ADVERTISEMENT

ಸೊಗಸುಗಾರ ಹೂವಕ್ಕಿ

ಕೆ.ಪಿ.ಸತ್ಯನಾರಾಯಣ
Published 22 ಜನವರಿ 2018, 19:30 IST
Last Updated 22 ಜನವರಿ 2018, 19:30 IST
ಸೊಗಸುಗಾರ ಹೂವಕ್ಕಿ
ಸೊಗಸುಗಾರ ಹೂವಕ್ಕಿ   

ನಮ್ಮ ಕೈತೋಟದಲ್ಲಿ ‘ಕಿಚಿಕಿಚಿ ಚಿಂವ್ ಚಿಂವ್’ ಸದ್ದಾದರೆ ನಾನು ಕ್ಯಾಮೆರಾ ಹಿಡಿದು ಹೊರಗೋಡುವುದು ಸಾಮಾನ್ಯ. ತೋಟದಲ್ಲಿರುವ ಗಂಟೆ ದಾಸವಾಳದ ಹೂವಿಗೆ ಮುತ್ತಿಗೆ ಹಾಕುವ ಪುಟಾಣಿ ಹಕ್ಕಿಗಳ ಜೋಡಿಯೊಂದು ಅಸಾಧ್ಯ ಗಲಾಟೆ ಮಾಡಿ ತುಸು ಹೊತ್ತಿನಲ್ಲೇ ಪುರ್‍ರೆಂದು ಹಾರಿಹೋಗುತ್ತವೆ.

ಕೆಲ ವರ್ಷಗಳ ಹಿಂದೆ ನಮ್ಮ ಮನೆಯ ನಿತ್ಯದ ಅತಿಥಿಗಳಾಗಿದ್ದ ಈ ಹಕ್ಕಿಗಳು ಈಚೆಗೆ ಕಂಡಿರಲಿಲ್ಲ. ಕಾರಣ ನಮ್ಮ ಮನೆಯ ಗಂಟೆ ದಾಸವಾಳದ ಗಿಡ ಒಣಗಿಹೋಗಿತ್ತು. ಈಚೆಗೆ ಬೇರೆಡೆಯಿಂದ ಅದನ್ನು ತಂದು ನೆಟ್ಟು ಬೆಳೆಸಿದ ನಂತರ, ಅದರ ಮಕರಂದಕ್ಕೆ ಈ ಹಕ್ಕಿಗಳು ಮತ್ತೆ ಬರುತ್ತಿವೆ. ಬೇರೆ ಬಗೆಯ ಹಲವು ದಾಸವಾಳದ ಗಿಡಗಳಿದ್ದರೂ ಈ ಗಿಡದ ಹೂಗಳಿಗೆ ಮಾತ್ರ ಲಗ್ಗೆ ಇಡುತ್ತವೆ.

ಇವು ಹೂವಕ್ಕಿ ಅಥವಾ ಸೂರಕ್ಕಿ ಎಂದು ಕರೆಯ ಲಾಗುವ ಒಂದು ಬಗೆಯ ಸಣ್ಣ ಹಕ್ಕಿಗಳು. ಜೇಡ ಮುಂತಾದ ಸಣ್ಣ ಸಣ್ಣ ಕ್ರಿಮಿಕೀಟಗಳನ್ನೂ ಅವುಗಳು ತಿನ್ನುವುದುಂಟು. ಹೂಗಳ ಬುಡಕ್ಕೆ ಬಾಗಿದ ತಮ್ಮ ಕೊಕ್ಕನ್ನು ತೂರಿಸುವುದರ ಮೂಲಕ ಇವು ರಸವನ್ನು ಹೀರುತ್ತವೆ. ಹಮ್ಮಿಂಗ್ ಹಕ್ಕಿಗಳ ಕುಲಕ್ಕೇ ಸೇರಿದ ಇವುಗಳು ಗಾಳಿಯಲ್ಲಿ ತೇಲುತ್ತಾ ರಸ ಹೀರಲು ಶಕ್ತವಾಗಿದ್ದರೂ ಹೂಗಳ ತೊಟ್ಟು ಅಥವಾ ರೆಂಬೆಗಳ ಮೇಲೆ ತಲೆಕೆಳಗಾಗಿ ಕುಳಿತು ಮಕರಂದ ಕುಡಿಯುತ್ತವೆ.

ADVERTISEMENT

ನಮ್ಮ ರಾಜ್ಯದಲ್ಲಿ ಕಂಡು ಬರುವುದು ಎರಡು ರೀತಿಯ ಹೂವಕ್ಕಿಗಳು. ಒಂದು ಕಡು ನೀಲಿಯ ಹೂವಕ್ಕಿ (ಗಂಡು ಹಕ್ಕಿಗಳು ಫಕ್ಕನೆ ಕಪ್ಪು ಬಣ್ಣದಲ್ಲಿ ಇದ್ದಂತೆ ಕಂಡರೂ ಅವುಗಳ ಮೇಲೆ ತುಸು ಬೆಳಕು ಬಿದ್ದರೂ ತಲೆಯ ಭಾಗದ ನೀಲಿಬಣ್ಣ ಗೋಚರಿಸುತ್ತದೆ) ಇನ್ನೊಂದು ನೇರಳೆಕಂಠದ ಹೂವಕ್ಕಿ (ಗಂಡಿನ ಕುತ್ತಿಗೆ ನೇರಳೆ ಬಣ್ಣ, ತಲೆ ನೀಲಿ ಬಣ್ಣ). ಎರಡೂ ವಿಧದಲ್ಲಿ ಹೆಣ್ಣು ಹಕ್ಕಿಗಳು ಕಂದು ಬಣ್ಣದ ಬೆನ್ನು ಹಾಗೂ ರೆಕ್ಕೆಗಳನ್ನು ಹೊಂದಿರುತ್ತವೆ. ಹೆಣ್ಣು ಗಂಡೆರಡಕ್ಕೂ ಹೊಟ್ಟೆಯ ಭಾಗ ಬಿಳುಪು ಮಿಶ್ರಿತ ತಿಳಿ ಹಳದಿಯಾಗಿರುತ್ತದೆ.

ಈ ಹಕ್ಕಿಗಳು ಮಕರಂದ ಹೀರುವುದನ್ನು ನೋಡುವುದೇ ಸಂತಸ. ಪ್ರತಿಬಾರಿ ಬಂದಾಗಲೂ, ಅವು ಮಾಡುವ ಕಸರತ್ತು ಮನತಣಿಸುತ್ತದೆ. ಇವು ಗುಂಪುಗಳಲ್ಲಿ ಕಂಡುಬರುವುದಿಲ್ಲ. ಅಪರೂಪಕ್ಕೆ ಒಂಟಿಯಾಗಿ, ಹೆಚ್ಚಿನ ವೇಳೆ ಜೋಡಿಯಾಗಿಯೇ ಇರುತ್ತವೆ. ಮನುಷ್ಯರ ವಾಸಸ್ಥಳಗಳ ಬಳಿಯೇ ಜೇಡರ ಬಲೆ, ಹತ್ತಿ, ಬಟ್ಟೆಯ ಚೂರು, ಕಸಕಡ್ಡಿಗಳನ್ನು ಸೇರಿಸಿ ಗೂಡು ಕಟ್ಟುತ್ತವೆ. ಬಳ್ಳಿಗಳ ಅಥವಾ ಇಳಿಬಿದ್ದ ರೆಂಬೆಗಳ ತುದಿಯಲ್ಲಿ ಇವು ಗೂಡನ್ನು ಮಾಡುವುದರಿಂದ ಶತ್ರುಗಳಿಂದ ಅಪಾಯ ಕಡಿಮೆ.

ಹೂವಕ್ಕಿಗಳ ಗಾತ್ರ ಚಿಕ್ಕದು. ಹೀಗಾಗಿ ಹೂಗಳ ಮಧ್ಯೆ ಸರಾಗವಾಗಿ ಚಲಿಸಿ, ಮಧು ಹೀರಲು ಶಕ್ತವಾಗಿವೆ. ಹತ್ತಾರು ಹೂಗಳಿಗೆ ಎಡತಾಕುವುದರಿಂದ ಇವು ಪರಾಗಸ್ಪರ್ಶ ಕ್ರಿಯೆಯಲ್ಲಿ ನೆರವಾಗುತ್ತವೆ. ಕ್ಷಣಮಾತ್ರದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಹಾರುತ್ತಾ ಹಲವಾರು ಹೂಗಿಡಗಳಿಗೆ ಭೇಟಿ ಕೊಡುತ್ತಾ ಸದಾ ಚಟುವಟಿಕೆಯಿಂದ ಇರುವ ಈ ಹಕ್ಕಿಗಳನ್ನು ನೋಡುವುದೇ ಚೆಂದ. ಹಾಗಾಗಿಯೇ ನಾವು ಆ ಗಂಟೆ ದಾಸವಾಳದ ಹೂಗಳನ್ನು ಕೊಯ್ಯುವುದೇ ಇಲ್ಲ!

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.