ADVERTISEMENT

ನಿಗೂಢ ಲೋನಾರ್ ಕುಳಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 19:30 IST
Last Updated 30 ಜನವರಿ 2019, 19:30 IST
ಲೋನಾರ ಕುಳಿ
ಲೋನಾರ ಕುಳಿ   

2016 ರಲ್ಲಿ ಉತ್ತರಖಂಡದ ‘ವ್ಯಾಲಿ ಆಫ್ ಫ್ಲವರ್‘ ಚಾರಣಕ್ಕೆ ಹೋದಾಗ ಮಹಾರಾಷ್ಟ್ರದ ಚಾರಿಣಿಗರೊಬ್ಬರ ಪರಿಚಯವಾಯಿತು. ಅವರು ಮಹಾರಾಷ್ಟ್ರದ ಬಾಲ್ದಾನಿಗೂಢ ಲೋನಾರ್ ಸರೋವರದ ಬಗ್ಗೆ ವಿವರಿಸಿದರು. ಆ ತಾಣದ ಬಗ್ಗೆ ಕೇಳಿದ ಮೇಲೆ ಅಲ್ಲಿಗೆ ಹೋಗಲೇಬೇಕು ಎಂದು ಮನಸ್ಸಾಯಿತು. ಡಿಸೆಂಬರ್ 2018ರಂದು ಲೋನಾರ್‌ಗೆ ಹೋಗುವ ಅವಕಾಶ ಒದಗಿ ಬಂತು.‌ ಲೋನಾರ್‌ ಸರೋವರ, ಮಹಾರಾಷ್ಟ್ರದ ಬಾಲ್ದಾನ ಜಿಲ್ಲೆಯ ಲೋನಾರ್‌ ಪಟ್ಟಣದಿಂದ ಹೊರವಲಯದಲ್ಲಿದೆ. ಇದನ್ನು ಲೋನಾರ್‌ ಸರೋವರ ಅಥವಾ ಲೋನಾರ್ ಕುಳಿ ಎನ್ನುತ್ತಾರೆ. ಇದು ಔರಂಗಾಬಾದ್‌ನಿಂದ 140ಕಿ.ಮೀದೂರದಲ್ಲಿದೆ. ಇಲ್ಲಿಗೆ ಔರಂಗಾಬಾದ್ ಮೂಲಕವೇ ಹೋಗಬೇಕು.

ನಾನು ಸಂಡೂರಿನಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಧ್ಯಾಹ್ನ 2 ಗಂಟೆಗೆ ಹೊರಟು ಹೊಸಪೇಟೆ ಮಾರ್ಗವಾಗಿ ಮಾರನೆಯ ದಿನ ಬೆಳಿಗ್ಗೆ 8 ಗಂಟೆಗೆ ಔರಂಗಬಾದ್‌ ತಲುಪಿದೆ. ಒಟ್ಟು 800 ಕಿ.ಮೀ ದೂರ. ಅಲ್ಲಿಂದ ಬಸ್‌ ಹಿಡಿದು 140ಕಿ.ಮೀ, ನಾಲ್ಕು ಗಂಟೆ ಪ್ರಯಾಣಸಿದ ಮೇಲೆ ಲೋನಾರ್ ತಲುಪಿದೆ. ಆಗ ಸಂಜೆ5ಗಂಟೆಗೆ. ರೆಸಾರ್ಟ್‌ ಒಂದರಲ್ಲಿ ವಿಶ್ರಾಂತಿ ಪಡೆದೆ. ಬೆಳಿಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದು ರೆಸಾರ್ಟಿನಿಂದ ಕೆಲವೇ ಮೀಟರ್ ಅಂತರದಲ್ಲಿರುವ ಲೋನಾರ್ ಸರೋವರಕ್ಕೆ ಹೋಗುವ ಕಾಲುದಾರಿ ಹಿಡಿದು ಚಾರಣ ಶುರು ಮಾಡಿದೆ.

ಉಲ್ಕಶಿಲೆಯಿಂದಾದ ಕುಳಿ

ADVERTISEMENT

ಅಂದಾಜು55ಸಾವಿರ ವರ್ಷಗಳ ಹಿಂದೆ ಬೃಹತ್ ಗಾತ್ರ ಮತ್ತು ಭಾರದ ಉಲ್ಕಶಿಲೆ ಭೂಮಿಗೆ ಅಪ್ಪಳಿಸಿದ್ದರಿಂದ ನೈಸರ್ಗಿಕವಾಗಿ ರೂಪುಗೊಂಡಿರುವ ಸರೋವರ ಲೋನಾರ್. ಕಂದು ಬಣ್ಣದ ಅಗ್ನಿಶಿಲೆಯಿಂದ ರೂಪುಗೊಂಡ ಪ್ರಪಂಚದ ಏಕೈಕ ಕುಳಿ ಇದು. ಉಲ್ಕಶಿಲೆಯು ಅಪ್ಪಳಿಸಿದ ಪರಿಣಾಮದಿಂದಾಗಿ ಭೂಮಿಯಲ್ಲಿ1.8 ಕಿ.ಮೀ ಅಗಲ ಹಾಗೂ150ಮೀ. ಆಳವಾದ ಬೃಹತ್ ರಂಧ್ರ ಉಂಟಾಗಿದೆ. ಕಾಲಕ್ರಮೇಣ ಸರೋವರದ ಸುತ್ತ ಕಾಡು ಬೆಳೆದಿದೆ. ಲೋನಾರ್ ಕುಳಿ ಮೇಲಿನಿಂದ 6ಕಿ. ಮೀ ಹಾಗೂ ತಳದಿಂದ4ಕಿ.ಮೀ ಸುತ್ತಳತೆ ಇದೆ. ಕೇಂದ್ರ ಭಾಗದಲ್ಲಿ ಉಪ್ಪಿನಂಶ ಮತ್ತು ಸೋಡಾ ಮಿಶ್ರಿತ ನೀರು ಇದೆ. 1823ರಲ್ಲಿ ಸಿ.ಜೆ.ಇ ಅಲೆಕ್ಸಾಂಡರ್‌ ಎಂಬ ಬ್ರಿಟಿಷ್ ಅಧಿಕಾರಿ ಲೋನಾರ್ ಕುಳಿಯನ್ನು ಮೊದಲು ಗುರುತಿಸಿದ್ದರು. ಈ ಸರೋವರದ ನೀರು ಸಮುದ್ರದ ನೀರಿಗಿಂತ 7ಪಟ್ಟು ಹೆಚ್ಚು ಉಪ್ಪು. ನಾಸಾ ವಿಜ್ಞಾನಿಗಳು ಹಾಗೂ ಜಿಯೋಗ್ರಾಫಿಕಲ್ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳಿಗೆ ಲೋನಾರ್ ಸರೋವರದ ನೀರಿನಲ್ಲಿ ಕ್ಷಾರೀಯ ಹಾಗೂ ಉಪ್ಪಿನಾಂಶ ಒಟ್ಟಿಗೆ ಹೇಗೆ ಇರಲು ಸಾಧ್ಯ? ಅಲ್ಲಿಸಿಗುವ ಸೂಕ್ಷ್ಮಣು ಜೀವಿಗಳು ಪ್ರಪಂಚದಲ್ಲಿ ಬೇರೆ ಸ್ಥಳಗಳಲ್ಲಿ ಯಾಕೆ ಕಂಡುಬರುವುದಿಲ್ಲ?ಕುಳಿಯ ಕೆಲಪ್ರದೇಶಗಳಲ್ಲಿ ಮ್ಯಾಗ್ನೆಟಿಕ್ ಕಂಪಾಸ್ ಯಾಕೆ ಕೆಲಸ ಮಾಡುವುದಿಲ್ಲ? ಸರೋವರದ ಕೆಳಭಾಗದಲ್ಲಿ ಏನಿರಬಹುದು? ಎಂಬ ಪ್ರಶ್ನೆಗಳು ನಿಗೂಢವಾಗಿ ಕಾಡುತ್ತಿವೆ.

ಪುರಾಣದಲ್ಲೂ ಉಲ್ಲೇಖ

ಸ್ಕಂದ ಪುರಾಣ ಹಾಗೂ ಪದ್ಮ ಪುರಾಣದಲ್ಲಿಲೋನಾರ್ ಸರೋವರದ ಉಲ್ಲೇಖವಿದೆ. ಇಲ್ಲಿ ನೆಲೆಸಿದ್ದ ಲೋನಾಸುರ ಎಂಬ ರಾಕ್ಷಸನಿಂದ ಈ ಹೆಸರು ಬಂದಿದೆ. ಲೋನಾರ್ ಸರೋವರದ ಸುತ್ತ ರಾಷ್ಟ್ರಕೂಟರು ಹಾಗೂ ಚಾಲುಕ್ಯರು ಕಟ್ಟಿದ ಪುರಾತನ ವಿಷ್ಣುಮಂದಿರ,ವಾಘ ಮಹದೇವ್,ಮೋರಾ ಮಹದೇವ್,ಮುಂಗ್ಲಿಯಾಚ ಮಂದಿರ,ಕಮಲಜಾ ದೇವಿಯ ಮಂದಿರಗಳಿವೆ. ಸರೋವರದಿಂದ ಸ್ವಲ್ಪ ದೂರದಲ್ಲಿ ಚಾಲುಕ್ಯರು6ನೇ ಶತಮಾನದಲ್ಲಿ ಕಟ್ಟಿದ ದೈತ್ಯ ಸುದನ ಗುಡಿ ಇದೆ. ಗುಡಿಯ ಒಳಗಡೆ ವಿಷ್ಣು ಲೋನಾಸುರನ ಮೇಲೆ ನಿಂತಿರುವ ಮೂರ್ತಿ ಇದೆ. ಆ ಗುಡಿಯ ಕೆತ್ತನೆ ಖಜುರಾಹೊ ದೇಗುಲಗಳ ಮೇಲಿನ ಕೆತ್ತನೆಗಳನ್ನು ಹೋಲುತ್ತದೆ.

ಚಾರಣ ಮಾಡುವಾಗ ಎಚ್ಚರ

ಕುಳಿಯ ತಳದಲ್ಲಿ ಚಾರಣ ಮಾಡುವಾಗ ಸ್ವಲ್ಪ ಎಚ್ಚರದಿಂದಿರಬೇಕು. ಹೂಳು ನೆಲವಿರುವುದರಿಂದ ಸರೋವರದ ಹತ್ತಿರ ನಡೆದಾಡುವುದು ಸ್ವಲ್ಪ ಅಪಾಯಕಾರಿ. ನಮ್ಮ ಕಾಲುಗಳು ಹೂಳು ನೆಲದಲ್ಲಿ ಸಿಕ್ಕಿಹಾಕಿಕೊಳ್ಳುವ ಸಂಭವವಿದೆ. ಫೋಟೊ ತೆಗೆಯಲು ಸರೋವರದಹತ್ತಿರ ಹೋದ ನನ್ನ ಕಾಲು ಎರಡು ಬಾರಿ ಹೂಳು ನೆಲದಲ್ಲಿ ಸಿಕ್ಕಿಹಾಕಿಕೊಂಡವು.

ಬೆಳಿಗ್ಗೆ ಚಾರಣ ಶುರು ಮಾಡಿದರೆ ಸಂಜೆಯಾಗುವಷ್ಟರಲ್ಲಿ ಹಿಂತಿರುಗಬಹುದು. ಲೋನಾರ್ ಸರೋವರದ ಚಾರಣ ಮುಗಿದ ಮೇಲೆ ಆ ಪ್ರದೇಶದ ವಿಸ್ಮಯ,ನಿಗೂಢ ನೋಡಿದ ನಂತರ ನನ್ನ ಮನಸ್ಸಿನಲ್ಲಿ ಏನೋ ಒಂಥರ ತೃಪ್ತಿ ಹಾಗೂ ಸಂತೋಷ. ಸಂಜೆ ಲೋನಾರ್‌ನಿಂದ ಅಜಂತ-ಎಲ್ಲೋರ ನೋಡಲು ಔರಂಗಾಬಾದ್ ಕಡೆಗೆ ಹೊರಟೆ. ನೀವು ಔರಂಗಾಬಾದ್‌ ಕಡೆಗೆ ಪ್ರವಾಸ ಕೈಗೊಂಡರೆ, ಈ ವಿಸ್ಮಯಕಾರಿ ಲೋನಾರ್ ಸರೋವರವನ್ನು ನೋಡಿಕೊಂಡು ಬರಬಹುದು.

ಮಳೆ– ಚಳಿ ಸೂಕ್ತ ಕಾಲ

ಲೋನಾರಿನಲ್ಲಿ ಬೇಸಿಗೆಯಲ್ಲಿ 40 ಡಿಗ್ರಿ ಸೆಂ. ಗೂ ಅಧಿಕ ತಾಪಮಾನ. ಹಾಗಾಗಿ ಮಳೆಗಾಲ ಮತ್ತು ಚಳಿಗಾಲ ಲೋನಾರ್ ನೋಡಲು ಸೂಕ್ತ ಸಮಯ. ಮಳೆಗಾಲದಲ್ಲಿ ಲೋನಾರ್ ಸರೋವರದ ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ, ಚಳಿಗಾಲದಲ್ಲಿ ವಲಸೆ ಪಕ್ಷಿಗಳು ಹೆಚ್ಚಾಗಿ ಕಾಣಸಿಗುತ್ತವೆ. ಲೋನಾರ್ ಸರೋವರ ಪಕ್ಷಿ ಪ್ರೇಮಿಗಳ ಸ್ವರ್ಗ. ಇಲ್ಲಿ ಕಪ್ಪು-ರೆಕ್ಕೆಯ ಸ್ಟಿಲ್ಟ್ಸ್, ಬ್ರಾಹ್ಮಿನಿ ಬಾತುಕೋಳಿಗಳು, ಗ್ರಿಬ್ಸ್, ಶೆಲ್ಡಾಕ್ಸ್, ಶೊವೆಲ್ಲರ್ಸ್, ಟೀಲ್ಸ್, ಹೆರಾನ್ಸ್, ಕೆಂಪು - ವ್ಯಾಟಲ್ಡ್ ಲ್ಯಾಪ್ವಿಂಗ್ಸ್, ರೋಲರ್ಸ್, ನೀಲಿ ಜೇಸ್, ಬಾರ್ನ್ ಗೂಬೆ, ಪರಕೀಟ್, ಪೀಫೌಲ್, ಲಾರ್ಕ್, ಟೇಲರ್ ಬರ್ಡ್, ರಾಬಿನ್ ಮತ್ತು ಸ್ವಾಲೋಗಳು ಹಾಗೂ ಇನ್ನು ಹಲವು ಸ್ಥಳೀಯ ಮತ್ತು ವಲಸೆ ಪಕ್ಷಿಗಳ ಪ್ರಬೇಧಗಳನ್ನು ಗುರುತಿಸಬಹುದು. ಸರೋವರದ ಕಾಡಿನಲ್ಲಿ ಜಿಂಕೆ, ಲಂಗೂರ್, ಚಿರತೆ, ಕತ್ತೆ ಕಿರುಬ, ಮುಂಗುಸಿ, ಹಾವು, ಇನ್ನು ಹಲವಾರು ವಿವಿಧ ಕಾಡು ಪ್ರಾಣಿಗಳು ಹಾಗೂ ಜೀವ ಸಂಕುಲಗಳು ಕಾಣಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.