ADVERTISEMENT

ಸಿದ್ಧಗಂಗೆಯ ಸಿದ್ಧಲಿಂಗೇಶ್ವರ

ಪೂರ್ಣಿಮ ಕಾನಹಳ್ಳಿ
Published 23 ಏಪ್ರಿಲ್ 2012, 19:30 IST
Last Updated 23 ಏಪ್ರಿಲ್ 2012, 19:30 IST
ಸಿದ್ಧಗಂಗೆಯ ಸಿದ್ಧಲಿಂಗೇಶ್ವರ
ಸಿದ್ಧಗಂಗೆಯ ಸಿದ್ಧಲಿಂಗೇಶ್ವರ   

ತುಮಕೂರಿನ ಸಿದ್ಧಗಂಗಾ ಕ್ಷೇತ್ರವೆಂದರೆ ತಟ್ಟನೆ ನೆನಪಾಗುವುದು 105 ವಯಸ್ಸಿನ, ನಡೆದಾಡುವ ದೇವರೆಂದೆ ಹೆಸರಾಗಿರುವ ಡಾ. ಶಿವಕುಮಾರ ಸ್ವಾಮೀಜಿ ಮತ್ತು ಅವರು ಅನ್ನದಾನ, ವಿದ್ಯಾದಾನ ನೀಡಿ ಪೊರೆಯುತ್ತಿರುವ ಹತ್ತು ಸಾವಿರಕ್ಕೂ ಬಡ ಹೆಚ್ಚು ಮಕ್ಕಳು.

ವಿವಿಧ ಆಕಾರದ ಕಲ್ಲು ಬಂಡೆಗಳ ನಡುವೆ ದಟ್ಟ್ಯೆಸಿರುವ ಪ್ರಾಕೃತಿಕ ಚೆಲುವಿನಿಂದ ತುಂಬಿದ ಈ ಕ್ಷೇತ್ರ ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳ ಭಕ್ತರನ್ನೂ ಆಕರ್ಷಿಸುತ್ತಿದೆ. ಕ್ಷೇತ್ರದ ಪುಟ್ಟ ಬೆಟ್ಟದ 130 ಮೆಟ್ಟಿಲೇರಿದರೆ ಸಿದ್ಧಲಿಂಗೇಶ್ವರನ ದೇಗುಲವಿದೆ.
 
ಒಂದೆರಡು ಹೆಜ್ಜೆ ಸನಿಹದಲ್ಲೇ ಪ್ರಾಚೀನ ಗವಿಯೊಳಗೆ ತೀರ್ಥೊದ್ಭವ ಬಾವಿಯಿದೆ. ಚರ್ಮವ್ಯಾಧಿ ಪೀಡಿತರು, ಕೆಟ್ಟದೃಷ್ಟಿ ಬಾಧಿತರು, ಕಂಕಣಭಾಗ್ಯ ಮತ್ತು ಸಂತಾನಭಾಗ್ಯ ವಂಚಿತರು ಈ ಗಂಗೆಯಲ್ಲಿ ಮಿಂದು ಸಿದ್ಧಲಿಂಗೇಶ್ವರನನ್ನು ಧ್ಯಾನಿಸಿದರೆ ಅಭೀಷ್ಟಗಳು ಈಡೇರುತ್ತವೆಂಬುದು ಭಕ್ತರ ಅಚಲ ನಂಬಿಕೆ.

13ನೇ ಶತಮಾನದಲ್ಲಿ ಹರದನಹಳ್ಳಿ ಶೂನ್ಯ ಪೀಠ ಪರಂಪರೆಯ ಗೋಸಲ ಸಿದ್ಧೇಶ್ವರರೆಂಬ ಯೋಗಿ ದೇಶ ಸಂಚಾರ ಮಾಡುತ್ತಾ, ಜನ ಜಾಗೃತಿ ಮೂಡಿಸುತ್ತ 101 ಶಿಷ್ಯರೊಂದಿಗೆ ಈ ಸ್ಥಳಕ್ಕೆ ಬರುತ್ತಾರೆ. ಇಲ್ಲೆೀ ತಪೋನಿಷ್ಠರಾಗಿ ಮಠ ಸ್ಥಾಪಿಸುತ್ತಾರೆ. ಇಲ್ಲಿನ ವಿವಿಧ ಗವಿಗಳಲ್ಲಿ ಧ್ಯಾನದಲ್ಲಿದ್ದ ವಿರಕ್ತರಲ್ಲಿ ಒಬ್ಬರಿಗೆ ಒಂದು ಮಧ್ಯರಾತ್ರಿ  ತೀವ್ರ ಬಾಯಾರಿಕೆ ಆಗುತ್ತದೆ.
 
ಆಗ ತಮ್ಮ ಗುರುಗಳಾದ ಗೋಸಲ ಸಿದ್ದೇಶ್ವರರನ್ನು ಧ್ಯಾನಿಸುತ್ತಾರೆ. ಗುರುಗಳು ಹಳೆಯ ಮಠದಿಂದ ಹೊರಟು ಈ ಮಹಾಗವಿಗೆ ಬಂದು ಮೊಳಕಾಲಿನಿಂದ ಬಂಡೆಗೆ ಅಪ್ಪಳಿಸಿದಾಗ ಅಲ್ಲಿ ಗಂಗೆ ಉದ್ಭವವಾಯಿತು.

ಹೀಗೆ ಸಿದ್ಧರಿಂದ ಉದ್ಭವಿಸಿದ ಗಂಗೆಯೇ ನಂಬಿ ಬಂದ ಸಮಸ್ತ ಭಕ್ತರ ಅಭಿಲಾಷೆಗಳನ್ನು ನೆರವೇರಿಸುವ  ಸಿದ್ಧಗಂಗೆ ಎಂದು ಪ್ರಸಿದ್ಧವಾಯಿತು. ಮುಂದೆ ಎಡೆಯೂರು ಸಿದ್ಧಲಿಂಗೇಶ್ವರರು ಕ್ರಿಶ 14 ಶತಮಾನದ ಉತ್ತರಾರ್ಧದಲ್ಲಿ ಇಲ್ಲಿ ತಪೋನುಷ್ಠಾನಗೈದರು ಎನ್ನುತ್ತದೆ ಸ್ಥಳ ಮಹಾತ್ಮೆ.

ನಿತ್ಯ ಬೆಳಗಿನ 5.30ಕ್ಕೆ ವೇದಘೋಷದೊಂದಿಗೆ ಪೂಜಾ ಕೈಂಕರ್ಯ ಆರಂಭ. ಶಿವನ ದೇಗುಲವಾದ್ದರಿಂದ ಹೆಚ್ಚಿನ ಆಡಂಬರ, ಅಲಂಕಾರಕ್ಕೆ ಪ್ರಾಮುಖ್ಯತೆಯಿಲ್ಲ. ಆದರೆ ಧರ್ಮ, ಪುರಾತನ ಸಂಸ್ಕೃತಿ, ಪರಂಪರೆಗೆ ಒತ್ತುಕೊಟ್ಟು ಎಲ್ಲಾ ಆಚರಣೆಗಳನ್ನು ಸರಳವಾಗಿ ನಡೆಸಲಾಗುತ್ತದೆ.

ಮಹಾನ್ ಸಿದ್ಧಪುರುಷರಿಂದ ಸಿದ್ಧಿಸಿದ ಶ್ರೀ ಕ್ಷೇತ್ರ ನಿತ್ಯ ದಾಸೋಹಕ್ಕೂ ಹೆಸರುವಾಸಿ. ಅಂದು ಹಚ್ಚಿದ ಒಲೆ ಇಂದಿಗೂ ಆರಿಲ್ಲ ಎನ್ನುತ್ತಾರೆ. ವಸತಿ ವ್ಯವಸ್ಥೆ ಇಲ್ಲಿ ಉಚಿತ.
ವಿವರಗಳಿಗೆ ಅರ್ಚಕ ಚಂದ್ರಶೇಖರಯ್ಯ ಅವರ ಮೊಬೈಲ್ 98808 21117.

ಸೇವೆಗಳು           (ರೂಪಾಯಿ)

ರುದ್ರಾಭಿಷೇಕ           150
ಅಷ್ಟೋತ್ತರ                10
ಮಂಡೆ ಸೇವೆ             10
ಕುಂಕುಮಾರ್ಚನೆ         10
ಗಂಗಾಪೂಜೆ               10
ಕ್ಷೀರಾಭಿಷೇಕ          1001
(ವರ್ಷಕ್ಕೊಮ್ಮೆ ಮಾತ್ರ)
ಅಮ್ಮನವರಿಗೆ ಅರ್ಚನೆ 101
(ವರ್ಷಕ್ಕೊಮ್ಮೆ ಮಾತ್ರ)
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT