ADVERTISEMENT

ಸರಸರ ಮರ ಏರುವ ನೀರೆಯರು...

ಸಂಧ್ಯಾ ಹೆಗಡೆ
Published 3 ಮಾರ್ಚ್ 2014, 19:30 IST
Last Updated 3 ಮಾರ್ಚ್ 2014, 19:30 IST

ಸರಸರ ತೆಂಗಿನ ಮರ ಏರಿ ಕಾಯಿ ಕಿತ್ತು, ಅಷ್ಟೇ ವೇಗದಲ್ಲಿ ಮರದಿಂದ ಕೆಳಗಿಳಿಯುವವರು ಯಾರು...? ಎಂದಾಕ್ಷಣ ಮನದಲ್ಲಿ ಮೂಡುವುದು ಯಾವುದೋ ಪುರುಷನ ಮುಖ ಅಲ್ಲವೇ?

ಆದರೆ ನೀವು ಹಾಗೆ ಅಂದುಕೊಂಡಿದ್ದರೆ ಅದು ಶುದ್ಧ ತಪ್ಪು. ಯಾಕೆಂದರೆ ಇಲ್ಲಿ ಹೇಳಹೊರಟಿರುವುದು ಧೀರ ವನಿತೆಯರ ಬಗ್ಗೆ!
ಅವಕಾಶ ತೆರೆದುಕೊಂಡಾಗಲೆಲ್ಲ ತನ್ನಲ್ಲಿರುವ ಸಾಮರ್ಥ್ಯವನ್ನು  ಸಮರ್ಥವಾಗಿ ನಿಭಾಯಿಸುತ್ತಿರುವ ಮಹಿಳೆಯರ ಸಾಲಿನಲ್ಲಿ ಮರ ಏರುವವರದ್ದು ಇನ್ನೊಂದು ಮೈಲಿಗಲ್ಲು. ಈ ಸಾಧನೆಯ ಪಟ್ಟಿಗೆ ಸೇರಿದ್ದಾರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ವನಿತೆಯರು.

ಎರಡು ವರ್ಷಗಳ ಹಿಂದೆ ಬೆಂಗಳೂರಿನ ತೆಂಗು ಅಭಿವೃದ್ಧಿ ಮಂಡಳಿ ಶಿರಸಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸುಲಭವಾಗಿ ತೆಂಗಿನ ಮರವೇರಿ ಕಾಯಿ ಕೊಯ್ಯುವ ತರಬೇತಿಯೊಂದನ್ನು ಹಮ್ಮಿಕೊಂಡಿತ್ತು. ತರಬೇತಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡ್ಡಾಯವೂ ಆಗಿತ್ತು. ಬಹಳಷ್ಟು ಪುರುಷರು ತರಬೇತಿಗೆ ಹೆಸರು ನೋಂದಾಯಿಸಿದರು. ಆದರೆ ಮರ ಏರುವ ಸಾಹಸಕ್ಕೆ ಮುಂದಾಗುವ ಮಹಿಳೆಯರನ್ನು ಎಲ್ಲಿ ಹುಡುಕುವುದೆಂದು ಕೇಂದ್ರದ ಅಧಿಕಾರಿಗಳಿಗೆ ಆತಂಕ ಉಂಟಾಯಿತು.

ಕೊನೆಗೂ ಆರು ಮಹಿಳೆಯರನ್ನು ತರಬೇತಿಯಲ್ಲಿ ಭಾಗವಹಿಸಲು ಅಣಿಗೊಳಿಸಿದರು. ಅವರಲ್ಲಿ ಇಬ್ಬರು ಪಟ್ಟಣದ ಗೃಹಿಣಿಯರು, ನಾಲ್ವರು ಕೃಷಿ ಮಹಿಳೆಯರು. ತರಬೇತಿಯ ಮೊದಲ ದಿನವೇ ಪುರುಷರಿಗಿಂತ ವೇಗವಾಗಿ ಮರವೇರಲು ಕಲಿತವರು ಮಹಿಳೆಯರು! ಎರಡು ವರ್ಷದಲ್ಲಿ ನಾಲ್ಕು ಬ್ಯಾಚ್‌ ತರಬೇತಿ ನಡೆದಿವೆ. ನಲವತ್ತಕ್ಕೂ ಹೆಚ್ಚು ಮಹಿಳೆಯರು ಸಲೀಸಾಗಿ ತೆಂಗಿನ ಮರ ಏರಿ ಕಾಯಿ ಕೆಳಗಿಳಿಸುವ ನೈಪುಣ್ಯ ಗಳಿಸಿಕೊಂಡಿದ್ದಾರೆ.

‘ಮೊದಲು ಎತ್ತರದ ತೆಂಗಿನ ಮರ ಏರಿದಾಗ ಕೆಳಗೆ ಇಳಿಯಲು ತುಂಬಾ ಭಯವಾಗಿತ್ತು. ಏರಿದ ಮೇಲೆ ಇಳಿಯಲೇಬೇಕಲ್ಲ! ಅಂಜುತ್ತ, ಅಳುಕುತ್ತ ನಿಧಾನವಾಗಿ ಯಂತ್ರ ಹಿಡಿದು ನೆಲ ತಲುಪಿದೆ, ಅಬ್ಬಾ ಅನ್ನಿಸಿತ್ತು. ಈಗ ಮಕ್ಕಳು ಮನೆಗೆ ಬಂದಾಗ ಎಳನೀರು ಬೇಕೆಂದರೆ ಕೂಲಿಯವನಿಗೆ ಕಾಯಬೇಕಾಗಿಲ್ಲ. ನಾನೇ ಎಳನೀರು ಕೊಯ್ದು ಮಕ್ಕಳ ಬಾಯಾರಿಕೆ ನೀಗಿಸುವೆ’ ಎನ್ನುವ ತೋಟದಕಲ್ಲಳ್ಳಿಯ ಕೃಷಿ ಮಹಿಳೆ ಜಯಶ್ರೀ ಹೆಗಡೆ ಅವರಲ್ಲಿ ಸ್ವಾವಲಂಬಿಯಾಗಿರುವ ಹೆಮ್ಮೆ ಇದೆ.

‘ಮನೆಗೆ ಬಂದ ನೆಂಟರು ಕೆಲವೊಮ್ಮೆ ನೀನು ತೆಂಗಿನ ಮರ ಹತ್ತುವಿಯಂತೆ, ಹತ್ತಿ ತೋರಿಸು ಎಂದಾಗ ಮರಕ್ಕೆ ಯಂತ್ರ ಸಿಕ್ಕಿಸಿ ಸರಸರನೆ ಮರವೇರುವೆ. ಇದಕ್ಕೆ ಎಷ್ಟೋ ಮಂದಿ ಆಶ್ಚರ್ಯಪಟ್ಟಿದ್ದಾರೆ. ಆರೆಂಟು ಹುಡುಗರು ಉತ್ಸಾಹದಿಂದ ಮರ ಹತ್ತುವುದನ್ನು ಕಲಿತಿದ್ದಾರೆ. ಮಹಿಳೆಯಾಗಿ ನಾಲ್ಕಾರು ಪುರುಷರಿಗೆ ತೆಂಗಿನಮರ ಹತ್ತಿ ಕಾಯಿ ಕೊಯ್ಯುವುದನ್ನು ಕಲಿಸಿದ ಖುಷಿ ಇದೆ’ ಎನ್ನುವ ಜಯಶ್ರೀ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.

‘ಎತ್ತರ ನೋಡಲು ಹೆದರಿಕೆಯಾಗುವ ನನಗೆ ತೆಂಗಿನಮರದ ತುದಿ ತಲುಪಿ ಕಾಯಿ ಕೊಯ್ಯುವುದು ಕನಸಿನ ಮಾತಾಗಿತ್ತು. ಆದರೆ ತರಬೇತುದಾರರು ಪಟ್ಟು ಹಿಡಿದರು, ಅಳುಕುತ್ತ ಮರ ಹತ್ತಿ ಮರದ ತುದಿಯೇರಿ ತೆಂಗಿನಕಾಯಿ ಕೆಳಗೆ ಉದುರಿಸಿದಾಗ ಸಾಧನೆಯ ಸಂಭ್ರಮ. ಈಗ ನಮ್ಮ ಮನೆಯ ತೋಟದ ತೆಂಗಿನಕಾಯಿಗಳನ್ನು ನಾನೇ ಕೊಯ್ಯುವೆ’ ಎಂಬ ಆತ್ಮವಿಶ್ವಾಸದ ಮಾತು ಕುಸುಮಾ ಸಾಯಿಮನೆ ಅವರದ್ದು.

‘ತುಂಬಾ ಎತ್ತರದ ಮರ ಹತ್ತಲು ಈಗಲೂ ಭಯ. ಮಧ್ಯಮ ಎತ್ತರದ ಮರ ಏರಿ ಕಾಯಿ ಕೀಳುವುದು ಕಷ್ಟವೇನಲ್ಲ. ನಮ್ಮ ಮನೆಯ ಕೆಲಸ ಆಳು ನನ್ನಿಂದಲೇ ತೆಂಗಿನಮರ ಹತ್ತಿ ಕಾಯಿ ಕೀಳುವುದನ್ನು ಕಲಿತಿದ್ದಾನೆ’ ಎನ್ನುತ್ತಾರೆ ಕುಸುಮಾ.

ಸಾಂಪ್ರದಾಯಿಕ ಕಾಯಿ ಕೀಳುವ ಕಾರ್ಮಿಕರ ಕೊರತೆ ನೀಗಿಸಲು ಕೃಷಿ ಸ್ವಾವಲಂಬನೆ, ಕೃಷಿ ಉದ್ಯೋಗದ ಕಲ್ಪನೆಯನ್ನು ಪುರುಷ ಹಾಗೂ ಮಹಿಳೆಯರಲ್ಲಿ ಸಮಾನವಾಗಿ ಮೂಡಿಸುವ ಆಶಯದಿಂದ ಯಂತ್ರ ಬಳಸಿ ತೆಂಗಿನ ಮರ ಹತ್ತುವ ತರಬೇತಿ ಹಮ್ಮಿಕೊಳ್ಳುತ್ತೇವೆ. ಕೇರಳದಲ್ಲಿ ಬಹಳಷ್ಟು ಮಹಿಳೆಯರು ತೆಂಗಿನ ಕಾಯಿ ಕೀಳುವ ಕೌಶಲವನ್ನು ಉದ್ಯೋಗವಾಗಿ ರೂಢಿಸಿಕೊಂಡಿದ್ದಾರೆ.

ಇಲ್ಲಿನ ಸಾಂಪ್ರದಾಯಿಕ ಕುಟುಂಬದ ಮಹಿಳೆಯರು ಇದನ್ನೊಂದು ಉದ್ಯೋಗವಾಗಿ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದರೂ ಕಾರ್ಮಿಕರಿಗೆ ಕಾಯುವ ಪರಿಪಾಠ ಕೈಬಿಟ್ಟು ತಾವೇ ಸ್ವತಃ ಕಾಯಿ ಕೀಳುವ ಆತ್ಮವಿಶ್ವಾಸ ಬೆಳೆಸಿಕೊಂಡಿದ್ದಾರೆ ಎನ್ನುತ್ತಾರೆ ಕೃಷಿ ವಿಜ್ಞಾನ ಕೇಂದ್ರದ ರೂಪಾ ಪಾಟೀಲ್‌. ಕರಾವಳಿ ತೆಂಗಿನ ತವರು ಮನೆ. ಮುಂದಿನ ದಿನಗಳಲ್ಲಿ ದಿಟ್ಟೆದೆಯ ಕರಾವಳಿ ಮಹಿಳೆಯರಿಗೆ ತೆಂಗಿನ ಮರ ಹತ್ತುವ ತರಬೇತಿ ನೀಡಿ ಅವರನ್ನು ಪುರುಷ ಸಮಾನ ವೃತ್ತಿಯಲ್ಲಿ ತೊಡಗಿಸಲು ಕೃಷಿ ವಿಜ್ಞಾನ ಕೇಂದ್ರ ಯೋಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT