ADVERTISEMENT

ಶಕ್ತಿ ದೇವತೆ ಮಾಯಕ್ಕ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 19:30 IST
Last Updated 14 ಸೆಪ್ಟೆಂಬರ್ 2011, 19:30 IST
ಶಕ್ತಿ ದೇವತೆ ಮಾಯಕ್ಕ
ಶಕ್ತಿ ದೇವತೆ ಮಾಯಕ್ಕ   

ರಾಯಬಾಗ ತಾಲ್ಲೂಕಿನ ಚಿಂಚಲಿಯ ಮಾಯಕ್ಕ ದೇವಿ ದೇವಸ್ಥಾನ ಉತ್ತರ ಕರ್ನಾಟಕದ ಪ್ರಮುಖ ಶಕ್ತಿ ದೇವತೆ ಕ್ಷೇತ್ರ. ಮಾಯಕ್ಕ ದೇವಿಯ ದರ್ಶನಕ್ಕೆ ನೆರೆಯ ಮಹಾರಾಷ್ಟ್ರ ರಾಜ್ಯದಿಂದಲೂ ಸಾವಿರಾರು ಭಕ್ತರು ಬರುತ್ತಾರೆ. ಪ್ರತಿ ವರ್ಷ ಭಾರತ ಹುಣ್ಣಿಮೆಯ ನಂತರ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಹತ್ತು ಲಕ್ಷಕ್ಕೂ ಹೆಚ್ಚು ಜನರು ಬರುತ್ತಾರೆ.

ಮಾಯಕ್ಕ ಪಾರ್ವತಿಯ ಅವತಾರ ಎಂದೇ ಜನರ ನಂಬಿಕೆ. ಸಾವಿರಾರು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಪ್ರಜಾಪೀಡಕರಾಗಿದ್ದ ಕೀಲ-ಕಿಟ್ಟ ಎಂಬ ರಾಕ್ಷಸರನ್ನು ಸಂಹರಿಸಲು ಪಾರ್ವತಿ ಮಾಯಕ್ಕನಾಗಿ ಅವತರಿಸಿದಳು. ರಾಕ್ಷಸರ ಸಂಹಾರದ ನಂತರ ಇಲ್ಲೇ ನೆಲೆ ನಿಂತಳು ಎಂಬ ಪ್ರತೀತಿ ಇದೆ.
 
ಇನ್ನೊಂದು ಐತಿಹ್ಯದ ಪ್ರಕಾರ ಮಾಯಕ್ಕ ದೇವತೆಯು ಮಹಾರಾಷ್ಟ್ರದ ಕೊಂಕಣ ಪ್ರದೇಶದವಳು. ಈಕೆ ಕೀಲ, ಕಿಟ್ಟರೆಂಬ ರಾಕ್ಷಸರನ್ನು ಬೆನ್ನಟ್ಟಿಕೊಂಡು ಬಂದು ಅವರನ್ನು ಇಲ್ಲಿ ಸಂಹಾರ ಮಾಡಿದ್ದರಿಂದ ಇಲ್ಲಿಯೇ ನೆಲೆನಿಂತಳು ಎನ್ನಲಾಗಿದೆ. ಇದು `ಜಾಗೃತ~ ದೇವಸ್ಥಾನವೆಂಬ ಪ್ರತೀತಿ ಇದೆ. ಹೀಗಾಗಿ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿದೆ.

ಚಿಂಚಲಿ ಗ್ರಾಮದ ಪಶ್ಚಿಮಕ್ಕೆ ಕೃಷ್ಣಾ ನದಿ ಹರಿಯುತ್ತಿದೆ. ಮಾಯಕ್ಕ ದೇವತೆ ಕ್ಷೇತ್ರದಿಂದಾಗಿ ಚಿಂಚಲಿಗೆ ಮಾಯಕ್ಕನ ಚಿಂಚಲಿ ಎಂಬ ಹೆಸರು ಬಂದಿದೆ. ಇಲ್ಲಿಗೆ ಬರುವ ಭಕ್ತರಲ್ಲಿ  ಶೇ.75 ರಷ್ಟು ಜನರು ಮಹಾರಾಷ್ಟ್ರದವರು.  ಮಾಯಕ್ಕನಿಗೆ ಎಲ್ಲಾ ಜಾತಿಗಳ ಭಕ್ತರಿದ್ದಾರೆ. ಆದರೆ ಕುರುಬ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ.

ಈ ದೇವಸ್ಥಾನದಲ್ಲಿ ದೇವಿಯು ಮೈಮೇಲೆ ಬಂದು ಕುಣಿಯುವ ಭಕ್ತರು ಹೆಚ್ಚಾಗಿ ಕಂಡು ಬರುತ್ತಾರೆ. ಜಾತ್ರೆ ಸಮಯದಲ್ಲಿ ಇಂಥವರ ಸಂಖ್ಯೆ ಹೆಚ್ಚು. ಕೈಯಲ್ಲಿ ಬೆತ್ತದಕೋಲು ಹಿಡಿದು ವೀರಾವೇಶದಿಂದ ಕುಣಿಯುವ ಭಕ್ತರು `ಚಾಂಗಭಲೋ~, `ಹೋಕ ಭಲೋ~ ಎಂದು ಕೂಗುತ್ತ ಗಂಡು, ಹೆಣ್ಣು ಬೇಧ ಭಾವವಿಲ್ಲದೆ ಡೊಳ್ಳಿನ ನಾದಕ್ಕೆ ತಕ್ಕಂತೆ ಕುಣಿಯುತ್ತಾರೆ.

ಚಿಂಚಲಿಯ ಮೂಲ ಗ್ರಾಮ ದೇವತೆ `ಹಿರಿದೇವಿ~. ಮಾಯಕ್ಕ ಹಿರಿದೇವಿಯ ಆಶ್ರಯ ಪಡೆದು ಇಲ್ಲಿ ನೆಲೆಸಿದಳು. ಹೀಗಾಗಿ ಗ್ರಾಮದಲ್ಲಿ ಮೊದಲು ಪ್ರಾಶಸ್ತದ ಪೂಜೆ ಹಿರಿದೇವಿಗೆ. ಮೊದಲು ಹಿರಿದೇವಿಗೆ ಪೂಜೆ ಸಲ್ಲಿಸಿದ ನಂತರ ಮಾಯಕ್ಕನಿಗೆ ಪೂಜೆ ಸಲ್ಲುತ್ತದೆ.

ದೇವಸ್ಥಾನ ಪೂರ್ವಾಭಿಮುಖವಾಗಿದೆ. ಮಹಾದ್ವಾರ 50ಅಡಿ ಎತ್ತರವಿದೆ. ಮಧ್ಯದಲ್ಲಿ ನಗಾರಿ ಖಾನೆ ಇದೆ. ದೇವಸ್ಥಾನ ವಿಶಾಲವಾಗಿದ್ದು ಆಕರ್ಷಕ ಗೋಪುರವಿದೆ. ದೇವಿಯ ಮೂರ್ತಿ ಆಕರ್ಷಕವಾಗಿದೆ. ತಲೆಯ ಮೇಲೆ ಕಿರೀಟ, ಅದರ ಮೇಲೆ ಐದು ಹೆಡೆಗಳ ಸರ್ಪ, ಚರ್ತುಭುಜಗಳು, ಮುಂಗೈಗಳ ತುಂಬ ಹಸಿರು ಬಳೆಗಳು, ಮೈತುಂಬಾ ಬಂಗಾರದ ಒಡವೆಗಳು, ಬಲಗೈಯಲ್ಲಿ ಖಡ್ಗ, ಇನ್ನೊಂದು ಕೈಯಲ್ಲಿ ತ್ರಿಶೂಲ, ಎಡಗೈಯಲ್ಲಿ ಹಾವು ಕಂಡುಬರುತ್ತವೆ. ದೇವಿಯನ್ನು ಭಕ್ತರು ಮಾಯವ್ವ, ಮಾಯಕ್ಕ, ಮಾಯಮ್ಮ, ಮಾಯಕಾರತಿ, ಮಹಾಕಾಳಿ, ಮಹಾಮಾಯಿ ಎಂಬ ಹೆಸರುಗಳಿಂದ ಕರೆದು ಆರಾಧಿಸುತ್ತಾರೆ.

ಚಿಂಚಲಿ ಬೆಳಗಾವಿಯಿಂದ 110 ಕಿ.ಮೀ ದೂರದಲ್ಲಿದೆ. ತಾಲ್ಲೂಕು ಕೇಂದ್ರ ರಾಯಬಾಗದಿಂದ 9 ಕಿ.ಮೀ. ಮೀರಜ್‌ನಿಂದ 45ಕಿ.ಮೀ ದೂರದಲ್ಲಿದೆ. ರಾಯಬಾಗದಿಂದ ಚಿಂಚಲಿಗೆ ಬಸ್‌ಗಳಿವೆ.
 
ಮೀರಜ್, ಸಾಂಗ್ಲಿ ಜತ್ತ, ಕೊಲ್ಲಾಪುರಗಳಿಂದಲೂ ಬಸ್‌ಗಳಿವೆ. ಯಾತ್ರಿಕರಿಗೆ ದೇವಸ್ಥಾನದಿಂದ ಉಚಿತ ವಸತಿ ಸೌಲಭ್ಯ ಇದೆ. ವಸತಿ ವ್ಯವಸ್ಥೆಗೆ ಬೇಕಾದವರು ದೇವಸ್ಥಾನ ಸಮಿತಿಯನ್ನು ಸಂಪರ್ಕಿಸಿ ಅನುಮತಿ ಪಡೆದುಕೊಳ್ಳಬೇಕು.

ಇಲ್ಲಿಗೆ ಬರುವ ಭಕ್ತರು ದೇವಿಗೆ ವಿವಿಧ ಸೇವೆಗಳನ್ನು ಸಲ್ಲಿಸುವ ಹರಕೆ ಹೊತ್ತು ಬಂದು ಇಲ್ಲಿ ತೀರಿಸುತ್ತಾರೆ. ಭಕ್ತರಿಗೆ ದೇವಸ್ಥಾನ ಸಮಿತಿ ವತಿಯಿಂದ ನಿತ್ಯ `ಪ್ರಸಾದ~ದ ವ್ಯವಸ್ಥೆ ಇದೆ. ಪ್ರತಿ ರವಿವಾರ ಹಾಗೂ ಮಂಗಳವಾರ ದೇವಿಗೆ ಅಭಿಷೇಕ ನಡೆಯುತ್ತದೆ. ದೇವಸ್ಥಾನ ಬೆಳಿಗ್ಗೆಯಿಂದ ರಾತ್ರಿವರೆಗೆ ತೆರೆದಿರುತ್ತದೆ. ದೇವಸ್ಥಾನದಲ್ಲಿ ಯಾವುದೇ ಸೇವೆಗಳಿಲ್ಲ.

ನಿತ್ಯ ದಾಸೋಹದ ಸೇವೆಯಲ್ಲಿ ಭಾಗಿಯಾಗಲು 5000 ರೂ ಶುಲ್ಕ ನೀಡಿ ವರ್ಷದಲ್ಲಿ ಒಂದು ದಿನದ ದಾಸೋಹಕ್ಕೆ ನೆರವಾಗಬಹುದು. ಅವರ ಹೆಸರಿನಲ್ಲಿ ದಾಸೋಹ ಸೇವೆ ನಡೆಯುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೇವಸ್ಥಾನದ ದೂರವಾಣಿ ನಂ. 08331-237220. ಮೊಬೈಲ್ ನಂ: 984540766.                                                                                 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.