಹೆಚ್ಚಾಗಿ ಬರುವವರು ಸಂಡೆ ಸ್ಪೆಷಲ್‌ (ಭಾನುವಾರ ಬಾಡೂಟ) ಪ್ರಿಯರು. ಇವರ ನಂತರ ಬಾರ್‌ ಅಂಡ್‌ ರೆಸ್ಟೊರೆಂಟ್‌, ಹೋಟೆಲ್‌ನವರು ಬರುತ್ತಾರೆ. ಇದೇ ಜಾಗದಲ್ಲಿ ಈ ಸಂತೆ ಏಳೆಂಟು ದಶಕಗಳಿಂದಲೂ ನಡೆಯುತ್ತಿದೆ.

ರಸ್ತೆಯಲ್ಲಿಯೇ ಸಂತೆ ನಡೆಯುವುದರಿಂದ ಜನ, ಕೋಳಿಗಳ ನಡುವೆಯೇ ವಾಹನಗಳು ನುಸುಳುತ್ತವೆ. ಮಳೆಗಾಲದಲ್ಲಿ ಇಲ್ಲಿ ಕಾಲಿಡಲೂ ಕಷ್ಟವಾಗುತ್ತದೆ. ಬೇಸಿಗೆಯಲ್ಲಿ ಕೋಳಿ ಜತೆಗೆ ಮಾರುವವರು, ಕೊಳ್ಳುವವರೂ ಬೇಯಬೇಕು.

ಇಲ್ಲಿ ತಮಾಷೆಗಳಿಗೇನೂ ಕೊರತೆ ಇರುವುದಿಲ್ಲ. ನಾಲ್ಕು ನೂರು ರೂಪಾಯಿಗಿಂತ ಕಡಿಮೆಗೆ ತನ್ನ ಹುಂಜವನ್ನು ಕೊಡಲು ನಿರಾಕರಿಸಿದ ವೃದ್ಧೆಗೆ ಗಿರಾಕಿಯೊಬ್ಬ ಕೇಳಿದ- ‘ನೀನು ಹುಂಜಕ್ಕೆ ಹಾಕಿದ ಅಕ್ಕಿ ರೇಟನ್ನು ಸೇರಿಸಿದ್ದೀಯಾ’ ಎಂದು. ಆಕೆ ಆತನ ವ್ಯಂಗ್ಯಕ್ಕೆ ಸೊಪ್ಪು ಹಾಕಲಿಲ್ಲ. ಆದರೆ ಆಕೆಯ ಹುಂಜ ಮಧ್ಯಾಹ್ನವಾದರೂ ಬಿಕರಿ ಆಗಲೇ ಇಲ್ಲ.

ಇನ್ನೊಂದು ಪ್ರಸಂಗ ಹೀಗಿದೆ: ಸಪ್ಪಗೆ ಇದ್ದ ಹುಂಜವನ್ನು ಕೈಯಲ್ಲಿ ಹಿಡಿದ ಗಿರಾಕಿ, ಅದರ ಕೊಕ್ಕಿಗೆ ಬಲವಾಗಿ ಹೊಡೆದ. ಅದು ನೋವು ತಡೆಯಲಾರದೆ ‘ಕೊಕ್ಕೊಕ್ಕೊ...’ ಎನ್ನುತ್ತ ಮುಚ್ಚಿದ ಕಣ್ಣು ತೆರೆಯಿತು. ಬಳಿಕ ಕಾಲುಗಳನ್ನು ಹಿಡಿದು ತಲೆ ಕೆಳಗೆ ಮಾಡಿ ಪಶುವೈದ್ಯನಂತೆ ಪರೀಕ್ಷಿಸಿ ‘ಇದಕ್ಕೆ ಬೀಮಾರಿ (ರೋಗ) ಬಂದಿದೆ. ಈ ಕೋಳಿಗೆ ಇನ್ನೂರೈವತ್ತು ರೂಪಾಯಿ ಹೇಳುತ್ತೀಯಾ’ ಎಂದು ಹುಂಜದ ಒಡತಿಯನ್ನು ಮಾನಸಿಕವಾಗಿ ಕುಗ್ಗಿಸಿ ಕಡಿಮೆ ಬೆಲೆಗೆ ಕೋಳಿಯನ್ನು ಕೊಳ್ಳುವ ತಂತ್ರವನ್ನು ಬಳಸಿದ. ಆದರೆ ಆಕೆ ‘ನಿನ್ನಂಥ ಗಿರಾಕಿಗಳನ್ನು ಎಷ್ಟು ನೋಡಿಲ್ಲ’ ಎನ್ನುವಂತೆ ಗುರಾಯಿಸಿ, ‘ರೋಗ ಬಂದಿದ್ರೆ ನನ್ನ ಬಳಿಯೇ ಇರಲಿ ಬಿಡು’ ಎಂದು ಆತನ ಕೈಯಿಂದ ಹುಂಜವನ್ನು ಕಿತ್ತುಕೊಂಡಳು. ಆದರೆ ಆತನಿಗೆ ಆ ಹುಂಜದ ಮೇಲೆ ಆಸೆಯಾಗಿತ್ತು. ಕೊನೆಗೂ ಆ ‘ರೋಗ’ದ ಹುಂಜವನ್ನೇ ಖರೀದಿಸಿದ!

ಕಾಳಗದ ಕೋಳಿ ಬಿಕರಿಗೆ!
‘ನನ್ನ ಕೋಳಿ ಥರ ಇಲ್ಲಿರುವ ಮತ್ತೊಂದು ಕೋಳಿ ಇದ್ದರೂ ರೊಕ್ಕ ತೆಗೆದುಕೊಳ್ಳದೇ ಕೊಟ್ಟುಬಿಡುತ್ತೇನೆ’– ಹೀಗೆ ಸವಾಲಿನೊಂದಿಗೆ ತನ್ನ ಕೋಳಿಯನ್ನು ಮಾರಲು ಬ್ರಹ್ಮಪುರದ ಬಸವರಾಜ ಗೋಳಾದ್‌ ಬಂದಿದ್ದ.

ಈತ ಮಾರಲು ತಂದಿದ್ದು ಅಂತಿಂಥ ಕೋಳಿಯಲ್ಲ. ‘ಕೋಳಿ ಅಂಕ’ದಲ್ಲಿ ಸೆಣಸಾಡುವ ಕೋಳಿ. ಪೈಲ್ವಾನ್‌ ರೀತಿಯೇ ಇತ್ತು. ಬಣ್ಣವೂ ಆಕರ್ಷಕವಾಗಿತ್ತು. ಸಂತೆಗೆ ಬಂದಿದ್ದವರು ಈ ಜಂಭದ ಕೋಳಿಯನ್ನು ನೋಡದೇ ಹೋಗುತ್ತಿರಲಿಲ್ಲ.

‘ಕೋಳಿ ರೇಟ್‌ ಎಷ್ಟು’ ಎಂದು ಕೇಳಿದರೆ ‘ಎರಡು ಸಾವಿರ. ಈಗಾಗಲೇ ಒಬ್ಬರು ಒಂದೂವರೆ ಸಾವಿರಕ್ಕೆ ಕೇಳಿದ್ದಾರೆ. ನಾನು ಕೊಟ್ಟಿಲ್ಲ. ಬೆಳಿಗ್ಗೆ ಬಂದಾಗ ಮೂರು ಸಾವಿರ ಹೇಳಿದೆ. ಅರ್ಜೆಂಟ್‌ ರೊಕ್ಕ ಬೇಕಿತ್ತು. ಅದಕ್ಕೆ ರೇಟ್‌ ಕಡಿಮೆ ಮಾಡಿದ್ದೀನಿ’ ಎಂದು ತನ್ನ ಅಸಹಾಯಕತೆಯನ್ನು ಹೇಳಿಕೊಂಡ. ಸಂತೆ ಮುಗಿಯುತ್ತಾ ಬಂದರೂ ಪೈಲ್ವಾನ್‌ನಂಥ ಅಂಕದ ಕೋಳಿಯನ್ನು ಕೊಳ್ಳುವವರು ಬರಲೇ ಇಲ್ಲ. ಇಷ್ಟರಲ್ಲಿ ಗೋಳಾದ್‌ ಮುಖ ಬಾಡಿತ್ತು. ಆದರೂ ತನ್ನ ಮುಂದಿನ ಕೋಳಿಯ ಮೈಯನ್ನು ಮೃದುವಾಗಿ ಸವರುತ್ತಿದ್ದರು. ಇಷ್ಟರಲ್ಲಿ ಗಿರಾಕಿ ಬಂದೇ ಬಿಟ್ಟ. ಹಣ ಮತ್ತು ಕೋಳಿ ಪರಸ್ಪರ ಕೈ ಬದಲಾದಲಾದವು. ಮುರ್ಗಿ ಸಂತೆಯ ಅಂಕಕ್ಕೂ ತೆರೆಬಿದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.