ADVERTISEMENT

ಸಿರಿಶೃಂಗದ ಪೊನ್‌ಮುಡಿ

​ಪ್ರಜಾವಾಣಿ ವಾರ್ತೆ
Published 12 ಮೇ 2012, 19:30 IST
Last Updated 12 ಮೇ 2012, 19:30 IST
ಸಿರಿಶೃಂಗದ ಪೊನ್‌ಮುಡಿ
ಸಿರಿಶೃಂಗದ ಪೊನ್‌ಮುಡಿ   

ಕೇರಳದ ರಾಜಧಾನಿ ತಿರುವನಂತಪುರದಿಂದ ಒಂದೂವರೆ ಗಂಟೆಯ ಹಾದಿ ಸವೆಸಿದರೆ ಸಿಗುತ್ತದೆ ಪೊನ್‌ಮುಡಿ ಗಿರಿಧಾಮ. ಮೊದಲ ನೋಟದಲ್ಲೇ ಅಂಕುಡೊಂಕು ರಸ್ತೆ, ಹಸಿರು ತುಂಬಿದ ಪರಿಸರದಿಂದ ಮನಸೆಳೆಯುವ ತಾಣವಿದು.

ಸಮುದ್ರಮಟ್ಟದಿಂದ 1,100 ಮೀಟರ್ ಎತ್ತರದಲ್ಲಿ ಪೊನ್‌ಮುಡಿ ಇದೆ. ಪಶ್ಚಿಮ ಘಟ್ಟದ ಸಾಲುಗಳಲ್ಲಿ ಬರುವ ಪೊನ್‌ಮುಡಿ ಪ್ರಶಾಂತ ವಾತಾವರಣದಿಂದ ಕೂಡಿದ ಗಿರಿಧಾಮ.ಪೊನ್‌ಮುಡಿ ಗಿರಿಧಾಮವನ್ನು `ದಿ ಗೋಲ್ಡನ್ ಪೀಕ್~ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

ಅದಕ್ಕೆ ತಕ್ಕಂತೆ ಅಲ್ಲೊಂದು ಗೋಲ್ಡನ್ ವ್ಯಾಲಿಯೂ ಇದೆ. ಅಲ್ಲಿ ದಟ್ಟ ಕಾಡು ಆವರಿಸಿದ್ದು, ವಿಶಿಷ್ಟ ಜಾತಿಯ ಮರಗಳು ಮತ್ತು ವನ್ಯಮೃಗಗಳಿವೆ. ಅಲ್ಲಿಯೇ ಪಕ್ಕದಲ್ಲಿ ಕಲ್ಲಾರ್ ನದಿ ಹರಿಯುವುದರಿಂದ ಗೋಲ್ಡನ್ ವ್ಯಾಲಿಯ ಸೌಂದರ್ಯ ಮತ್ತಷ್ಟು ಹೆಚ್ಚಿದೆ. ತಂಪಾದ ನೀರಿನಲ್ಲಿ ಸಣ್ಣ ಸಣ್ಣ ಮೀನುಗಳು ಹರಿದು ಸಾಗುವ ದೃಶ್ಯ ಮನಮೋಹಕವಾದುದು.

 ಅರಣ್ಯ ಇಲಾಖೆ ಪೊನ್‌ಮುಡಿಯಲ್ಲೊಂದು ಉದ್ಯಾನವನ್ನು ನಿರ್ಮಿಸಿ ನಿರ್ವಹಿಸುತ್ತಿದೆ. ಅದರ ಹತ್ತಿರದಲ್ಲಿಯೇ ಜಿಂಕೆ ಉದ್ಯಾನವನ ಇದೆ. ಪಶ್ಚಿಮಘಟ್ಟದ ಬೆಟ್ಟ ಸಾಲುಗಳಲ್ಲಿಯೇ ಶಿಖರಪ್ರಾಯ ಎನಿಸಿಕೊಂಡಿರುವ ಅಗಸ್ಯರ್‌ಕೂಡಂ ಅಲ್ಲಿದೆ. ಅದು ಸಮುದ್ರ ಮಟ್ಟದಿಂದ 1868 ಮೀಟರ್ ಎತ್ತರದಲ್ಲಿದೆ. ಅಲ್ಲಿಗೆ ಹೊಗಲು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು.

ಪೊನ್‌ಮುಡಿಯಲ್ಲಿ ಮೀನ್‌ಮುಟ್ಟಿ ಹೆಸರಿನ ಜಲಪಾತವಿದೆ. ದಟ್ಟ ಹಸಿರಿನ ನಡುವೆ ಇರುವ ಆ ನೀರಧಾರೆ ನೀಡುವ ಆನಂದವೇ ಬೇರೆ. ವರ್ಷದ ಎಲ್ಲಾ ಕಾಲದಲ್ಲಿಯೂ ಇಲ್ಲಿ ಪ್ರವಾಸಿಗರನ್ನು ಕಾಣಬಹುದು. ಬಣ್ಣ ಬಣ್ಣದ ಚಿಟ್ಟೆಗಳು, ವಿಶೇಷ ಹೂವುಗಳು, ಸಣ್ಣ ಸಣ್ಣ ಝರಿಗಳು ಈ ಬೆಟ್ಟದ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ.

ತಿರುವನಂತಪುರದಿಂದ ಕೇವಲ 65 ಕಿಮೀ ದೂರದಲ್ಲಿರುವ ಈ ಬೆಟ್ಟ ಸಾಲುಗಳಿಗೆ ಬಸ್ ಸೌಲಭ್ಯ ಚೆನ್ನಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.