ADVERTISEMENT

ಮನೆಯಲ್ಲೇ ಉಳಿದ ಅತಿಥಿಗಳು!

ಪ.ರಾಮಕೃಷ್ಣ
Published 5 ಫೆಬ್ರುವರಿ 2018, 19:30 IST
Last Updated 5 ಫೆಬ್ರುವರಿ 2018, 19:30 IST
ಮನೆಯಲ್ಲೇ ಉಳಿದ ಅತಿಥಿಗಳು!
ಮನೆಯಲ್ಲೇ ಉಳಿದ ಅತಿಥಿಗಳು!   

ದಶಕಗಳ ಹಿಂದಿನ ನನ್ನ ಬಾಲ್ಯ. ಮಳೆಗಾಲ ಆರಂಭವಾದೊಡನೆ ರಾತ್ರಿ ಸುರಿಯುತ್ತಿದ್ದ ಕುಂಭದ್ರೋಣದ ಸದ್ದು. ಸನಿಹದ ಹಳ್ಳಕ್ಕೆ ಗುಡ್ಡದ ನೀರು ಧುಮ್ಮಿಕ್ಕುವ ಭೋರ್ಗರೆತ. ಅದರೊಂದಿಗೆ ಹತ್ತಾರು ಮಂದಿ ಮುತ್ತೈದೆಯರು ಕುಳಿತು ಒಂದೇ ಸಲ ಹತ್ತಾರು ತೆಂಗಿನಕಾಯಿಗಳನ್ನು ತುರಿಮಣೆಯಿಂದ ತುರಿದಂತೆ ಕಿವಿಗಪ್ಪಳಿಸುವ ದನಿ. ಮಳೆಗಾಲ ಮುಗಿಯುವವರೆಗೂ ರಾತ್ರಿಯಿಡೀ ಕೇಳಿ ಬರುವ ಈ ಕೂಗು ಕಪ್ಪೆಗಳದು.

ವೇದ ಕಲಿತಿರುವ ಅಪ್ಪ, ಕಪ್ಪೆಗಳ ಈ ನಾದಕ್ಕೂ ವೇದದ ಜಟೆ ಹೇಳುವ ಶಿಸ್ತುಬದ್ಧ ಪಠಣಕ್ಕೂ ಸನಿಹ ಸಂಬಂಧವಿದೆ ಎನ್ನುತ್ತಿದ್ದರು. ಕೆಸರು ತುಂಬಿದ ಚರಂಡಿಯಲ್ಲಿ ನಮ್ಮ ಉಳುಮೆಯ ಕೋಣಗಳು ಮೆಲುಕಾಡಿಸುತ್ತ ಮಲಗಿದಾಗ ಮೈಯಲ್ಲಿ ಹಸಿರು ಪಟ್ಟೆಗಳಿರುವ ಹತ್ತಾರು ಕಪ್ಪೆಗಳು ನಿರ್ಭಯವಾಗಿ ಅವುಗಳ ಮೈಯೇರಿ ಕುಳಿತುಕೊಳ್ಳುತ್ತಿದ್ದವು. ನಾವು ಬಳಿಗೆ ಹೋದರೆ ಪುಳಕ್ಕನೆ ನೀರಿಗೆ ಜಿಗಿಯುತ್ತಿದ್ದವು.

ಕಪ್ಪೆಗಳಿಗೆ ಕಲ್ಲು ಹೊಡೆದು ಕೊಲ್ಲುವ ಆಟದಲ್ಲಿ ನಮಗೆ ಮಜ ಇದ್ದರೂ ಅಜ್ಜಿ ಬಿಡುತ್ತಿರಲಿಲ್ಲ. ‘ಕಪ್ಪೆ ಕೊಂದರೆ ಮೈಯಲ್ಲಿ ಕೆಡುಗಳು ಬೀಳುತ್ತವೆ. ಕೊಲ್ಲಬೇಡಿ’ ಎನ್ನುತ್ತಿದ್ದರು. ಹಾಗೆಯೇ ಅಮ್ಮ, ‘ಕಪ್ಪೆ ಮನೆಯೊಳಗೆ ಬರಬಾರದು. ಅದು ಒಲೆಗೆ ಬಿದ್ದು ಸತ್ತರೆ ಮಂಡೂಕ ಶಾಂತಿ ಹೋಮವಾಗಬೇಕು. ತುಂಬ ಹಣ ಬೇಕಾಗುತ್ತದೆ’ ಎಂದು ಹೇಳಿ, ಕಪ್ಪೆ ಅಕಸ್ಮಾತ್ ಒಳಗೆ ಬಂದರೆ ಉಪಾಯವಾಗಿ ಹೊರಗೆ ಕಳುಹಿಸುತ್ತಿದ್ದರು.

ADVERTISEMENT

ಈಗ ಬೇಕೆಂದರೂ ಕಪ್ಪೆಗಳು ಕಾಣಲು ಸಿಗುವುದಿಲ್ಲ. ಹೊಲದ ಕೃಷಿಗೆ ಬಳಸಿದ ಮಾರಕ ಕೀಟನಾಶಕಗಳಿಂದಾಗಿ ಅವುಗಳ ಸಂತತಿ ಅಳಿದೇಹೋಗಿದೆ ಎಂಬುದು ಒಂದು ವಾದ. ನನ್ನ ಮೊಮ್ಮಗನಂತೂ ಚಿತ್ರದಲ್ಲಿ ಮಾತ್ರ ಕಪ್ಪೆಯನ್ನು ನೋಡಿದ್ದಾನೆ ಅಷ್ಟೆ.

ಆದರೆ ಇತ್ತೀಚೆಗೆ ನಮ್ಮ ಮನೆಯಲ್ಲಿ ಎರಡು ಕಪ್ಪೆಗಳು ಎಲ್ಲಿಂದಲೋ ಬಂದು ಸೇರಿಕೊಂಡಿವೆ. ಒಂದು ಕಪ್ಪೆಗೆ ಬಿಳಿಯ ಮೈಯಲ್ಲಿ ಚಿರತೆಯಂತೆ ಕರಿಯ ಚುಕ್ಕೆಗಳಿವೆ. ಹಗಲು ಅದು ಎಲ್ಲಿರುತ್ತದೋ ತಿಳಿಯುವುದಿಲ್ಲ. ಕತ್ತಲಾಗಿ ನಾವು ಮಲಗಿದ ಮೇಲೆ ಅಡುಗೆ ಮನೆಯಲ್ಲಿ ಪಾತ್ರೆಗಳು ಉರುಳಾಡುವ ಸದ್ದು ಕೇಳಿಸುತ್ತದೆ. ಹೋಗಿ ನೋಡಿದರೆ ತನ್ನ ಸ್ವಂತ ಮನೆಯೋ ಎಂಬಂತೆ ಅಡುಗೆಮನೆಯಲ್ಲಿ ಜಿಗಿದಾಡುತ್ತದೆ.

ಕೀಟಗಳನ್ನು ಹಿಡಿಯುವಾಗ ಪಾತ್ರೆಗಳು ಉರುಳುತ್ತದೆ. ಪಾತ್ರೆ ತೊಳೆಯುವ ಬೇಸಿನ್‌ಗೆ ಇಳಿದು ಅಲ್ಲೂ ತಣ್ಣಗೆ ಮಲಗಿಕೊಳ್ಳುತ್ತದೆ. ಒಮ್ಮೊಮ್ಮೆ ಚಾವಡಿಗೂ ಬರುತ್ತದೆ. ಬಾಗಿಲಿನ ಮೇಲೆ ಕೂಡುತ್ತದೆ. ಫ್ರಿಜ್ಜನ್ನು ಏರುತ್ತದೆ. ಬೆಳಗಿನವರೆಗೂ ತಾನಿದ್ದೇನೆಂದು ತೋರಿಸುತ್ತ ಬೆಳಕು ಹರಿದಾಗ ಎಲ್ಲಿಯೂ ಕಾಣಿಸದೆ ಮರೆಯಾಗುತ್ತದೆ. ಎರಡು ವರ್ಷಗಳಿಂದ ಅದು ನಮ್ಮನೆಗೆ ಅತಿಥಿ.

ಇನ್ನೊಂದು ಕಪ್ಪೆ, ಮನೆ ಆವರಣಕ್ಕೆ ಬಂದು ಮೂರು ವರ್ಷಗಳಾಗಿವೆ. ಅದು ಮನೆಯೊಳಗೆ ಬರುವುದೇ ಇಲ್ಲ. ಟಾಯ್ಲೆಟ್ ಬಾಗಿಲಿಗೆ ಕಟ್ಟಿದ ಮರದ ಚೌಕಟ್ಟು ಅದಕ್ಕೆ ಮನೆ. ಒಳಗೆ ಯಾರಾದರೂ ಹೋಗಿ ಲೈಟು ಹಾಕಿದರೆ ಅದರ ಬಿಳಿ ವರ್ಣದ ತಳಭಾಗದಲ್ಲಿ ಕಂಪನ ಕಾಣಿಸುತ್ತದೆ. ಈ ವಿಚಿತ್ರ ಕಪ್ಪೆಗೆ ನಡು ಬೆನ್ನಿನಲ್ಲಿ ದಪ್ಪಗಿನ ಕೆಂಬಣ್ಣದ ಪಟ್ಟೆಯಿದೆ, ಉಳಿದ ಭಾಗ ಕಪ್ಪಾಗಿದೆ. ಅಲ್ಲಿಗೆ ಬರುವ ಕೀಟಗಳನ್ನು ರಾತ್ರಿಯಿಡೀ ಭಕ್ಷಿಸುವ ಈ ಬಣ್ಣದ ಕಪ್ಪೆ, ಹಗಲಿನಲ್ಲಿ ಎಲ್ಲಿರುತ್ತದೆಂಬುದು ಗೊತ್ತಾಗುವುದಿಲ್ಲ. ನೀರಿನಲ್ಲಿ ವಾಸಿಸದ ಈ ಎರಡು ವಿಭಿನ್ನ ಜಾತಿಯ ಕಪ್ಪೆಗಳು ಮನುಷ್ಯರ ಜೊತೆಗೆ ಮನೆಯೊಳಗೆ ಬದುಕುವ ಗುಟ್ಟಾದರೂ ಏನಿರಬಹುದು?

ಬಣ್ಣದಲ್ಲಿ ವಿಭಿನ್ನವಾಗಿರುವ ಇವು ಯಾವ ಜಾತಿಗೆ ಸೇರಿರಬಹುದು? ತಿಳಿಯದು. ಆದರೆ ಮನುಷ್ಯನೊಂದಿಗೆ ಸಹಬಾಳ್ವೆಯನ್ನು ಒಪ್ಪಿಕೊಂಡು ನೀರ ಬಿಟ್ಟ ತಾರಸಿ ಮನೆಯೊಳಗೆ ಬೀಡುಬಿಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.