ADVERTISEMENT

ಹುಲ್ಲಿನ ಮೆದೆಯಲ್ಲಿ ಬುಲ್‌ಬುಲ್

ಹ.ಸ.ಬ್ಯಾಕೋಡ
Published 5 ನವೆಂಬರ್ 2012, 19:30 IST
Last Updated 5 ನವೆಂಬರ್ 2012, 19:30 IST

ಅಂದು ನಸುಕಿನಲ್ಲಿಯೇ ಸಾಲಿಗ್ರಾಮ ಸಮೀಪದ ಆನೆಗುಡ್ಡೆ ಗಣಪತಿ ದೇವಸ್ಥಾನಕ್ಕೆ ಹೋಗಿದ್ದೆ. ಅಲ್ಲಿ ಹೋಮ-ಹವನ ಮಹಾ ಮಂಗಳಾರತಿ ಇತ್ಯಾದಿ ಪೂಜಾ ಕಾರ್ಯಗಳನ್ನು ಮುಗಿಸಿಕೊಳ್ಳುವ ಹೊತ್ತಿಗೆ ಬರೋಬರಿ 12 ಗಂಟೆ ಆಯಿತು. ಹತ್ತಿರದಲ್ಲಿಯೇ ಸ್ನೇಹಿತ ವೆಂಕಟೇಶ ಅಡಿಗರ ಮನೆಯಿತ್ತು.

ಹೋದೆ. ಅಲ್ಲಿದ್ದ ಬಾಲೆ ದಿವ್ಯ `ಅಂಕಲ್ ನಮ್ಮ ವೆಂಕಟೇಶ ಮಾಮಾ ಬಾಳೇಕುದ್ರುಗೆ ಹೋಗಿದ್ದಾರೆ. ಅಲ್ಲಿ ಸಿಕ್ಕಬಹುದು ನೋಡಿ~ ಎಂದಳು. ಅಲ್ಲಿಂದ ಹಂಗಾರಕಟ್ಟೆಗೆ ಹೋಗಿ ಬಾಳೇಕುದ್ರು ಹಳ್ಳಿಯೊಳಕ್ಕೆ ಹೋಗುತ್ತಿದಂತೆ ಎದುರಿಗೆ ಬಂದ ಸ್ನೇಹಿತ ವೆಂಕಟೇಶ `ಈಗಷ್ಟೇ ನಿನ್ನ ನೆನಪಿಸಿಕೊಳ್ಳುತ್ತಿದ್ದೆ ಮಾರಾಯಾ. ಇಲ್ಲೇ ನನ್ನ ತಂಗಿ ಮನೆ ಇದೆ. ಮನೆಯ ಮುಂದಿನ ಬತ್ತದ ಹುಲ್ಲಿನ ಕುತ್ತರಿ (ಮೆದೆ)ಯಲ್ಲಿನ ಹಕ್ಕಿ ಗೂಡು ಕಟ್ಟಿದೆ. ನೋಡುವಾ ಬಾ~ ಎಂದ.

ಮನೆಯಂಗಳದಲ್ಲಿ ನಿಂತು ಹುಲ್ಲಿನ ಮೆದೆಯತ್ತ ಕಣ್ಣಾಡಿಸುತ್ತಿರಲು ಮನೆಯೊಳಗಿನಿಂದ ಬಂದ ಅನಂತ ನಾರಾಯಣ ಐತಾಳರು `ಗಡಿಬಿಡಿ ಮಾಡಬೇಡಿ. ಆ ಹಕ್ಕಿ ಎಲ್ಲಿಯೂ ಹೋಗುವುದಿಲ್ಲ. ವಿಶ್ರಮಿಸಿ~ ಎಂದರು.

ನೀರು ಕುಡಿದು ವಿಶ್ರಮಿಸುವ ಹೊತ್ತಿಗೆ ಬತ್ತದ ಮೆದೆಯಿಂದ ಪುರ‌್ರನೆ ಹಾರಿದ ಹಕ್ಕಿ ತೆಂಗಿನ ಗರಿಯ ಮೇಲೆ ಕುಳಿತುಕೊಂಡಿತು. ಆ ಸಮಯಕ್ಕೆ ಅದರ ಬಳಿಗೆ ಮತ್ತೊಂದು ಹಕ್ಕಿ ಬಂದು ಕೂತಿತು. `ನೋಡಿ ಅವೆರಡು ಹಕ್ಕಿಗಳು ಒಂದು ವಾರದಿಂದ ಜೋಡಿಯಾಗಿಯೇ ಓಡಾಡುತ್ತಿವೆ.

ಹುಲ್ಲಿನ ಕುತ್ತರಿಯಲ್ಲಿ ಮನೆ ಕಟ್ಟುವ ಮೊದಲು ನಾಲ್ಕು ದಿನ ಇಲ್ಲೆ ಓಡಾಡಿಕೊಂಡಿದ್ದವು. ಆನಂತರ ಗೂಡು ಕಟ್ಟಿದ ಮೇಲೂ ಜೊತೆಯಾಗಿಯೇ ಬರುತ್ತವೆ - ಹೋಗುತ್ತವೆ. ಎಂಥಾ ಪ್ರೀತಿ ಆ ಎರಡು ಹಕ್ಕಿಗಳಲ್ಲಿ !~ ಎಂದು ಐತಾಳರು ವಿವರಿಸಿದರು.

ತೆಂಗಿನ ಗರಿಯ ಮೇಲೆ ಒಂದಕ್ಕೊಂದು ಅಂಟಿಕೊಂಡು ಕೂತ ಆ ಎರಡು ಹಕ್ಕಿಗಳು ಸಾಮಾನ್ಯ ಬುಲ್‌ಬುಲ್ ಆಗಿರಲ್ಲಿಲ್ಲ. ಕೆಂಪು ಕೆನ್ನೆಯ ಹಾಗೂ ತಿಳಿ ಹಳದಿ ಬಣ್ಣ ಅಪರೂಪದ ಬುಲ್‌ಬುಲ್‌ಗಳಾಗಿದ್ದವು. ಕಡು ನೀಲಿ ಮಿಶ್ರಿತ ಕಪ್ಪು ಬಣ್ಣದ ಕೊಕ್ಕಿನ ಆ ಹಕ್ಕಿಗಳ ಪುಕ್ಕದ ಹಿಂಭಾಗದಲ್ಲಿ ಕೆಂಪು ಬಣ್ಣವಿತ್ತು. ಕತ್ತಿನ ಕೆಳ ಭಾಗದಲ್ಲಿ ಬಳಿ ಬಣ್ಣ ಇತ್ತು. ಮುಷ್ಠಿ ಗಾತ್ರದ ಆ ಎರಡು ಬುಲ್‌ಬುಲ್‌ಗಳ  ವಿಭಿನ್ನವಾಗಿದ್ದವು.

ಗೂಡಿನೊಳಗೆ ಒಂದು ಬುಲ್‌ಬುಲ್ ಮೊಟ್ಟೆಗಳಿಗೆ ಕಾವು ಕೊಡಲು ಕುಳಿತುಕೊಂಡರೆ ಮತ್ತೊಂದು ಹಾರಿ ಹೋಗುತ್ತಿತ್ತು. ಸ್ವಲ್ಪ ಹೊತ್ತು ಕಳೆಯುತ್ತಲೇ ಮರಳಿ ಬರುತ್ತಿತ್ತು. ಹಾಗೆ ಬಂದ ಬುಲ್‌ಬುಲ್ ಬಾಯಿಯಲ್ಲಿ ಹುಳಗಳನ್ನು ಹಿಡಿದುಕೊಂಡು ಬರುತ್ತಿತ್ತು. ಆಗ ಗೂಡಿನೊಳಗಿದ್ದ ಬುಲ್‌ಬುಲ್ ಆಚೆಗೆ ಬಂದು ಅದರ ಬಳಿ ಕೂತುಕೊಳ್ಳುತ್ತಿತ್ತು. ನಂತರ ಬಾಯಿಗೆ ಬಾಯಿ ಸೇರಿಸಿ ಹುಳಗಳನ್ನು ಹಂಚಿಕೊಂಡು ತಿನ್ನುತ್ತಿದ್ದವು.

ಒಂದಾದ ನಂತರ ಒಂದಾಗಿ ಗೂಡಿನಲ್ಲಿ ಕುಳಿತು ಮೊಟ್ಟೆಗೆ ಕಾವು ಕೊಡುತ್ತಿದ್ದವು.
ಸಂಜೆಯಾಯಿತು. ಮಂದ ಬೆಳಕು. ಆಗ ಎರಡು ಬುಲ್‌ಬುಲ್‌ಗಳು ಮನೆಯಂಗಳದಲ್ಲಿನ ಅಮಟೆ ಮರದ ಟೊಂಗೆಯ ಮೇಲೆ ಕುಳಿತವು. ಒಂದಕ್ಕೊಂದು ಮೈಯನ್ನು ಕೆದರಿಕೊಳ್ಳುತ್ತ ಆಕಳಿಸಿ ರೆಕ್ಕೆ-ಪುಕ್ಕ ಜಾಡಿಸಿಕೊಂಡು ಶಿಸ್ತಿನಿಂದ ಕುಳಿತವು.

ಎಲ್ಲೋ ಹಾರಿ ಹೋಗಿ ರಾತ್ರಿ ಹೊತ್ತಿನ ಊಟವನ್ನು ಹಿಡಿದುಕೊಂಡು ಬಂದಿದ್ದವು. ಸದ್ದು ಮಾಡದೆ ತಿಂದು ಬಿಟ್ಟವು. ಮನೆಗೆ ಬಂದ ಅತಿಥಿಗಳಂತೆ ಕತ್ತಲಾದರೂ ಅಲ್ಲಿಯೇ ಕುಳಿತ್ತಿದ್ದವು. ಆ ಹೊತ್ತಿಗೆ ತುಂತುರು ಮಳೆ. ಬುಲ್‌ಬುಲ್‌ಗಳೆರಡು ಗೂಡಿನೊಳಗೆ ಸೇರಿಕೊಂಡುಬಿಟ್ಟವು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.