ADVERTISEMENT

ಹಂಪಿಯಲ್ಲಿ ಸೊಂಪಾದ ಜಲಧಾರೆ

ಅನಂತ ಜೋಶಿ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ಧಾರ್ಮಿಕ ಪುಣ್ಯಕ್ಷೇತ್ರ, ಐತಿಹಾಸಿಕ ಪರಂಪರಾ ಕ್ಷೇತ್ರ, ದಕ್ಷಿಣ ಭಾರತದ ರಾಜಧಾನಿಯೆಂದೇ ಬಿಂಬಿತವಾದ, ಕಲೆ, ಸಂಸ್ಕೃತಿ, ಮತ್ತು ಪರಂಪರೆಯ ಮೂಲಕ ಐತಿಹಾಸಿಕ ಮಾನ್ಯತೆ ಪಡೆದ ಹಂಪಿಯಲ್ಲೀಗ ಜಲಪಾತಗಳದ್ದೇ ಕಾರುಬಾರು. ಈ ಬಾರಿಯ ಭಾರಿ ಮಳೆ ತುಂಗೆಯ ಮಡಿಲನ್ನು ತುಂಬಿ ಇಲ್ಲಿ ವೈವಿಧ್ಯಮಯ ಜಲಾಪಾತಗಳನ್ನು ಸೃಷ್ಟಿಸಿವೆ. ಇದರಿಂದ ಹಂಪಿ ನೈಸರ್ಗಿಕ ತಾಣವಾಗಿಯೂ ಮೆರೆಯುವಂತೆ ಮಾಡಿದೆ.

ವಿರೂಪಾಕ್ಷೇಶ್ವರ ದೇವಾಲಯ ಹಿಂದುಗಡೆಯಿಂದ ನದಿಪಾತ್ರದಲ್ಲಿ ಹೋದಂತೆಲ್ಲಾ ತುಂಗಭದ್ರೆಯ ಚಲನವಲನಗಳು ಜುಳು ಜುಳು ನಿನಾದ ಮಾಡುತ್ತಾ ವೈವಿಧ್ಯಮಯ ಜಲಪಾತವನ್ನು ಸೃಷ್ಟಿಸುತ್ತಿವೆ. ತುಂಗಭದ್ರಾ ಜಲಾಶಯದಿಂದ 15ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಹೊರಬಿಡುತ್ತಿದ್ದಂತೆಯೇ ಕಂಡು ಬರುವ ಈ ಜಲಪಾತಗಳು ನೀರು ಹೆಚ್ಚಾದಂತೆಲ್ಲಾ ತನ್ನ ವೈಭವವನ್ನು ಹೆಚ್ಚಿಸಿಕೊಳ್ಳುತ್ತಾ ಗುಡ್ಡಬೆಟ್ಟಗಳ ಮಧ್ಯೆ ಮನಮೋಹಕವಾಗಿ ಕಂಗೊಳಿಸುತ್ತವೆ.

ಜಲಪಾತಗಳ ದಾರಿ
ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಹಿಂದಿನ ಕಾಲುದಾರಿಯಲ್ಲಿ ಸ್ವಲ್ಪ ಕ್ರಮಿಸಿದರೆ ಸಾಕು, ಇಂತಹ ಅದ್ಭುತ ದೃಶ್ಯಗಳನ್ನು ಕಾಣುತ್ತಾ ಹೋಗಬಹುದು, ಆದರೆ ಈ ದಾರಿ ಕ್ರಮಿಸಲು ಸ್ವಲ್ಪ ಎದೆಗಾರಿಕೆ, ಸ್ವಲ್ಪ ಸಾಹಸ ಪ್ರವೃತ್ತಿಯೂ ಇರಲೇಬೇಕು, ಏಕೆಂದರೆ ದಾರಿಯುದ್ದಕ್ಕೂ ವೈವಿಧ್ಯಮಯ ಜಾತಿಯ ಪಕ್ಷಿ ಸಂಕುಲದ ಚಿಲಿಪಿಲಿ ಕಲರವ, ಮೊಸಳೆ, ನಕ್ಷತ್ರ ಮೀನುಗಳು ಸೇರಿದಂತೆ ಜಲಚರ ಪ್ರಾಣಿಗಳು ಇರುವುದರಿಂದ ದಾರಿ ತಿಳಿದವರ ಮಾರ್ಗದರ್ಶನದೊಂದಿಗೆ ಸಾಗಿದರೆ ಒಳಿತು. ಇಂತಹ ಸಾಹಸಕ್ಕೆ ಕೈಹಾಕಿದಲ್ಲಿ ಹಂಪಿಯ ನೈಸರ್ಗಿಕ ವೈಭವವನ್ನು ಸವಿಯಲು ಸಾಧ್ಯ.

ಮುಂಗಾರು ಮತ್ತು ಹಿಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಆರಂಭ.
ಇಂತಹ ಸಮಯದಲ್ಲಿ ನೀರಿನ ಹರಿವಿಗೆ ಅನುಗುಣವಾಗಿ ಜಲಪಾತಗಳ ಚಿತ್ರಣ ಮೂಡಿಬರುತ್ತದೆ. ಐತಿಹಾಸಿಕ, ಪೌರಾಣಿಕ ಪುಣ್ಯಕ್ಷೇತ್ರ ಪರಿಚಯಕ್ಕಿರುವಂತೆ ನೈಸರ್ಗಿಕ ತಾಣವಾಗಿ ನೋಡಬಹುದಾದ ಹಂಪಿಯ ಈ ವೈಭವನ್ನು ಹಂಪಿ ವಿಶ್ವಪರಂಪರಾ ಪ್ರದೇಶ ನಿರ್ವಹಣಾ ಪ್ರಾಧಿಕಾರ, ಪ್ರಾಚ್ಯವಸ್ತು ಪುರಾತತ್ವ ಇಲಾಖೆಗಳು ಸ್ಥಳಗಳನ್ನು ಗುರುತಿಸುವ, ನಾಮಫಲಕಗಳನ್ನು ಹಾಕುವ ಮೂಲಕ ಪ್ರವಾಸಿಗರನ್ನು ಹೆಚ್ಚಿಸುವಂತೆ ಮತ್ತು ಪ್ರವಾಸಿಗರು ಸಹ ಈ ವೈಭವವನ್ನು ಸವಿಯುವಂತೆ ಮಾಡಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.