ADVERTISEMENT

ಹಾವಿಗೆ ಚೆಲ್ಲಾಟ; ಗೀಜಗಕ್ಕೆ ಸಂಕಟ

ಹ.ಸ.ಬ್ಯಾಕೋಡ
Published 30 ನವೆಂಬರ್ 2011, 19:30 IST
Last Updated 30 ನವೆಂಬರ್ 2011, 19:30 IST
ಹಾವಿಗೆ ಚೆಲ್ಲಾಟ;  ಗೀಜಗಕ್ಕೆ ಸಂಕಟ
ಹಾವಿಗೆ ಚೆಲ್ಲಾಟ; ಗೀಜಗಕ್ಕೆ ಸಂಕಟ   

ಪ್ರತಿಯೊಂದು ಜೀವಿಯೂ ಇನ್ನೊಂದು ಪ್ರಾಣಿಯನ್ನು ಅವಲಂಬಿಸಿ ಬದುಕುವುದು ನಿಸರ್ಗದ ನಿಯಮ. ಹುಲಿ, ಸಿಂಹ, ಚಿರತೆ, ತೋಳ ಇತ್ಯಾದಿ ಮಾಂಸಾಹಾರಿ ಕಾಡು ಪ್ರಾಣಿಗಳು ಜಿಂಕೆ, ಮೊಲ ಮತ್ತಿತರ ಸಸ್ಯಾಹಾರಿ ಪ್ರಾಣಿಗಳನ್ನು ಹಿಡಿದು ತಿನ್ನುತ್ತವೆ. ಹಾವು ಮತ್ತಿತರ ಸರಿಸೃಪಗಳು ಬಿಲಗಳಲ್ಲಿ ವಾಸಿಸುವ ಇಲಿ, ಹೆಗ್ಗಣಗಳನ್ನು ಅವಲಂಬಿಸಿ ಬದುಕುತ್ತವೆ.

ಹಾವುಗಳು ಸಣ್ಣ ಪುಟ್ಟ ಪಕ್ಷಿಗಳನ್ನು ತಿಂದು ಬದುಕಿದರೆ, ಹದ್ದು, ರಣಹದ್ದು ಮತ್ತಿತರ ದೊಡ್ಡ ಪಕ್ಷಿಗಳು ಹಾವುಗಳನ್ನೇ ತಿಂದು ಬದುಕುತ್ತವೆ. ಹಾವುಗಳು ಮತ್ತು ಪಕ್ಷಿಗಳು ಪರಸ್ಪರ ಶತ್ರುಗಳು. ಎರಡೂ ವ್ಯವಸ್ಥಿತವಾಗಿ ಹೊಂಚು ಹಾಕಿ ಬೇಟೆಯಾಡಿ ಬದುಕುವುದು ಎಂಥಾ ವಿಚಿತ್ರ!

ಇತ್ತೀಚೆಗೆ ಪಕ್ಷಿಗಳ ಚಿತ್ರಗಳನ್ನು ತೆಗೆಯಲು ಮಾಗಡಿ ಸಮೀಪದ ಕೆ.ಹೊಸಳ್ಳಿಯ  ಹೊರವಲಯದಲ್ಲಿ ಕಾದು ಕುಳಿತಿದ್ದಾಗ ವಿಚಿತ್ರ ದೃಶ್ಯವೊಂದು ಕಣ್ಣಿಗೆ ಬಿತ್ತು.

ಪಾಳು ಬಾವಿಯ ದಂಡೆಯ ಮೇಲೊಂದು ಹೊಂಗೆ ಮರ. ಅದರ ತುದಿಯಲ್ಲಿ ಗೀಜಗ ಪಕ್ಷಿಗಳು ಗೂಡು ಕಟ್ಟಿಕೊಂಡಿದ್ದವು. ಗೂಡಿನಲ್ಲಿ ಅವು ಮೊಟ್ಟೆ ಇಟ್ಟು ಮರಿ ಮಾಡಿದ್ದವು.

ಸದಾ ಚಿಲಿಪಿಲಿ ಹಾಡು ಹೇಳುತ್ತಿದ್ದ ಮರಿ ಗೀಜಗಳಿಗೆ ತಾಯಿ ಗೀಜಗ ಗುಟುಕು ನೀಡುವ ಪ್ರಕ್ರಿಯೆ ನಸುಕಿನಿಂದಲೇ ನಡೆಯುತ್ತಿತ್ತು. ಇನ್ನೂ ಕೆಲವು ಗಂಡು ಗೀಜಗ ಹಕ್ಕಿಗಳು ಗೂಡು ನಿರ್ಮಿಸುವ ಕೆಲಸದಲ್ಲಿ ನಿರತವಾಗಿದ್ದವು.

ಗೀಜಗ ಹಕ್ಕಿಯನ್ನು ಇಂಗ್ಲಿಷ್‌ನಲ್ಲಿ  ಬಯಾವೀವರ್ ಬರ್ಡ್ ಎಂಬ ಹೆಸರಿನಿಂದ ಕರೆಯುತ್ತಾರೆ. ಗೀಜಗ ಹಕ್ಕಿಗಳದ್ದು ಶಿಸ್ತಿನ ಜೀವನ. ಮೇ ತಿಂಗಳಿಂದ ಸೆಪ್ಟಂಬರ್ ತಿಂಗಳ ಅವಧಿಯಲ್ಲಿ ಗೂಡು ಕಟ್ಟಿಕೊಂಡು ಮೊಟ್ಟೆ ಇಟ್ಟು ಮರಿಗಳನ್ನು ಮಾಡಿ ವಂಶ ವೃದ್ಧಿಸಿಕೊಳ್ಳುತ್ತವೆ. ಅವು ಗೂಡು ಕಟ್ಟಿಕೊಳ್ಳುವ ನೈಪುಣ್ಯ ಅತ್ಯಂತ ವಿಶಿಷ್ಟವಾದುದು.

ಗೀಜಗ ಹಕ್ಕಿಗಳು ಇತರ ಹಕ್ಕಿಗಳಂತೆ ಮರದ ಟೊಂಗೆಗಳ ನಡುವೆ ಗೂಡು ಕಟ್ಟುವುದಿಲ್ಲ. ಟೊಂಗೆಯ ತುದಿಯಲ್ಲಿ ನೇತಾಡುವಂತಹ ಗೂಡು ನಿರ್ಮಿಸಿಕೊಳ್ಳುತ್ತವೆ. ಮಳೆಯ ನೀರು ಕಿಂಚಿತ್ತೂ ಒಳಕ್ಕೆ ಬಾರದಂತೆ ಎಚ್ಚರವಹಿಸುತ್ತವೆ. ಮರದ ಟೊಂಗೆಯ ತುದಿಯಲ್ಲಿ ನಿರ್ಮಿಸಿಕೊಂಡ ಗೂಡುಗಳು ನೇತಾಡುತ್ತಿರುತ್ತವೆ. 

 ಗೀಜಗ ಹಕ್ಕಿಗಳ ಮೊಟ್ಟೆ ಅಥವಾ ಮರಿಗಳನ್ನು ಅಪಹರಿಸುವ ವೈರಿಗಳು ಗೂಡಿನ ಬಳಿ ಹೋಗಲು ಸಾಧ್ಯವಿಲ್ಲ ಎನ್ನುವ ನನ್ನ ಎಣಿಕೆ ಸುಳ್ಳಾಯಿತು. ಗೀಜಗಗಳ ಗೂಡನ್ನೇ ನೋಡುತ್ತ ಕುಳಿತಿದ್ದ ನನಗೆ ಚೀಂವ್.....ಚೀಂವ್ ಎಂದು ವಿಚಿತ್ರವಾಗಿ ಕಿರುಚಿದ ಶಬ್ಧ ಕೇಳಿಸಿತು. ಅತ್ತ ಗಮನಿಸಿದಾಗ ಮರದ ಟೊಂಗೆಗೆ ಸುತ್ತಿಕೊಂಡಿದ್ದ ಹಾವೊಂದು ಬಾಯಿಯಲ್ಲಿ ಗೀಜಗದ ಹಕ್ಕಿಯನ್ನು ಕಚ್ಚಿ ಹಿಡಿದಿತ್ತು.

ಹದಿನೈದು - ಇಪ್ಪತ್ತು ಅಡಿಗಳಷ್ಟು ಎತ್ತರದ ಮರಕ್ಕೆ ಏರಿ ಹಕ್ಕಿಗಳನ್ನು ಹಾವು ಬೇಟೆಯಾಡುವ ಸಾಧ್ಯತೆಯನ್ನು ಊಹಿಸಿರಲಿಲ್ಲ. ಗೀಜಗ ಹಕ್ಕಿ ಮತ್ತು ಹಾವು ಶತ್ರುಗಳು ಎನ್ನುವುದೂ ಗೊತ್ತಿರಲಿಲ್ಲ.

ಮಾರುದ್ದದ ಹಾವು ಮರದ ಎಲೆಗಳ ಮರೆಯಲ್ಲಿ ಹೊಂಚು ಹಾಕಿ ಕುಳಿತಿದ್ದ ಗೂಡಿನ ಬಳಿಗೆ ಬರುವ ಗೀಜಗಗಳನ್ನು ಹೊಂಚು ಹಾಕಿ ಗಬಕ್ಕನೆ ಹಿಡಿಯುವುದು. ಬಳಿಕ ನಿಧಾನವಾಗಿ ಎಲೆಗಳ ನಡುವೆ ಮರೆಯಾಗುವುದು. ಮತ್ತೆ ಹೊಂಚು ಹಾಕಿ ಕುಳಿತು ಬೇಟೆಗೆ ಸಂಚು ನಡೆಸುತ್ತಿತ್ತು. ಸ್ವಲ್ಪ ಸಮಯದ ಬಳಿಕ ಗೀಜಗಗಳಿಗೆ ಹಾವಿನ ಚಾಕಚಕ್ಯತೆ ಅರಿವಿಗೆ ಬಂತು.
 
ಎರಡು - ಮೂರು ಗಂಟೆಗಳು ಕಳೆದರೂ ಒಂದೂ ಗೀಜಗ ಆ ಮರದತ್ತ ಸುಳಿಯಲ್ಲಿಲ್ಲ.
ಆಗ ಹಾವು ಗೂಡುಗಳ ಒಳಗಿರುವ ಹಕ್ಕಿಗಳಿಗೆ ಹುಡುಕಾಟ ನಡೆಸಿತ್ತು. ಗೂಡನ್ನು ತನ್ನ ಮೂತಿಯಿಂದ ತಿವಿದು ಒಳಗೆ ಹಕ್ಕಿಗಳು ಇವೆಯೇ ಎಂದು ಪರೀಕ್ಷಿಸಿತ್ತು.

ಆ ವೇಳೆಗೆ ಗೂಡಿನೊಳಗಿದ್ದ ಮರಿ ಗೀಜಗವೊಂದು ಭಯದಿಂದ ಪುರ‌್ರನೆ ಹಾರಿ ನೆಲದ ಮೇಲೆ ಕುಳಿತುಕೊಂಡಿತು. ಕೂಡಲೇ ಮರದಿಂದ ಕೆಳಕ್ಕೆ ಇಳಿದ ಹಾವು ಮರಿ ಗೀಜಗದ ಬಳಿಗೆ ಬಂತು. ಭಯ, ಆತಂಕದಲ್ಲಿದ್ದ ಮರಿ ಅಲ್ಲಿಂದ  ಸ್ವಲ್ಪ ದೂರಕ್ಕೆ ಹಾರಿ ಹೋಗಿ ತಪ್ಪಿಸಿಕೊಂಡಿತು. ಹಾವು ಮತ್ತೆ ಇನ್ನೊಂದು ಮರದತ್ತ ಹೊರಟಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.