ADVERTISEMENT

ದೀಪಾಂಬುಧಿಯ ಶ್ರೀ ಕಾಳಿಕಾಂಬ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2011, 19:30 IST
Last Updated 16 ನವೆಂಬರ್ 2011, 19:30 IST
ದೀಪಾಂಬುಧಿಯ ಶ್ರೀ ಕಾಳಿಕಾಂಬ
ದೀಪಾಂಬುಧಿಯ ಶ್ರೀ ಕಾಳಿಕಾಂಬ   

ತುಮಕೂರು ಜಿಲ್ಲೆಯ ಹುಲಿಯೂರು ದುರ್ಗ ತಾಲ್ಲೂಕಿನ ವ್ಯಾಪ್ತಿಗೆ ಬರುವ ಶ್ರಿ ಕಾಳಿಕಾಂಬ ದೇವಿಯ ನೆಲೆಯಾದ  ದೀಪಾಂಬುಧಿ ಜಿಲ್ಲೆಯ ಪ್ರಮುಖ ಶಕ್ತಿ ದೇವತೆಯ ಕ್ಷೇತ್ರ.  ಕಾಳಿಕಾ ಮಾತೆ ಇಲ್ಲಿ ನೆಲೆ ನಿಂತಿದ್ದಾಳೆ ಎಂಬುದು ಜನರ ನಂಬಿಕೆ. ಈ ಕ್ಷೇತ್ರದ ಸುತ್ತ ಹಸಿರಿನ ಸುಂದರ ಪರಿಸರವಿದೆ. ದೇವಸ್ಥಾನ ಪ್ರಾಚೀನ ಕಾಲದ್ದು.

ದೇವಸ್ಥಾನದ ಪರಿಸರ ಸ್ವಲ್ಪಹೊತ್ತು ಕುಳಿತು ವಿಶ್ರಮಿಸಿಕೊಳ್ಳಲು ಪ್ರೇರಣೆ ನೀಡುತ್ತದೆ.
ಈ ಕ್ಷೇತ್ರ ಉತ್ತರ ಮುಖಿ, ಮೋಕ್ಷದಾಯಿನಿ ಕ್ಷೇತ್ರವೆಂದೂ ಹೆಸರಾಗಿದೆ. ಜಾತಿ, ಮತ, ಪಂಥಗಳ ಸೋಂಕಿಲ್ಲದೆ ಎಲ್ಲ ವರ್ಗದ ಜನರೂ ಇಲ್ಲಿ ದೇವಿಯನ್ನು ಪೂಜಿಸಿ ಆರಾಧಿಸುತ್ತಾರೆ.

ಈ ದೇವಸ್ಥಾನವನ್ನು ಹನ್ನೆರಡನೇ ಶತಮಾನದಲ್ಲಿ (ಚೋಳರಾಜರ ಕಾಲದಲ್ಲಿ) ನಿರ್ಮಿಸಲಾಯಿತು ಎಂಬ ದಾಕಲೆಗಳಿವೆ. ಈ ಶಿಲಾ ದೇವಸ್ಥಾನದ ಭಿತ್ತಿಗಳಲ್ಲಿ ಕಂಡುಬರುವ ಉಬ್ಬು ಶಿಲ್ಪಗಳ ಕೆತ್ತನೆ ವಿಶೇಷ ಆಕರ್ಷಣೆ.

ಪ್ರತಿ ವರ್ಷ ಶ್ರಾವಣ ನಕ್ಷತ್ರದಂದು ಇಲ್ಲಿ ಜಾತ್ರೆ ನಡೆಯುತ್ತದೆ. ಆ ಸಂದರ್ಭಕ್ಕೆ ಜಿಲ್ಲೆಯ ನಾನಾ ಊರುಗಳಿಂದ ಭಕ್ತರು ಬರುತ್ತಾರೆ. ದೇವಸ್ಥಾನದಲ್ಲಿ ಪ್ರತಿದಿನ ಪೂಜೆ ನಡೆಯುತ್ತದೆ. ಆದರೆ ಮಂಗಳವಾರ, ಶುಕ್ರವಾರ, ಉಪನಯನ, ಅಮಾವಾಸ್ಯೆ, ಹುಣ್ಣಿಮೆಗಳಲ್ಲಿ ವಿಶೇಷ ಪೂಜೆ, ಹೋಮ ಹವನಾದಿ ಕೈಂಕರ್ಯಗಳು ನಡೆಯುತ್ತವೆ.

ಶ್ರಿ ಕ್ಷೇತ್ರ ದೀಪಾಂಬುಧಿಯ ಪೀಠಾಧ್ಯಕ್ಷರಾದ ಕರುಣಾಕರ ಶ್ರಿಗಳ ಸಾನಿಧ್ಯದಲ್ಲಿ ನಡೆಯುವ ಗುರುಪೂರ್ಣಿಮೆ, ಅಮ್ಮನವರ ಉತ್ಸವ, ವಿಶೇಷ ಪೂಜೆ, ತುಲಾಭಾರದ ವೇಳೆ ಸಮಯದಲ್ಲಿ ಹೊರರಾಜ್ಯಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ.

 ರಾಮನಗರ ಜಿಲ್ಲೆಯ ತಾಲ್ಲೂಕು ಕೇಂದ್ರ ಮಾಗಡಿಯಿಂದ 23 ಕಿಲೋಮೀಟರ್ ಕ್ರಮಿಸಿದರೆ ರಸ್ತೆಯ ಬಲಬದಿಯಲ್ಲಿ ದೇವಾಲಯದ ಮಹಾದ್ವಾರ ಕಾಣುತ್ತದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಬೆಟ್ಟದ ಮೇಲೆ ಕಾಳಿಕಾಮಾತೆ ದೇವಸ್ಥಾನವಿದೆ.

ಸ್ಥಳೀಯರ ಮತ್ತು ದಾನಿಗಳ ನೆರವಿನಿಂದ ದೇವಸ್ಥಾನವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕ್ಷೇತ್ರದಲ್ಲಿ ಕಡಿಮೆ ವೆಚ್ಚದ ಛತ್ರ, ಗುರುಕುಲ ಮಾದರಿ ಶಾಲೆಯೂ ಇದೆ.

ದೇವಸ್ಥಾನದ ಮುಂಭಾಗದಲ್ಲಿರುವ ದೀಪಾಂಬುಧಿಕೆರೆ ಇದೆ. ಸುಮಾರು 550 ಹೆಕ್ಟೇರ್ ಪ್ರದೇಶದಲ್ಲಿ ಆವರಿಸಿರುವ ಕೆರೆ ಈ ಪ್ರದೇಶದ ಇನ್ನೊಂದು ಆಕರ್ಷಣೆ. ದೇವಸ್ಥಾನಕ್ಕೆ ಬರುವ ಭಕ್ತರು ಇಲ್ಲಿ ಕೈಕಾಲು ತೊಳೆದು ಮಿಶ್ರಮಿಸಿಕೊಳ್ಳಲು  ಹೇಳಿ ಮಾಡಿಸಿದ ತಾಣವಿದು. ದೀಪಾಂಬುಧಿ ಕೆರೆಗೆ ಹೇಮಾವತಿ ನದಿ ನೀರು ಹರಿಸಬೇಕೆಂಬುದು ಸ್ಥಳೀಯರ ಆಗ್ರಹ.

ದೀಪಾಂಬುಧಿ ಶ್ರಿ ಕ್ಷೇತ್ರದ ಸಮೀಪದಲ್ಲಿ ಮಾಗಡಿ, ಸಾವನದುರ್ಗ, ತಿರುಮಲೆಯ ಶ್ರಿ ರಂಗನಾಥಸ್ವಾಮಿ, ಎಡೆಯೂರು ಸಿದ್ದಲಿಂಗೇಶ್ವರಸ್ವಾಮಿ ಮುಂತಾದ ಪುಣ್ಯ ಕ್ಷೇತ್ರಗಳಿವೆ. ಸರ್ಕಾರ ದೀಪಾಂಬುಧಿ ಶ್ರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದರೆ ಇದು ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳವಾಗುತ್ತದೆ.

ಕ್ಷೇತ್ರಕ್ಕೆ ಹೋಗಲು ಉತ್ತಮ ರಸ್ತೆ ಇದೆ. ಮಾಗಡಿ, ಕುಣಿಗಲ್, ಹುಲಿಯೂರು ದುರ್ಗಗಳಿಂದ ಬಸ್ ಸೌಕರ್ಯವಿದೆ. ದೇವಸ್ಥಾನದಲ್ಲಿ ಭಕ್ತರಿಗೆ ಊಟದ ವ್ಯವಸ್ಥೆ ಇಲ್ಲ.
 
ಸೇವಾ ವಿವರ
* ಶಾಶ್ವತ ನಿತ್ಯ ಪೂಜಾ ನಿಧಿ 1001 ರೂ.
* ದೇವಿಗೆ ವಿಶೇಷ ಉತ್ಸವ  501 ರೂ.
* ವಿಶೇಷ ಅಭಿಷೇ 101 ರೂ.
* ನವಗ್ರಹ ದೇವತಾ ಅಭಿಷೇಕ 101 ರೂ.
* ಜ್ಞಾನ ಗಣಪತಿ ಅಭಿಷೇಕ  51 ರೂ.
* ದೇವಿಗೆ ಅಭಿಷೇಕ  51 ರೂ.
* ಉಪನಯನ 51 ರೂ.
* ಕುಂಕುಮಾರ್ಚನೆ  10 ರೂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.