ADVERTISEMENT

ಪಂಚಗಿರಿ ಪ್ರದಕ್ಷಿಣೆ

ಎನ್.ಎಂ.ನಟರಾಜ ನಾಗಸಂದ್ರ
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST
ಪಂಚಗಿರಿ ಪ್ರದಕ್ಷಿಣೆ
ಪಂಚಗಿರಿ ಪ್ರದಕ್ಷಿಣೆ   

ಪ್ರತಿ ವರ್ಷ ಆಷಾಢ ಮಾಸದ ಕೊನೆ ಸೋಮವಾರ ದಿಬ್ಬಗಿರಿ, ಬ್ರಹ್ಮಗಿರಿ, ನಂದಿಗಿರಿ (ನಂದಿಬೆಟ್ಟ), ಚನ್ನಗಿರಿ, ಕಳವಾರಗಿರಿ ಸೇರಿದಂತೆ ಪಂಚ ಗಿರಿಗಳನ್ನು ಭಕ್ತಿಯಿಂದ ಪ್ರದಕ್ಷಿಣೆ ಮಾಡಿದರೆ ಕೈಲಾಸ ಪರ್ವತವನ್ನು ಸುತ್ತಿದಂತೆ ಎನ್ನುವ ನಂಬಿಕೆ ಈ ಭಾಗದ ಆಸ್ತಿಕರದ್ದು. ಪ್ರತಿವರ್ಷ ಇದರಲ್ಲಿ ಸಹಸ್ರಾರು ಜನ ಭಾಗವಹಿಸುತ್ತಾರೆ.

ಈ ಸಲದ ಗಿರಿ ಪ್ರದಕ್ಷಿಣೆ ಜುಲೈ16 ರಂದು ಬೆಳಿಗ್ಗೆ 6.30ಕ್ಕೆ ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಗ್ರಾಮದ ಶ್ರೀಭೋಗ ನಂದೀಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ಆರಂಭಗೊಳ್ಳಲಿದೆ.
ದೊಡ್ಡಬಳ್ಳಾಪುರ ಸೇರಿದಂತೆ ವಿವಿಧೆಡೆಗಳಿಂದ ಬರುವ ಭಜನಾ ತಂಡಗಳೊಂದಿಗೆ ಭಕ್ತಾದಿಗಳು ತಾಳ ಹಾಕುತ್ತಾ ಪ್ರದಕ್ಷಿಣೆ ಆರಂಭಿಸುತ್ತಾರೆ.
 
ಪಂಚಗಿರಿ ಶ್ರೇಣಿಗಳ ತಪ್ಪಲಿನ ಕುಡುಮಗೆರೆ ಕ್ರಾಸ್, ಕಾರಹಳ್ಳಿ, ಕಣಿವೇಪುರ, ನಂದಿ ಕ್ರಾಸ್, ಹೆಗ್ಗಡಿಹಳ್ಳಿ, ಕಣಿವೆ ಬಸವಣ್ಣ, ಸುಲ್ತಾನ್ ಪೇಟೆ ಮಾರ್ಗವಾಗಿ ಸುಮಾರು 16 ಕಿಮೀ ಗಿರಿಪ್ರದಕ್ಷಿಣೆ ಮಾಡಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮತ್ತೆ ದೇವಾಲಯಕ್ಕೆ ವಾಪಸ್ ಬರಲಿದ್ದಾರೆ.

ಕಾಲ್ನಡಿಗೆಯಲ್ಲಿ ಸಾಗುವ ಗಿರಿಪ್ರದಕ್ಷಿಣೆಯಲ್ಲಿ ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಬೆಂಗಳೂರು, ದೇವನಹಳ್ಳಿ ಮತ್ತಿತರ ಕಡೆಯ ಕಡೆಗಳಿಂದ ಜನ ಹೆಚ್ಚು. ಪ್ರದಕ್ಷಿಣೆಯ ನಡುವೆ ಉಪಹಾರ ಹಾಗೂ ಪೂರ್ಣ ಪ್ರದಕ್ಷಿಣೆ ನಂತರ ಭೋಜನದ ವ್ಯವಸ್ಥೆಯನ್ನು ಗಿರಿಪ್ರದಕ್ಷಿಣಾ ಸಮಿತಿ ಏರ್ಪಡಿಸುತ್ತದೆ.

ಹಿನ್ನೆಲೆ: 1938ರ ಸುಮಾರಿನಲ್ಲಿ ದೊಡ್ಡಬಳ್ಳಾಪುರದ ಅದ್ದೆಕೊಪ್ಪದ ಸುಬ್ಬರಾಯಪ್ಪ ಎಂಬುವವರ ಮನೆಯಲ್ಲಿ ನಿತ್ಯ ರಾಮಾಯಣ ಪ್ರವಚನ ನಡೆಯುತ್ತಿತ್ತು. ಅಲ್ಲಿ ಸೇರಿದ 40 ಜನರ ಭಕ್ತರ ತಂಡ ದೊಡ್ಡಬಳ್ಳಾಪುರದಿಂದಲೇ ಯಾತ್ರೆ ಆರಂಭಿಸಿ ನಂದಿಗಿರಿಗೆ ಪ್ರದಕ್ಷಿಣೆ ಹಾಕಿದರು. ಅಂದಿನಿಂದ ಪ್ರತಿ ವರ್ಷ ಗಿರಿ ಪ್ರದಕ್ಷಿಣೆ ಆಚರಣೆ ಪ್ರಾರಂಭವಾಯಿತು.

1947ರ ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಜನ ಗುಂಪು ಸೇರುವುದನ್ನು ಬ್ರಿಟಿಷ್ ಸರ್ಕಾರ ನಿಷೇಧಿಸಿದ ಕಾರಣ ಗಿರಿಪ್ರದಕ್ಷಿಣೆಗೂ ತಡೆಯಾಗಿತ್ತು. ಆಗ ದೊಡ್ಡಬಳ್ಳಾಪುರದ ಚೆನ್ನಪ್ಪ ಮೇಷ್ಟ್ರು ಎಂಬುವವರು ಮೈಸೂರು ಮಹಾರಾಜರಿಗೆ ಪತ್ರ ಬರೆದು, ದೊಡ್ಡಬಳ್ಳಾಪುರದ ಅಮಲ್ದಾರರ ಮೂಲಕ ಅನುಮತಿ ಗಿಟ್ಟಿಸಿದ್ದರು ಎಂದು ಹಿರಿಯರು ನೆನೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.