ADVERTISEMENT

ತೂಗುಯ್ಯಾಲೆಯಲ್ಲಿ ಕಲಘಟಗಿ ತೊಟ್ಟಿಲು!

ಗಣೇಶ ಅಮಿನಗಡ
Published 3 ಡಿಸೆಂಬರ್ 2012, 19:30 IST
Last Updated 3 ಡಿಸೆಂಬರ್ 2012, 19:30 IST

ತೊಟ್ಟಿಲು ಹೊತ್ತುಕೊಂಡುತೌರುಬಣ್ಣ ಉಟ್ಕೊಂಡು
ಅಪ್ಪ ಕೊಟ್ಟೆಮ್ಮ ಹೊಡ್ಕೊಂಡು
ತಿಟ್ಹತ್ತಿ ತಿರುಗಿ ನೋಡ್ಯಾಳ...


ಈ ಪ್ರಸಿದ್ಧ ಜಾನಪದ ಹಾಡು ಎಷ್ಟು ಮಂದಿಗೆ ತಾನೇ ನೆನಪಿದೆ? ನೆನಪಿರೋದಾದರೂ ಹೇಗೆ. ಚೊಚ್ಚಲ ಹೆರಿಗೆಯ ನಂತರ ತವರು ಮನೆಯಿಂದ ಗಂಡನ ಮನೆಗೆ ಹೋಗುವ ಮಗಳಿಗೆ ತೊಟ್ಟಿಲು ಕೊಡುವವರೇ ಅತಿ ವಿರಳ.

ತೊಟ್ಟಿಲು ಒಯ್ಯಲೂ ಮಗಳು ಒಪ್ಪಲಾರಳು. ಅವ್ವನ ಮನೆ ತೊಟ್ಟಿಲು ಯಾಕೆ, ತಮ್ಮೂರಲ್ಲಿಯೇ ಬಗೆಬಗೆ ತೊಟ್ಟಿಲು ಸಿಗುತ್ತದೆ ಎಂಬ ಮಾತು. ಈಗ ತೊಟ್ಟಿಲುಗಳಿಗೂ ಹೈಟೆಕ್ ಸ್ಪರ್ಶ.

ಏನಿದ್ದರೂ ಯಂತ್ರಗಳದ್ದೇ ಕಾರುಬಾರು. ಯಾವ ವಿನ್ಯಾಸ ಬೇಕೆಂದು ಹೇಳಿದರೆ ಸಾಕು, ಯಂತ್ರಗಳಲ್ಲೇ ಅವುಗಳ ತಯಾರಿಕೆ. ಕಡಿಮೆ ಬೆಲೆಯದ್ದು ಬೇಕಿದ್ದರೆ ಪ್ಲಾಸ್ಟಿಕ್, ಕಬ್ಬಿಣದವು ಲಭ್ಯ.

ADVERTISEMENT

ಅವ್ವನ ಮನೆಯಲ್ಲಿ ಕೊಟ್ಟ ತೊಟ್ಟಿಲ ಮುಂದೆ ಉಳಿದೆಲ್ಲವೂ ಗೌಣ. ಹಾಗೆಯೇ ನೈಸರ್ಗಿಕ ವಿಧಾನದಲ್ಲಿ ತಯಾರು ಮಾಡಲಾದ ತೊಟ್ಟಿಲುಗಳ ಮುಂದೆ ಯಂತ್ರ ತಯಾರಿಕೆಯ ತೊಟ್ಟಿಲು ಅಷ್ಟಕ್ಕಷ್ಟೇ. ಇದೇ ಕಾರಣಕ್ಕೆ, `ನೈಸರ್ಗಿಕ' ತೊಟ್ಟಿಲು ತಯಾರಿಕೆಯನ್ನು ಜೀವಂತವಾಗಿ ಉಳಿಸಿಕೊಂಡಿದೆ ಧಾರವಾಡ ಜಿಲ್ಲೆಯ ಕಲಘಟಗಿ.

ಚಿತ್ರಗಾರ ಓಣಿಯ ಗಂಗಾಧರ, ಲಕ್ಷ್ಮಣ ಹಾಗೂ ಶಿವಾಜಿ ಸಾವುಕಾರ ಮನೆತನ ಮಾತ್ರ ಆಕರ್ಷಕ ತೊಟ್ಟಿಲುಗಳನ್ನು ತಯಾರಿಸುತ್ತಿವೆ. ಮೊದಮೊದಲು ಐದಾರು ಮನೆತನಗಳು ತೊಟ್ಟಿಲು ತಯಾರಿಸುತ್ತಿದ್ದವು. ಆದರೆ ಉತ್ಪನ್ನ ಕಡಿಮೆ.

ಇತರ ಕುಟುಂಬದವರು ಅನ್ಯ ಉದ್ಯೋಗಗಳ ಮೊರೆ ಹೋದವು. ತೊಟ್ಟಿಲೇ ಜೀವನಾಧಾರ ಮಾಡಿಕೊಳ್ಳುವ ಪಣತೊಟ್ಟ ಈ ಕುಟುಂಬ ಈಗ ಕಲಘಟಗಿ ತೊಟ್ಟಿಲನ್ನು ಉಳಿಸುತ್ತಿರುವ ಮನೆತನ ಎಂಬ ಹೆಗ್ಗಳಿಕೆಗೆ ಪಾತ್ರ.

ಪೌರಾಣಿಕ ಚಿತ್ರಗಳಿಗೆ ಒತ್ತು
ಗಂಗಾಧರರ ಕರಗಳಿಂದ ಒಂದು ಬೊಟ್ಟಿನ ಅಳತೆಯ ತೊಟ್ಟಿಲಲ್ಲಿ ಮಹಾಭಾರತದ ಚಿತ್ರ ರೂಪುಗೊಳ್ಳುತ್ತದೆ. ತೊಟ್ಟಿಲಿನ ಜೊತೆಗೆ ಕಲಾತ್ಮಕ ಟಿಪಾಯಿ, ದಿವಾನ, ಕುರ್ಚಿ, ತೂಗುಯ್ಯಾಲೆ ತಯಾರಿಕೆಗೂ ಅವರದ್ದು ಸಿದ್ಧಹಸ್ತ. ಕಲಾತ್ಮಕ ತೊಟ್ಟಿಲುಗಳಲ್ಲಿ ರಾಮಾಯಣ, ಮಹಾಭಾರತ, ಕೃಷ್ಣಾವತಾರ, ದಶಾವತಾರ, ಶಿವಗಣ, ಕಾಳಿದಾಸನ ಮೇಘದೂತ ಸಂದೇಶ, ಜೈನ ತೀರ್ಥಂಕರರು... ಬೇಡಿಕೆ ಬಂದ ಹಾಗೆ ತೊಟ್ಟಿಲುಗಳು ಅವರಿಂದ ಸಿದ್ಧ. ಕೊಂಚ ದುಬಾರಿ ಎನಿಸಿದರೂ ಈಗಲೂ ಇವರ ತೊಟ್ಟಿಲ ಆಕರ್ಷಣೆ ನಿಂತಿಲ್ಲ. ಇದಕ್ಕೆ ಕಾರಣ, ಗುಣಮಟ್ಟ.

ಕಾಣಿಕೆಯಾಗಿ ನೀಡುವ ಸಲುವಾಗಿ ಆರರಿಂದ ಎಂಟು ಇಂಚು ಎತ್ತರದ ತೊಟ್ಟಿಲುಗಳನ್ನು ಗಾಜಿನ ಪೆಟ್ಟಿಗೆಯಲ್ಲಿಟ್ಟು ತಯಾರಿಸುವ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

ರಾಜ್ಯದಾದ್ಯಂತ ಅಲ್ಲದೇ ಗೋವಾ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮೊದಲಾದ ರಾಜ್ಯಗಳ ಜೊತೆಗೆ ದುಬೈ, ಅಮೆರಿಕ, ಫ್ರಾನ್ಸ್ ಮೊದಲಾದ ದೇಶಗಳಿಗೂ ತೊಟ್ಟಿಲು ಕಳಿಸಿದ ಕೀರ್ತಿ ಅವರದು. ಬಣ್ಣ ಮಾಸದ ಹಾಗೆ ಅವರ ತೊಟ್ಟಿಲುಗಳು ಲಭ್ಯ.

ಮಾರುಕಟ್ಟೆಯಲ್ಲಿ ಸಿಗುವ ಬಣ್ಣ ಬಳಸುವುದಿಲ್ಲ. ಅರಗಿನಿಂದ ತಯಾರಿಸಿದ ಬಣ್ಣ, ಹುಣಸೆಬೀಜ, ಕೇದಗೆ ಗರಿ, ಜೇಡಿಮಣ್ಣಿನ ಮೂಲಕ ಬಣ್ಣ ತಯಾರಿಸುತ್ತಾರೆ.

ಹುಣಸೆಬೀಜಗಳನ್ನು ನೀರಲ್ಲಿ ನೆನೆಸಿಟ್ಟು ರುಬ್ಬುತ್ತಾರೆ. ನಂತರ ಕುದಿಸಿ ಬಟ್ಟೆಯಲ್ಲಿ ಸೋಸಿದ ಜೇಡಿಮಣ್ಣನ್ನು ಮಿಶ್ರಣಗೊಳಿಸಿ ತೊಟ್ಟಿಲುಗಳಿಗೆ ಹಚ್ಚುತ್ತಾರೆ. ಇದಾದ ಮೇಲೆ ನುಣುಪಾದ ಕಲ್ಲುಗಳಿಂದ ಉಜ್ಜುತ್ತಾರೆ. ಆಮೇಲೆ ಕೇದಗೆ ಎಲೆಯಿಂದ ಪಾಲಿಶ್ ಮಾಡುತ್ತಾರೆ.

`50 ವರ್ಷಗಳ ಹಿಂದೆ ಮನೆ ಮನೆಗೆ ಹೋಗಿ 16 ರೂಪಾಯಿಗೆ ತೊಟ್ಟಿಲು ಮಾರಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಈಗ ತೊಟ್ಟಿಲಿನಿಂದ ಹೊಟ್ಟೆ ತುಂಬದೆಂದು ಪಲ್ಲಕ್ಕಿ, ದುರುಗಮುರಗಿಯವರಿಗೆ ದೇವಿ ಮೂರ್ತಿಗಳನ್ನು ಮಾಡಿಕೊಡುತ್ತೇವೆ' ಎನ್ನುವ 73 ವರ್ಷದ ಗಂಗಾಧರ ಹಾಗೂ 65 ವರ್ಷದ ಲಕ್ಷ್ಮಣ `ಆರ್ಡರ್ ಕೊಟ್ಟರೆ ಮಾತ್ರ ತೊಟ್ಟಿಲು ಮಾಡುತ್ತೇವೆ' ಎನ್ನುತ್ತಾರೆ.

ಕಬ್ಬಿಣ, ಪ್ಲಾಸ್ಟಿಕ್ ತೊಟ್ಟಿಲುಗಳ ನಡುವೆ ಕಲಘಟಗಿ ತೊಟ್ಟಿಲು ಸೊಗಸಾಗಿದ್ದರೂ ಸೊರಗುತ್ತಿದೆ.`ನೈಸರ್ಗಿಕ' ಲೇಪನದ ಮುಂದೆ ಯಂತ್ರಗಳ ಕೃತಕ ಬಣ್ಣವೇ ಮೇಲುಗೈಯಾಗಿದೆ. ಇದಕ್ಕೆ ಇನ್ನೊಂದು ಕಾರಣವೂ ಇದೆ. ತೊಟ್ಟಿಲುಗಳ ಬೆಲೆ 10ರಿಂದ 12 ಸಾವಿರ. ಹೀಗಾಗಿ ಎಲ್ಲರೂ ತೊಟ್ಟಿಲು ಮಾಡಿಸಲು ಮುಂದಾಗುವುದಿಲ್ಲ.

ಜೊತೆಗೆ ತೊಟ್ಟಿಲು ಮಾಡುತ್ತಿರುವ ಗಂಗಾಧರ ಹಾಗೂ ಲಕ್ಷ್ಮಣ ಅವರಿಗೆ ವಯಸ್ಸಾಗಿದೆ. ಆದರೂ ತಮಗೆ ಒಲಿದ ಕಲೆಯನ್ನು ಇತರರಿಗೆ ಕಲಿಸಲು ಅವರು ಮುಂದಾಗಿದ್ದಾರೆ.

`ಯಾರಾದರೂ ಮುಂದೆ ಬಂದರೆ ಕಲಿಸುತ್ತೇವೆ. ಆದರೆ ಯಾರೂ ಬರುತ್ತಿಲ್ಲ. ಇದರಿಂದ ಕಲಘಟಗಿ ತೊಟ್ಟಿಲು  ತೂಗುಯ್ಯಾಲೆಯ ಸ್ಥಿತಿಯಲ್ಲಿದೆ' ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.