ADVERTISEMENT

ದರೋಜಿಯ ಕರಡಿಗಳು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2012, 19:30 IST
Last Updated 28 ಏಪ್ರಿಲ್ 2012, 19:30 IST
ದರೋಜಿಯ ಕರಡಿಗಳು
ದರೋಜಿಯ ಕರಡಿಗಳು   

ಕರಡಿಗಳನ್ನು ಅದರ ವಾಸಸ್ಥಳದಲ್ಲಿಯೇ ಕಾಣಲು ನಾವು ಬಳ್ಳಾರಿ ಜಿಲ್ಲೆಯ ಹೊಸಪೇಟೆ ಮತ್ತು ಸಂಡೂರು ತಾಲ್ಲೂಕುಗಳಲ್ಲಿ ಹರಡಿಕೊಂಡಿರುವ ದರೋಜಿ ಕರಡಿಧಾಮಕ್ಕೆ ಹೋಗಬೇಕು.

ಸಂಡೂರು ತಾಲ್ಲೂಕಿನ ದರೋಜಿ ಗ್ರಾಮ ಹಾಗೂ ಹೊಸಪೇಟೆ ತಾಲ್ಲೂಕಿನ ಬುಕ್ಕಸಾಗರದವರೆಗೆ ಹಬ್ಬಿರುವ ಬೆಟ್ಟಗುಡ್ಡಗಳು ಹಾಗೂ ಕಲ್ಲುಬಂಡೆಗಳ ಪರಿಸರ `ಸ್ಲಾಥ್ ಬೆಅರ್~ ಕರಡಿಗಳ ವಾಸಸ್ಥಾನವಾಗಿದೆ. 8,270 ಹೆಕ್ಟೇರ್ ಪ್ರದೇಶವನ್ನು ಸರ್ಕಾರ 1994ರಲ್ಲಿ `ದರೋಜಿ ಕರಡಿ ಧಾಮ~ ಎಂದು ಘೋಷಿಸಿದೆ. ಈ ಅರಣ್ಯ ಪ್ರದೇಶದ ಕಲ್ಲು ಬಂಡೆಗಳ ಪೊಟರೆ ಹಾಗೂ ಗುಹೆಗಳು ಇವುಗಳ ವಾಸಸ್ಥಾನ.

ರಾಮಾಯಣದ `ಕಿಷ್ಕಿಂಧೆ~ ಎಂದು ಭಾವಿಸಲಾದ ಈ ಪ್ರದೇಶದಲ್ಲಿ, ಪುರಾಣದ ಕಥನಕ್ಕೆ ಪೂರಕವಾಗಿ ಕೋಡಗ, ಕೆಂಪುಕೋತಿ, ಕರಡಿ ಹಾಗೂ ಚಿರತೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಈ ಕರಡಿಧಾಮವು ಕಲ್ಲು ಬಂಡೆಗಳಿಂದ ಆವೃತ್ತವಾದ ಬೆಟ್ಟ-ಗುಡ್ಡಗಳು ಹಾಗೂ ಕುರುಚಲು ಕಾಡಿನಿಂದ ಕೂಡಿದೆ.

ಕರಡಿಗಳ ಮುಖ್ಯ ಆಹಾರ ಗೆದ್ದಲು. ರಾತ್ರಿಯ ವೇಳೆ ಇವು ತಮ್ಮ ಆಹಾರಾನ್ವೇಷಣೆಗೆ ಹೊರಡುತ್ತವೆ. ಗೆದ್ದಲಿನೊಂದಿಗೆ ಇರುವೆ, ಸಗಣಿ ಹುಳು, ಜೇನು, ಕುರುಚಲು ಕಾಡಿನಲ್ಲಿ ಸಿಗುವ ಹಣ್ಣುಗಳನ್ನು ಕರಡಿಗಳು ತಿನ್ನುತ್ತವೆ. ಕವಳೆ, ಕಾರೆ, ಜಾನೆ, ಉಲುಪಿ, ಸೀತಾಫಲ, ಬಾರೆ, ಕಕ್ಕೆ, ಕರ್ಕಲಿ, ಪರಕಿ, ನೇರಳೆ, ಆಲ, ಅರಳಿ, ನೆಲ್ಲಿ ಮುಂತಾದ ಹಣ್ಣುಗಳು ಕರಡಿಗೆ ಇಷ್ಟ.
 
ಈ ಹಣ್ಣುಗಳನ್ನು ತಿಂದ ಕರಡಿಯ ಹಿಕ್ಕೆಯಲ್ಲಿ ಬೀಜಗಳು ಮಣ್ಣು ಸೇರುತ್ತವೆ. ಈ ಮೂಲಕ ಹೊಸ ಗಿಡಗಳು ಬೆಳೆಯುತ್ತವೆ. ಈ ರೀತಿ, ಕಾಡು ಬೆಳೆಯಲು ಕರಡಿಗಳು ಸಹಕಾರಿಯಾಗಿವೆ.
ದರೋಜಿ ವನ್ಯಧಾಮದಲ್ಲಿ ನೂರಕ್ಕೂ ಹೆಚ್ಚು ಕರಡಿಗಳಿವೆ. ಸುಮಾರು ಹತ್ತು ಚಿರತೆಗಳಿವೆ.

ಐವತ್ತಕ್ಕೂ ಹೆಚ್ಚಿನ ವಿಧದ ಚಿಟ್ಟೆಗಳು, 150ಕ್ಕೂ ಹೆಚ್ಚು ವಿಧದ ಹಕ್ಕಿಗಳು, ವಿವಿಧ ಹಾವುಗಳು, ನಕ್ಷತ್ರ ಆಮೆ, ಉಡ, ಕತ್ತೆಕಿರುಬ, ಕಾಡುಹಂದಿ, ಮುಳ್ಳುಹಂದಿ, ಚಿಪ್ಪುಹಂದಿ, ನರಿ, ಗುಳ್ಳೆನರಿ, ತೋಳ, ಚುಕ್ಕೆ ಪುನುಗು, ತಾಳೆ ಪುನುಗು, ಮುಂಗುಸಿ, ಮೊಲ, ಕೆಂಪು ಮಂಗ, ವಿವಿಧ ಪ್ರಬೇಧದ ಬಾವಲಿಗಳನ್ನು ಈ ಪರಿಸರದಲ್ಲಿ ಗುರುತಿಸಲಾಗಿದೆ. ಇವೆಲ್ಲವನ್ನೂ ಮರ-ಗಿಡಗಳು, ಮೂಲಿಕೆಗಳು ಹಾಗೂ ಸಮೃದ್ಧ ಕಾಡು ಹಣ್ಣುಗಳನ್ನು ಹೊಂದಿರುವ ಪರಿಸರ ಸಲಹುತ್ತಿದೆ.

ಈ ಮೊದಲು, ಕಲ್ಲು ಬಂಡೆಗಳ ಗುಹೆಗಳಲ್ಲಿರುತ್ತಿದ್ದ ಕರಡಿಗಳು ರಾತ್ರಿಯಲ್ಲಿ ಸಮೀಪದ ರೈತರ ಕಬ್ಬು ಮತ್ತು ಬಾಳೆ ತೋಟಕ್ಕೆ ದಾಳಿ ಇಡುತ್ತಿದ್ದವು. ಈ ನೆಪದಲ್ಲಿ ಕರಡಿಗಳ ಬೇಟೆಯೂ ನಡೆಯುತ್ತಿತ್ತು. ಈಗ, ಅರಣ್ಯ ಇಲಾಖೆಯ ವತಿಯಿಂದ ಅರಣ್ಯಧಾಮವನ್ನು ಸಂರಕ್ಷಿಸಿ ಹಲವಾರು ಸ್ಥಳೀಯ ಗಿಡಗಳ ಪೋಷಣೆಯೊಂದಿಗೆ ಕರಡಿಗಳ ರಕ್ಷಣೆ ನಡೆದಿದೆ.
 
ಕೆಲವು ಬಂಡೆಗಳ ಮೇಲೆ ನಿಯಮಿತವಾಗಿ ಅರಣ್ಯ ಸಿಬ್ಬಂದಿ ಬೆಲ್ಲ, ಹಣ್ಣು, ಕಾಳುಗಳನ್ನು ಹರಡುತ್ತಾರೆ. ಕರಡಿಗಳು ಮಧ್ಯಾಹ್ನದ ನಂತರ ಬಂದು ಇವನ್ನು ತಿನ್ನುತ್ತವೆ. ವಾಚ್ ಟವರ್‌ನಲ್ಲಿ ಕುಳಿತು ಪ್ರವಾಸಿಗರು ಇದನ್ನು ವೀಕ್ಷಿಸುವ ಅವಕಾಶವಿದೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಕರಡಿಗಳು ಎರಡು ಮರಿಗಳನ್ನು ಹಾಕುತ್ತವೆ. ಕರಡಿಗಳು ತಮ್ಮ ಮರಿಗಳನ್ನು ಬಹಳ ಜೋಪಾನ ಮಾಡಿ ಸಾಕುತ್ತವೆ. ಮರಿಗಳ ಪಾಲನೆ ಪೋಷಣೆಯ ಸಂಪೂರ್ಣ ಜವಾಬ್ದಾರಿಯನ್ನು ಹೆಣ್ಣು ಕರಡಿಯೇ ಹೊರುತ್ತದೆ. ಎರಡರಿಂದ ಮೂರು ವರ್ಷಗಳ ಕಾಲ ತಾಯಿಯೊಂದಿಗೇ ಮರಿಗಳು ಬೆಳೆಯುತ್ತವೆ. ತನ್ನ ಬೆನ್ನ ಮೇಲೆ ಮರಿಗಳನ್ನು ಹೊತ್ತು ಸಾಗುವ ಕರಡಿಯನ್ನು ನೋಡುವುದೇ ಒಂದು ಸೊಗಸು.

ದರೋಜಿಗೆ ಮಾರ್ಗ: ಬೆಂಗಳೂರಿನಿಂದ ಚಿತ್ರದುರ್ಗ, ಹೊಸಪೇಟೆ. ಅಲ್ಲಿಂದ ಕಮಲಾಪುರದ ಮೂಲಕ ಕರಡಿಧಾಮವನ್ನು ತಲುಪಬಹುದು. ಬಳ್ಳಾರಿ-ಹೊಸಪೇಟೆ ರಸ್ತೆಯಲ್ಲಿರುವ ಬೈಲುವದ್ದಿಗೇರಿಯ ಮೂಲಕವೂ ಕರಡಿಧಾಮಕ್ಕೆ ಹೋಗಬಹುದು.

-----

ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಈ ಭಾಗದ ಪರಿಸರ ಪ್ರೇಮಿಗಳಿಂದಾಗಿ ಕರಡಿಗಳ ಕಳ್ಳಬೇಟೆ ಸಾಕಷ್ಟು ನಿಂತಿದೆ. ಎಲೆ ಉದುರುವ ಕುರುಚಲು ಕಾಡಾದ್ದರಿಂದ ಬೇಸಿಗೆಯಲ್ಲಿ ಕಾಡು ಪ್ರಾಣಿಗಳು ಮತ್ತು ಇಲ್ಲಿನ ಜೀವವೈವಿಧ್ಯಕ್ಕೆ ಅನುಕೂಲವಾಗುವ ಹಾಗೆ ಕೆರೆಗಳನ್ನು ಮತ್ತು ಇಂಗುಗುಂಡಿಗಳನ್ನು ನಿರ್ಮಿಸಬೇಕು.
 
ಪ್ರವಾಸಿಗರು ಕಾಡು ನೋಡಲು ಅನುಕೂಲವಾಗುವ ಹಾಗೆ ಕನಿಷ್ಠ 10 ಕಿ.ಮೀ ರಸ್ತೆಯನ್ನಾದರೂ ಮಾಡಿ, ಕೆರೆಗಳ ಬಳಿ ಸಂಪರ್ಕ ಕಲ್ಪಿಸಬೇಕು. ಆಗ, ಕರಡಿಗಳೊಂದಿಗೆ, ಇತರ ಪಕ್ಷಿ ಹಾಗೂ ಜೀವಿಗಳನ್ನೂ ಪ್ರವಾಸಿಗರು ಸುಲಭವಾಗಿ ನೋಡಬಹುದು.
-ಪಂಪಯ್ಯಸ್ವಾಮಿ
ವನ್ಯಜೀವಿ ಛಾಯಾಗ್ರಾಹಕ, ಕಮಲಾಪುರ ಪಂಚಾಯಿತಿ ಮಾಜಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.