ADVERTISEMENT

ವಿದ್ಯುಚ್ಛಕ್ತಿ ಈ ವ್ಯಕ್ತಿಗೆ ಬಲು ಪ್ರೀತಿ!

ಅರುಣ .ಎಂ.ಜಿ
Published 17 ಡಿಸೆಂಬರ್ 2012, 19:59 IST
Last Updated 17 ಡಿಸೆಂಬರ್ 2012, 19:59 IST

ವಿದ್ಯುತ್  ಶಾಕ್...ಹೆಸರು ಕೇಳಿದರೇನೆ ನಡುಕ ಹುಟ್ಟುತ್ತೆ. ಇನ್ನೇನಾದ್ರೂ ಸ್ವರ್ಶ ಆಗಿ ಬಿಟ್ಟಿತೆಂದ್ರೆ ದೇವರೇ ಗತಿ. ವಿದ್ಯುತ್  ಪಾಸ್ ಆಗ್ತಿರೋ ಒಂದು ಚಿಕ್ಕ ಪಿನ್ ಮುಟ್ಟಿ ಶಾಕ್‌ನಿಂದ ತಪ್ಪಿಸಿಕೊಂಡರೂ ಸಾವನ್ನೇ ಜಯಿಸಿದ ಅನುಭವ. ಅದಕ್ಕಾಗಿಯೇ ವಿದ್ಯುತ್ ಕೆಲಸ ಮಾಡುವವರು ಇದರ ಹೊಡೆತ ತಪ್ಪಿಸಿಕೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಾರೆ.

ಪರಿಸ್ಥಿತಿ ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ಇದ್ದಾರೆ. ಅವರಿಗೆ ವಿದ್ಯುತ್ ಎಂದರೆ ಅಚ್ಚುಮೆಚ್ಚು. ಅದರ ಜೊತೆ ಸರಸವಾಡುವುದೆಂದರೆ ಬಹಳ ಪ್ರೀತಿ. ವಿದ್ಯುತ್‌ಗೂ ಅಷ್ಟೇ. ಈ ವ್ಯಕ್ತಿಯೆಂದರೆ ತುಂಬಾ ಪ್ರೀತಿ ಎಂಬಂತೆ ಏನೂ ಮಾಡುವುದೇ ಇಲ್ಲ. ಇಂಥ ಅಪರೂಪದ ವ್ಯಕ್ತಿಯೇ ಚಾಮರಾಜ ನಗರ ಜಿಲ್ಲೆಯ ಕೊಳ್ಳೆಗಾಲದ ಹುತ್ತುರಿನ ಮಹದೇವ.

ಇವರಿಗೆ  ವಿದ್ಯುತ್ ಎಂದರೆ ಅದೇನೋ  ಪ್ರೀತಿ, ಚಿನ್ನಾಟ. ಇವರಿಗೆ ವಿದ್ಯುತ್  ಶಾಕ್ ಅಂದ್ರೆನೇ ಗೊತ್ತಿಲ್ಲ. ವಿದ್ಯುತ್  ಇರೋ ತಂತಿ ಕೊಟ್ಟು ಮೈಮೇಲೆ ಬಿಟ್ಟಿಕೊ ಅಂದ್ರೆ ಮುಲಾಜಿಲ್ಲದೇ ತಂತಿ ಸುತ್ತಿಕೊಂಡು ವಿದ್ಯುತ್ತನ್ನು ಮೈ ಮೇಲೆ ಹರಿಸಿಕೊಳ್ಳುತ್ತಾರೆ.   ವಿದ್ಯುತ್  ಇರುವ ತಂತಿಯನ್ನು ಸರಾಗವಾಗಿ ಬಾಯಿಗೆ ಇಟ್ಟುಕೊಳ್ಳುತ್ತಾರೆ. ಆದರೂ ಅವರಿಗೆ ಶಾಕ್ ಹೊಡೆಯುವುದಿಲ್ಲ. ಇವರ ದೇಹಕ್ಕೆ ವಿದ್ಯುತ್ ತಂತಿ ಸಿಕ್ಕಿಸಿ ತಲೆ, ಹೊಟ್ಟೆ, ಕೈ ಹೀಗೆ ದೇಹದ ಯಾವುದೇ ಭಾಗಕ್ಕೆ ಟೆಸ್ಟರ್ ಇಟ್ಟರೆ ಅದರ ಲೈಟ್ ಉರಿಯುತ್ತದೆ.

ವಿದ್ಯುತ್ ಜೊತೆ ಆಟ
ವಿದ್ಯುತ್ ಜೊತೆ ಆಟವಾಡುವುದನ್ನು ಹಲವು ವರ್ಷಗಳಿಂದ ವೃತ್ತಿಯನ್ನಾಗಿಸಿಕೊಂಡಿದ್ದಾರೆ ಮಹದೇವ. ತಮ್ಮ ಸುತ್ತಮುತ್ತಲ ಗ್ರಾಮದಲ್ಲಿ  ವಿದ್ಯುತ್  ಸಮಸ್ಯೆಯಾದರೆ ಇವರಿಗೇ ಮೊದಲ ಕರೆ. ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಸಣ್ಣಪುಟ್ಟ ಕೆಲಸಗಳನ್ನು ಜನ ಕರ್ನಾಟಕ ವಿದ್ಯುತ್ ಸರಬರಾಜು ಮಂಡಳಿಗೆ (ಕೆಪಿಟಿಸಿಎಲ್) ತಿಳಿಸುವ ಮೊದಲು ಇವರಿಗೆ  ಫೋನ್ ಮಾಡುತ್ತಾರೆ. ಜನರಿಂದ ಕರೆ ಬಂದ ಕೂಡಲೇ ಇವರು ಕೆಲಸ ಮಾಡಲು ಅಲ್ಲಿಗೆ ಹಾಜರ್. ಕಟಿಂಗ್‌ಪ್ಲೇಯರ್, ಟೆಸ್ಟರ್ ಇಲ್ಲದೇ ಬರಿ ಕೈಲಿ ಕೆಲಸಮಾಡುವುದನ್ನು ಇಡೀ  ಗ್ರಾಮದ ಜನ ಭಯದಿಂದ  ನಿಬ್ಬೆರಗಾಗಿ ನೋಡುತ್ತಾರೆ. `ಶಾಕ್ ಹೊಡೆಯಲ್ವಾ' ಅಂದ್ರೆ?  `ಹಾಗಂದ್ರೇನು' ಎಂದು ಮರುಪ್ರಶ್ನೆ ಅವರಿಂದ!

ಇಂಥ ಒಂದು ಶಕ್ತಿ ತಮ್ಮಲ್ಲಿದೆ ಎಂದು ಮಹದೇವ ಅವರಿಗೆ ಗೊತ್ತಾಗಿದ್ದು ಸುಮಾರು ಐದು ವರ್ಷಗಳ ಹಿಂದೆ.  ಸ್ನೇಹಿತರೊಬ್ಬರ ಜೊತೆ ತೋಟದಲ್ಲಿ  ಮೋಟರ್ ರಿಪೇರಿ ಮಾಡುವಾಗ ಇದ್ದಕ್ಕಿಂದ್ದಂತೆ ಮೋಟರ್‌ನಲ್ಲಿ ವಿದ್ಯುತ್ ಹರಿದಿದೆ. ಇವರ ಸ್ನೇಹಿತನಿಗೆ ಶಾಕ್ ಹೊಡೆದಿದೆ. ಆದರೆ ಮಹದೇವನಿಗೆ ಮಾತ್ರ ಶಾಕ್ ಹೊಡೆಯಲಿಲ್ಲ. ಅಂದಿನಿಂದ ಇವರು ಬರಿ ಕೈನಲ್ಲೇ ಕೆಲಸಮಾಡುತ್ತಾರೆ.  ಚಿಕ್ಕ ಚಿಕ್ಕ ತಂತಿಗಳು ಮಾತ್ರವಲ್ಲದೆಯೇ ವಿದ್ಯುತ್ ಹರಿಯುವ ಕಂಬವನ್ನೇರಿ ತಂತಿ ಹಿಡಿದುಕೊಳ್ಳುತ್ತಾರೆ. ತಂತಿ ಮೇಲೆ ಮಲಗುತ್ತಾರೆ ಕೂಡ.   ಹೈಟೆನ್ಯನ್ ತಂತಿ ಮುಟ್ಟಿದರೂ ಇವರಿಗೆ  ಏನು ಆಗುವುದಿಲ್ಲ!

ಯಾರಿಗೂ ಇಲ್ಲದ ಶಕ್ತಿ
`ನನ್ನ ಕುಟುಂಬದಲ್ಲಿ ಇಂಥ ಶಕ್ತಿ ಯಾರಲ್ಲೂ ಇಲ್ಲ. ವಿದ್ಯುತ್ ಅಂದರೆ ನನಗೇನೂ ಭಯವಿಲ್ಲ. ಆದರೆ ಪತ್ನಿ ಮತ್ತು ನಾಲ್ವರು ಹೆಣ್ಣು ಮಕ್ಕಳು ಯಾವಾಗಲೂ ಹೆದರುತ್ತಲೇ ಇರುತ್ತಾರೆ. ನನ್ನ ಈ ವಿದ್ಯುತ್ ಪ್ರೀತಿ ಅವರಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಈ ಕೆಲಸ ಮಾಡುವುದು ಬೇಡ. ಬೇರೆ ವೃತ್ತಿ ಮಾಡು' ಎಂದು ಹೇಳುತ್ತಿರುತ್ತಾರೆ.

ಆದರೆ ನನಗೆ ಬೇರೆ ಯಾವ ವೃತ್ತಿಯೂ ಇಷ್ಟ ಇಲ್ಲ. ಇದೊಂದು ನನಗೆ ಒದಗಿರುವ ಅದ್ಭುತ ಶಕ್ತಿ. ಆದ್ದರಿಂದ ಇದನ್ನೇ ಮುಂದುವರಿಸುತ್ತೇನೆ' ಎನ್ನುವುದು ಅವರ ದಿಟವಾದ ಮಾತು. ಹಾಗೆಂದು ತಮ್ಮಲ್ಲಿರುವ ಈ ವಿಶೇಷ ಶಕ್ತಿ ಮೂಲಕ ಹಣ ಮಾಡಿಕೊಳ್ಳುವ ಗೋಜಿಗೆ ಇವರಿನ್ನೂ ಹೋಗಿಲ್ಲ. ಕುಟುಂಬ ಬಡತನದಲ್ಲಿ ಬಳಲುತ್ತಿದ್ದರೂ ಸಹಾಯ ಅಪೇಕ್ಷಿಸಿಲ್ಲ. ಇವರ ಈ ಶಕ್ತಿಯನ್ನು ಗಮನಿಸಿಯಾದರೂ ವಿದ್ಯುತ್ ಪ್ರಸರಣ ನಿಗಮದವರು ಉದ್ಯೋಗ ಕೊಟ್ಟು ಬಡತನ ನೀಗಿಸಲಿ ಎನ್ನುವುದು ಇವರ ಅಭಿಮಾನಿಗಳ ಆಕಾಂಕ್ಷೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.