ADVERTISEMENT

ಹೆಗ್ಗೆರೆಯ ಶಿಲಾ ಬಸದಿ

ಜಿ.ರಂಗನಾಥ್
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಹೆಗ್ಗೆರೆಯಲ್ಲಿ ಹೊಯ್ಸಳ ಶೈಲಿಯಲ್ಲಿ ಆಕರ್ಷಕ ಶಿಲ್ಪಕಲಾ  ಕೆತ್ತನೆಗಳೊಂದಿಗೆ ನಿರ್ಮಾಣಗೊಂಡಿರುವ ಜಿನ ಬಸದಿ, ಜೈನ ಧರ್ಮೀಯರ ಯಾತ್ರಾ ಸ್ಥಳಗಳಲ್ಲೊಂದಾಗಿದೆ. ನೋಡಲು ಚಿಕ್ಕದಾಗಿದ್ದರೂ ಕಲಾ ಶ್ರೀಮಂತಿಕೆಗೆ ಹೆಸರಾಗಿದೆ.

ಸುಮಾರು 1200 ವರ್ಷಗಳ ಹಿಂದಿನ ಈ ಬಸದಿ ತನ್ನದೇ ಆದ ವೈಶಿಷ್ಟಗಳನ್ನು ಒಳಗೊಂಡಿದೆ. ಅಪರೂಪದ ಶಿಲ್ಪಕಲಾ ಸಂಪತ್ತಿನ `1008 ಸುಪಾರ್ಶ್ವನಾಥ ಬಸದಿ~ ಎಂಬ ಹೆಸರಿನ ಈ ಆಲಯವನ್ನು ಬಳಪದ ಕಲ್ಲಿನಿಂದ ನಿರ್ಮಿಸಲಾಗಿದ್ದು, ಶಿಲಾ ಶಾಸನಗಳಲ್ಲಿ `ಚನ್ನಪಾರ್ಶ್ವ ದೇವರ ಬಸದಿ~ ಎಂದು ಕರೆಸಿಕೊಂಡಿದೆ.

ಜೈನ ಬಸದಿಗಳು ಸಾಮಾನ್ಯವಾಗಿ ಬೋಳಾಗಿರುತ್ತವೆ. ಆದರೆ ಕಲಾತ್ಮಕತೆಯ ಜತೆಗೆ ನವರಂಗ, ಗರ್ಭಗುಡಿ, ಸುಕನಾಸಿಯನ್ನು ಹೊಂದಿರುವ ಹೆಗ್ಗೆರೆಯ ಬಸದಿ ಅಪರೂಪವೆನಿಸಿದೆ. ಬಸದಿಯ ಒಳ ಮತ್ತು ಹೊರ ಭಾಗಗಳಲ್ಲಿ, ಒಳ ಛಾವಣಿ, ಸ್ತಂಭಗಳು, ಅಡ್ಡತೊಲೆಗಳ ಮೇಲೆ ಕಮಲದ ಹೂವು ಕೆತ್ತನೆ ಮಾಡಿರುವುದು ವಿಶೇಷ. ಸುಮಾರು 500 ಕಮಲಗಳನ್ನು ನೋಡಿದರೆ ಜೈನ ಧರ್ಮದ ನೀತಿಯೊಂದನ್ನು ಸಾರಲಾಗಿದೆ ಎಂದು ಇತಿಹಾಸ ತಜ್ಞರು ಹೇಳುತ್ತಾರೆ.

ಗರ್ಭಗುಡಿಯಲ್ಲಿ ದೊಡ್ಡ ಕಮಲ ಪೀಠವಿದೆ. ಅದರ ಮೇಲೆ ಏಳನೇ ತೀರ್ಥಂಕರರಾದ ಸುಪಾರ್ಶ್ವನಾಥ ಸ್ವಾಮಿ ವಿಗ್ರಹ ಇದೆ. ಕುದುರೆ ಮೇಲೆ ಆಸೀನವಾಗಿರುವ ಬ್ರಹ್ಮಯಕ್ಷ ದೇವರು ಹಾಗೂ ಸುಪಾರ್ಶ್ವನಾಥ ಸ್ವಾಮಿಯ ಲೋಹದ ಮೂರ್ತಿಗಳಿಗೆ ಇಲ್ಲಿ ಪೂಜೆ. ನೆಲಮಟ್ಟದಿಂದ ಸುಮಾರು ಮೂರು ಅಡಿ ಎತ್ತರದಲ್ಲಿ ನಿರ್ಮಿಸಲಾಗಿರುವ ಬಸದಿಯ ಹೊರಭಾಗ ನಕ್ಷತ್ರಾಕಾರದ ವಿನ್ಯಾಸ ಹೊಂದಿದೆ.

ಬೂದಿಹಾಳು (ಈಗಿನ ಶ್ರೀರಾಂಪುರ) ಸೀಮೆಗೆ ಸೇರಿದ್ದ ಹೆಗ್ಗೆರೆ, ಕೃಷಿ ಕೈಗಾರಿಕೆ ಮತ್ತು ವಾಣಿಜ್ಯ ಕೇಂದ್ರವಾಗಿತ್ತು. ಹೊಯ್ಸಳರ ರಾಜ ವಲ್ಲಭರಾಜ ದೇವ ಕೆಲವು ಗದ್ದೆಗಳನ್ನು ದತ್ತಿ ಬಿಟ್ಟು ಬಸದಿಯ ಜೀರ್ಣೋದ್ಧಾರ ಮಾಡಿಸಿದ್ದ. 15ನೇ ಶತಮಾನದಲ್ಲಿ ಬೂದಿಹಾಳು ಸೀಮೆಯ ಸಿರುಮನಾಯಕನ ತಮ್ಮ ಮಲ್ಲನಾಯಕ ಬಸದಿಗಾಗಿ ಕೆಲವು ಗದ್ದೆಗಳನ್ನು ದತ್ತಿ ನೀಡಿದ್ದ ಎನ್ನುವುದು ಶಾಸನಗಳಿಂದ ತಿಳಿದು ಬರುತ್ತದೆ.
 
ಇಲ್ಲಿನ ಸುಪಾರ್ಶ್ವನಾಥ ಸ್ವಾಮಿ ಹಾಗೂ ಬ್ರಹ್ಮಯಕ್ಷ ದೇವರುಗಳ ವಾರ್ಷಿಕ ವಿಶೇಷ ಪೂಜಾ ಕಾರ್ಯಕ್ರಮ ಈ ಬಾರಿ ಜನವರಿ 22 ರಂದು ನಡೆಯುತ್ತದೆ. ಸಹಸ್ರಾರು ವರ್ಷಗಳ ಸುದೀರ್ಘ ಇತಿಹಾಸಕ್ಕೆ ಸಾಕ್ಷಿಯಾಗಿರುವ ಐತಿಹಾಸಿಕ, ಧಾರ್ಮಿಕ ಹಾಗೂ ಶಿಲ್ಪಕಲಾ ದೃಷ್ಟಿಯಿಂದ ಮಹತ್ವವೆನಿಸುವ ಬಸದಿ ಶಿಲ್ಪಕಲಾಕ್ತರ ಮನ ಸೆಳೆಯುತ್ತದೆ.

ಬಸದಿಯ ಪೂಜಾ ಕೈಂಕರ್ಯಗಳ ಜವಾಬ್ದಾರಿ ಯನ್ನು ಸ್ಥಳೀಯ ಸುಪಾರ್ಶ್ವನಾಥ ಸ್ವಾಮಿ ಜಿನ ಜೈತ್ಯಾಲಯ ಟ್ರಸ್ಟ್ ವಹಿಸಿಕೊಂಡಿದೆ. 800ಕ್ಕೂ ಹೆಚ್ಚು ಭಕ್ತಾದಿಗಳು ದಿನ ನಿತ್ಯದ ಪೂಜಾ ಕಾರ್ಯಕ್ಕೆ ಪೂಜಾ ನಿಧಿ ನೀಡಿದ್ದಾರೆ. ಈ ಹಣವನ್ನು ಬ್ಯಾಂಕ್‌ನಲ್ಲಿಡಲಾಗಿದೆ.

ಬರುವ ಬಡ್ಡಿಯಲ್ಲಿ ಭಕ್ತರ ಹೆಸರಿನಲ್ಲಿ ದಿನ ನಿತ್ಯ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ.
ಹೆಚ್ಚಿನ ಮಾಹಿತಿಗೆ ಬಸದಿಯ ಅರ್ಚಕ ಪಾಯಣ್ಣ (99015 00875) ಅಥವಾ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸುರೇಶ್ ಜೈನ್ (94483 13123) ಅವರನ್ನು ಸಂಪರ್ಕಿಸಬಹುದು.

ವಾರ್ಷಿಕ ವಿಶೇಷ ಪೂಜಾ
ಹೆಗ್ಗೆರೆಯ ಸುಪಾರ್ಶ್ವನಾಥ ಸ್ವಾಮಿ ಹಾಗೂ ಬ್ರಹ್ಮಯಕ್ಷ ದೇವರುಗಳ ವಾರ್ಷಿಕ ವಿಶೇಷ ಪೂಜಾ ಕಾರ್ಯಕ್ರಮ ಈ ಬಾರಿ ಜನವರಿ 22 ರಂದು ನಡೆಯಲಿದೆ.

ಹೊಸದುರ್ಗ- ಹುಳಿಯಾರು ರಸ್ತೆಯಲ್ಲಿ ಹೆಗ್ಗೆರೆ ಸಿಗುತ್ತದೆ. ಇಲ್ಲಿಗೆ ಸಮೀಪದ ಇನ್ನೊಂದು ಪ್ರಮುಖ ಧಾರ್ಮಿಕ ಕ್ಷೇತ್ರವೇ ಗವಿರಂಗಾಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.