ADVERTISEMENT

ಮಕ್ಕಳ ಬಾಳಲ್ಲಿ ಹೊಂಬೆಳಕು

ಗಣಂಗೂರು ನಂಜೇಗೌಡ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST
ಬುದ್ಧಿಮಾಂದ್ಯ ಮಗುವಿಗೆ ಕಂಪ್ಯೂಟರ್ ಮೂಲಕ `ಶೈಕ್ಷಣಿಕ ಥೆರಪಿ'
ಬುದ್ಧಿಮಾಂದ್ಯ ಮಗುವಿಗೆ ಕಂಪ್ಯೂಟರ್ ಮೂಲಕ `ಶೈಕ್ಷಣಿಕ ಥೆರಪಿ'   

ಅಂಗವಿಕಲ ಮಕ್ಕಳಿಗಾಗಿ ಸರ್ವ ಶಿಕ್ಷಣ ಅಭಿಯಾನ ಯೋಜನೆಅಡಿ ಶಿಕ್ಷಣ ಇಲಾಖೆ ಆರಂಭಿಸಿದ್ದ ಗೃಹಾಧಾರಿತ ಶಿಕ್ಷಣ ಸದ್ಯ ಸ್ಥಗಿತಗೊಂಡಿದೆ. ಈ ಯೋಜನೆಗೆ ನಿಯೋಜನೆಗೊಂಡಿದ್ದ ಸ್ವಯಂ ಸೇವಕರು ಹಾಗೂ ಶಿಕ್ಷಕರು ಗೃಹಾಧಾರಿತ ಶಿಕ್ಷಣವನ್ನು ಮರೆತೇ ಬಿಟ್ಟಿದ್ದಾರೆ. ಆದರೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಪೇಪರ್ ಟೌನ್ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೊಬ್ಬರ ಆಸಕ್ತಿಯ ಫಲವಾಗಿ ದೈಹಿಕ ಹಾಗೂ ಬೌದ್ಧಿಕ ಬಲಹೀನ ಮಕ್ಕಳಿಗಾಗಿ ಮನೋ ದೈಹಿಕ ಶಿಕ್ಷಣ ನೀಡುವ `ವಿಶೇಷ ಮಕ್ಕಳ ಪುನರ್ವಸತಿ ಕೇಂದ್ರ'  ನಡೆಯುತ್ತಿದೆ.

ಸುತ್ತಲಿನ ತಾಲ್ಲೂಕುಗಳಿಂದ ಬಂದ ವಿಕಲಾಂಗ ಮಕ್ಕಳಿಗೆ ಇಲ್ಲಿ ಕಲಿಕೆ, ಚಿಕಿತ್ಸೆ ಎರಡೂ ಉಚಿತ. ಕೈ ಕಾಲು ಸ್ವಾಧೀನ ಇಲ್ಲದ, ದೃಷ್ಟಿ ಕಳೆದುಕೊಂಡ, ಮೂಕ ಹಾಗೂ ಕಿವುಡ ಮಕ್ಕಳಿಗೆ ವಿವಿಧ ಥೆರಪಿಗಳ ಮೂಲಕ ಚೈತನ್ಯ ತುಂಬುವ ಕೆಲಸ ನಡೆಯುತ್ತಿದೆ. ಶಿಕ್ಷಕ ಸಯ್ಯದ್‌ಖಾನ್ ಬಾಬು ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಐವರು ಮಹಿಳಾ ಸ್ವಯಂ ಸೇವಕರು ಹಾಗೂ ಯೋಗ ಶಿಕ್ಷಕ ಕ್ಯಾತನಹಳ್ಳಿ ವೆಂಕಟೇಶ್ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ವಿಶೇಷ ಮಕ್ಕಳಿಗೆ ತರಬೇತಿ ಕೊಡುತ್ತಿದ್ದಾರೆ.

ಮನೆ ಮನೆಗೆ ತೆರಳಿ ವಾಹನದಲ್ಲಿ ಮಕ್ಕಳನ್ನು ಕೇಂದ್ರಕ್ಕೆ ಕರೆತಂದು ಮತ್ತೆ ಮನೆಗೆ ಬಿಡುವ ವ್ಯವಸ್ಥೆ ಇದೆ. ಇದಕ್ಕೆ ಪೋಷಕರಿಂದ ಯಾವುದೇ ಶುಲ್ಕ ಪಡೆಯುವುದಿಲ್ಲ. ವಾಹನ ಶುಲ್ಕ, ಸ್ವಯಂ ಸೇವಕರ ಖರ್ಚನ್ನು ಶಿಕ್ಷಕ ಸಯ್ಯದ್‌ಖಾನ್ ಬಾಬು ಅವರೇ ಭರಿಸುತ್ತಾರೆ. ಮಕ್ಕಳ ಮಾನಸಿಕ ಹಾಗೂ ದೈಹಿಕ ಸ್ಥಿತಿಗೆ ಅನುಸಾರ ಇಲ್ಲಿ ಚಟುವಟಿಕೆಗಳು ನಡೆಯುತ್ತವೆ.

ವಿಶೇಷ ಥೆರಪಿ ಮೂಲಕ ಚಿಕಿತ್ಸೆ
ವಿಶೇಷ ಮಕ್ಕಳಿಗೆ ಸೋಮವಾರ, ಬುಧವಾರ ಹಾಗೂ ಶುಕ್ರವಾರ ವಿವಿಧ ಥೆರಪಿಗಳನ್ನು ಮಾಡಲಾಗುತ್ತದೆ. ಶಾರೀರಿಕ, ಶೈಕ್ಷಣಿಕ (ಸಾಮಾಜಿಕ) ಹಾಗೂ ಔದ್ಯೋಗಿಕ ಥೆರಪಿಗಳ ಮೂಲಕ ಸುಪ್ತ ಶಕ್ತಿಯನ್ನು ಕ್ರಿಯಾಶೀಲಗೊಳಿಸುವುದು ಇದರ ಉದ್ದೇಶ.
ಶಾರೀರಿಕ ಥೆರಪಿ: ವ್ಯಾಯಾಮ, ಎಣ್ಣೆ ಮಸಾಜ್, ಮಿರರ್ ಆ್ಯಕ್ಷನ್ (ಕನ್ನಡಿಯ ಪ್ರತಿಬಿಂಬದ ಮೂಲಕ ಬಾಯಿ ಚಲನೆ ಗುರುತಿಸುವುದು) ಹಾಗೂ ಯೋಗ ಥೆರಪಿ ಮೂಲಕ ಮಕ್ಕಳ ಮಿದುಳು ಮತ್ತು ಅಂಗಗಳ ಚಲನ ಶಕ್ತಿ ಹೆಚ್ಚಿಸುವ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ಸ್ವಾಧೀನ ಇಲ್ಲದ ಅಂಗಗಳ ಮೇಲೆ ಪುಟ್ಟ ಮರಳು ಚೀಲಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತದೆ.

ಶೈಕ್ಷಣಿಕ ಥೆರಪಿ: ಇದರಲ್ಲಿ ಮಕ್ಕಳಿಗೆ ಸಂಬಂಧಗಳನ್ನು ಗುರುತಿಸುವುದನ್ನು ಕಲಿಸಲಾಗುತ್ತದೆ. ಸರಳ ಅಕ್ಷರಗಳನ್ನು ಬರೆಸುವುದು, ಬಣ್ಣಗಳನ್ನು ಗುರುತಿಸುವ ಇತರ ಕಲಿಕೆಗಳಲ್ಲಿ ಮಕ್ಕಳ ಆಸಕ್ತಿ ತೋರಿಸಲು ಉತ್ತೇಜಿಸಲಾಗುತ್ತದೆ.

ಔದ್ಯೋಗಿಕ ಥೆರಪಿ: ದೈನಂದಿನ ಕೆಲಸಗಳನ್ನು ಮಕ್ಕಳಿಗೆ ಕಲಿಸುವುದು ಈ ಥೆರಪಿಯ ಉದ್ದೇಶ. ಆಟದ ವಸ್ತು ಪಡೆಯುವುದು,  ಹಲ್ಲುಜ್ಜುವುದು, ಊಟ ಮಾಡುವುದು, ಕೈ ತೊಳೆಯುವುದು, ನೀರನ್ನು ಬಸಿದು ಕುಡಿಯುವುದು ಇತ್ಯಾದಿ ಕಲಿಸಲಾಗುತ್ತದೆ.
ಈ ಥೆರಪಿಗಳಷ್ಟೇ ಅಲ್ಲದೆ ಮಗುವಿನ ದೈಹಿಕ ಹಾಗೂ ಮಾನಸಿಕ ಸ್ಥಿತಿಯಲ್ಲಿ ಉಂಟಾಗುವ ಬದಲಾವಣೆ ಗುರುತಿಸಲು ತಿಂಗಳಿಗೊಮ್ಮೆ ವಿವಿಧ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಮೂತ್ರದಲ್ಲಿ ಬೈಲ್ ಪಿಗ್ಮಲ್ ಮತ್ತು ಬೈಲ್ ಸಾಲ್ಟ್ ಪರೀಕ್ಷೆ ನಡೆಸಿ ಎತ್ತರ, ತೂಕ ಅಳೆಯಲಾಗುತ್ತದೆ.

 ತಿಂಗಳಿಗೊಮ್ಮೆ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ ತಜ್ಞರಿಂದ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಇಲ್ಲಿದೆ. ಮಕ್ಕಳ ಹುಟ್ಟುಹಬ್ಬವನ್ನು ಕೇಂದ್ರದಲ್ಲಿ ಆಚರಿಸುವುದು, ಆಕರ್ಷಕ ಹೆಸರುಗಳಿಂದ ಅವರನ್ನು ಕರೆಯುವುದು ವಿಶೇಷ.   `ಪುನರ್ವಸತಿ ಕೇಂದ್ರ ಆರಂಭಿಸಿದಾಗ ಆತಂಕವಿತ್ತು. ವಿವೇಕಾನಂದ ಸೇವಾಶ್ರಮ ಮತ್ತು ಇತರ ಸಂಸ್ಥೆಗಳು ಸಹಾಯ ಹಸ್ತ ಚಾಚಿದ್ದರಿಂದ ಅಂದುಕೊಂಡಂತೆ ನಡೆಯುತ್ತಿದೆ. ಮೂಲೆಯಲ್ಲಿ ಕೊರಡಿನಂತೆ ಬಿದ್ದುಕೊಂಡಿದ್ದ ಮಗು ಎದ್ದು ಕೂರುತ್ತಿದೆ; ನಿಲ್ಲಲಾಗದ ಸ್ಥಿತಿಯಲ್ಲಿದ್ದ ಮಗು ಹೆಜ್ಜೆ ಹಾಕಲಾರಂಭಿಸಿದೆ. ಭಿತ್ತಿಪತ್ರ, ಆಟಿಕೆಗಳು, ಕಂಪ್ಯೂಟರ್‌ನ ಚಿತ್ರಗಳನ್ನು ಗುರುತಿಸುವ ಮಟ್ಟಿಗೆ ಮಕ್ಕಳಲ್ಲಿ ಪ್ರಗತಿ ಕಾಣುತ್ತಿದೆ' ಎನ್ನುತ್ತಾರೆ ಶಿಕ್ಷಕ ಸಯ್ಯದ್‌ಖಾನ್ ಬಾಬು.

ಬಲಹೀನರಾದ ಮಕ್ಕಳ ಶಿಕ್ಷಣ, ಏಳಿಗೆಯಲ್ಲಿ ನಿಸ್ಪೃಹವಾಗಿ ತೊಡಗಿಸಿಕೊಂಡ ಅವರನ್ನು 99645 08263 ಮೂಲಕ ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.