ADVERTISEMENT

ದರೋಜಿ ಚಾಪೆಗೆ ಬಂದ ದುರಂತ

ಪಂಡಿತಾರಾಧ್ಯ ಎಚ್.ಎಂ ಮೆಟ್ರಿ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ಗ್ರಾಮ ಸಂಸ್ಕೃತಿಯಲ್ಲಿ ಪರಂಪರಾಗತವಾಗಿ ಬಂದು ಕ್ರಮೇಣ ಕ್ಷೀಣಿಸುತ್ತಿರುವ ವೃತ್ತಿಗಳಲ್ಲಿ `ಕಡ್ಡಿ ಚಾಪೆ~ ಹೆಣೆಯುವುದೂ ಒಂದು. ಆಧುನಿಕತೆಯ ಗಾಳಿಯಲ್ಲಿ ಕೆಲವೊಂದು ಗುಡಿ ಕೈಗಾರಿಕೆಗಳು ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಈ ಸಾಲಿಗೆ ಕಡ್ಡಿ ಚಾಪೆ ಮಗ್ಗಗಳನ್ನು ಸೇರಿಸಬಹುದು.

ಕಡ್ಡಿ ಚಾಪೆ ಮಗ್ಗವನ್ನೇ ನಂಬಿ ಜೀವನ ಮಾಡುತ್ತಿದ್ದ ಅನೇಕ ಕುಟುಂಬಗಳ ತುತ್ತು ಅನ್ನಕ್ಕೂ ಈಗ ಕುತ್ತು ಬಂದಿದೆ.ಗಣಿ ನಾಡಿನ ಸಂಡೂರು ತಾಲ್ಲೂಕು ಹಳೇದರೋಜಿ ಗ್ರಾಮದ ಕಡ್ಡಿ ಚಾಪೆ ಒಂದು ಕಾಲದಲ್ಲಿ ಬಡವರಿಂದ ಹಿಡಿದು ಶ್ರೀಮಂತರ ವರೆಗೆ ಎಲ್ಲ ವರ್ಗದಲ್ಲೂ ತುಂಬಾ ಬೇಡಿಕೆಯಲ್ಲಿತ್ತು.

ದೇವರ ಮನೆಯಲ್ಲಿ ಪೂಜೆಗೆ ಕುಳಿತುಕೊಳ್ಳಲು, ಊಟಕ್ಕೆ ಕುಳಿತಾಗ ಮತ್ತು ಮಲಗುವಾಗ ಹಾಸಬಹುದು. ಏಕೆಂದರೆ ಕಡ್ಡಿ ಚಾಪೆ ತುಂಬಾ ಶ್ರೇಷ್ಠ ಎಂದು ಹಿರಿಯರು ಪರಿಗಣಿಸಿದ್ದರು. ಆದರೆ ಅದೆಲ್ಲ ಇಂದು ಪ್ಲಾಸ್ಟಿಕ್ ಚಾಪೆ ದಾಳಿಯಲ್ಲಿ ಇತಿಹಾಸದ ಪುಟ ಸೇರುತ್ತಿದೆ.

ಕಡ್ಡಿ ಚಾಪೆಗಳ ಮೇಲೆ ವಿಶ್ರಾಂತಿ ತೆಗೆದುಕೊಳ್ಳುವುದರಿಂದ ಮತ್ತು ಮಲಗುವುದರಿಂದ ರಕ್ತಚಲನೆ ಚುರುಕಾಗುತ್ತದೆ ಎಂಬುದು ಬಳಸಿದವರ ಅನುಭವ. ಆದರೆ ಇದ್ಯಾವುದೂ ಕಡ್ಡಿ ಚಾಪೆಯ ರಕ್ಷಣೆಗೆ ಬರುತ್ತಿಲ್ಲ. ಮನೆಗಳಲ್ಲಿ ಕಡ್ಡಿ ಚಾಪೆಗಳೇ ಅಪರೂಪವಾಗಿವೆ.

ಕೆಲವೇ ವರ್ಷದ ಹಿಂದಿನ ವರೆಗೂ ಹಳೇದರೋಜಿ ಗ್ರಾಮದಲ್ಲಿ 40- 45 ಕುಟುಂಬಗಳು ಚಾಪೆ ಮಗ್ಗವನ್ನೇ ನೆಚ್ಚಿ ಜೀವನ ಮಾಡುತ್ತಿದ್ದವು. ಈಗ ಇದು ಬೆರಳೆಣಿಕೆಯಷ್ಟಕ್ಕೆ ಇಳಿದಿದೆ.
ಕಚ್ಚಾ ವಸ್ತು

ಚಾಪೆ ನೇಯಲು ಪ್ರಮುಖವಾಗಿ ಕಚ್ಚಾ ವಸ್ತು ಎಂದರೆ ಕಡ್ಡಿ (ದುಂಡು ಆಪು). ಆದರೆ ಇದು ಎಲ್ಲಿಬೇಕೆಂದರಲ್ಲಿ ದೊರೆಯುವುದಿಲ್ಲ. ಹೆಚ್ಚಾಗಿ ಹಳ್ಳ, ಕೊಳ್ಳ, ನದಿ ಇರುವ ಸ್ಥಳದಲ್ಲಿ ಬೆಳೆದಿರುತ್ತದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ಭಾಗದಲ್ಲಿ ತುಂಗಭದ್ರಾ ನದಿ ಎರಡೂ ದಂಡೆಯಲ್ಲಿ ಚಾಪೆ ನೇಯಲು ಬೇಕಾದ ಕಡ್ಡಿ ದೊರೆಯುತ್ತದೆ.

ಚಾಪೆ ಹೆಣೆಯುವವರು ನದಿ ಭಾಗದಲ್ಲಿ 10-12 ದಿನಗಳ ಕಾಲ ಟೆಂಟ್ ಹೊಡೆದು  ಕಡ್ಡಿ ಸಂಗ್ರಹಿಸಿ ಅಲ್ಲಿಯೇ ನೀಟಾಗಿ ತುಂಡು ಮಾಡಿ ಒಣಗಿಸಿಕೊಂಡು ಮಗ್ಗ ಇರುವ ತಮ್ಮ ಗ್ರಾಮಕ್ಕೆ ತರುತ್ತಾರೆ.ಚಾಪೆ ನೇಯುವ ಮುನ್ನ ಕಡ್ಡಿಗಳಿಗೆ ಬಣ್ಣ ಹಾಕುತ್ತಾರೆ.

ಬಣ್ಣ ಹಾಕಿದ ಕಡ್ಡಿಗಳನ್ನು ಎರಡೂ ಅಂಚುಗಳಲ್ಲಿ ಹೆಣೆದರೆ ಚಾಪೆ ಅಂದ ಹೆಚ್ಚುತ್ತದೆ ಎನ್ನುವುದು ಅವರ ಅಭಿಪ್ರಾಯ. ಮಗ್ಗಕ್ಕೆ ನೈಲಾನ್ ದಾರ ಅಳವಡಿಸಿಕೊಂಡು ಚಾಪೆ ನೇಯುತ್ತಾರೆ. ಇಬ್ಬರಾದರೆ ದಿನಕ್ಕೆ 8 ಚಾಪೆ ನೇಯುತ್ತಾರೆ. ಒಬ್ಬರಾದರೆ ನಾಲ್ಕು ಚಾಪೆಗಳನ್ನು ನೇಯುತ್ತಾರೆ. ಒಂದು ಚಾಪೆ ಆರೂವರೆ ಅಡಿ ಉದ್ದ, ಮೂರುವರೆ ಅಡಿ ಅಗಲ ಇರುತ್ತದೆ.

`ವಾರ ಪೂರ್ತಿ ಚಾಪೆ ನೇಯ್ದು ಬಳ್ಳಾರಿ, ಕೊಪ್ಪಳ, ರಾಯಚೂರ ಜಿಲ್ಲೆ ಸೇರಿದಂತೆ ಪಕ್ಕದ ಆಂಧ್ರಪ್ರದೇಶಗಳ ವಿವಿಧ ಹಳ್ಳಿ, ಪಟ್ಟಣಗಳಲ್ಲಿ ನಡೆಯುವ ಸಂತೆಗಳಲ್ಲಿ ಮಾರಾಟ ಮಾಡುತ್ತೀವಿ. ಒಂದು ಚಾಪೆ ನೇಯಲು ಕನಿಷ್ಠ 40 ರೂಪಾಯಿ ಖರ್ಚಾಗುತ್ತದೆ.

ಅದನ್ನು 50 ರೂಪಾಯಿಗೆ  ಮಾರಾಟ ಮಾಡುತ್ತೀವಿ~ ಎಂದು ಈ ಕಸುಬಿನಲ್ಲಿ ತೊಡಗಿಸಿಕೊಂಡ ಗಂಗಮ್ಮ, ಯಲ್ಲಮ್ಮ ತಿಳಿಸುತ್ತಾರೆ. ನೈಲಾನ್ ದಾರದ ಬದಲು ಹತ್ತಿಯ ದಾರದಿಂದ ನೇಯ್ದ ಚಾಪೆಗಾದರೆ 70 ರೂ.

ಸುಮಾರು 27 ವರ್ಷಗಳಿಂದ ಇದೇ ವೃತ್ತಿಯನ್ನು ಆವಲಂಬಿಸಿದ್ದು, ಇಲ್ಲಿಯವರೆಗೆ ಯಾವ ಸರ್ಕಾರ, ಸ್ಥಳೀಯ ಆಡಳಿತವಾಗಲಿ ಆರ್ಥಿಕ ನೆರವು, ಸಹಾಯಧನ ಸೌಲಭ್ಯ ನೀಡಿಲ್ಲ ಎನ್ನುವುದು ನೇಯ್ಗೆಗಾರ ಚುಕ್ಕಾ ವೆಂಕಟೇಶ್ ಅಸಮಾಧಾನ.

ಗುಡಿ ಕೈಗಾರಿಕೆಗಳಿಗೆ ನೆರವಿನ ಹಸ್ತ ಚಾಚುವುದಾಗಿ ಅಧಿಕಾರಕ್ಕೆ ಬರುವ ಎಲ್ಲಾ ಸರ್ಕಾರಗಳು ಮಾತನಾಡುತ್ತವೆ. ಸದ್ಯ ಹರಿದ ಚಾಪೆಯಂತಾಗಿರುವ ಇವರ ಬದುಕು ಹಸನಾಗಲು ಮತ್ತು ಆಧುನಿಕತೆಯ ಸ್ಪರ್ಧೆಯೊಂದಿಗೆ ಹೆಜ್ಜೆ ಹಾಕಲು ಸರ್ಕಾರ ಮತ್ತು ಅಧಿಕಾರಿಗಳು ಮನಸ್ಸು ಮಾಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.