ADVERTISEMENT

ರಾಂಚೊ ಮಿಂಚಿದ ಶಾಲೆಯಲ್ಲಿ

ಹೇಮಮಾಲಾ ಬಿ.
Published 15 ಮೇ 2019, 19:45 IST
Last Updated 15 ಮೇ 2019, 19:45 IST
ರಾಂಚೊ
ರಾಂಚೊ   

‘ನಿಮಗೆ ಡ್ರೂಕ್‌ ಪದ್ಮಾ ಕಾರ್ಪೊ ಸ್ಕೂಲ್‌ ಗೊತ್ತಾ?’ ಅಂದರೆ ‘ಇಲ್ಲ’ ಎಂಬಂತೆ ತಲೆಯಾಡಿಸುತ್ತೇವೆ. ಅದೇ ‘ರಾಂಚೊ ಸ್ಕೂಲ್ ಗೊತ್ತಾ’ ಅಂದರೆ ತಕ್ಷಣವೇ ‘ಓಹ್, ಗೊತ್ತು. ಅದು ತ್ರೀ ಈಡಿಯಟ್ಸ್ ಸಿನಿಮಾದಲ್ಲಿದೆ. ಅದು ಲೇಹ್‌ನಲ್ಲಿರುವ ಸ್ಕೂಲ್ ಅಲ್ವಾ’ ಎಂದು ಉದ್ಘರಿಸುತ್ತೇವೆ. ಅಷ್ಟೇ ಅಲ್ಲ, ‘ರಾಂಚೊ’ ಪಾತ್ರಧಾರಿ ಅಮೀರ್ ಖಾನ್, ಆತನ ಕಾಲೇಜು ಜೀವನದ ವಿವಿಧ ಅವಾಂತರಗಳು, ಪೇಚಿಗೆ ಸಿಕ್ಕಿಹಾಕಿಕೊಂಡು ತಪ್ಪಿಸಿಕೊಳ್ಳುವ ಜಾಣ್ಮೆ, ಕಿಲಾಡಿತನದ ನಡುವೆಯೂ ಪರೋಪಕಾರ ಮಾಡುವ ಆ ಪಾತ್ರ ನೆನಪಿಸಿಕೊಳ್ಳುತ್ತೇವೆ. ಇಷ್ಟೆಲ್ಲ ನೆನಪುಗಳೊಂದಿಗೆ ಜನಮನ್ನಣೆ ಗಳಿಸಿದ ‘ತ್ರೀ ಈಡಿಯಟ್ಸ್’ ಚಿತ್ರದಲ್ಲಿ ತೋರಿಸುವ ಹಿಮಾಲಯದ ತಾಣಗಳು, ಸ್ಫಟಿಕದಷ್ಟು ತಿಳಿಯಾಗಿರುವ ಪ್ಯಾಂಗೋಂಗ್ ಸರೋವರದ ದೃಶ್ಯಗಳು ಮನಸ್ಸಿನಲ್ಲಿ ಮೆರವಣಿಗೆ ಹೊರಡುತ್ತವೆ.

ನಾವು ಕಳೆದ ಜೂನ್‌ನಲ್ಲಿ ಲೇಹ್ ನಗರಕ್ಕೆ ಪ್ರವಾಸ ಹೋಗಿದ್ದೆವು. ಆ ಪ್ರವಾಸದ ಭಾಗವಾಗಿ ‘ತ್ರೀ ಈಡಿಯಟ್ಸ್‌’ ಸಿನಿಮಾದ ಕೆಲವು ಭಾಗಗಳನ್ನು ಚಿತ್ರೀಕರಿಸಿದ್ದ ‘ಡ್ರೂಕ್‌ ಪದ್ಮಾ ಕಾರ್ಪೋ ಸ್ಕೂಲ್‌’ಗೆ ಭೇಟಿ ನೀಡಿದ್ದೆವು.

ಆ ಸಿನಿಮಾದಲ್ಲಿ ತೋರಿಸಿರುವಂತೆ, ಇದೊಂದು ಅಪರೂಪದ ತಾಣ. ಭಾರತದ ಭಾಗವಾಗಿದ್ದರೂ, ತನ್ನ ವಿಶಿಷ್ಟ ಭೌಗೋಳಿಕತೆ, ಹವಾಮಾನ ಹಾಗೂ ಟಿಬೆಟ್‌ನ ಸಾಮೀಪ್ಯದಿಂದಾಗಿ ಈ ಭಾಗದಲ್ಲಿ ಟಿಬೆಟಿನ ಸಂಸ್ಕೃತಿ ಎದ್ದು ಕಾಣುತ್ತದೆ.

ADVERTISEMENT

ಸಿನಿಮಾ ಬರುವವರೆಗೂ ಕೇವಲ ಸಾಮಾನ್ಯ ಶಾಲೆಯಾಗಿದ್ದ ಡ್ರೂಕ್‌ ಪದ್ಮಾ ಕಾರ್ಪೊ ಸ್ಕೂಲ್‌, ಈಗ ಲೇಹ್‌–ಲಡಾಖ್‌ ಭಾಗದ ಪ್ರವಾಸಿ ತಾಣಗಳಲ್ಲೊಂದಾಗಿದೆ. ಶಾಲಾ ಅವಧಿಯ ನಂತರ, ಇಲ್ಲಿಗೆ ಬರುವ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ಕೊಡುತ್ತಾರೆ. ನಾವು ಶಾಲೆ ಅವಧಿ ಮುಗಿದ ಮೇಲೆ, ಅಲ್ಲಿಗೆ ಭೇಟಿ ನೀಡಿದೆವು.

‘ತ್ರೀ ಈಡಿಯಟ್ಸ್’ ಸಿನಿಮಾದಲ್ಲಿ ಒಬ್ಬ ಪಾತ್ರಧಾರಿಯು ಜಲಬಾಧೆ ತೀರಿಸಿಕೊಳ್ಳಲು ಗೋಡೆಯ ಬಳಿ ಹೋದಾಗ, ಶಾಲಾಮಕ್ಕಳು ಅವನನ್ನು ಎಚ್ಚರಿಸುತ್ತಾರೆ. ಆತ ಕಿವಿಗೊಡದಾಗ, ತಮ್ಮ ಉಪಕರಣವೊಂದರ ಸಹಾಯದಿಂದ ಮಹಡಿ ಮೇಲಿಂದಲೇ ವಯರ್ ಅನ್ನು ಕೆಳಕ್ಕಿಳಿಸಿ ನಟನಿಗೆ ‘ವಿದ್ಯುತ್ ಶಾಕ್’ ಕೊಡುವ ಸನ್ನಿವೇಶವನ್ನು ಇಲ್ಲಿನ ಶಾಲೆಯ ಗೋಡೆಯೊಂದರ ಸಮೀಪ ಚಿತ್ರೀಕರಿಸಲಾಗಿದೆ. ಅದಕ್ಕೆ ‘ರಾಂಚೊ ಗೋಡೆ’ ಎಂದು ಹೆಸರಿಟ್ಟಿದ್ದಾರೆ. ಆ ಗೋಡೆಯ ಮೇಲೆ ಸಿನಿಮಾಕ್ಕೆ ಸಂಬಂಧಿಸಿದ ವರ್ಣಚಿತ್ರಗಳನ್ನು ಮೂಡಿಸಿದ್ದಾರೆ. ಪ್ರವಾಸಿಗರು ಈ ಗೋಡೆಯ ಹಿನ್ನೆಲೆಯಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಇದು ಪ್ರವಾಸಿಗರ ಫೋಟೊ ಶೂಟ್ ಗೋಡೆಯಾಗಿಬಿಟ್ಟಿದೆ.
ಅಂದ ಹಾಗೆ ಶಾಲೆಯ ಪಕ್ಕದಲ್ಲೇ ‘ರಾಂಚೊ ಕೆಫೆ’ ಇದೆ. ‘ರಾಂಚೊ’ ಹೆಸರಿನ ಟಿ- ಶರ್ಟ್, ಪುಸ್ತಕ ಇತ್ಯಾದಿ ಮಾರಾಟಕ್ಕೆ ಲಭ್ಯವಿವೆ. 2016 ನೇ ಇಸವಿಯಲ್ಲಿ, ಉತ್ತಮ ಪರಿಸರ ನಿರ್ವಹಣೆಗಾಗಿ ಈ ಶಾಲೆಗೆ ಬಿಬಿಸಿ ಪ್ರತಿಷ್ಠಿತ ಪರಿಸರ ಪ್ರಶಸ್ತಿ ನೀಡಿ ಗೌರವಿಸಿದೆ.

‘ತ್ರೀ ಈಡಿಯೆಟ್ಸ್‘ ಸಿನಿಮಾ ಬರುವವರೆಗೂ ವರ್ಷಕ್ಕೆ ಸರಾಸರಿ ನಾಲ್ಕು ಲಕ್ಷದಷ್ಟಿತ್ತು ಪ್ರವಾಸಿಗರ ಸಂಖ್ಯೆ. ಆ ಸಿನಿಮಾ (2009 ರಲ್ಲಿ ಬಿಡುಗಡೆಯಾಗಿದ್ದು) ಬಂದ ಮೇಲೆ , ಪ್ರವಾಸಿಗರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಿದೆಯಂತೆ. ಈಗಲೂ ಹೆಚ್ಚುತ್ತಲಿದೆಯಂತೆ. ಒಂದು ಸಿನಿಮಾದಿಂದಾಗಿ ಸ್ಥಳೀಯ ಆರ್ಥಿಕತೆ, ವ್ಯಾವಹಾರಿಕ ಪ್ರಪಂಚವನ್ನೂ ಹಿಗ್ಗಿಸಿದೆ. ಇದೊಂದು ಸಂತಸದ ವಿಷಯ.

ಆದರೆ ಪ್ರವಾಸಿಗರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುವ ನೆಪದಲ್ಲಿ ಅಲ್ಲಲ್ಲಿ ಹೋಟೆಲ್‌ಗಳು, ಕೆಫೆಗಳು ಸ್ಥಳೀಯ ಪರಿಸರ ವ್ಯವಸ್ಥೆ ಹಾಳು ಮಾಡುತ್ತಿವೆ. ಆಧುನಿಕ ಜೀವನಶೈಲಿ ಸ್ಥಳೀಯ ನಾಗರಿಕತೆಗೆ ಧಕ್ಕೆಯನ್ನುಂಟುಮಾಡುತ್ತಿದೆ. ಪರಸ್ಪರ ಸಹಾಯ ಮಾಡುತ್ತಾ ಯಾಕ್, ಕುರಿಗಳನ್ನು ಮೇಯಿಸುತ್ತಾ, ಪರ್ವತ, ಕಣಿವೆಗಳಲ್ಲಿ ಹಾಡಿಕೊಂಡು ಕುಣಿದುಕೊಂಡು ನೆಮ್ಮದಿಯಾಗಿದ್ದ ಅಲ್ಪತೃಪ್ತ ಲಡಾಖಿಗಳು ಈಗ ಕುರುಡು ಕಾಂಚಾಣದ ಹಿಂದೆ ಹೋಗುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿರುವುದು ಕಳವಳಕಾರಿ ಅಂಶ .

ಅಂದ ಹಾಗೆ, ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರ ಹೆಚ್ಚಳ ಮತ್ತು ಅಶಿಸ್ತಿನಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆಯೆಂದು ಶಾಲೆಯ ಆವರಣಕ್ಕೆ ಪ್ರವಾಸಿಗರನ್ನು ಬಿಡದಿರಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ತಲುಪುವುದು ಹೇಗೆ?‌

ದೆಹಲಿಯಿಂದ ಲೇಹ್‌ಗೆ ವಿಮಾನ ಸಂಪರ್ಕವಿದೆ. ಕಾಶ್ಮೀರದ ಮೂಲಕ ರಸ್ತೆ ಪ್ರಯಾಣವೂ ಸಾಧ್ಯ. ಲಡಾಖ್ ಜಿಲ್ಲೆಯಲ್ಲಿ ವರ್ಷದ ಹೆಚ್ಚಿನ ಸಮಯವೂ ಚಳಿ ಇರುವುದರಿಂದ, ಪ್ರಯಾಣಿಸುವ ಮೊದಲು ಸಂಬಂಧಿಸಿದ ಜಾಲತಾಣ ಅಥವಾ ಪ್ರವಾಸಿ ಏಜೆಂಟ್‌ರ ಮೂಲಕ ಮಾಹಿತಿ ಪಡೆದು ಪ್ರಯಾಣಿಸುವುದು ಉತ್ತಮ. ಜೂನ್‌ - ಸೆಪ್ಟೆಂಬರ್ ಅವಧಿಯಲ್ಲಿ ಪ್ರವಾಸ ಮಾಡುವುದು ಉತ್ತಮ.

ಆಹಾರ - ವಸತಿ: ಲಡಾಖ್‌ನಲ್ಲಿ ಭಾರತೀಯ ಶೈಲಿಯ ಆಹಾರದ ಜೊತೆಗೆ ಚೈನೀಸ್, ಕಾಂಟಿನೆಂಟಲ್‌ನಂತಹ ವೈವಿಧ್ಯಮಯ ಆಹಾರ ಒದಗಿಸುವ ಹೋಟೆಲ್‌ಗಳಿವೆ.

ಜತೆಗೆ ನೋಡಬಹುದಾದ ಸ್ಥಳಗಳು: ಲೇಹ್ ಅರಮನೆ, ಸೇನಾ ಮ್ಯೂಸಿಯಂಗಳು, ಕಾರ್ಗಿಲ್ ಯುದ್ಧ ಸ್ಮಾರಕಗಳು, ಬೌದ್ಧರ ಮನಾಸ್ತ್ರಿಗಳು, ನುಬ್ರಾ ಕಣಿವೆ, ಸಿಂಧೂನದಿ ಕಣಿವೆ, ಪ್ಯಾಂಗಾಂಗ್ ಸರೋವರ, ಕರ್ದೂಂಗ್ಲಾ ಪಾಸ್ , ಚಾಂಗ್ಲಾ ಪಾಸ್ . ಸಾಹಸಪ್ರಿಯರಿಗೆ ವಿವಿಧ ಚಾರಣಗಳು ಹಾಗೂ ಮೌಂಟೇನ್ ಬೈಕ್ ರೈಡಿಂಗ್‌ಗೆ ಅವಕಾಶವಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.