ADVERTISEMENT

ಭತ್ತ, ತೊಗರಿ ಕಣಜ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2011, 19:30 IST
Last Updated 30 ಮಾರ್ಚ್ 2011, 19:30 IST
ಭತ್ತ, ತೊಗರಿ ಕಣಜ
ಭತ್ತ, ತೊಗರಿ ಕಣಜ   

ಯಾದಗಿರಿ ಜಿಲ್ಲೆಯ ಜನರ ನೆಮ್ಮದಿಗೆ ಕೃಷ್ಣಾ ಹಾಗೂ ಭೀಮಾ ನದಿಗಳ ಕೊಡುಗೆ ಅಪಾರ. ನಾರಾಯಣಪುರ ಜಲಾಶಯ ಹಾಗೂ ಭೀಮಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್ ಜಿಲ್ಲೆಯ ರೈತರ ಪಾಲಿಗೆ ವರವಾಗಿವೆ. ನಾರಾಯಣಪುರ ಜಲಾಶಯ ನಿರ್ಮಾಣವಾದ ನಂತರ ಮಳೆಯಾಶ್ರಯದ ಸುರಪುರ ತಾಲ್ಲೂಕಿನ ಚಿತ್ರಣ ಬದಲಾಯಿತು.

ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ಭೀಮಾ ನೀರಾವರಿ ಯೋಜನೆಗಳಿಂದ ಜಿಲ್ಲೆಯ 1,75,996 ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಟ್ಟಿದೆ. ನೀರಾವರಿಯಲ್ಲಿ ಹೆಚ್ಚು ಪಾಲು ಸುರಪುರ ತಾಲ್ಲೂಕಿಗೆ ಸಿಕ್ಕಿದೆ. ತಾಲ್ಲೂಕಿನ 88 ಸಾವಿರ ಹೆಕ್ಟೇರ್ ಪ್ರದೇಶ ನೀರಿನ ಸೌಲಭ್ಯ ಪಡೆದಿದೆ. ಶಹಾಪುರ ತಾಲ್ಲೂಕಿನ 63ಸಾವಿರ ಹೆಕ್ಟೇರ್ ಪ್ರದೇಶ ನಾರಾಯಣಪುರ ಎಡದಂಡೆ ಕಾಲುವೆಯಿಂದ ನೀರಾವರಿ ಸೌಲಭ್ಯ ಪಡೆದಿದೆ. ಯಾದಗಿರಿ ತಾಲ್ಲೂಕಿನಲ್ಲಿ 10,578 ಹೆಕ್ಟೇರ್ ಪ್ರದೇಶ ನೀರಾವರಿಯಾಗಿದೆ.

ಯಾದಗಿರಿ ತಾಲ್ಲೂಕಿನಲ್ಲಿ ಕೆರೆ ನೀರಾವರಿ ಹೆಚ್ಚಾಗಿದೆ. ಇಲ್ಲಿ 57 ಕೆರೆಗಳಿವೆ. ಇವುಗಳಿಂದ 1600 ಹೆಕ್ಟೇರ್ ಭೂಮಿ ನೀರಾವರಿಯಾಗಿದೆ. ಈ ಕೆರೆಗಳಿಂದಾಗಿ ಆ ಭಾಗದ ಅಂತರ್ಜಲದ ಪ್ರಮಾಣ ಹೆಚ್ಚಾಗಿದೆ.

ಜಿಲ್ಲೆಯ 45,315 ಹೆಕ್ಟೇರ್‌ನಲ್ಲಿ ಏಕದಳ ಧಾನ್ಯ, 1,13,400 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆಯಲಾಗುತ್ತಿದೆ. 72,875 ಹೆಕ್ಟೇರ್‌ನಲ್ಲಿ ಎಣ್ಣೆಕಾಳುಗಳು, 24,750 ಹೆಕ್ಟೇರ್‌ನಲ್ಲಿ ಇತರ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ನೀರಾವರಿ ಪ್ರದೇಶದ ಶೇ. 75 ರಷ್ಟು ಭೂಮಿಯಲ್ಲಿ ಭತ್ತ ಬೆಳೆಯಲಾಗುತ್ತಿದೆ. ನೆರೆಯ ರಾಜ್ಯಗಳಿಂದ ಬಂದ  ರೈತರು ನೀರಾವರಿ ಭೂಮಿ ಖರೀದಿಸಿದ್ದಾರೆ.

ಭತ್ತದ ಜತೆಗೆ ತೊಗರಿ, ಶೇಂಗಾ, ಹೆಸರು, ಜೋಳ, ಹತ್ತಿ ಬೆಳೆಯಾಗುತ್ತಿದೆ. ಶಹಾಪುರ ತಾಲ್ಲೂಕು ಮೆಣಸಿನಕಾಯಿ ಬೆಳೆಗೆ ಹೆಸರುವಾಸಿ. ಯಾದಗಿರಿ ಜಿಲ್ಲೆ ಭತ್ತ, ತೊಗರಿಯ ಕಣಜವಾಗಿ ಪರಿವರ್ತನೆ ಆಗಿದೆ. ಈಗ ಜಿಲ್ಲೆಯಲ್ಲಿ ಹತ್ತಿ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗಿದೆ. ಮಳೆ ಆಶ್ರಯದಲ್ಲಿ ಎಕರೆಗೆ 8 ರಿಂದ10 ಕ್ವಿಂಟಲ್, ನೀರಾವರಿಯಲ್ಲಿ 18 ರಿಂದ 20 ಕ್ವಿಂಟಲ್ ಹತ್ತಿ ಇಳುವರಿ ಸಿಗುತ್ತಿದೆ. ಆದರೆ ಬೆಳೆದ ಹತ್ತಿ ಮಾರಾಟಕ್ಕೆ ಜಿಲ್ಲೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.