ADVERTISEMENT

ದಿನಾಂಕಕ್ಕೆ ಬಣ್ಣ ಕೊಟ್ಟಾಗ

ಜಿ.ಎಸ್.ಮಲ್ಲೇಶ್‌ಗೌಡ
Published 10 ಆಗಸ್ಟ್ 2016, 4:38 IST
Last Updated 10 ಆಗಸ್ಟ್ 2016, 4:38 IST
ದಿನಾಂಕಕ್ಕೆ ಬಣ್ಣ ಕೊಟ್ಟಾಗ
ದಿನಾಂಕಕ್ಕೆ ಬಣ್ಣ ಕೊಟ್ಟಾಗ   

ಗಿರಿಯಾಲ ಎಂಬ ಕುಗ್ರಾಮದಲ್ಲಿ ಹುಟ್ಟಿ, ಇದ್ದಿಲಿನಿಂದ ಗೋಡೆ ಮೇಲೆ ಚಿತ್ರ ಗೀಚುತ್ತಿದ್ದ ಬಡ ಬಾಲಕ, ಇಂದು ಪ್ರಧಾನಿಯವರಿಂದಲೇ ಶಹಭಾಸ್‌ಗಿರಿ ತೆಗೆದುಕೊಂಡು ಬಂದಿದ್ದಾರೆ ಎಂದರೆ ಸುಮ್ಮನೆಯೇ...?

ಈ ಯುವಕನ ಹೆಸರು ಸಿದ್ದು ಇಟಗಿ. ಕೊಪ್ಪಳ ಜಿಲ್ಲೆಯ ಗಿರಿಯಾಲ ಎಂಬ ಕುಗ್ರಾಮದಲ್ಲಿ ಹುಟ್ಟಿದವ. ಬಾಲ್ಯದಿಂದಲೇ ಬಡತನದ ಬೇಗೆಯಲ್ಲಿ ಬೆಂದು ನೊಂದವ. 

ಆದರೆ ಇವನಿಗೆ ಅರಿವಿಲ್ಲದೇ ಕಲಾದೇವತೆ ಒಲಿದಿದ್ದಳು. ಎಂಟು ವರ್ಷ ವಯಸ್ಸಿನಿಂದಲೇ ಗೋಡೆಯ ಮೇಲೆ ಇದ್ದಿಲು ತೆಗೆದುಕೊಂಡು ಗೀಚುತ್ತಿದ್ದ ಈ ಬಾಲಕ. ಮಕ್ಕಳೇ ಹಾಗಲ್ಲವೇ? ಗೀಚುವುದು ಎಂದರೆ ಬಲುಖುಷಿ.

ಆದರೆ ಈ ಬಾಲಕನಿಗೆ ಅದು ಖುಷಿ ಮಾತ್ರವಾಗಿರಲಿಲ್ಲ. ಮುಂದೊಂದು ದಿನ ಈ ಕಲೆ ಅವನ ಬದುಕಿನ ದಿಕ್ಕನ್ನೇ ಬದಲಿಸುತ್ತದೆ ಎನ್ನುವುದು ಅವನಷ್ಟೇ ಅಲ್ಲದೇ ಯಾರೂ ಕನಸಿನಲ್ಲಿಯೂ ಊಹಿಸಿರಲು ಸಾಧ್ಯವಿರಲಿಲ್ಲ.

ಅದೊಂದು ದಿನ ಸಿದ್ದು ತಮ್ಮ ಮನೆಯ ಗೋಡೆ ಮೇಲೆ ಏನೋ ಗೀಚಿದ್ದ. ಅದನ್ನು ಅವರ ತಾಯಿ ನೋಡಿ ‘ಇದೇನ್ ಮಗನೆ ಇಷ್ಟ್ ಚಲೋ ಚಿತ್ರ ಬರ್ದಿದಿ’ ಎಂದು ಹೊಗಳಿದ್ರು. ತಾಯಿ ಹೊಗಳಿದ್ದೇ ತಡ, ಅಲ್ಲಿಂದ ಶುರುವಾಯ್ತು ಇಡೀ ಊರಿಗೆ ಗ್ರಹಚಾರ.

ADVERTISEMENT

ಏಕೆ ಅಂತೀರಾ...? ಹೊಗಳಿಕೆಯ ಖುಷಿಯಲ್ಲಿಯೇ ಊರಿನ ಗೋಡೆಗಳ ಮೇಲೆಲ್ಲಾ ಚಿತ್ರ ಬರೆಯೋಕೆ ಶುರು ಮಾಡಿದ. ಸಿದ್ದು ಯಾರದ್ದಾದರೂ ಮನೆ ಹತ್ತಿರ ಹೋದರೆ ಎಲ್ಲರೂ ಮೊದಲು ಅವನ ಕೈ ನೋಡಲು ಶುರು ಮಾಡಿದರು!

ಅದೊಂದು ದಿನ ಸಿದ್ದು ಗೋಡೆ ಮೇಲೆ ಚಿತ್ರ ಬರೆಯುತ್ತಾ ಇರಬೇಕಾದರೆ ಗ್ರಾಮಸ್ಥನೊಬ್ಬ ಬಂದು, ‘ಸಿದ್ದು, ಗೋಡೆ ಮೇಲೆ ಬರೀಬೇಡ ಕಣಪ್ಪ, ಬಿಳಿ ಹಾಳೆ ಮೇಲೆ ಬರಿ’ ಎಂದರು. ಆದರೆ ಸಿದ್ದುನ ತಾತನ ಬಳಿ ಬಿಳಿ ಹಾಳೆ ಖರೀದಿ ಮಾಡಲು ದುಡ್ಡು ಇರಲಿಲ್ಲ.

ಮೊಮ್ಮಗ ಹಾಳೆ ಬೇಕು ಎಂದು ಕೇಳಿದಾಗ ಅವನಿಗೆ ಉತ್ತರ ಕೊಡಲು ಆಗದ ತಾತ ಮೂಗನಾಗಿ ತಲೆ ತಗ್ಗಿಸಿ ಹೆಜ್ಜೆ ಹಾಕಿದರು. ಬೇರೆ ಯಾರು ತಾನೇ ದುಡ್ಡು ಕೊಟ್ಟಿಯಾರು..? ಈ ಬಡ ಜೀವಕೆ ಸಹಾಯ ಮಾಡಲು ಯಾವೊಂದು ಕೈಯೂ ಬರಲಿಲ್ಲ.

ಅದೇ ಇರಬೇಕು, ಸಿದ್ದು ಅವರ ಜೀವನದ ಹಾದಿಯನ್ನು ಬದಲಾಯಿಸಿದ್ದು. ತಮಗೆ ಯಾರೂ ಸಹಾಯ ಮಾಡಲು ಬರುವುದಿಲ್ಲ ಎಂದು ಗೊತ್ತಾದಾಗ, ದುಡ್ಡು ಸಂಪಾದನೆಗೆ ಹಗಲು ರಾತ್ರಿ ಶ್ರಮಿಸಿದರು. ನಂತರ ತಮಗೊದಗಿರುವ ಕಲಾ ಪ್ರಪಂಚದಲ್ಲಿಯೇ ಮುಂದುವರಿಯಲು ನಿರ್ಧರಿಸಿದರು. ಗುರುವಿಲ್ಲದೇ ಗುರಿಮುಟ್ಟಲು ಸಿದ್ಧರಾಗಿ ಕೊನೆಗೂ ಗುರಿ ಮುಟ್ಟಿಯೇ ಬಿಟ್ಟರು. 

ಅಲ್ಲಲ್ಲಿ ಕೆಲಸ ಮಾಡುತ್ತಾ ದುಡ್ಡು ಸಂಪಾದಿಸಿದರು. ತಮ್ಮ ಕಲೆಯಲ್ಲಿ ಹೊಸತನ ಹುಡುಕ್ತಾ ಭಿನ್ನ ವಿಭಿನ್ನವಾದ ಚಿತ್ರ ರಚನೆಯಲ್ಲಿ ತೊಡಗಿದರು. ರಂಗೋಲಿಯಿಂದ ನೀರಿನ ಮೇಲೆ ಚಿತ್ರ ಬಿಡಿಸಲು ಮುಂದಾದರು.

ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಅಂಕಿಗಳಲ್ಲಿಯೇ ಅವರ ಭಾವಚಿತ್ರವನ್ನು ಬಿಡಿಸುವಷ್ಟು ಸಿದ್ದು ಇಟಗಿಯವರದ್ದು. ಈಗಾಗಲೇ ಸುಭಾಷ್ ಚಂದ್ರಬೋಸ್‌, ವೀರಸಾವರ್ಕರ್‌, ಭಗತ್‌ಸಿಂಗ್‌, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಂತಹ ನೂರಾರು ಕ್ರಾಂತಿಕಾರಿ  ಹೋರಾಟಗಾರರ ತದ್ರೂಪ ರೇಖಾಚಿತ್ರಗಳನ್ನು ಅವರ ಜನ್ಮ ದಿನಾಂಕದಿಂದ ಬರೆದು ಎಲ್ಲರಿಂದ ಶ್ಲಾಘನೆ ಪಡೆದುಕೊಂಡರು. 

ಸಿದ್ದು ಇಟಗಿಯವರ ಕಲೆಗೆ ಸಂದ ಗೌರವಗಳು ಹಲವಾರು. ಪ್ರಧಾನಿ ನರೇಂದ್ರ ಮೋದಿಯವರಿಂದಲೂ ಶಹಬಾಸ್‌ಗಿರಿ ಗಿಟ್ಟಿಸಿಕೊಂಡಿದ್ದಾರೆ ಸಿದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.