ADVERTISEMENT

ಹಸಿರು ತಬ್ಬಿದ ಬಿಸಿಲ ನಾಡು

ಕಲ್ಮೇಶ ಹ ತೋಟದ
Published 28 ಅಕ್ಟೋಬರ್ 2018, 7:08 IST
Last Updated 28 ಅಕ್ಟೋಬರ್ 2018, 7:08 IST
ಚಂದ್ರಂಪಳ್ಳಿ ಜಲಾಶಯದ ನೋಟ
ಚಂದ್ರಂಪಳ್ಳಿ ಜಲಾಶಯದ ನೋಟ   

ಕಣ್ಣು ಹಾಯಿಸಿದಷ್ಟೂ ಮುಗಿಯದ ವಿಶಾಲವಾದ ಕೆರೆ. ಅಷ್ಟ ದಿಕ್ಕುಗಳಲ್ಲೂ ದಟ್ಟವಾಗಿ ಬೆಳೆದ ಕಾನನ. ಗುಂಯ್ ಗುಟ್ಟುವ ಕೀಟಸಮೂಹ. ಚಿಲಿಪಿಲಿ ಪಕ್ಷಿಗಳ ಸದ್ದು. ಗಾಳಿಗೆ ಸೋಬಾನೆ ಪದ ಹಾಡುವ ಗಿಡ- ಮರ– ಬಳ್ಳಿಗಳು. ಮೌನದ ಮುಷ್ಟಿಯಲಿ ಗಟ್ಟಿಯಾಗಿ ಹಸಿರನ್ನು ತಬ್ಬಿಕೊಂಡು ಮಲಗಿರುವ ಪ್ರಕೃತಿ. ಬಿಸಿಲು ನಾಡಿನ ಪ್ರಕೃತಿಯ ತವರೂರು ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸಾಲೇಬೀರನಹಳ್ಳಿ ಕೆರೆ, ಚಂದ್ರಂಪಳ್ಳಿ ಜಲಾಶಯ ಮತ್ತು ಗೊಟ್ಟಂಗೊಟ್ಟ ಅರಣ್ಯ ಪ್ರದೇಶಗಳ ಸೌಂದರ್ಯ ವರ್ಣಿಸಲಸಾಧ್ಯ.

ಗೊಟ್ಟಂಗೊಟ್ಟ ಅರಣ್ಯ ಪ್ರದೇಶ

ಗೆಳೆಯ ಶಂಭುನ ಊರು ಸಿಕಾರಾ ಮೋತಕಪಳ್ಳಿಗೆ ಹೋಗಿದ್ದೆವು. ಕಲಬುರ್ಗಿಯಿಂದ ಕನಿಷ್ಠ 2ರಿಂದ3 ತಾಸಿನ ದಾರಿ. 75-80 ಕಿ.ಮೀ ಹೋದರೆ ಚಿಂಚೋಳಿ. ಅಲ್ಲಿಂದ ಮುಂದೆ ಆತನ ಊರು. ಯೋಜನೆಯಂತೆ ಬೆಳಿಗ್ಗೆ 8ಕ್ಕೆ ಬುತ್ತಿ ಗಂಟು ಮತ್ತು ನೀರಿನ ಬಾಟಲಿನೊಂದಿಗೆ ತಯಾರಾಗಿ ಗಾಡಿ ಏರಿದೆವು. ಅಲ್ಲಿಂದ 25-30 ಕಿ.ಮೀ ದಾರಿ ಕ್ರಮಿಸಿದ ನಂತರ ಸಿಕ್ಕದ್ದು ರಾಜ್ಯದ ಅತಿ ದೊಡ್ಡ ಕೆರೆ ಎಂಬ ಖ್ಯಾತಿ ಹೊಂದಿರುವ ಸಾಲೇಬೀರನಹಳ್ಳಿ ಕೆರೆ. ಸುಮಾರು 65 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾದ ಕೆರೆ. ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ ಕೆರೆಯ ಸುತ್ತಲೂ ಎಲ್ಲಿ ಬೇಕೆಂದರಲ್ಲಿ ನೈಸರ್ಗಿಕವಾಗಿ ಬೆಳೆದ ಸೀತಾಫಲ ಮರದ ಹಣ್ಣುಗಳು ನಿರ್ಜನ ಪ್ರದೇಶಕ್ಕೆ ಬರುವ ಚಾರಣಿಗರ ಹಸಿವು ನೀಗಿಸುತ್ತವೆ.

ಅಲ್ಲಿಂದ ತುಮಕೊಟಾ, ನಾಗಇದಲಾಯಿ ಮತ್ತು ಕೊಳ್ಳೂರು ಗ್ರಾಮಗಳ ಮೇಲಿನಿಂದ ಚಂದ್ರಂಪಳ್ಳಿ ಜಲಾಶಯದತ್ತ ಸಾಗಿದೆವು. ಚಂದ್ರಂಪಳ್ಳಿ ಜಲಾಶಯದ ನೀರಿನಲ್ಲಿ ಸ್ವಲ್ಪ ಸಮಯ ಕಲ್ಲುಗಳ ಮೇಲೆ ಕಲ್ಲು ಜೋಡಿಸುತ್ತ, ಅದರೊಟ್ಟಿಗೆ ಒಂದೆರೆಡು ಸೆಲ್ಫಿ ಕ್ಲಿಕ್ಕಿಸಿಕೊಂಡು ಮುಂದೆ ಸಾಗುವಷ್ಟರಲ್ಲಿ ಸಮಯ ಮಧ್ಯಾಹ್ನ 1 ಗಂಟೆ ಆಗಿತ್ತು. ಮಾರ್ಗ ಮಧ್ಯೆ ಬೈ ಟು ಟೀ ಕುಡಿದು ಮತ್ತೆ ಮುಂದಿನ ಪಯಣಕ್ಕೆ ಅಣಿಯಾದೆವು.

ADVERTISEMENT

ಮರಳಿ ಕೊಳ್ಳೂರು ಗ್ರಾಮದ ಮೇಲೆ ಹಾದು ಮುಂದೆ ಸಾಗಿದಾಗ ಕರ್ನಾಟಕದ ಗಡಿ ದಾಟಿ ಆಂಧ್ರ ಪ್ರದೇಶದ ಕುಸರಂಪಳ್ಳಿಗೆ ಪದಾರ್ಪಣೆ ಮಾಡಿದ್ದೆವು. ಮುಂದೆ ಸಿಕ್ಕದ್ದು ಗೌಸಾಬಾದ್ ತಾಂಡಾ. ಅಲ್ಲಿದ್ದ ಜನರಲ್ಲಿ ಗೊಟ್ಟಂಗೊಟ್ಟಕ್ಕೆ ಹೋಗುವ ವಿಳಾಸ ಕೇಳಿದಾಗ, ಔರಂಗಾನಗರ ಗುಂಡಪಲ್ಲಿ ಕ್ರಾಸ್ ದಾಟಿಕೊಂಡು ಬಲಕ್ಕೆ ಹೋಗಲು ತಿಳಿಸಿದರು. ಆದರೆ ಮುಂದೆ ಹೋದಾಗ ದಾರಿ ತಪ್ಪಿ ನೀಲಗಿರಿಯ ತೋಪಿನ ನಡುವಿನ ಬೆಟ್ಟದಲ್ಲಿದ್ದೆವು.

ಗುಡ್ಡಗಾಡು ಕಲ್ಲುಮುಳ್ಳಿನ ಇಕ್ಕೆಲಗಳಲ್ಲಿ ಜನ ಸಂಚರಿಸಿದ ಯಾವ ಗುರುತೂ ಕಾಣಲಿಲ್ಲ. ನಮಗಿಂತ ಎತ್ತರಕ್ಕೆ ಬೆಳೆದ ಗಿಡ-ಗಂಟಿ, ನೀಲಗಿರಿ ಮರಗಳು. ಮುಂದೆ ವನ್ಯ ಜೀವಿ ಧಾಮವಿರುವುದನ್ನು ಕೇಳಿದ್ದ ನಮಗೆ ಅರೇ ಕ್ಷಣ ಭಯವಾಗಿದ್ದು ಸುಳ್ಳಲ್ಲ. ಮೊಬೈಲ್ ನೆಟ್‌ವರ್ಕ್‌ ಇಲ್ಲದ ಜಾಗದಲ್ಲಿ ಕಾಲು ದಾರಿಗಳಲ್ಲೆ ನಡೆದೆವು. ಅಷ್ಟೆಲ್ಲಾ ಸುತ್ತಿ ದರೂ ಮುಂದಿನ ಊರು ಸಿಗಲಿಲ್ಲ. ಗೊಂದಲದಲ್ಲೆ ಮುನ್ನಡೆದವರಿಗೆ ಅಂಥ ಕಾಡಿನ ನಡುವೆ ಕಿವಿಗೆ ಇಯರ್‌ಫೋನ್‌ ಹಾಕಿಕೊಂಡು ಕುಳಿತಿದ್ದ ಹುಡುಗನೊಬ್ಬ ಕಣ್ಣಿಗೆ ಬಿದ್ದ. ಆತನಲ್ಲಿ ಗೊಟ್ಟಂಗೊಟ್ಟಾಕ್ಕೆ ಹೋಗುವ ಮಾರ್ಗ ಕೇಳಿ ಮುಂದೆ ಹೋದೆವು. ಅಲಿಂದ ಮುಂದೆ ಅರ್ಧ ಗಂಟೆಯಲ್ಲಿ ಗೊಟ್ಟಂಗೊಟ್ಟದ ದುರ್ಗಾ ಮಂದಿರ ತಲುಪಿದೆವು. ಮುಂದೆ ಹನುಮಾನ ಮಂದಿರ. ಅದನ್ನು ದಾಟಿಕೊಂಡ ಬಲ ಬದಿಯಲ್ಲಿ ಹೋದಾಗ ಕೊನೆಯದಾಗಿ ಗೊಟ್ಟಂಗೊಟ್ಟ ಬಕ್ಕಂಪ್ರಭು ದೇವಸ್ಥಾನ ತಲುಪಿದೆವು.

ಐತಿಹಾಸಿಕ ಕುರುಹು ಹೊಂದಿರುವ ಗೊಟ್ಟಂಗೊಟ್ಟ ಕರ್ಕನಳ್ಳಿ ಬಕ್ಕಂಪ್ರಭುಗಳ ತಪೋಭೂಮಿ. ನೈಸರ್ಗಿಕ ತಾಣ ಅಮೃತಗುಂಡ, ಚಂದ್ರಂಪಳ್ಳಿ ಜಲಾಶಯದ ಹಿನ್ನೀರಿಗೆ ಹೊಂದಿಕೊಂಡಿರುವ ಇದು ಸಮುದ್ರಮಟ್ಟದಿಂದ ಸುಮಾರು 600 ಮೀಟರ್ ಎತ್ತರದಲ್ಲಿದೆ. ವನ್ಯಜೀವಿ ಧಾಮದ ಅರಣ್ಯಾಧಿಕಾರಿಗಳು ಇಲ್ಲಿ ದೈವೀವನ ನಿರ್ಮಿಸಿದ್ದು ಹೈದರಾಬಾದ್ ಕರ್ನಾಟಕ ಭಾಗದ ಏಕೈಕ ಯಶಸ್ವಿ ಧಾರ್ಮಿಕ ಉದ್ಯಾನ ಇದಾಗಿದೆ. ಈ ಬಕ್ಕಂಪ್ರಭು ದೇವಸ್ಥಾನದ ಅಂಚಿಗೆ ಮೇಲಿನಿಂದ ಕೆಳಗೆ ಚಾಚಿಕೊಂಡ ಕಂದಕಗಳಿವೆ. ಅಲ್ಲಿಂದ ಕೆಳಗೆ ಹೋದರೆ ಪಾಂಡವರು ಅಜ್ಞಾತವಾಸದಲ್ಲಿದಾಗ ಭೀಮ ಕೀಚಕನನ್ನು ವಧೆ ಮಾಡಿದ ಸ್ಥಳ ಇದೆ. ಈಗಲೂ ಅಲ್ಲಿ ಪಾಂಡವರ ಕಲ್ಲಿನ ಮೂರ್ತಿಗಳು ಮತ್ತು ಸಿದ್ದರ ಗುಂಡ ಎಂಬ ಚಿಕ್ಕ ನೀರಿನ ಬುಗ್ಗೆ ಇದೆ ಎಂಬುದು ತಿಳಿಯಿತು.

ಚಿಂಚೋಳಿಯ ಸಾಲೇಬೀರನಹಳ್ಳಿ ಕೆರೆಯ ನೋಟ

ಅಲ್ಲಿಗೆ ಮತ್ತೆ ನಮ್ಮ ಪಯಣಕ್ಕೆ ಹುರುಪು ಸಿಕ್ಕಿತು. ದೇವಸ್ಥಾನದ ಪಕ್ಕದಲ್ಲಿದ್ದ ಕಾಲು ದಾರಿಯಲ್ಲಿ ಘಟ್ಟ ಪ್ರದೇಶವನ್ನು ಇಳಿದಾಗ ಅಲ್ಲಿ ಈ ಹಿಂದೆ ನಾವು ಮೊದಲು ಕಂಡಿದ್ದ ಸಾಲೇಬೀರನಹಳ್ಳಿ ಕೆರೆ ನೀರು ಸಣ್ಣ ನದಿಯಂತೆ ಹರಿಯುತ್ತ ಸಾಗಿತ್ತು. ದೂರದಿಂದ ಸಣ್ಣಗೆ ಕಂಡಿದ್ದ ನೀರು ಸಮೀಪ ಹೋದಾಗ ಅಗಲವಾಗಿ ಹರಿಯುತ್ತಿತ್ತು. ಈ ಬದಿಯಿಂದ ಆ ಬದಿಗೆ ದಾಟಲು ನಡುವೆ ಎರಡು ಒಣಗಿದ ಮರಗಳನ್ನು ಹಾಕಿದ್ದರು. ಕಾಲಿನಲ್ಲಿದ್ದ ಚಪ್ಪಲಿ, ಬೂಟುಗಳನ್ನು ಕೈಗೆ ಏರಿಸಿಕೊಂಡು ನಿಧಾನವಾಗಿ ವಾಲಾಡುವ ಮರದ ಕಟ್ಟಿಗೆಗಳ ಮೇಲೆ ದಾಟಿದೆವು.

ಅಷ್ಟೊತ್ತಿಗಾಗಲೇ ಹೊಟ್ಟೆ ಹಸಿದು ಕುಣಿಯತೊಡಗಿತ್ತು. ಅಲ್ಲಿಗೆ ಪಾಂಡವರ ಮೂರ್ತಿಗಳನ್ನು ನೋಡಬೇಕೆಂಬ ಇಚ್ಛೆ ಮಾಯವಾಗಿ ಹೊಟ್ಟೆಗೆ ಒಂದಿಷ್ಟು ಅನ್ನ ಬಿದ್ದರೆ ಸಾಕು ಎಂಬಂತಾಗಿತ್ತು. ಈ ಎಲ್ಲ ಪಯಣದ ನಡುವೆ ನಾವು ದಟ್ಟ ಕಾನನದ ನಡುವೆ ಪುಟ್ಟ ಮಗುವಿನಂತೆ ನಿಂತಿದ್ದೆವು. ಸುತ್ತ ಎತ್ತ ನೋಡಿದರೂ ಬೆಟ್ಟ. ಹುರುಪಿನಲ್ಲಿ ಸುಮಾರು ಏಳೆಂಟು ಕಿ.ಮೀ ಬಂದಿದ್ದೆವು. ಮಧ್ಯಾಹ್ನ 3.30ರ ಸಮಯ ಅಲ್ಲೆ ಪ್ರಕೃತಿ ನಿರ್ಮಿತ ಹಂದರದ ಕೆಳಗೆ ಬುತ್ತಿಗಂಟು ಬಿಚ್ಚಿ, ಪಕ್ಕದಲ್ಲಿದ್ದ ಮುತ್ತುಗದ ಮರದಿಂದ ನಾಲ್ಕೈದು ಎಲೆಗಳನ್ನು ಕಿತ್ತು ಊಟಕ್ಕೆ ಕುಳಿತೆವು. ಶಂಭೂನ ತಾಯಿ ಕಟ್ಟಿಕೊಟ್ಟಿದ್ದ ಜೋಳದ ರೊಟ್ಟಿ ಮತ್ತು ಕಾರಬ್ಯಾಳಿ ಪಲ್ಯವನ್ನು ಉಂಡು ಹೊಟ್ಟೆ ತುಂಬಿಸಿಕೊಂಡು ಮರಳಿ ಬೆಟ್ಟದ ತುದಿ ತಲುಪಿದೆವು. ಮೇಲೆ ಬೆಟ್ಟದ ತುದಿ ತಲುಪಿ ಮರಳಿ ನಾವು ಕ್ರಮಿಸಿದ ದಾರಿ ಕಂಡಾಗ ಸ್ವತಃ ನಾವೇ ಬೆರಗಾದೆವು. ಹುಡುಗಾಟವಾಡುತ್ತ ಕನಿಷ್ಠ 7ರಿಂದ 8 ಕಿ.ಮೀ ನಷ್ಟು ಬೆಟ್ಟ ಇಳಿದು ಏರಿದ್ದೆವು.

ಹಸಿರಿನಿಂದ ಕೂಡಿದ ಚಿಂಚೋಳಿಯ ಈ ಅರಣ್ಯ ಪ್ರದೇಶ ಯುವಕರ ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳ. ಗೆಳೆಯರ ತಂಡದೊಂದಿಗೆ ಸಕಲ ಸಿದ್ಧತೆಯೊಂದಿಗೆ ಟ್ರೆಕ್ಕಿಂಗ್ ಹೋಗಬಹುದು. ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ತೆರಳಿದರೆ ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ.

ಹೋಗುವುದು ಹೇಗೆ ಅಲ್ಲಿಗೆ?

ಕಲಬುರ್ಗಿಯಿಂದ ಸುಮಾರು 100–110 ಕಿ.ಮೀ ದೂರ. ಚಿಂಚೊಳಿಯವರೆಗೆ ಸರ್ಕಾರಿ ಬಸ್‌ನ ವ್ಯವಸ್ಥೆ ಇವೆ. ಅಲ್ಲಿಂದ ಮುಂದೆ ಸ್ವಂತ ವಾಹನಗಳಿದ್ದರೆ ಉತ್ತಮ. ಮಾರ್ಗ ಮಧ್ಯ ಹಸಿವು ತಣಿಸಿಕೊಳ್ಳಲು ಜೊತೆಗೆ ಆಹಾರ ಕೊಂಡೊಯ್ಯುವುದು ಸೂಕ್ತ. ಅರಣ್ಯ ಪ್ರದೇಶವಿರುವ ಕಾರಣ ಪ್ರಥಮ ಚಿಕಿತ್ಸಾ ವ್ಯವಸ್ಥೆ ಮಾಡಿಕೊಂಡು ಹೋಗುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.