ADVERTISEMENT

ದೆಹಲಿಯಲ್ಲಿ ಟುಸಾಡ್ಸ್ ಮ್ಯೂಸಿಯಂ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 19:30 IST
Last Updated 24 ಜುಲೈ 2019, 19:30 IST
 ಮೇರಿಕೋಂ ಪ್ರತಿಕೃತಿ
 ಮೇರಿಕೋಂ ಪ್ರತಿಕೃತಿ   

‘ಲಂಡನ್‍ನ ಮೇಡಮ್ ಟುಸಾಡ್ಸ್ ಮ್ಯೂಸಿಯಂನಲ್ಲಿ ಅಮಿತಾಭ್ ಬಚ್ಚನ್ , ಸಲ್ಮಾನ್ ಖಾನ್ ಪ್ರತಿಮೆಗಳ ಅನಾವರಣ’, ಐಶ್ವರ್ಯ ರೈ ಪ್ರತಿಮೆ ಅನಾವರಣ’ ಶಾರುಖ್ ಖಾನ್ ಪ್ರತಿಮೆ ಅನಾವರಣ, ‘ಸಚಿನ್ ತೆಂಡೂಲ್ಕರ್ ಪ್ರತಿಮೆ ಅನಾವರಣ’ - ಆಗಾಗ್ಗೆ ಇಂಥ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದಿರುತ್ತೇವೆ, ಅಲ್ವಾ ? ಹಾಗೆ ಓದಿದ ಮೇಲೆ ಮ್ಯೂಸಿಯಂ ನೋಡುವ ಬಯಕೆಯಾಗುತ್ತದೆ. ಆದರೆ, ಇವನ್ನೆಲ್ಲ ನೋಡಲು ಲಂಡನ್‌ವರೆಗೆ ಹೋಗಬೇಕಲ್ಲಾ ಎಂಬ ಚಿಂತೆಯೂ ಕಾಡುತ್ತದೆ, ಅಲ್ವಾ ?

ಯೋಚನೆ ಮಾಡಬೇಡಿ. ಈಗ ಅಂಥದ್ದೇ ಒಂದು ಮೇಡಮ್ ಟುಸಾಡ್ಸ್ ಮ್ಯೂಸಿಯಂ ದೆಹಲಿಗೆ ಬಂದಿದೆ. ದೇಶ ವಿದೇಶಗಳ ಖ್ಯಾತನಾಮರ ತದ್ರೂಪು ಮೇಣದ ಪ್ರತಿಮೆಗಳನ್ನು ಅಲ್ಲಿ ನೋಡಬಹುದು. ಬಾಲಿವುಡ್, ಹಾಲಿವುಡ್, ಮ್ಯೂಸಿಕ್ ಲೋಕದ ತಾರೆಗಳು, ಟಿವಿ ಹಾಗೂ ಕ್ರೀಡಾಲೋಕದ ತಾರೆಯರು ಹಾಗೂ ಹಲವು ವಿಶ್ವ ನಾಯಕರ ಪ್ರತಿಮೆಗಳು ಸೇರಿ ಸುಮಾರು 50ಕ್ಕೂ ಹೆಚ್ಚು ಪ್ರತಿಮೆಗಳನ್ನು ಇಲ್ಲಿ ನೋಡಬಹುದು. ಅವುಗಳೊಂದಿಗೆ ಅವರದೇ ಭಂಗಿಗಳಲ್ಲಿ ನಿಂತು ಫೋಟೋಗಳನ್ನು ತೆಗೆದುಕೊಳ್ಳಬಹುದು.

ಡಿಸೆಂಬರ್ 1, 2017 ರಂದು ದೆಹಲಿಯ ಕನ್ನಾಟ್ ಪ್ಲೇಸ್ ನಲ್ಲಿರುವ ರೀಗಲ್ ಬಿಲ್ಡಿಂಗ್ ನ ನಂ.44ನೇ ಸಂಖ್ಯೆಯ ಕಟ್ಟಡದಲ್ಲಿ ಈ ಮ್ಯೂಸಿಯಂ ಆರಂಭವಾಯಿತು. ಈ ಮ್ಯೂಸಿಯಂನಲ್ಲಿ ಬಾಲಿವುಡ್ ವಿಭಾಗದಲ್ಲಿ ಅಮಿತಾಭ್ ಬಚ್ಚನ್, ಅನಿಲ್ ಕಪೂರ್, ದಿಪಿಕಾ ಪಡುಕೋಣೆ, ಹೃತಿಕ್ ರೋಶನ್, ಕರೀನಾ ಕಪೂರ್, ಕತ್ರಿನಾ ಕೈಫ್, ಶಾಹಿದ್ ಕಪೂರ್, ಮಧುಬಾಲ, ಮಾಧುರಿ ದೀಕ್ಷಿತ್, ರಾಜ್‍ಕಪೂರ್, ರಣಬೀರ ಕಪೂರ್, ಸಲ್ಮಾನ್ ಖಾನ್, ಶಾರುಖ್ ಖಾನ್, ಹಾಗೂ ಸನ್ನಿಲಿಯೋನ್ ಮುಂತಾದ ಪ್ರತಿಮೆಗಳಿವೆ.

ADVERTISEMENT

ಹಾಲಿವುಡ್ ತಾರೆಯರಾದ ಕೇಟ್ ವಿನ್ಸ್‍ಲೆಟ್ (ಟೈಟಾನಿಕ್), ಮರ್ಲಿನ್ ಮನ್ರೋ, ಟಾಮ್ ಕ್ರೂಸ್, ವಿಲ್‍ಸ್ಮಿತ್ ಮುಂತಾದವರ ಪ್ರತಿಮೆಗಳಿವೆ. ಮ್ಯೂಸಿಕ್ ವಿಭಾಗದಲ್ಲಿ ಆಶಾ ಭೋಂಸ್ಲೆ, ಶ್ರೇಯಾ ಘೋಶಾಲ್, ಸೋನು ನಿಗಮ್, ಉಸ್ತಾದ್ ಜಾಕಿರ್ ಹುಸೇನ್ ಹಾಗೂ ಮೈಕೆಲ್ ಜಾಕ್ಸನ್, ಲೇಡಿ ಗಾಗ, ಮಡೋನ್ನಾ ಮುಂತಾದ ಪ್ರತಿಮೆಗಳಿವೆ.

ಕ್ರೀಡಾ ವಿಭಾಗದಲ್ಲಿ ಕಪಿಲ್ ದೇವ್, ಸಚಿನ್ ತೆಂಡೂಲ್ಕರ್ ವಿರಾಟ್ ಕೊಯ್ಲಿ, ಮಿಲ್ಕಾ ಸಿಂಗ್, ಮೇರಿ ಕೋಮ್, ಹಾಗೂ ಲಿಯೋನೆಲ್ ಮೆಸ್ಸಿ, ಉಸೇನ್ ಬೋಲ್ಟ್, ಮುಂತಾದ ಪ್ರತಿಮೆಗಳಿವೆ. ವಿಶ್ವನಾಯಕರ ವಿಭಾಗದಲ್ಲಿ ಮಹಾತ್ಮಾ ಗಾಂಧಿ, ಎ ಪಿ ಜೆ ಅಬ್ದುಲ್ ಕಲಾಂ, ನೇತಾಜಿ, ಭಗತ್ ಸಿಂಗ್, ಸರ್ದಾರ್ ಪಟೇಲ್ , ನರೇಂದ್ರ ಮೋದಿ, ಮುಂತಾದ ಪ್ರತಿಮೆಗಳಿವೆ.

ಇವು ಇಷ್ಟಕ್ಕೇ ಸೀಮಿತವಾಗಿಲ್ಲ. ಆಗಾಗ್ಗೆ ಹೊಸ ಹೊಸ ಪ್ರತಿಮೆಗಳನ್ನು ಸೇರಿಸುತ್ತಲೇ ಇರುತ್ತಾರೆ. ನಾವು ನೋಡಿ ಬಂದ ಮೇಲೆ ಇತ್ತೀಚೆಗೆ ಮಕ್ಕಳ ಮೆಚ್ಚಿನ ಕಾರ್ಟೂನ್ ಪಾತ್ರಗಳಾದ ಮೋಟು ಪತ್ಲು ಪ್ರತಿಮೆಗಳನ್ನು ಅನಾವರಣಗೊಳಿಸಿದ್ದಾರೆ ಎಂಬ ಸುದ್ದಿ ತಿಳಿಯಿತು.

1791 ರಲ್ಲಿ ಜನಿಸಿದ ಮೇರಿ ಟುಸಾಡ್ಸ್ ತನ್ನ 6 ವಯಸ್ಸಿನಲ್ಲಿಯೇ ಮೇಣದ ಕೃತಿಗಳನ್ನು ರಚಿಸುವುದಲ್ಲಿ ಕಲಿಯಲಾರಂಭಿಸಿದಳು. 1835 ರಲ್ಲಿ ಲಂಡನ್‍ನ ಬೇಕರ್ ಸ್ಟ್ರೀಟ್‍ನಲ್ಲಿ ಆರಂಭವಾದ ಮ್ಯೂಸಿಯಂ ಇಂದು ಜಗತ್ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಆಗ ಆಕೆ ತಯಾರಿಸಿದ ಪ್ರತಿಮೆಗಳು ಹಾಗೂ 1842ರಲ್ಲಿ ಆಕೆಯೇ ತನ್ನ ಸ್ವಂತ ಪ್ರತಿಮೆಯನ್ನು ತಯಾರಿಸಿದ್ದು ಈಗಲೂ ಸುಸ್ಥಿತಿಯಲ್ಲಿದೆ ಯೆಂದರೆ ಆಶ್ಚರ್ಯವೇ ಸರಿ. ಇಂದು ವಿಶ್ವದಾದ್ಯಂತ 23 ಸ್ಥಳಗಳಲ್ಲಿ ಮೇಡಂ ಟುಸಾಡ್ಸ್ ಮ್ಯೂಸಿಯಂಗಳಿವೆ.

ತಲುಪುವುದು ಹೇಗೆ?

ದೆಹಲಿಯ ಕನ್ನಾಟ್ ಪ್ಲೇಸ್‍ನಲ್ಲಿ ದೆಹಲಿ ಮೆಟ್ರೋದ ಯೆಲ್ಲೋ ಮತ್ತು ಬ್ಲೂ ಲೈನ್ ಸೇರುವ ಸುಪ್ರಸಿದ್ಧ ರಾಜೀವ್‍ಗಾಂಧಿ ನಿಲ್ಲಾಣವಿದೆ. ಇಲ್ಲಿಂದ 5-10 ನಿಮಿಷಗಳ ನಡಿಗೆಯಲ್ಲಿ ರೀಗಲ್ ಬಿಲ್ಡಿಂಗ್ ತಲುಪಬಹುದು. ಕನ್ನಾಟ್ ಪ್ಲಸ್‍ಗೆ ದೆಹಲಿಯ ಎಲ್ಲ ಕಡೆಯಿಂದಲೂ ಸಾಕಷ್ಟು ಸಿಟಿ ಬಸ್ಸುಗಳೂ ಇವೆ.

ದುಬಾರಿ ಪ್ರವೇಶ ಶುಲ್ಕ

ಮ್ಯೂಸಿಯಂ ಪ್ರವೇಶಕ್ಕೆ ದುಬಾರಿ ಎನ್ನಬಹುದಾದ ಶುಲ್ಕವಿದೆ. ಕಾಲ ಕಾಲಕ್ಕೆ ಬೇರೆ ಬೇರೆ ಪ್ರಮಾಣದ ರಿಯಾಯಿತಿಗಳೂ ಇರುತ್ತವೆ. ಸಾಮಾನ್ಯವಾಗಿ ನೇರ ಖರೀದಿಗಿಂತ ಆನ್‍ಲೈನ್ ಬುಕ್ಕಿಂಗ್‌ಗೆ ಹೆಚ್ಚಿನ ರಿಯಾಯಿತಿ ಇರುತ್ತದೆ. ಹೋಗುವಾಗ ಪರಿಶೀಲಿಸಿ ನಿರ್ಧರಿಸಿ. ಎಲ್ಲ ಪ್ರತಿಮೆಗಳನ್ನು ನೋಡಲು ಫೋಟೊ ತೆಗೆದುಕೊಳ್ಳಲು ಸುಮಾರು 2 ರಿಂದ 3 ಗಂಟೆ ಸಮಯ ಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.