ADVERTISEMENT

ಸವದತ್ತಿ ರೇಣುಕಾ ಯಲ್ಲಮ್ಮ

ಬಸವರಾಜ ಹವಾಲ್ದಾರ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ಬೆಳಗಾವಿ ಜಿಲ್ಲೆಯ ಸವದತ್ತಿ ರಾಜ್ಯದ ಪ್ರಮುಖ ಶಕ್ತಿ ದೇವತೆಯ   ಕ್ಷೇತ್ರಗಳಲ್ಲಿ ಒಂದು. ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಸವದತ್ತಿಗೆ ಬರುವ ಭಕ್ತರೇ ಹೆಚ್ಚು.

ರಾಜ್ಯದ ಇತರ ಜಿಲ್ಲೆಗಳು ಹಾಗೂ ಮಹಾರಾಷ್ಟ್ರ, ಗೋವಾ, ಆಂಧ್ರ, ತಮಿಳುನಾಡುಗಳಿಂದಲೂ ಭಕ್ತರು ಯಲ್ಲಮ್ಮ ದೇವತೆಯ ದರ್ಶನಕ್ಕೆ ಬರುತ್ತಾರೆ.

 ಒಂದು ವರ್ಷದಲ್ಲಿ ಏಳು ಜಾತ್ರೆಗಳು ನಡೆಯುವುದು ಈ ಕ್ಷೇತ್ರದ ವಿಶೇಷ. ದವನ, ಮಹಾನವಮಿ, ಶೀಗೆ, ಗೌರಿ, ಹೊಸ್ತಿಲ, ಬನದ ಹಾಗೂ ಭರತ ಹುಣ್ಣಿಮೆಗಳಂದು ಇಲ್ಲಿ ಜಾತ್ರೆ ನಡೆಯುತ್ತವೆ.

ಬನದ ಹಾಗೂ ಭರತ ಹುಣ್ಣಿಮೆ ಸಮಯದಲ್ಲಿ ನಡೆಯುವ ಜಾತ್ರೆಗಳು ಅತ್ಯಂತ ದೊಡ್ಡವು. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ದೇವಿ ದರ್ಶನ ಪಡೆಯುತ್ತಾರೆ. ಜಾತ್ರೆಗೆ ಲಕ್ಷಾಂತರ ಭಕ್ತರು ಚಕ್ಕಡಿಗಳಲ್ಲಿ ಆಗಮಿಸುವುದು ಈ ಕ್ಷೇತ್ರದ ವಿಶೇಷ. ಜಾತ್ರೆ ಸಂದರ್ಭದಲ್ಲಿ ದೇವಸಾನದ ಬಯಲಿನಲ್ಲಿಯೇ ಅಡುಗೆ ಮಾಡಿ, ಅಮ್ಮನಿಗೆ ನೈವೇದ್ಯ ಮಾಡುವ ಪರಿಪಾಠವಿದೆ.

ಇತಿಹಾಸ: ಸವದತ್ತಿಯ ರೇಣುಕಾ ಯಲ್ಲಮ್ಮ ಕ್ಷೇತ್ರಕ್ಕೆ ಸುಮಾರು 3,000 ಸಾವಿರ ವರ್ಷಗಳ ಇತಿಹಾಸವಿದೆ. ಪುರಾಣಗಳಲ್ಲಿ ಉಲ್ಲೇಖವಿರುವ ಜಮದಗ್ನಿ ಮುನಿಯ ಪತ್ನಿ ರೇಣುಕಾ ತಾಯಿಯೇ ಈ ಯಲ್ಲಮ್ಮ.

ಪರಶುರಾಮ ಜಮದಗ್ನಿ ಹಾಗೂ ರೇಣುಕಾ ದಂಪತಿಯ ಮಗ. ಮಗನಿಗೆ ನೀಡಿದ ವಾಗ್ದಾನದಂತೆ ತಾಯಿ ರೇಣುಕಾ ಯಲ್ಲಮ್ಮನಾಗಿ  ಏಳು ಕೊಳ್ಳದ ಸವದತ್ತಿಗೆ ಬಂದು ಪ್ರತಿಷ್ಠಾಪನೆಗೊಂಡಳು ಎಂಬ ಐತಿಹ್ಯವಿದೆ. ಈ ಪ್ರದೇಶವನ್ನು ಅಳಿದ ರಟ್ಟ ವಂಶದ ಅರಸರ ಕಾಲದಲ್ಲಿ ರೇಣುಕಾ ಯಲ್ಲಮ್ಮನ ದೇವಸ್ಥಾನ ನಿರ್ಮಾಣವಾಯಿತು ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ.

ಸವದತ್ತಿಯಲ್ಲಿ ಜಮದಗ್ನಿ ಋಷಿ, ಪರಶುರಾಮ, ಮಲ್ಲಿಕಾರ್ಜುನ, ದತ್ತಾತ್ರೇಯ, ಮಾತಂಗಿ, ಅನ್ನಪೂರ್ಣೇಶ್ವರಿಯರ ದೇವಸ್ಥಾನಗಳಿವೆ. ಮಕ್ಕಳಿಲ್ಲದವರು ಯಲ್ಲಮ್ಮನ ದೇವಸ್ಥಾನದಲ್ಲಿರುವ ಪರಶುರಾಮನ ತೊಟ್ಟಿಲು ತೂಗುವ ಹರಕೆ ಹೊತ್ತು ತೂಗುತ್ತಾರೆ. ಇದರಿಂದ ಸಂತಾನ ಭಾಗ್ಯ ಸಿಗುತ್ತದೆ ಎಂಬ ನಂಬಿಕೆ ಇದೆ.

ಅರಿಷಿಣ (ಬಂಡಾರ)ವನ್ನು ಯಲ್ಲಮ್ಮ ತಾಯಿಗೆ ಅರ್ಪಿಸುವುದು ಇಲ್ಲಿನ ಮುಖ್ಯ ಸೇವೆ. ಜಾತ್ರೆ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರೆಲ್ಲರೂ ಗುಡಿಯ ಮೇಲೆ ಬಂಡಾರ ಎರಚುತ್ತಾರೆ ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬಂದ ಭಕ್ತರೆಲ್ಲರೂ ಅರಿಶಿಣದಲ್ಲೇ ಮಿಂದು ಏಳುವಂತಹ ವಾತಾವರಣ ನಿರ್ಮಾಣವಾಗುತ್ತದೆ.

 ಸವದತ್ತಿ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಸಾಕಷ್ಟು ಮೂಲಭೂತ ಸೌಲಭ್ಯಗಳಿಲ್ಲ. ಈ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ 2009ರಲ್ಲಿ ಪ್ರಾಧಿಕಾರವೊಂದನ್ನು ರಚಿಸಿದೆ. 

ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು 50 ಕೋಟಿ ರೂಗಳನ್ನು ತೆಗೆದಿರಿಸಿದೆ. ತಿರುಪತಿ ಮಾದರಿಯಲ್ಲಿ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆ. ವಸತಿ ಗೃಹಗಳು, ಯಾತ್ರಿ ನಿವಾಸ, ಶೌಚಾಲಯಗಳನ್ನು, ಸ್ನಾನಗೃಹ, ಕುಡಿಯುವ ನೀರು ಮತ್ತಿತರ ರ ಸೌಕರ್ಯಗಳನ್ನು ಒದಗಿಸಲು ಉದ್ದೇಶಿಸಲಾಗಿದೆ.

ಸವದತ್ತಿ ಬೆಳಗಾವಿಯಿಂದ 70 ಕಿ.ಮೀ. ದೂರದಲ್ಲಿದೆ. ಧಾರವಾಡದಿಂದ 40 ಕಿ.ಮೀ. ಉತ್ತರ ಕರ್ನಾಟಕದ ಬಹುತೇಕ ಎಲ್ಲಾ ತಾಲ್ಲೂಕು ಕೇಂದ್ರಗಳಿಗೆ ಬಸ್ ಸೌಕರ್ಯವಿದೆ. ಸವದತ್ತಿಯಲ್ಲಿ ಖಾಸಗಿ ಹೋಟೆಲ್ ಹಾಗೂ ಲಾಡ್ಜ್‌ಗಳಿವೆ.

ದೇವಸ್ಥಾನ ಪ್ರತಿ ದಿನ ಬೆಳಿಗ್ಗೆ 4ಗಂಟೆಗೆ ತೆರೆಯುತ್ತದೆ. ಬೆಳಗಿನ ಅವಧಿಯ ಅಭಿಷೇಕ, ಪೂಜೆ ನಂತರ ಸಾರ್ವಜನಿಕರ ದರ್ಶನ ಆರಂಭವಾಗುತ್ತದೆ. ಸಂಜೆ 4.30 ರಿಂದ 6 ಗಂಟೆಯವರೆಗೆ ಮತ್ತೆ ಅಭಿಷೇಕ, ಪೂಜೆ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ನಿತ್ಯ ಬೆಳಗಿನ  2 ರಿಂದ 5 ಗಂಟೆಯವರೆಗೆ, ಸಂಜೆ 4.30 ರಿಂದ 6.30 ಗಂಟೆಯವರೆಗೆ ವಿಶೇಷ  ಪೂಜೆ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.