ADVERTISEMENT

ದಿವಿನಾದ ದಹನು

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 19:30 IST
Last Updated 4 ಜೂನ್ 2011, 19:30 IST

ಸ್ವಚ್ಛ, ಸುಂದರ ಸಮುದ್ರ ತೀರಗಳಿಗೆ ಹೆಸರುವಾಸಿಯಾದ ಮಹಾರಾಷ್ಟ್ರ ರಾಜ್ಯದಲ್ಲಿ ಮತ್ತೊಂದು ಚೆಲುವಿನ ಕಡಲ ತೀರ `ದಹನು ಬೀಚ್~.

ಮುಂಬೈನಿಂದ 145 ಕಿ.ಮೀ ದೂರ ಇರುವ ದಹನು ಎನ್ನುವ ಊರಿಗೆ ಹೊಂದಿಕೊಂಡಂತಿದೆ ಈ ಕಡಲ ತೀರ. 17 ಕಿ.ಮೀ ಉದ್ದದ ಕಿನಾರೆಯಿದು. ಸ್ಥಳೀಯರಿಂದ ಬೋರ್ಡಿ ಬೀಚ್ ಎಂದು ಕರೆಸಿಕೊಳ್ಳುವ ಇದು ವಾರಾಂತ್ಯದಲ್ಲಿ ಬರುವ ಪ್ರವಾಸಿಗರಿಗೆ ಚುಂಬಕ ತಾಣ.

ಇಲ್ಲಿನ ವಿಶೇಷ ಹಣ್ಣುಗಳದ್ದು. ತೀರದುದ್ದಕ್ಕೂ ಹಲವು ಹಣ್ಣುಗಳ ಮರಗಳಿವೆ. ಇವುಗಳಿಂದ ತೀರಕ್ಕೊಂದು ಸೌಂದರ್ಯ ಬಂದಿದೆ. ಇದಷ್ಟೇ ಅಲ್ಲ, ಮಹಾರಾಷ್ಟ್ರದಲ್ಲೇ ಅತ್ಯಂತ ಹೆಚ್ಚು ಸಪೋಟ ಹಣ್ಣುಗಳನ್ನು ಬೆಳೆಯುವ ತೋಟವೂ ಇದರ ಪಕ್ಕದಲ್ಲಿಯೇ ಇದೆ. ಹಾಗೆಯೇ ತೆಂಗಿನ ಮರಗಳೂ, ಗುಲಾಬಿ ಮತ್ತು ಲಿಲ್ಲಿ ಹೂಗಳ ತೋಟಗಳನ್ನು ಕಾಣಬಹುದು.

ದಹನು ಊರಿನಿಂದ ಇಲ್ಲಿಗೆ ಹೋಗಲು ಬಸ್ ಸೌಕರ್ಯ ಇದೆ. ಅಲ್ಲಿಂದ ಕೇವಲ 15 ಕಿ.ಮೀ ದಾಟಿದರೆ ಸಿಗುವ ಬೋರ್ಡಿ ಬೀಚ್‌ನಲ್ಲಿ ರೆಸಾರ್ಟ್‌ಗಳೂ ಹೆಚ್ಚು. ಸಮುದ್ರದಿಂದ ಸೂರ್ಯೋದಯ ಮತ್ತು ಸೂರ್ಯಾಸ್ತ ಕಾಣುವಂತೆ ಅವುಗಳ ಕೋಣೆಗಳನ್ನು ವಿನ್ಯಾಸಗೊಳಿಸಿ ಪ್ರವಾಸಿಗರನ್ನು ಸೆಳೆಯಲಾಗುತ್ತಿದೆ.

ಸಮುದ್ರ ತೀರದಲ್ಲಿ ವಾಲಿಬಾಲ್ ಆಡಲು ಅವಕಾಶ ಇದೆ. ತೀರದುದ್ದಕ್ಕೂ ಅಡ್ಡಾಡುತ್ತಾ ಮನಸ್ಸಿನ ಆಹ್ಲಾದ ಹೆಚ್ಚಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.