ADVERTISEMENT

ಶಕ್ತಿ ನಗರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2011, 19:30 IST
Last Updated 23 ಫೆಬ್ರುವರಿ 2011, 19:30 IST

ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ(ಆರ್‌ಟಿಪಿಎಸ್) ನಾಡಿಗೆ ಬೆಳಕು ನೀಡುವ ‘ಶಕ್ತಿ’ಕೇಂದ್ರ. ಅಂತೆಯೇ ಈ ಸ್ಥಾವರ ಇರುವ ಪ್ರದೇಶ ‘ಶಕ್ತಿನಗರ’ ಎಂದೇ ಹೆಸರಾಗಿದೆ. ಎರಡೂವರೆ ದಶಕಗಳಿಂದ ಇಲ್ಲಿನ ಏಳು ಘಟಕಗಳು ವಿದ್ಯುತ್ ಉತ್ಪಾದನೆ ಮಾಡಿ ನಾಡಿಗೆ ಪೂರೈಸುತ್ತ ಬಂದಿವೆ.

ಈಚೆಗೆ, ಕಲ್ಲಿದ್ದಲು ಕೊರತೆ, ಕಚ್ಚಾ ಕಲ್ಲಿದ್ದಲು ಬಳಕೆ, ಕಾಲ ಕಾಲಕ್ಕೆ ಘಟಕಗಳ ಸಮರ್ಪಕ ದುರಸ್ತಿಗೆ ಗಮನಹರಿಸುವ ವಿಷಯದಲ್ಲಿ ತೋರಿದ ನಿರ್ಲಕ್ಷ್ಯದ ಕಾರಣದಿಂದ ವಿದ್ಯುತ್ ಉತ್ಪಾದನೆಯಲ್ಲಿ ಆಗಾಗ ಅಡಚಣೆ ಆಗುತ್ತಿದೆ.

ರಾಜ್ಯದಲ್ಲಿ ಭವಿಷ್ಯದ ವಿದ್ಯುತ್ ಬೇಡಿಕೆಗೆ ದೂರದೃಷ್ಟಿಯ ಯೋಜನೆ ರೂಪಿಸದೇ ಆರ್‌ಟಿಪಿಎಸ್‌ನ್ನು ಅವಲಂಬಿಸಿದ್ದೇ ಈ ಸ್ಥಾವರದ ಘಟಕಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದು ಪದೇ ಪದೇ ತಾಂತ್ರಿಕ ಅಡಚಣೆಗಳು ಬರುತ್ತಿವೆ. ಇದರ ಪರಿಣಾಮ ವಿದ್ಯುತ್ ಪೂರೈಕೆ ಮೇಲೆ ಆಗಿದೆ. ಈ ಸ್ಥಾವರದ 7 ಘಟಕಗಳಿಂದ ಪೂರೈಕೆಯಾಗುತ್ತಿದ್ದ 1470 ಮೆಗಾವಾಟ್ ವಿದ್ಯುತ್‌ನಲ್ಲಿ ಕ್ರಮೇಣ ಕಡಿಮೆಯಾಗಿ ಬೇಸಿಗೆ ದಿನಗಳಲ್ಲಿ ಕಳೆದ ವರ್ಷ 600ರಿಂದ 400 ಮೆಗಾವಾಟ್‌ಗೆ ತಗ್ಗಿತ್ತು. ಇದೇ ಕಾರಣಕ್ಕೆ ರಾಜ್ಯದಲ್ಲಿ ತೀವ್ರ ವಿದ್ಯುತ್ ಅಭಾವ ಸೃಷ್ಟಿಯಾಗಿತ್ತು.

ಈಗ ಪರಿಸ್ಥಿತಿ ಸುಧಾರಿಸಿದ್ದು, ಎಲ್ಲ ಘಟಕಗಳು ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿವೆ. 250 ಮೆಗಾವಾಟ್‌ನ 8ನೇ ಘಟಕ ಪ್ರಾಯೋಗಿಕ ಪರೀಕ್ಷಾರ್ಥ ವಿದ್ಯುತ್ ಉತ್ಪಾದನೆ ಕಾರ್ಯ ಆರಂಭಿಸಿದೆ. ಕೆಲ ದಿನಗಳಲ್ಲಿ ರಾಜ್ಯದ ವಿದ್ಯುತ್ ಬೇಡಿಕೆ ನೀಗಿಸುವಲ್ಲಿ ಸಹಕಾರಿಯಾಗಲಿದೆ.

ಹಿನ್ನೆಲೆ: ರಾಜ್ಯದ ವಿದ್ಯುತ್ ಕೊರತೆ ನೀಗಿಸಲು 1978ರಲ್ಲಿ ಅಂದಿನ ಸರ್ಕಾರವು ರಾಯಚೂರು ಸಮೀಪದ ದೇವಸುಗೂರ ಗ್ರಾಮದ ಹತ್ತಿರ ಶಾಖೋತ್ಪನ್ನ ವಿದ್ಯುತ್ ಸ್ಥಾವರ (ಥರ್ಮಲ್ ಘಟಕ) ನಿರ್ಮಾಣಕ್ಕೆ ಮುಂದಾಯಿತು. ಮೊದಲ ಘಟಕ 1985ರಲ್ಲಿ, 1986ರಲ್ಲಿ 2ನೇ ಘಟಕ 1991ರಲ್ಲಿ 3ನೇ ಘಟಕ,  1994ರಲ್ಲಿ  4ನೇ ಘಟಕ, 1999ರಲ್ಲಿ  5 ಮತ್ತು 6ನೇ ಘಟಕ, 2003ರಲ್ಲಿ 7ನೇ ಘಟಕ ಸ್ಥಾಪನೆಗೊಂಡವು. 8ನೇ ಘಟಕ ಈ ವರ್ಷ ವಿದ್ಯುತ್ ಉತ್ಪಾದನೆ ಆರಂಭಿಸಲಿದೆ.

ಈ ಏಳೂ ಘಟಕಗಳು ತಲಾ 210 ಮೆಗಾವಾಟ್ ವಿದ್ಯುತ್ ಉತ್ಪಾದನೆ (ಒಟ್ಟು 1,470 ಮೆಗಾವಾಟ್ ಸಾಮರ್ಥ್ಯ) ಸಾಮರ್ಥ್ಯ ಹೊಂದಿವೆ. 8ನೇ ಘಟಕ 250 ಮೆಗಾವಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ. ಜೊತೆಗೆ ದೇಶಿಯ ಹಾಗೂ ವಿದೇಶಿ ಕಲ್ಲಿದ್ದಲನ್ನು ಈ ಘಟಕದಲ್ಲಿ ಬಳಸಲು ಸಾಧ್ಯವಿದೆ.

2400 ಮೆಗಾವಾಟ್‌ನ 3 ಹೊಸ ಘಟಕ: ಆರ್‌ಟಿಪಿಎಸ್ ಸಮೀಪ ರಾಜ್ಯ ಹೆದ್ದಾರಿ 13ರ ಪಕ್ಕದಲ್ಲಿರುವ ಯರಮರಸ್ ಸಮೀಪ ಕೆಪಿಸಿಎಲ್- ಬಿಎಚ್‌ಇಎಲ್ ಸಹಭಾಗಿತ್ವದಲ್ಲಿ ರಾಯಚೂರು ವಿದ್ಯುತ್ ನಿಗಮದ ಮೂಲಕ  800 ಮೆಗಾ ವಾಟ್ ಸಾಮರ್ಥ್ಯದ ಎರಡು ಘಟಕಗಳು ಹಾಗೂ ಯದ್ಲಾಪುರ ಹತ್ತಿರ 800 ಮೆಗಾವಾಟ್‌ನ ಒಂದು ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿದೆ. ಯರಮರಸ್ ಸಮೀಪದ 2 ಘಟಕಗಳ ನಿರ್ಮಾಣ ಸ್ಥಳದ ಸುತ್ತ ಗೋಡೆ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದೆ.

ಈ ಎರಡು ಘಟಕಗಳ ಅಂದಾಜು ವೆಚ್ಚ 8,806 ಕೋಟಿ. ಕಾಮಗಾರಿ 2013ನೇ ವರ್ಷದಲ್ಲಿ ಪೂರ್ಣಗೊಳ್ಳುವ ಗುರಿ ಇದೆ. ಈ ಘಟಕಗಳ ವರ್ಷಕ್ಕೆ 11,213 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿವೆ. ಯದ್ಲಾಪುರ ಘಟಕದ ನಿರ್ಮಾಣ ವೆಚ್ಚ 4,487 ಕೋಟಿ. ಇದೂ ಸಹ 2013ರಲ್ಲಿ ಪೂರ್ಣಗೊಳ್ಳಲಿದೆ. ಇದರಿಂದ  ವಾರ್ಷಿಕ 5,606 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ.

ಈ ಮೂರೂ ಘಟಕಗಳ ಸ್ಥಾಪನೆಗೆ ಕೆಲ ಪರಿಸರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಥರ್ಮಲ್ ಘಟಕಗಳನ್ನು ರಾಯಚೂರು ಜಿಲ್ಲೆಯಲ್ಲಷ್ಟೇ ಸ್ಥಾಪನೆ ಮಾಡುವ ಉದ್ದೇಶವನ್ನು ಈ ಸಂಘಟನೆಗಳು ಪ್ರಶ್ನಿಸಿವೆ. ಜಿಲ್ಲೆಯ ಜನರಿಗೆ ಉದ್ಯೋಗ ಒದಗಿಸುವ ಉದ್ದಿಮೆಗಳನ್ನು ಸ್ಥಾಪಿಸುವ ಬೇಡಿಕೆ ಈ ಸಂಘಟನೆಗಳದ್ದು.

ಉದ್ದೇಶಿತ ಘಟಕಗಳು 2013ರ ವೇಳೆಗೆ ವಿದ್ಯುತ್ ಉತ್ಪಾದನೆ ಆರಂಭಿಸಿದರೆ ಆರ್‌ಟಿಪಿಎಸ್‌ನ 8 ಘಟಕಗಳೂ ಸೇರಿದಂತೆ ಒಟ್ಟು 4,120 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗಲಿದೆ. ಇದರಿಂದ ರಾಜ್ಯದ ವಿದ್ಯುತ್ ಕೊರತೆ ನೀಗಲಿದೆ ಎಂಬುದು ಕರ್ನಾಟಕ ವಿದ್ಯುತ್ ನಿಗಮದ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.