ADVERTISEMENT

ಹುತ್ತರಿ ಖುಷಿಯಲ್ಲಿ...

ಪಳಂಗಂಡ ಕೆ.ಚಂಗಪ್ಪ
Published 9 ಡಿಸೆಂಬರ್ 2013, 19:30 IST
Last Updated 9 ಡಿಸೆಂಬರ್ 2013, 19:30 IST

ಶುಕ್ಲಪಕ್ಷದ ಹುಣ್ಣಿಮೆಯ ವೃಶ್ಚಿಕ ಮಾಸದ ಕೃತ್ತಿಕಾ ಇಲ್ಲವೇ ರೋಹಿಣಿ ನಕ್ಷತ್ರದಲ್ಲಿ ನಾಡಿನಲ್ಲಿ ಹುತ್ತರಿ ಕದಿರು ತೆಗೆಯುವ ಸಂಪ್ರದಾಯವಿದೆ. ಇದೇ ಕೊಡವರ ಹುತ್ತರಿಹಬ್ಬ. ಮಳೆ ದೇವರು, ಕುಲದೇವರು ಎಂದು ನಂಬುವ ಶ್ರೀ ಇಗ್ಗುತಪ್ಪ ಸ್ವಾಮಿಯ ವಿಶೇಷ ಪೂಜೆ ಇದೇ 16ರಂದು ನಡೆಯಲಿದೆ.

ಮೊದಲಿಗೆ ಹುತ್ತರಿಯ ಕದಿರು ತೆಗೆಯುವ ಧಾರ್ಮಿಕ ಪದ್ಧತಿಯನ್ನು ಶ್ರೀ ಇಗ್ಗುತಪ್ಪ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಪುರಸ್ಕಾರಗಳೊಂದಿಗೆ ಹುಣ್ಣಿಮೆಯ ಮೊದಲ ದಿನ ಕೃತ್ತಿಕಾ ನಕ್ಷತ್ರದಲ್ಲಿ ದೇವ ಪೊಳ್ದು ಎಂದು ಆಚರಿಸಲಾಗುತ್ತಿದೆ. ಇದಾದ ಮಾರನೆ ದಿನ ‘ನಾಡು ಪೊಳ್ದು’ ಆಚರಣೆ.

ಹುತ್ತರಿ ಎಂದರೆ ಹೊಸ ಅಕ್ಕಿ ಎಂದರ್ಥ. ಹುತ್ತರಿ ಎನ್ನುವ ಶಬ್ದದಲ್ಲಿ ‘ಹು’ ಎಂದರೆ ಹೊಸತು, ‘ತ್ತರಿ’ ಎಂದರೆ ಅಕ್ಕಿ ಎಂದು ಅರ್ಥವಿದೆ. ಹುತ್ತರಿ ಹಬ್ಬಕ್ಕೆ ಕೊಡವರು ಮತ್ತು ಕೊಡಗಿನ ಮೂಲನಿವಾಸಿ ಜನರು ತಮ್ಮ ಮನೆ ಮಾರುಗಳನ್ನು ಸುಣ್ಣ ಬಣ್ಣಗಳಿಂದ ಹೊಸತಾಗಿ ಶೋಭಿಸುವಂತೆ ಮಾಡುತ್ತಾರೆ. ಎಲ್ಲರಿಗೂ ಹೊಸ ಬಟ್ಟೆ ಕೊಂಡುಕೊಳ್ಳುವುದರ ಜೊತೆಗೆ ಮನೆಯಲ್ಲಿನ ದಿನಬಳಕೆಯ ವಸ್ತುಗಳಾದ ಪೊರಕೆ, ಕುಕ್ಕೆ, ಮೊರ, ಚಾಪೆ ಮಡಕೆ, ಕುಡಿಕೆ ಇತ್ಯಾದಿಗಳನ್ನು ಹೊಸತಾಗಿ ಕೊಳ್ಳುತ್ತಾರೆ. ಮನೆಗೆ ಧಾನ್ಯ ಲಕ್ಷ್ಮಿಯು ಒಲಿದು ಬರುವುದರಿಂದ ಮನೆಯ ಒಳಗಿನಿಂದ ಹಿಡಿದು, ಅಂಗಣದಿಂದ ಮನೆಯ ಓಣಿ, ದಾರಿ, ಹಾಗೂ ಒಕ್ಕಲು ಕಣದವರೆಗೂ ಎಲ್ಲವನ್ನೂ ಶುಚಿಯಾಗಿಸಿ ಹಬ್ಬಕ್ಕೆ ಅಣಿಗೊಳಿಸುತ್ತಾರೆ.

ಕೊಡವರ ಧಾರ್ಮಿಕತೆಯ ಹುತ್ತರಿಯಲ್ಲಿ ಕೋಲಾಟದ ಸಿರಿಯಿದೆ, ಜಾನಪದ ಹಾಡು ಬಾಳೋ ಪಾಟ್‌ನ ವೈಭವವಿದೆ. ಮನೆ ಮನೆಯಲ್ಲೂ ಭೂರಿ ಭೋಜನದ ಸಂಭ್ರಮ, ಕೋಲಾಟದ ಸಂತಸ.   
   
ಹುತ್ತರಿ ಹಬ್ಬಕ್ಕೆ ಮೊದಲ ತಯಾರಿ ಎಂದರೆ ಬೆತ್ತದ ಕೋಲಿನಲ್ಲಿ ಕೋಲಾಟ ತಾಲೀಮು ಮಾಡುವ ‘ಈಡ್’. ಹಬ್ಬದ ಎರಡು ದಿನ ಮೊದಲೇ ಸೇರಿ ಕೊಡವರು ಕೋಲಾಟ ತಾಲೀಮು ನಡೆಸುತ್ತಾರೆ.

ಶ್ರೀ ಇಗ್ಗುತಪ್ಪ ದೇವರ ಸನ್ನಿಧಿಯಲ್ಲಿ ಕದಿರು ತೆಗೆಯುವ ದೇವಪೊಳ್ದು ನಡೆದ ಮಾರನೆ ದಿನ ಸಂಜೆ ಮನೆಯಲ್ಲಿ ಕುಟುಂಬದ ಹಿರಿಯರ ಮನೆಯಲ್ಲಿ, ಎಲ್ಲಾರೂ ಸೇರುತ್ತಾರೆ. ನೆರೆ ಕಟ್ಟುವ, ಹುತ್ತರಿ ಗೆಣಸು -ಫಲಾಹಾರ ಸೇವಿಸುವ ಪದ್ಧತಿ ನಡೆಯುತ್ತದೆ. ಸಾಂಪ್ರದಾಯಿಕ ವಿಧಿ ವಿಧಾನಗಳಿಂದ ಗದ್ದೆಯಲ್ಲಿ ಬೆಳೆದ ಭತ್ತದ ತೆನೆಯನ್ನು ಕೊಯ್ದು ತರುತ್ತಾರೆ. ಹೊಸ ಭತ್ತದ ಅಕ್ಕಿಯಿಂದ ಪಾಯಸ ಮಾಡುತ್ತಾರೆ. ಹೊಸ ಅಕ್ಕಿಯನ್ನು ಇತರ ಏಳು ಧಾನ್ಯ ಕಲ್ಲು ಇತ್ಯಾದಿ ಸೇರಿಸಿ ಏಳಕ್ಕಿ (ಏಳು ಅಕ್ಕಿಯ ಹಿಟ್ಟೂ) ಮಾಡುತ್ತಾರೆ.


ಹುತ್ತರಿಯ ಮಾರನೆ ದಿನ ಬೆಳಿಗ್ಗೆ ತಂಬಿಟ್ಟು (ಹುರಿದ ಕುಸುಲಕ್ಕಿಯ ಪುಡಿ ಮತ್ತು ಬಾಳೆಹಣ್ಣು ಮಿಶ್ರಣದ ಹಿಟ್ಟು) ಇದಕ್ಕೆ ಹುರಿದ ಎಳ್ಳು, ತುಪ್ಪ ಸೇರಿಸಿ ಸೇವಿಸುತ್ತಾರೆ.

ಹುತ್ತರಿಯ ಮಾರನೆ ದಿನ ಊರಿನವರು ಕೊಡವರ ವಿಶೇಷ ಜಾನಪದ ಹಾಡು ಹುತ್ತರಿ ಹಾಡಿನೊಂದಿಗೆ ಮನೆ ಹಾಡುವ ಸಂಪ್ರದಾಯವನ್ನು ವಾರದತನಕ ನಡೆಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.