ADVERTISEMENT

ಜಲಕ್ರೀಡೆಗಳ ಜೋಕಾಲಿ

ಸಿದ್ದು ಆರ್.ಜಿ.ಹಳ್ಳಿ
Published 20 ಫೆಬ್ರುವರಿ 2019, 19:45 IST
Last Updated 20 ಫೆಬ್ರುವರಿ 2019, 19:45 IST
   

ಭೋರಿಡುವ ಗಾಳಿಗೆ ಲಯಬದ್ಧವಾಗಿ ತೂಗುವ ಬಿದಿರು ಮೆಳೆಗಳು, ಕಣ್ಣ ನೋಟಕ್ಕೆ ನಿಲುಕದಷ್ಟು ಎತ್ತರ ಬೆಳೆದಿರುವ ವನರಾಶಿ, ಕಗ್ಗತ್ತಲ ಕಾಡಿನೊಳಗೆ ಅಲ್ಲಲ್ಲಿ ಇಣುಕುವ ಸೂರ್ಯ ರಶ್ಮಿ, ಕಾನನದೊಳಗೆ ಹುಡುಕಿದಷ್ಟೂ ಸಿಗುವ ಕಾಲುದಾರಿಗಳು, ಚಾರಣಕ್ಕೆ ಕೈ ಬೀಸಿ ಕರೆಯುವ ಬೆಟ್ಟ-ಗುಡ್ಡಗಳು, ಮೈ ಜುಮ್ಮೆನಿಸುವ ರುದ್ರರಮಣೀಯ ಪ್ರಪಾತಗಳು, ಈ ಸುಂದರ ಪರಿಸರದಲ್ಲಿ ತೊನೆಯುತ್ತಾ, ಬಳುಕುತ್ತಾ ಪ್ರವಾಸಿಗರ ಮನಸನ್ನು ಸೂರೆಗೊಳ್ಳುವ ಕಾಳಿ ನದಿ...

‘ನಂದನದ ತುಣುಕೊಂದು ಬಿದ್ದಿದೆ, ನೋಟ ಸೇರದು ಯಾರಿಗೆ?’ ಎಂಬ ದ. ರಾ. ಬೇಂದ್ರೆ ಅವರ ಕಾವ್ಯದ ಸಾಲಿಗೆ ಕನ್ನಡಿ ಹಿಡಿದಂತೆ ಇದೆ ಈ ದಾಂಡೇಲಿ ವನ್ಯಜೀವಿ ನಿಸರ್ಗಧಾಮ. ಉತ್ತರ ಕನ್ನಡ ಜಿಲ್ಲೆ, ದಾಂಡೇಲಿಯಲ್ಲಿರುವ ಈ ರಮ್ಯತಾಣ, ರಾಜ್ಯದಲ್ಲಿಯೇ 2ನೇ ಅತಿದೊಡ್ಡ ಅಭಯಾರಣ್ಯ ಎಂಬ ಹಿರಿಮೆಗೆ ಪಾತ್ರವಾಗಿದೆ. ಇದು ಹುಲಿ ಸಂರಕ್ಷಿತ ಪ್ರದೇಶವೂ ಹೌದು.

ಹುಲಿ, ಕಪ್ಪು ಚಿರತೆ, ಚುಕ್ಕಿ ಜಿಂಕೆ, ಕಾಡಾನೆ, ಕಾಡೆಮ್ಮೆ, ಕರಡಿ, ಕಾಳಿಂಗ ಸರ್ಪ, ಮಲಬಾರ್ ಅಳಿಲು ಮುಂತಾದ ವನ್ಯಜೀವಿಗಳಿಗೆ ಆಶ್ರಯ ನೀಡಿದೆ. ಮಂಗಟ್ಟೆ (ಹಾರ್ನ್ ಬಿಲ್), ಕಾಜಾಣ, ಗುಲಾಬಿ ಕಬ್ಬಕ್ಕಿ, ನವರಂಗ, ಚೋರೆಹಕ್ಕಿ, ನವಿಲು, ಕೆಮ್ಮೀಸೆ ಪಿಕಳಾರ, ಸಿಂಪಿಗ, ರಾಜಹಕ್ಕಿ, ನವಿಲು, ನೀಲಕಂಠ ಸೇರಿದಂತೆ 300ಕ್ಕೂ ಅಧಿಕ ಪಕ್ಷಿಗಳ ಕಲರವ ಇಲ್ಲಿ ಕೇಳಿ ಬರುತ್ತದೆ. ಹಾಗಾಗಿಯೇ ‘ಪಕ್ಷಿ ವೀಕ್ಷಕರ ಸ್ವರ್ಗ’ ಎನಿಸಿದೆ. ಪ್ರಕೃತಿ ಆರಾಧಕರು ಮತ್ತು ಚಾರಣ ಪ್ರಿಯರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.

ADVERTISEMENT

ಸಾಹಸ ಕ್ರೀಡೆಗಳ ತೊಟ್ಟಿಲು

ಜಲಸಾಹಸ ಕ್ರೀಡೆಗಳಿಗೆ ದಕ್ಷಿಣ ಭಾರತದಲ್ಲೇ ಹೆಚ್ಚು ಪ್ರಸಿದ್ಧಿ ಪಡೆದ ಸ್ಥಳ ದಾಂಡೇಲಿ. ಇಲ್ಲಿನ ಗಣೇಶಗುಡಿಯ ಸುತ್ತಮುತ್ತ ನವೆಂಬರ್‌ನಿಂದ ಮೇ ತಿಂಗಳವರೆಗೂ ಜಲಕ್ರೀಡೆಗಳು ಗರಿಗೆದರುತ್ತವೆ. ಕ್ರಿಸ್‌ಮಸ್, ದಸರಾ, ಬೇಸಿಗೆ ರಜೆ ಹಾಗೂ ವೀಕೆಂಡ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಲಗ್ಗೆ ಇಡುತ್ತಾರೆ. ಮಳೆಗಾಲದಲ್ಲಿ ಕಾಳಿ ನದಿ ಭೋರ್ಗರೆಯುವುದರಿಂದ ಕ್ರೀಡಾ ಚಟುವಟಿಕೆಗಳು ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸ್ಥಗಿತಗೊಳುತ್ತವೆ.

ಸೂಪಾ ಜಲಾಶಯದಿಂದ ಹೊರಬರುವ ಕಾಳಿ ನದಿಯ ನೀರು ಈ ಕ್ರೀಡೆಗಳಿಗೆ ಮೂಲಾಧಾರ. ನೀರಿನ ಅಲೆಗಳ ಮೇಲೆ ಪ್ರವಾಸಿಗರ ಆಟದ ಲೀಲೆಯನ್ನು ನೋಡುವುದೇ ಒಂದು ಸಂಭ್ರಮ. ವೈಟ್ ವಾಟರ್ ರ‍್ಯಾಫ್ಟಿಂಗ್‌, ಕಯಾಕಿಂಗ್, ಬೋಟಿಂಗ್, ಜಕುಜಿ ಬಾತ್, ಸ್ವಿಮ್ಮಿಂಗ್, ಜಾರ್ಬಿಂಗ್, ಕೊರಾಕಲ್ ರೈಡ್, ರಿವರ್ ಕ್ರಾಸಿಂಗ್ ಮುಂತಾದ ಮೈ ನವಿರೇಳಿಸುವ ಜಲಕ್ರೀಡೆಗಳು, ಪ್ರವಾಸಿಗರನ್ನು ಹರ್ಷದ ಹೊನಲಿನಲ್ಲಿ ತೇಲುವಂತೆ ಮಾಡುತ್ತವೆ.

ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಾ, ಹಕ್ಕಿಗಳ ನಿನಾದವನ್ನು ಆಲಿಸುತ್ತಾ, ದೋಣಿ ವಿಹಾರ ಮಾಡುವುದೇ ಒಂದು ದಿವ್ಯಾನುಭೂತಿ. ಕಪ್ಪು ಶಿಲೆಗಳ ನಡುವೆ ಧುಮ್ಮಿಕ್ಕುವ ನೀರಿಗೆ ಮೈಯೊಡ್ಡಿದರೆ (ಜಕುಜಿ ಬಾತ್) ಪ್ರವಾಸದ ಆಯಾಸವೆಲ್ಲ ಕಳೆದು, ಮೈ-ಮನ ಉಲ್ಲಸಿತಗೊಳ್ಳುತ್ತವೆ. ಇನ್ನು, ರಿವರ್ ರ‍್ಯಾಫ್ಟಿಂಗ್ ಬೋಟ್‌ನಲ್ಲಿ ಕುಳಿತು, ನೀರಿನಲ್ಲಿ ಧುಮುಕಿ ಮೇಲೆಳುವ ರೋಚಕ ಕ್ಷಣಗಳನ್ನು ಹೇಳಲು ಪದಗಳೇ ಸಾಲುವುದಿಲ್ಲ. ಹರಿಯುವ ನದಿಗೆ ಅಡ್ಡಲಾಗಿ ಕಟ್ಟಿರುವ ಜಿಪ್‌ಲೈನ್‌ನಲ್ಲಿ ಜಾರುವ (ರಿವರ್ ಕ್ರಾಸಿಂಗ್) ವೇಳೆ ಆತಂಕದ ನಡುವೆಯೂ ಆನಂದ ಪುಟಿಯುತ್ತದೆ.

ಹೀಗೆ, ನೀರಿನಲ್ಲಿ ಮೋಜು ಮಸ್ತಿ ಮಾಡಿಕೊಂಡು ಹೊರಬರುವ ಪ್ರವಾಸಿಗರು, ಕಾಳಿ ನದಿಯ ದಂಡೆಯಲ್ಲಿರುವ ರೆಸಾರ್ಟ್‌ಗಳಲ್ಲಿ ಬಿಸಿ ಬಿಸಿಯಾದ ಕಾಫಿ, ತಿಂಡಿ, ಊಟಗಳನ್ನು ಸವಿಯಬಹುದು. ನಂತರ ಸೈಕ್ಲಿಂಗ್, ಟಾರ್ಗೆಟ್ ಶೂಟಿಂಗ್, ಬಿಲ್ಲು ವಿದ್ಯೆ, ಟ್ರಕ್ಕಿಂಗ್ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸಂತಸದ ಕ್ಷಣಗಳನ್ನು ಕಳೆಯಬಹುದು.

ವನ್ಯ ಜೀವಿಗಳನ್ನು ನೋಡಬಯಸುವವರು ಮುಂಜಾನೆ ಬೆಳಿಗ್ಗೆ 6 ರಿಂದ 9 ಮತ್ತು ಮಧ್ಯಾಹ್ನ 3 ರಿಂದ ಸಂಜೆ 6.30ರವರೆಗೆ ‘ಜಂಗಲ್ ಸಫಾರಿ’ ಹೋಗಬಹುದು. ಜಂಗಲ್ ಲಾಜ್‌, ರೆಸಾರ್ಟ್‌, ಹೋಮ್ ಸ್ಟೇಗಳಲ್ಲಿ ತಂಗಿದರೆ, ರಾತ್ರಿ ವೇಳೆ ಕ್ಯಾಂಪ್ ಫೈರ್, ನೇಚರ್ ವಾಕ್ ಅನುಭೂತಿಯನ್ನೂ ಪಡೆಯಬಹುದು.

ಕ್ರೀಡಾ ಚಟುವಟಿಕೆ ಮತ್ತು ಸ್ಥಳಗಳನ್ನು ವೀಕ್ಷಿಸಲು ಪ್ಯಾಕೇಜ್‌ಗಳು ಲಭ್ಯವಿದ್ದು, ಆನ್‌ಲೈನ್ ಅಥವಾ ದಾಂಡೇಲಿ ಪಟ್ಟಣದಲ್ಲಿರುವ ಬುಕ್ಕಿಂಗ್ ಸೆಂಟರ್‌ಗಳಲ್ಲಿ ಪಾಸ್ ಪಡೆಯಬಹುದು. 8 ಕ್ರೀಡಾ ಚಟುವಟಿಕೆಗಳು ಮತ್ತು ನಾಲ್ಕು ಸ್ಥಳಗಳ ವೀಕ್ಷಣೆಯ ಪ್ಯಾಕೇಜ್‌ಗೆ ಒಬ್ಬರಿಗೆ ₹600 ದರವಿದೆ (ಊಟ ಮತ್ತು ವಾಹನ ಸೌಲಭ್ಯಕ್ಕೆ ಪ್ರತ್ಯೇಕ ದರವಿದೆ).

ಕಾಡು, ತೊರೆ, ನದಿ, ಬೆಟ್ಟ, ಕಣಿವೆ, ಅಣೆಕಟ್ಟು, ಪ್ರಕೃತಿ ಶಿಬಿರ, ವಿಶಿಷ್ಟ ಉದ್ಯಾನ, ಪವಿತ್ರ ಧಾರ್ಮಿಕ ಸ್ಥಳ... ಹೀಗೆ ವೈವಿಧ್ಯಮಯ ನೋಟಗಳನ್ನು ತನ್ನ ಮಡಿಲಿನಲ್ಲಿ ಅಡಗಿಸಿಕೊಂಡಿರುವ ದಾಂಡೇಲಿ ವನ್ಯಜೀವಿ ನಿಸರ್ಗಧಾಮ, ಮೊಗೆದಷ್ಟೂ ಅವರ್ಣನೀಯ ಅನುಭವವನ್ನು ತುಂಬಿಕೊಡುವ ಅಕ್ಷಯಪಾತ್ರೆ. ‘ಒಂದು ಊರು ಹಲವು ಜಗತ್ತು’ ಎಂಬಂತಿರುವ ದಾಂಡೇಲಿಗೆ ಬಂದ ಪ್ರವಾಸಿಗರು ತಮ್ಮ ಜೋಳಿಗೆ ತುಂಬ ಸುಮಧುರ ನೆನಪುಗಳನ್ನು ತುಂಬಿಕೊಂಡು ಹೋಗುತ್ತಾರೆ.

ಇವನ್ನೆಲ್ಲನೋಡಬಹುದು:ದಂಡಕಾರಣ್ಯ,ಇಕೊ ಪಾರ್ಕ್,ಮೊಸಳೆ ಪಾರ್ಕ್,ಕುಳಗಿ ಪ್ರಕೃತಿ ಶಿಬಿರ ,ಸಿಂಥೇರಿ ರಾಕ್,ಸೂಪಾ ಜಲಾಶಯ ಮತ್ತು ಹಿನ್ನೀರು ಪ್ರದೇಶ,ಉಳವಿ ಚನ್ನಬಸವೇಶ್ವರ ದೇವಸ್ಥಾನ,ಅಣಶಿ ರಾಷ್ಟ್ರೀಯ ಉದ್ಯಾನ,ಶಿರೋಲಿ ಶಿಖರ,
ಮೌಳಂಗಿ ಇಕೊ,ಪಾರ್ಕ್ ಸೈಕ್ಸ್ ಪಾಯಿಂಟ್

ತಲುಪುವುದು ಹೇಗೆ?

ಹುಬ್ಬಳ್ಳಿಯಿಂದ 75 ಕಿ.ಮೀ, ಬೆಳಗಾವಿಯಿಂದ 90 ಕಿ.ಮೀ. ಅಂತರದಲ್ಲಿ ದಾಂಡೇಲಿ ಪಟ್ಟಣವಿದೆ. ಎರಡೂ ನಗರಗಳಿಂದ ನೇರ ಸಾರಿಗೆ ಬಸ್ ಸೌಲಭ್ಯವಿದ್ದು, ಉತ್ತಮ ರಸ್ತೆ ಸಂಪರ್ಕವಿದೆ. ಸುತ್ತಮುತ್ತಲ ತಾಣಗಳನ್ನು ನೋಡಲು ದಾಂಡೇಲಿ ಪಟ್ಟಣದಲ್ಲಿ ಖಾಸಗಿ ವಾಹನಗಳು ಬಾಡಿಗೆಗೆ ದೊರೆಯುತ್ತವೆ. ಊಟ ಮತ್ತು ವಸತಿಗೆ ದಾಂಡೇಲಿ ಸುತ್ತಮುತ್ತ 50 ರೆಸಾರ್ಟ್, 200 ಹೋಂ ಸ್ಟೇ ಮತ್ತು ಹೋಟೆಲ್‌ಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.