ADVERTISEMENT

ಮರೆಯಾಗುತ್ತಿರುವ ಸೌದೆ ಸುಗ್ಗಿ

ಶಿವಾನಂದ ಕರ್ಕಿ
Published 6 ಏಪ್ರಿಲ್ 2011, 19:30 IST
Last Updated 6 ಏಪ್ರಿಲ್ 2011, 19:30 IST

ಮಲೆನಾಡೆಂದರೆ ಐದಾರು ತಿಂಗಳು ಮಳೆ. ಒಂದೇ ಸಮ ‘ಧೋ’ ಎಂದು ಸುರಿವ ಮಳೆ. ನದಿ, ಹಳ್ಳ, ಕೊಳ್ಳಗಳಲ್ಲಿ ನೀರು ತುಂಬಿಹರಿವ ಸಂಭ್ರಮ. ಸಂಜೆ ಕತ್ತಲಲ್ಲಿ ಜೀರುಂಡೆಗಳ ನಾದ.

ಮಳೆಗಾಲ ಎದುರಿಸಲು ಮಲೆನಾಡಿಗರು ಸಾಕಷ್ಟು ಮೊದಲೇ ಸಿದ್ಧತೆ ಆರಂಭಿಸುತ್ತಾರೆ. ಮಳೆಗಾಲ ಮುಗಿಯುವವರೆಗೆ ಬೇಕಾದ ಎಲ್ಲ ಅಗತ್ಯ ವಸ್ತುಗಳನ್ನು ಹೊಂದಿಸಿಕೊಳ್ಳುತ್ತಾರೆ. ಮಳೆ ಆರಂಭವಾಗಿ ಮನೆ ಬಿಟ್ಟು ಹೊರಕ್ಕೆ ಕಾಲಿಡಲು ಆಗದ ಸಮಯದಲ್ಲಿ ಬೆಚ್ಚಗೆ ಚಳಿ ಕಾಯಿಸುತ್ತ ಒಲೆ ಮುಂದೆ ಕುಳಿತು ಕಾಲ ಕಳೆಯಲು ಕಟ್ಟಿಗೆ ಬೇಕು. ಕಟ್ಟಿಗೆಗಾಗಿ ಮರ ಕಡಿದು ಒಣಗಿಸಿ ಸೌದೆ ಕೊಟ್ಟಿಗೆಯಲ್ಲಿ ಒಪ್ಪವಾಗಿಸುವ ಕೆಲಸ ಈಗ ಮಲೆನಾಡಿನಲ್ಲಿ ಆರಂಭವಾಗಿದೆ.

ಕಟ್ಟಿಗೆ ‘ಕಡ’ ತರಲು ಸಾಧ್ಯವಿಲ್ಲ. ಏಪ್ರಿಲ್, ಮೇ ತಿಂಗಳ ಅಂತ್ಯದವರೆಗೆ ಮಲೆನಾಡಿನ ಜನ ಕಟ್ಟಿಗೆ ಕಡಿದು ಒಣಗಿಸಿ ಕೊಟ್ಟಿಗೆಗಳಲ್ಲಿ ಸಂಗ್ರಹಿಸುತ್ತಾರೆ. 

 ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನ ಜನರು ಕಟ್ಟಿಗೆ ಬಳಕೆ ಕಡಿಮೆ ಮಾಡಿದ್ದಾರೆ. ಉರುವಲಿಗೆ ತೋಟಗಳಲ್ಲಿ ಸಿಗುವ ಅಡಿಕೆ ಹಾಳೆ, ಸಿಪ್ಪೆ, ತೆಂಗಿನ ಸೋಗೆ ಮುಂತಾದವನ್ನು ಬಳಸುತ್ತಿರುವುದರಿಂದ ಕಾಡಿನ ಮೇಲೆ ಒತ್ತಡ  ಕಡಿಮೆಯಾಗುತ್ತಿದೆ. ಹಿಂದಿನಂತೆ ಬಚ್ಚಲು ಒಲೆ ಈಗ ದಿನದ 24 ಗಂಟೆಗಳೂ ಉರಿಯುವುದಿಲ್ಲ. ಉರುವಲು ಒಲೆಗಳನ್ನು ಆಧುನೀಕರಿಸಲಾಗುತ್ತಿದೆ. ಕಡಿಮೆ ಕಟ್ಟಿಗೆ ಬಳಸಿ ಹೆಚ್ಚು ಪ್ರಯೋಜನ ಪಡೆಯಲು ರೈತರು ಮುಂದಾಗಿದ್ದಾರೆ. ಹಸಿ ಕಟ್ಟಿಗೆ ಕಡಿದು ಸಂಗ್ರಹಿಸುವ ಪದ್ಧತಿ ಕೈಬಿಟ್ಟಿದ್ದಾರೆ. ಇದು ಕಾಡು ಉಳಿಸುವ ಮಹತ್ಕಾರ್ಯಕ್ಕೆ ರೈತರ ಕೊಡುಗೆ.

ಕಾಡಿನ ನಿಯಮಗಳು ಊರಿನಲ್ಲಿ ಜಾರಿಗೆ ಬರುತ್ತಿವೆ. ಕಾಡಿನ ಅಂಚಿನ ಊರುಗಳ ವಿದ್ಯಾವಂತರು ಕಾಡಿನ ಮಹತ್ವವನ್ನು ಊರ ಜನರಿಗೆ ಪರಿಚಯಿಸಿ ನಮ್ಮ ಪರಿಸರದ ಅರಣ್ಯ ಉಳಿಯಬೇಕು ಎಂಬ ಜಾಗೃತಿ ಮೂಡಿಸಿದ್ದಾರೆ. ಕಟ್ಟಿಗೆಗಾಗಿ ಹಸಿ ಮರಗಳನ್ನು ಕಡಿಯುವುದಕ್ಕೆ ವಿದಾಯ ಹೇಳಿದ್ದಾರೆ. ಒಂದೆರಡು ದಶಕಗಳ ಹಿಂದೆ ಯಥೇಚ್ಛವಾಗಿ ಉರುವಲು ಕಟ್ಟಿಗೆ ಸಂಗ್ರಹಿಸುವ ಪರಿಪಾಠವಿತ್ತು. ಈಗ ಅಡುಗೆ ಮಾಡಲು ಗ್ಯಾಸ್‌ಗಳನ್ನು ಬಳಸುತ್ತಿದ್ದಾರೆ. ಈ ಪರಿವರ್ತನೆಗೆ ಅರಣ್ಯ ಇಲಾಖೆ ಉತ್ತೇಜನ ನೀಡುತ್ತಿದೆ.

ಒಂದೆರಡು ದಶಕಗಳ ಹಿಂದೆ ಹೆಚ್ಚು ಒಣ ಕಟ್ಟಿಗೆ ಕಡಿದು ಸಂಗ್ರಹಿಸುವುದು ಪ್ರತಿಷ್ಠೆಯ ವಿಷಯವಾಗಿತ್ತು. ಒಂದೊಂದು ಕುಟುಂಬಗಳು 20ರಿಂದ 30 ಗಾಡಿ ಕಟ್ಟಿಗೆ ಸಂಗ್ರಹಿಸುತ್ತಿದ್ದವು. ಅನೇಕರು ವಾರಗಟ್ಟಲೆ ಅದಕ್ಕಾಗಿ ದುಡಿಯುತ್ತಿದ್ದರು. ಸೌದೆ ಕೊಟ್ಟಿಗೆಯಲ್ಲಿ ಕಲಾತ್ಮಕವಾಗಿ ‘ಕಂಡು’ಗಳನ್ನು ಕೂಡಿಹಾಕಿ ಹೆಚ್ಚುಗಾರಿಕೆ ಮೆರೆಯುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.