ADVERTISEMENT

ನಂದಿಕೂರು ದುರ್ಗಾಪರಮೇಶ್ವರಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ಶ್ರೀದುರ್ಗಾಪರಮೇಶ್ವರಿ ದೇವಸ್ಥಾನವೆಂದು ಗುರುತಿಸುವ ನಂದಿಕೂರಿನ ದೇವಾಲಯವು ಸುಮಾರು 1200 ವರ್ಷಗಳಷ್ಟು ಪ್ರಾಚೀನವಾದುದು. ಸ್ಥಳೀಯರು ಈ ದೇವಳವನ್ನು ನಂದ್ಯೂರಮ್ಮ ಎಂದೂ ಕರೆಯುತ್ತಾರೆ.

ಅವಿವಾಹಿತ ಯುವಕ ಯುವತಿಯರು ಮಾಂಗಲ್ಯ ಭಾಗ್ಯಕ್ಕಾಗಿ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷ. ವಿಧಿವತ್ತಾಗಿ ಸ್ವಯಂವರ ಪಾರ್ವತಿ ಪೂಜೆಯನ್ನು ಶ್ರೀದುರ್ಗಾಪರಮೇಶ್ವರಿಯ ಸನ್ನಿಧಿಯಲ್ಲಿ ಮಾಡಿಸಿ ಶ್ರದ್ಧೆಯಿಂದ ಪಾಲ್ಗೊಂಡರೆ ವಿವಾಹಕ್ಕೆ ಇರುವ ಅಡಚಣೆಗಳು ನಿವಾರಣೆಯಾಗಿ  ಮಾಂಗಲ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ಅಚಲ ನಂಬಿಕೆ. ಗುಣವಾಗದ ಮಹಾವ್ಯಾಧಿಗಳೂ ದೇವಿಯ ಅನುಗ್ರಹದಿಂದ ಗುಣವಾಗುತ್ತವೆ ಎಂಬ ನಂಬಿಕೆಯಂತೂ ಸಾರ್ವತ್ರಿಕವಾಗಿದೆ. ಮಧುರ ಪಾಯಸ, ಹೂ, ಸೀರೆಗಳು ಈ ದೇವಿಯ ಪ್ರೀತಿಯ ಸೇವೆಗಳೆಂದು ಪ್ರತೀತಿ.
ದೀರ್ಘ ಚತುರಶ್ರ ಆಕಾರದ ಈ ದೇವಳವು ತನ್ನ ಪ್ರಾಚೀನ ವಾಸ್ತು ಶೈಲಿಯಿಂದಲೂ ಗಮನ ಸೆಳೆಯುತ್ತದೆ. ಗರ್ಭಗುಡಿಯ ಮುಂಭಾಗದ ಮೇಲಿನ ಛಾವಣಿಯ್ಲ್ಲಲಿರುವ ವಿಶಿಷ್ಟ ವಿನ್ಯಾಸದ ರಚನೆಗಳು (ನೇತಾಡುವ ಕೈಗಳು, ಕೀರ್ತಿಮುಖ, ಪ್ರತಿಮೆಗಳು) ನಿರ್ದಿಷ್ಟವಾಗಿ ನಡೆದ ಧಾರ್ಮಿಕ ಸ್ಥಿತ್ಯಂತರಗಳು ಹಾಗೂ ಪ್ರಾಚೀನತೆಗೆ ಪುರಾವೆ ಒದಗಿಸುತ್ತವೆ.
ಚಿನ್ನದ ಧ್ವಜಸ್ತಂಭ: ದೇವಾಲಯ ಪರಿಕಲ್ಪನೆಯಲ್ಲಿ ದೇವಳ ಐದು ಅಂಗಗಳನ್ನು ಹೊಂದಿರಬೇಕು ಎಂದು ವ್ಯಾಖ್ಯಾನಿಸುತ್ತಾರೆ. ಅದರಲ್ಲಿ ಧ್ವಜಸ್ತಂಭವೂ ಒಂದು. ಅದನ್ನು ಮರ ಅಥವಾ ಲೋಹದಿಂದ ನಿರ್ಮಿಸುವ ವಾಡಿಕೆ. ಮರದದ್ದಾದರೆ ಲೋಹದ ಹೊದಿಕೆಯಿಂದ ಮುಚ್ಚುತ್ತಾರೆ. ಆದರೆ ನಂದಿಕೂರಿನ ದೇವಳದ ಧ್ವಜಸ್ತಂಭವೇ ವಿಶಿಷ್ಟವಾದದ್ದು. 57 ಅಡಿ ಎತ್ತರ ಒಂದೇ ಮರದಲ್ಲಿ ತಯಾರಿಸಿದ ಧ್ವಜಸ್ತಂಭಕ್ಕೆ ಭದ್ರ ಪೀಠದಲ್ಲಿ ಮುಚ್ಚಿಹೋಗುವ ಏಳು ಅಡಿಯಷ್ಟು ಭಾಗವನ್ನು ಹೊರತುಪಡಿಸಿ 50 ಅಡಿ ಉದ್ದಕ್ಕೂ ಚಿನ್ನದ ತಗಡು ಹೊದಿಸಲಾಗಿದೆ. ಇದಕ್ಕೆ ಬಳಸಲಾದ ಚಿನ್ನ 10 ಕಿಲೊಗೂ ಅಧಿಕ.
`ಇದೆಲ್ಲ ಭಕ್ತರ ಸೇವೆಯಿಂದ ಬಂದದ್ದು. ಕರ್ನಾಟಕದಲ್ಲಿ ಇಷ್ಟು ಎತ್ತರದ ಧ್ವಜಸ್ತಂಭ, ಅದರಲ್ಲೂ ಪೂರ್ಣ ಚಿನ್ನದ ಹೊದಿಕೆ ಇರುವಂಥದ್ದು ಬೇರೆಲ್ಲೂ ಇಲ್ಲ~ ಎನ್ನುತ್ತಾರೆ ಆಡಳಿತ ಮೊಕ್ತೇಸರ ಎನ್. ಮಧ್ವರಾಯ ಭಟ್. ಇಲ್ಲಿ ಈಗ ಸುಸಜ್ಜಿತ, ಬೃಹತ್ ಸಭಾಂಗಣ ನಿರ್ಮಾಣ ಕಾರ್ಯ ನಡೆದಿದೆ. ದೇವಳದಿಂದ ಅನತಿ ದೂರದಲ್ಲಿ ನಂದಿಕೂರು ಉಷ್ಣವಿದ್ಯುತ್ ಸ್ಥಾವರವಿದೆ.

ಸೇವಾ ವಿವರ (ರೂ ಗಳಲ್ಲಿ)

ದೊಡ್ಡ ರಂಗಪೂಜೆ  250
ಸಣ್ಣ ರಂಗಪೂಜೆ 100
ಸ್ವಯಂವರ ಸೇವೆ  250
ತುಲಾಭಾರ ಕಾಣಿಕೆ  200
ಹೂವಿನ ಪೂಜೆ  150
ಮಹಾಪೂಜೆ  200
ಕ್ಷೀರಪಾಯಸ  250

ಉಡುಪಿ-ಮಂಗಳೂರು ಹೆದ್ದಾರಿಯ ಪಡುಬಿದ್ರಿಯಿಂದ ಕುದುರೆಮುಖ ರಾಜ್ಯ ಹೆದ್ದಾರಿಯಲ್ಲಿ ಸುಮಾರು 5 ಕಿ.ಮೀ ದೂರ ನಂದಿಕೂರು ಪೇಟೆಗೆ. ಅಲ್ಲಿಂದ 1.5 ಕಿ ಮೀ ಒಳಗೆ ಹೋದರೆ ದೇವಸ್ಥಾನ ಸಿಗುತ್ತದೆ.
ಮಾಹಿತಿಗೆ: 0820 2192061, 99020 09859.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.