ADVERTISEMENT

ಉಂಗಟ್‌ ನದಿಯ ದೃಶ್ಯಕಾವ್ಯ

ಪರಿಶುದ್ಧ ನದಿಯ ದೃಶ್ಯಕಾವ್ಯ

ಹೇಮಮಾಲಾ ಬಿ.
Published 18 ಡಿಸೆಂಬರ್ 2019, 19:30 IST
Last Updated 18 ಡಿಸೆಂಬರ್ 2019, 19:30 IST
ಉಂಗಟ್ ನದಿ
ಉಂಗಟ್ ನದಿ   

ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ಮುಂಜಾನೆ ನಾಲ್ಕೂವರೆಗೆ ಬೆಳಕಾಗಿತ್ತು. ಮಂಜು ಮುಸುಕಿದ ವಾತಾವರಣದಲ್ಲಿ, ಮೇಘದ ನಾಡಿನ ಮೋಡವೂ ನಮ್ಮ ಜೊತೆಗೆ ಟ್ರಿಪ್‌ಗೆ ಹೊರಟಿತ್ತು!

ನಮ್ಮ ಬಸ್ ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ‘ಡಾವ್ ಕಿ’ ಕಡೆ ಹೊರಟಿತು. ಸುಂದರವಾದ ರಸ್ತೆಯದು. ರಸ್ತೆಯಲ್ಲಿ ಅಲ್ಲಲ್ಲಿ ಸಣ್ಣ ಮನೆಗಳು, ಚಕ್ಕೋತ ಹಣ್ಣು ತೂಗುತ್ತಿದ್ದ ಮರಗಳು, ಅಡಿಕೆ ಮರಗಳು, ನೂರಾರು ಝರಿಗಳು, ಹಸಿರು ಕಣಿವೆಗಳು ಇವೆಲ್ಲಾ ಕಣ್ಣಿಗೆ ತಂಪು ನೀಡುತ್ತಿದ್ದವು. ಅಲ್ಲಲ್ಲಿ ಶಾಲಾಮಕ್ಕಳು ಮತ್ತು ಖಾಸಿ ಉಡುಗೆ ತೊಟ್ಟಿದ್ದ ಸ್ಥಳೀಯರು ಕಾಣಿಸಿದರು. ಸುಮಾರು ಎರಡೂವರೆ ಗಂಟೆ ಪ್ರಯಾಣದಲ್ಲಿ ಶಿಲ್ಲಾಂಗ್‌ನಿಂದ 90 ಕಿ.ಮೀ. ದೂರದ ‘ಡಾವ್ ಕಿ’ ತಲುಪಿದೆವು.

‘ಡಾವ್ ಕಿ’ ಸಮೀಪಿಸುತ್ತಿದ್ದಂತೆ, ಸ್ಫಟಿಕದಷ್ಟೇ ಶುಭ್ರವಾದ ನೀರು ಹರಿಯುತ್ತಿರುವುದು ಕಂಡಿತು. ಅದು ಉಂಗಟ್‌ (Umngot River) ನದಿ. ಈ ನದಿ ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿದೆ. ಇಲ್ಲಿ ಗಡಿ ಸೂಚಕ ಫಲಕದ ಆಕಡೆ-ಈಕಡೆ ಭಾರತ ಮತ್ತು ಬಾಂಗ್ಲಾದೇಶಿ ಪ್ರವಾಸಿಗರು ಇರುತ್ತಾರೆ.

ADVERTISEMENT

ಉಂಗಟ್‌ ನದಿಯ ನೀರು ಎಷ್ಟು ಸ್ವಚ್ಛವಾಗಿದೆ ಎಂದರೆ, ತನ್ನ ಸುತ್ತಮುತ್ತಲಿನ ಹಸಿರು ಪರಿಸರ, ಆ ನೀರಿನಲ್ಲಿ ಪ್ರತಿಫಲಿಸುತ್ತಾ ‘ಎಮರಾಲ್ಡ್ ಹಸಿರು’ ಬಣ್ಣದಿಂದ ಶೋಭಿಸುತ್ತದೆ. ಬ್ರಿಟಿಷರ ಕಾಲದಲ್ಲಿ ತೂಗು ಸೇತುವೆ, ಕಿನಾರೆಯುದ್ದಕ್ಕೂ ಸಸ್ಯ ಶಾಮಲೆಯರು, ಅಲ್ಲಲ್ಲಿ ಕೋಟೆ ಕಟ್ಟಿದಂತಿರುವ ಸ್ವಾಭಾವಿಕ ಬಂಡೆಗಳು.. ಒಂದು ರೀತಿ ದೃಶ್ಯಕಾವ್ಯದಂತೆ ಸರಿದು ಹೋಗುತ್ತವೆ.

ಈ ನದಿಯಲ್ಲಿ ಪ್ರವಾಸಿಗರಿಗೆ ದೋಣಿಯಲ್ಲಿ ವಿಹರಿಸಲು ಅವಕಾಶವಿದೆ. ನಮ್ಮ ತಂಡದ ಎಲ್ಲರಿಗೂ ಸಾಲುವಷ್ಟು ದೋಣಿಗಳನ್ನು ಕಾಯ್ದಿರಿಸಿ ದೋಣಿಯಾನ ಮಾಡಿದೆವು. ಜಸ್ಟಿನ್ ಎಂಬಾತ ನಾವು ಕುಳಿತಿದ್ದ ದೋಣಿಯನ್ನು ನಡೆಸುತ್ತಿದ್ದ. ನಮ್ಮ ಎಡಭಾಗದಲ್ಲಿ ‘ಖಾಸಿ’ ಮತ್ತು ಬಲಭಾಗದಲ್ಲಿ ‘ಜೈಂಟಿಯಾ’ ಬೆಟ್ಟಗಳಿದ್ದವು. ‘ಈ ಎರಡು ಬೆಟ್ಟಗಳಲ್ಲಿನ ಬುಡಕಟ್ಟು ನಿವಾಸಿಗಳು ಉತ್ತಮ ಸ್ವಭಾವದವರು. ಅಷ್ಟೇ ಅಲ್ಲ ಶಾಂತಿಪ್ರಿಯರು’ ಎಂದು ವಿವರಿಸಿದ ಜಸ್ಟಿನ್‌. ‘ಈ ಕಾಲದಲ್ಲಿ ನದಿಯ ನೀರು ಶುಭ್ರವಾಗಿರುತ್ತದೆ. 15 ಅಡಿ ಆಳದವರೆಗಿನ ವಸ್ತುಗಳು ಸ್ಪಷ್ಟವಾಗಿ ಕಾಣುತ್ತವೆ. ಅಷ್ಟು ಸ್ವಚ್ಛವಾಗಿರುತ್ತದೆ. ಇದೇ ಇಲ್ಲಿನ ಆಕರ್ಷಣೆ. ನೀವು ಸರಿಯಾದ ಸಮಯದಲ್ಲಿ ಬಂದಿದ್ದೀರಿ’ ಎಂದು ವಿವರಣೆ ಮುಂದುವರಿಸಿದ. ಅವನ ಮಾತು ಮುಗಿಯುವ ಹೊತ್ತಿಗೆ, ನಾವು ನಾಣ್ಯವೊಂದನ್ನು ನದಿಗೆ ಹಾಕಿದೆವು. ಅದು ತಳ ಮುಟ್ಟಿದ್ದನ್ನು ಕಂಡು ಖುಷಿಪಟ್ಟೆವು.

ಅಚ್ಚರಿಯ ವಿಷಯವೆಂದರೆ, ಆ ನದಿಯಲ್ಲಿ ಒಂದೂ ಯಾಂತ್ರಿಕ ದೋಣಿಗಳಿರಲಿಲ್ಲ. ಅಲ್ಲಲ್ಲಿ ದೋಣಿ ನಿಲ್ಲಿಸಿ, ಗಾಳ ಹಾಕಿ ಕಾಯುತ್ತಾ ಮೀನು ಹಿಡಿಯುವವರನ್ನು ಕಂಡೆವು. ಈಗೆಲ್ಲ ಸಾಂಪ್ರದಾಯಿಕ ಮೀನುಗಾರಿಕೆ ಕಡಿಮೆ. ಆದರೆ, ಇಲ್ಲಿ ಇನ್ನೂ ಉಳಿದಿದೆಯಲ್ಲ ಎಂದು ಜಸ್ಟಿನ್‌ಗೆ ಕೇಳಿದೆವು. ‘ಇಲ್ಲಿಯ ಜನರಿಗೆ ದುರಾಸೆಯಿಲ್ಲ. ಗಾಳ ಹಾಕಿ ದಿನಕ್ಕೆ 2-3 ಮೀನು ಸಿಕ್ಕಿದರೂ ಅವರು ತೃಪ್ತಿಪಡುತ್ತಾರೆ. ಏಕೆಂದರೆ ಆ ಮೀನುಗಳು ಗಾತ್ರ ದೊಡ್ಡದು. ಕೆಲವು ಐದು ಕೆ.ಜಿ.ಯವರೆಗೂ ತೂಗುತ್ತವೆ. ಈ ಸಿಹಿನೀರಿನ ಮೀನುಗಳು ಬಹಳ ರುಚಿ. ಇಲ್ಲಿಯ ಜನ ಪರಿಸರಕ್ಕೆ ಹಾನಿಯಾಗುವುದನ್ನು ಸಹಿಸುವುದಿಲ್ಲ’ ಎಂದು ವಿವರಿಸಿದ.

ಜಸ್ಟಿನ್ ವಿವರಿಸುವಾಗಲೇ, ನದಿಯಲ್ಲಿ ಖಾಲಿ ನೀರಿನ ಬಾಟಲಿಗಳು ತೇಲಿಬಂದವು. ‘ಇಂಥ ಸುಂದರ ಪರಿಸರದಲ್ಲಿ ಬಾಟಲಿಗಳನ್ನು ಹಾಕುವವರು ಹೊರಗಿನ ಪ್ರವಾಸಿಗರೇ ಇರಬೇಕು’ ಎಂದು ಅಂದುಕೊಂಡೆವಾದರೂ, ಅವುಗಳು ಮೀನನ್ನು ಹಿಡಿಯಲೆಂದು ಬಳಸಲಾಗುವ ‘ಫಿಶ್ ಟ್ರ್ಯಾಪ್’ ಎಂದು ಆ ನಂತರ ಗೊತ್ತಾಯಿತು. ಮೀನು ಹಿಡಿಯುವವರು ದಾರದ ಒಂದು ತುದಿಗೆ ಮೀನಿನ ಆಹಾರವನ್ನು ಕಟ್ಟಿ, ಇನ್ನೊಂದು ತುದಿಯನ್ನು ಬಾಟಲಿಗೆ ಕಟ್ಟಿ, ದೋಣಿಯಲ್ಲಿ ಕುಳಿತು ಗಮನಿಸುತ್ತಾರೆ. ಬಾಟಲಿ ಅಲುಗಾಡತೊಡಗಿದರೆ, ಮೀನು ದಾರದ ಸಮೀಪ ಬಂದಿದೆ ಎಂಬುದರ ಸಂಕೇತ. ಹೀಗೆ, ಅಲ್ಪತೃಪ್ತರಾಗಿ, ಪರಿಸರಕ್ಕೆ ಹಾನಿಯಾಗದಂತೆ ಮೀನುಗಾರಿಕೆ ಮಾಡುವ ಸ್ಥಳೀಯರ ಬಗ್ಗೆ ಗೌರವ ಮೂಡಿತು. ಇಂಥ ‘ಡಾವ್ ಕಿ’ಯ ಸುಂದರ ಪರಿಸರದಲ್ಲಿ ಅಡ್ಡಾಡಿ, ದೋಣಿಯಾನ ಮಾಡಿ, ಬಾಂಗ್ಲಾದೇಶ ಕಡೆಗೆ ಕಣ್ಣು ಹಾಯಿಸಿದೆವು.

‘ಡಾವ್ ಕಿ’ ಯಿಂದ 8 ಕಿ.ಮೀ. ದೂರದಲ್ಲಿ ‘ತಮಾಬಿಲ್’ ಎಂಬ ಸ್ಥಳವಿದೆ. ಅಲ್ಲಿ ಬಾಂಗ್ಲಾದೇಶಕ್ಕೆ ಹೋಗಲು ದಾರಿ ಇದೆ. ತಮಾಬಿಲ್‌ನಲ್ಲಿ ಭಾರತದ ಕಡೆ ನಮ್ಮ ರಾಷ್ಟ್ರದ್ವಜವಿದೆ. ಇದನ್ನು ದಾಟಿ ನಾವು ಮುಂದೆ ಹೋಗಬೇಕಾದರೆ ಪಾಸ್‌ಪೋರ್ಟ್ ಹೊಂದಿರಬೇಕು. ಸ್ಥಳೀಯ ಭಾರತೀಯರು ಹಾಗೂ ಬಾಂಗ್ಲಾದೇಶೀಯರು ಚೆಕ್‌ಪೋಸ್ಟ್‌ನಲ್ಲಿ ತಮ್ಮ ಪಾಸ್‌ಪೋರ್ಟ್ ತೋರಿಸಿ, ವಿವರಗಳನ್ನು ನೋಂದಾಯಿಸಿ, ತಂತಮ್ಮ ರಾಷ್ಟ್ರಗಳಿಗೆ ಕಮಾನು ಗೇಟಿನ ಮೂಲಕ ಹೋಗುತ್ತಿರುವುದು ಕಾಣಿಸಿತು.

ಹೋಗುವುದು ಹೇಗೆ?

ಬೆಂಗಳೂರಿನಿಂದ ವಿಮಾನ ಅಥವಾ ರೈಲಿನ ಮೂಲಕ ‘ಗುವಾಹಟಿ’ ತಲುಪಿ, ಅಲ್ಲಿಂದ ರಸ್ತೆ ಮೂಲಕ ಮೇಘಾಲಯದ ಶಿಲ್ಲಾಂಗ್‌ ಮುಟ್ಟಬೇಕು. ಶಿಲ್ಲಾಂಗ್‌ನಿಂದ ಬಾಂಗ್ಲಾದೇಶದ ಗಡಿಯಲ್ಲಿರುವ ‘ಡಾವ್ ಕಿ’ಗೆ ಖಾಸಗಿ ವಾಹನದಲ್ಲಿ ಸುಮಾರು ಎರಡೂವರೆ ಗಂಟೆ (90 ಕಿ.ಮೀ.) ಪ್ರಯಾಣಿಸಬೇಕು. ಗ್ರಾಮೀಣ ಸೊಗಸನ್ನು ಉಳಿಸಿಕೊಂಡಿರುವ, ಪ್ರಾಕೃತಿಕ ಸೌಂದರ್ಯದ ಖನಿಯಾದ ಮೇಘಾಲಯದಲ್ಲಿ, ತಂಪಾದ ಹವೆಯಲ್ಲಿ, ರಸ್ತೆ ಪ್ರಯಾಣವು ಮುದವೀಯುತ್ತದೆ.

ಊಟ– ವಸತಿ

ಊಟೋಪಚಾರಗಳಿಗೆ ಅಲ್ಲಲ್ಲಿ ಕೆಲವು ಸಣ್ಣ ಹೋಟೆಲ್‌ಗಳು ಸಿಗುತ್ತವೆ. ವಸತಿಗೆ ಶಿಲ್ಲಾಂಗ್‌ನಲ್ಲಿ ವ್ಯವಸ್ಥೆ ಮಾಡಿಕೊಂಡರೆ ಉತ್ತಮ. ಆನ್‌ಲೈನ್ ಮೂಲಕ ಹೋಟೆಲ್‌, ವಸತಿ ವ್ಯವಸ್ಥೆಯನ್ನು ವಿಚಾರಿಸಿ ಕಾಯ್ದಿರಿಸಬಹುದು.

ಭೇಟಿಗೆ ಸೂಕ್ತ ಸಮಯ

ತೀರಾ ಮಳೆಗಾಲವನ್ನು ಹೊರತುಪಡಿಸಿ, ವರ್ಷದ ಉಳಿದ ತಿಂಗಳುಗಳಲ್ಲಿ ಮೇಘಾಲಯದಲ್ಲಿ ಪ್ರವಾಸ ಮಾಡಬಹುದು.

ಸುತ್ತ ಏನೇನು ನೋಡಬಹುದು?

ಇಲ್ಲಿ ಹಲವಾರು ಸುಂದರವಾದ ನದಿಗಳು, ಜಲಪಾತಗಳು, ಅತಿ ಹೆಚ್ಚು ಮಳೆ ಬೀಳುವ ಚಿರಾಪುಂಜಿ, ತೂಗುಸೇತುವೆಗಳು, ಪ್ರಾಕೃತಿಕವಾಗಿ ರಚನೆಯಾದ ಸುಣ್ಣದಕಲ್ಲಿನ ಗುಹೆಗಳು, ಮರದ ಬೇರುಗಳನ್ನು ಹೆಣೆದು ರಚಿಸಲಾದ ಜೀವಂತ ಸೇತುವೆಗಳು, ಸ್ವಚ್ಛ ಹಳ್ಳಿಗಳು, ಖಾಸಿ ಬುಡಕಟ್ಟು ಜನಾಂಗದವರ ಸರಳ ಜೀವನಶೈಲಿ ಹಾಗೂ ಸಂಸ್ಕೃತಿ, ಮ್ಯೂಸಿಯಂಗಳು.. ಹೀಗೆ ಶಿಲ್ಲಾಂಗ್‌ನ ಸುತ್ತಮುತ್ತಲು ಬಹಳಷ್ಟು ಆಕರ್ಷಕ ಪ್ರವಾಸಿ ತಾಣಗಳಿವೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.