ADVERTISEMENT

ಸರ್ಪಕ್ಕಿಲ್ಲಿ ಉಪಚಾರ!

ಮಲ್ಲೇಶ್ ನಾಯಕನಹಟ್ಟಿ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲ್ಲೂಕಿನಲ್ಲಿದೆ ನಾಗೇನಹಳ್ಳಿ ಎಂಬ ಪುಟ್ಟ ಗ್ರಾಮ. ವಿಷ ಹೊಂದಿರುವ ಕ್ರಿಮಿಕೀಟ, ಹಾವುಗಳು ಎಲ್ಲೇ ಸುಳಿದಾಡಿದರೂ ಇಲ್ಲಿನ ಜನರು ಅವುಗಳನ್ನು ಹೊಡೆದು ಕೊಲ್ಲುವುದಿಲ್ಲ. ಮೇಲಾಗಿ ಅವುಗಳೊಂದಿಗೆ ಕುಶಲೋಪರಿ ನಡೆಸಿ ಉಪಚಾರ ಮಾಡುತ್ತಾರೆ!

ಇದು ವಿಚಿತ್ರವಾದರೂ ಸತ್ಯ. ನೀವೇನಾದರೂ ಇಂತಹ ದೃಶ್ಯ ನೋಡಿದರೆ `ಓಹೋ ಇದು ಹಲ್ಲುಕಿತ್ತ ಹಾವು, ತರಬೇತಿ ಪಡೆದಿರುವ ಸರ್ಪ' ಎಂದುಕೊಳ್ಳಬಹುದು. ಆದರೆ ಖಂಡಿತವಾಗಿಯೂ ಇವುಗಳಿಗೆ ಯಾವುದೇ ತರಬೇತಿ ಇಲ್ಲ. ಅಡವಿಗಳಲ್ಲಿ, ಹುತ್ತಗಳಲ್ಲಿ, ಬಿಲಗಳಲ್ಲಿ ನೆಲೆಸಿರುವ ಹಾವುಗಳನ್ನೇ ಇಲ್ಲಿನ ಜನರು ಆತ್ಮೀಯವಾಗಿ ನಡೆಸುವ ಕುಶಲೋಪರಿ ನಿಮ್ಮನ್ನು ನಿಬ್ಬೆರಗಾಗಿಸುತ್ತದೆ.

ಹಾವುಗಳು ಕಂಡ ಕೂಡಲೇ ಇಲ್ಲಿನ ಜನರು ಹೆಗಲ ಮೇಲೆ ಬಿಟ್ಟುಕೊಳ್ಳುತ್ತಾರೆ. ಬಾಲ ಹಿಡಿದು ಹೆಡೆ ಬಿಚ್ಚುವಂತೆ, ಬುಸುಗುಡುವಂತೆ ಮಾಡುವ ದೃಶ್ಯ ನೋಡುಗರ ಮೈಕೂದಲು ನಿಮಿರುವಂತೆ ಮಾಡುತ್ತದೆ. ಇಂದಿಗೂ ಈ ಹಳ್ಳಿಯಲ್ಲಿ ಹಾವು ಹೊಡೆಯುವ, ಕೊಲ್ಲುವ ದುಸ್ಸಾಹಸಕ್ಕೆ ಯಾರೂ ಕೈ ಹಾಕಿಲ್ಲ. ಹಾವು ಕಚ್ಚಿದರೆ ನಾಗಲಿಂಗಸ್ವಾಮಿ ದೇವಸ್ಥಾನದಲ್ಲಿ ಮೂರು ದಿನ ತಂಗಿದರೆ ಗುಣಮುಖರಾಗುತ್ತಾರೆ ಎನ್ನುತ್ತಾರೆ ಗ್ರಾಮಸ್ಥರು.

ಇಲ್ಲಿನ ನಾಗಲಿಂಗ ಸ್ವಾಮಿ ಸರ್ಪ ದೋಷ, ಸಂತಾನ ಭಾಗ್ಯ, ಕಂಕಣ ಬಲ ಕರುಣಿಸುತ್ತಾನೆ ಎಂಬ ಪ್ರತೀತಿ ಇದೆ. ಹಾಗಾಗಿ, ನಿತ್ಯ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ ಎನ್ನುತ್ತಾರೆ ಸ್ಥಳೀಯ ಅರ್ಚಕರಾದ ಅರ್ಚಕ ಸದಾಶಿವಪ್ಪ ಹಾಗೂ ರಾಜಪ್ಪ.
ಚಿತ್ರ: ಕೆ.ಎಸ್. ವೀರೇಶ್ ಪ್ರಸಾದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.