ADVERTISEMENT

ಸೊಬಗಿನ ಆರ್ಕಿಡ್ ಉದ್ಯಾನ

ಹ.ಶಿ.ಭೈರನಟ್ಟಿ
Published 23 ಜನವರಿ 2019, 19:30 IST
Last Updated 23 ಜನವರಿ 2019, 19:30 IST
ಚಿತ್ರಗಳು: ಲೇಖಕರವು
ಚಿತ್ರಗಳು: ಲೇಖಕರವು   

ಸಿಂಗಪುರ ಸ್ವಚ್ಛತೆಗೆ ಮತ್ತೊಂದು ಹೆಸರು. ಇದೊಂದು ಅನುಪಮ ಉದ್ಯಾನಗಳ ನಗರ. ನೆಲ, ಜಲದ ಸ್ವಚ್ಛತೆಯನ್ನು ಪ್ರಜೆಗಳು, ಪ್ರತಿನಿಧಿಗಳು, ಇಲಾಖೆಗಳು ನೋಡಿಕೊಂಡರೆ, ವಾತಾವರಣದ ಸ್ವಚ್ಛತೆಯನ್ನು ಉದ್ಯಾನದ ಗಿಡ ಮರ ಬಳ್ಳಿಗಳು ನೋಡಿಕೊಳ್ಳುತ್ತವೆ!

ಈ ನಗರದ ಹೃದಯ ಭಾಗದಲ್ಲಿರುವ 155 ಎಕರೆಯ ನ್ಯಾಷನಲ್ ಬೊಟಾನಿಕಲ್ ಗಾರ್ಡನ್ ‘ವಿಶ್ವ ಪಾರಂಪರಿಕ ತಾಣ’ವೆಂದು ಪ್ರಸಿದ್ಧಿ ಪಡೆದಿದೆ. ಅದರಲ್ಲಿ ಏಳೂವರೆ ಎಕರೆಯಲ್ಲಿ ಮೈದೆಳೆದಿರುವ ವಿಶಿಷ್ಟ ಭಾಗವೇ ಆರ್ಕಿಡ್ ಉದ್ಯಾನ. ಪ್ರವಾಸಿಗರ ಕಣ್ಮನ ತಣಿಸುವ, ಅದರಲ್ಲೂ ವಿಶೇಷವಾಗಿ ಆರ್ಕಿಡ್ ಆಸಕ್ತರಿಗೆ ಆಕರ್ಷಣೀಯ ತಾಣ.

ಆರ್ಕಿಡ್ ಉದ್ಯಾನದ ಪ್ರವೇಶಕ್ಕಾಗಿಯೇ ಒಂದು ಪ್ರತ್ಯೇಕ ಮಹಾದ್ವಾರವಿದೆ. ಇತರ ವಿಭಾಗಗಳಿಗಿರದ ಪ್ರವೇಶ ಶುಲ್ಕ ಇಲ್ಲಿಗಿದೆ. ಅದಕ್ಕೆ ಕಾರಣವೂ ಇದೆ. ಇತರ ಸಸ್ಯಗಳಿಗೆ ಕೊಡುವಷ್ಟು ಪ್ರಾಮುಖ್ಯವನ್ನು ಇವರು ಆರ್ಕಿಡ್‍ಗಳಿಗೂ ಕೊಡುತ್ತಾರೆ. ಈ ಜಾಗವನ್ನು ಕೈತೋಟವೆಂದೇ ಪರಿಗಣಿಸಿ ಸೂಕ್ತ ಸಿಬ್ಬಂದಿಯನ್ನು ನೇಮಿಸಿ ಕೆಲಸ ಮಾಡಿಸುತ್ತಾರೆ. 1000ಕ್ಕೂ ಹೆಚ್ಚು ನೈಸರ್ಗಿಕ ಜಾತಿಯ ಆರ್ಕಿಡ್‍ಗಳು ಇಲ್ಲಿವೆ. 2000ಕ್ಕೂ ಹೆಚ್ಚು ಹೈಬ್ರಿಡ್ ತಳಿಗಳಿವೆ. ವರ್ಷ ವರ್ಷಕ್ಕೂ ಈ ಸಂಖ್ಯೆ ವೃದ್ಧಿಯಾಗುತ್ತಲೇ ಹೋಗುತ್ತಿದೆ.

ADVERTISEMENT

ಆಧುನಿಕ ಸಿಂಗಪುರದ ಸಂಸ್ಥಾಪಕ ಸ್ಟಾಂಫೋರ್ಡ್ ರಾಫೆಲ್ಸ್ ಅವರ ಉದ್ದೇಶ ಇದೇ ಆಗಿತ್ತು. ಮೂಲ ತಳಿಗಳ ರಕ್ಷಣೆಯ ಜೊತೆ ಜೊತೆಗೆ ಹೊಸ ಹೊಸ ತಳಿಗಳನ್ನು ಸಂಶೋಧಿಸುವುದಕ್ಕಾಗಿ ಸಸ್ಯವಿಜ್ಞಾನಿಗಳಿಗೆ ಅವಕಾಶ ಕಲ್ಪಿಸುವುದು. ನಿಸರ್ಗಪ್ರಿಯರಾದ ಅವರು 1822ರಲ್ಲಿ ತಮ್ಮ ನೇತೃತ್ವದಲ್ಲಿಯೇ ಫೊರ್ಟ್ ಕ್ಯಾನಿಂಗ್‍ನಲ್ಲಿ ಈ ಉದ್ಯಾನ ನಿರ್ಮಿಸಿದರು. ಮುಂದೆ 1859ರಲ್ಲಿ ‘ಅಗ್ರಿ-ಹಾರ್ಟಿಕಲ್ಚರಲ್ ಸೊಸೈಟಿ’ ನಿರ್ಮಾಣವಾಯಿತು. ರಾಫೆಲ್ಸ್‌ ಅವರ ಉದ್ದೇಶ ನೆರವೇರಿಸಲು ಹೊಸದೊಂದು ಬೃಹತ್ ಉದ್ಯಾನ ನಿರ್ಮಾಣಕ್ಕಾಗಿ ಸೊಸೈಟಿ ಟೊಂಕಕಟ್ಟಿತು. ಉದ್ಯಮಿಯೊಬ್ಬರಿಗೆ ಸೇರಿದ ಈ ಜಾಗವನ್ನು ಖರೀದಿ ಮಾಡಿತು. ಇದು ಈಗ ಇತಿಹಾಸ. 159 ವರ್ಷಗಳಲ್ಲಿ ಸೊಸೈಟಿ ಮಾಡಿದ ಅದ್ಭುತ ಸಾಧನೆ ಕಣ್ಮುಂದಿದೆ. ಜಗತ್ತಿನ ಅತಿ ದೊಡ್ಡ ಆರ್ಕಿಡ್ ಉದ್ಯಾನ ಎಂಬ ಹೆಗ್ಗಳಿಕೆ ಪಡೆದಿದೆ.

ಈ ಉದ್ಯಾನಕ್ಕೆ ಭೇಟಿ ನೀಡುವ ಗಣ್ಯ ವ್ಯಕ್ತಿಗಳ ಹೆಸರನ್ನು ಇಲ್ಲಿಯ ಹೊಸ ತಳಿಗೆ ಇಡುವ ಪರಿಪಾಠವಿದೆ. ಇಲ್ಲಿಯವರೆವಿಗೆ ಇಂಗ್ಲೆಂಡ್‌ನ ಮಾಜಿ ಪ್ರಧಾನಿ ಮಾರ್ಗರೆಟ್ ಥ್ಯಾಚರ್, ವಿಶ್ವ ಸಂಸ್ಥೆಯ 8ನೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಸೇರಿದಂತೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳ 200ಕ್ಕೂ ಹೆಚ್ಚು ಗಣ್ಯವ್ಯಕ್ತಿಗಳು ಭೇಟಿ ಕೊಟ್ಟಿದ್ದಾರೆ.

‘ವಂಡಾ ಮಿಸ್ ಜೋಕ್ವಿಮ್’ ಎಂಬುದು ಸಿಂಗಪುರದ ರಾಷ್ಟ್ರೀಯ ಹೂವು. ಇದೊಂದು ಆರ್ಕಿಡ್ ಹೂವು. ಸಾಮಾನ್ಯವಾಗಿ ‘ಸಿಂಗಪುರ ಹೂವು’ ಎಂತಲೇ ಕರೆಯುತ್ತಾರೆ. ವರ್ಷಪೂರ್ತಿ ಈ ಹೂವು ಲಭ್ಯ. ಇದು ಸಿಂಗಪುರದ ವಿಶಿಷ್ಟತೆಯನ್ನು ಪ್ರತಿನಿಧಿಸುವಂತಿದೆ. ಏಪ್ರಿಲ್ 15, 1981ರಂದು ಈ ಹೂವನ್ನು ರಾಷ್ಟ್ರೀಯ ಪುಷ್ಪ ಎಂದು ಆಯ್ಕೆ ಮಾಡಲಾಗಿದೆ.

ನಳನಳಿಸುತ್ತರುವ ಹಸಿರು ಕಾಂಡಗಳ ಮೇಲೆ ಬಣ್ಣ ಬಣ್ಣದ ಆರ್ಕಿಡ್ ಹೂವುಗಳ ವೈಭವವನ್ನು ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ. ಸಮಯ ಜಾರಿದ್ದೇ ಗೊತ್ತಾಗುವುದಿಲ್ಲ. ಸಿಂಗಪುರಕ್ಕೆ ಭೇಟಿ ನೀಡುವ ಪ್ರವಾಸಿಗರು ಮರೆಯದೇ ಈ ಉದ್ಯಾನಕ್ಕೆ ಭೇಟಿ ನೀಡಿ, ಆರ್ಕಿಡ್‌ ಹೂವುಗಳ ಸೌಂದರ್ಯ ಸವಿಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.