`ಕಿಮಾಯ~ ಎಂದರೆ ಬೆರಗಿನಿಂದ ಕಣ್ಣರಳಿಸುವ ಹೆಂಗಳೆಯರದ್ದು ಅಂದು ಪುರುಷರತ್ತ ವಾರೆನೋಟ ಬೀರುವ ಸರದಿ. ಹೊಳೆವ ಕಾಲುಗಳಲ್ಲಿ ಹೆಜ್ಜೆ ಹಾಕುತ್ತಾ, ಇವರ ಕಣ್ಣ ನೋಟವನ್ನು ಸೆರೆಹಿಡಿಯುವ ಕ್ಯಾಮೆರಾಗೆ ಪೋಸು ಕೊಡುವ ಬೆಡಗಿಯರು ಅಂದು ಪ್ರೇಕ್ಷಕರ ಸಾಲಿನಲ್ಲಿದ್ದರು.
ಇವರನ್ನು ರಂಜಿಸುವ ಅವಕಾಶ ಪುರುಷ ಮಾಡೆಲ್ ಗಳದ್ದಾಗಿತ್ತು. ಹೀಗಾಗಿ ನಗರದ ಸುರಸುಂದರಿಯರು ರಾತ್ರಿ ಪಾರ್ಟಿಯ ದಿರಿಸು ತೊಟ್ಟು ಕಂಗೊಳಿಸುತ್ತಿದ್ದರು. ಹೈ ಹೀಲ್ಡ್ ಚಪ್ಪಲಿ ಧರಿಸಿ ತಮ್ಮ ಪತಿ, ಗೆಳೆಯರೊಂದಿಗೆ ವಿಠ್ಠಲ ಮಲ್ಯ ರಸ್ತೆಯ ಯುಬಿ ಸಿಟಿಯಲ್ಲಿರುವ `ಕಿಮಾಯ~ದತ್ತ ಹೆಜ್ಜೆ ಹಾಕಿದ್ದರು.
ಅಷ್ಟಕ್ಕೂ ಮಹಿಳೆಯರ ಫ್ಯಾಷನ್ ದಿರಿಸಿಗಾಗಿಯೇ ಪ್ರಸಿದ್ಧವಾಗಿರುವ `ಕಿಮಾಯ~ ಇದೀಗ ಪುರುಷರ ಫ್ಯಾಷನ್‌ನತ್ತಲೂ ಗಮನ ನೀಡಿದೆ. ಒಂದು ಸುಂದರ ಸಂಜೆಯಲ್ಲಿ ವೈನ್-ಚೀಸ್ ಹೀರುತ್ತ ಫ್ಯಾಷನ್ ಶೋ ನೋಡಲು ಅವಕಾಶ ಮಾಡಿಕೊಟ್ಟಿತು. ಪುರುಷರ ಸಿದ್ಧ ಉಡುಪುಗಳ ಇಟಲಿ ಕಂಪೆನಿ ಮಿಲಾನೊ ಸಂಸ್ಥೆಯು `ವಯಾ ಮೊಂಟೆನಪೊ~ ಎಂಬ ಹೊಸ ಬಗೆ ಶರ್ಟ್ ಗಳನ್ನು ಭಾರತೀಯರಿಗಾಗಿ ಪರಿಚಯಿಸಿತು.
ಫ್ಯಾಷನ್ ಕ್ಷೇತ್ರದ ಹಲವು ಗಣ್ಯರು, ಮಾಡೆಲ್ ಲೋಕದ ಮಾಜಿ ಹಾಗೂ ಹಾಲಿ ಮಾಡೆಲ್‌ಗಳು, ನಗರದ ಪ್ರತಿಷ್ಠಿತ ವ್ಯಾಪಾರಿಗಳು ಹಾಗೂ ಸಿನಿಮಾ ಮಂದಿ ಅಲ್ಲಿ ಹಾಜರಿದ್ದರು. ಕೆಂಪು ಹಾಗೂ ಹಸಿರು ವೈನ್‌ಗಳು ತುಂಬಿದ್ದ ಶೀಷೆಗಳನ್ನು ಮೆಲ್ಲಗೆ ಮೇಜಿನ ಮೇಲೆ ಕುಟ್ಟಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು.
ಯಾವುದೇ ಆಡಂಬರ, ಬೆಳಕಿನಾಟವಿಲ್ಲದೆ ಫ್ಯಾಷನ್ ಶೋ ಆರಂಭವಾಯಿತು. ಹಿಮ್ಮೇಳದಲ್ಲಿ ಫ್ಯಾಷನ್ ಕೊರಿಯೋಗ್ರಾಫರ್ ಪ್ರಸಾದ್ ಬಿದಪ್ಪ ಅವರು ತಮ್ಮ ಕಂಚಿನ ಕಂಠದಿಂದ `ಲೇಡಿಸ್ ಅಂಡ್ ಜಂಟಲ್‌ಮೆನ್~ ಎಂದು ಸಂಬೋಧಿಸುತ್ತ ನಿರೂಪಣೆ ಆರಂಭಿಸಿದರು.
ಇಟಲಿಯ ಗೀತೆಗಳ ಹಿಮ್ಮೇಳದೊಂದಿಗೆ ವಯಾ ಮೊಂಟೆನಪೊ ತೊಟ್ಟ ಪುರುಷ ಮಾಡೆಲ್‌ಗಳು ಹಜ್ಜೆ ಹಾಕಿದರು. ಮೊದಲಿಗೆ `ಸ್ಪೋರ್ಟಿ~ ಎಂಬ ವಿನ್ಯಾಸದ ಕ್ಯಾಶುವಲ್ ಶರ್ಟ್‌ಗಳನ್ನು ತೊಟ್ಟ ಐವರು ಮಾಡೆಲ್‌ಗಳು ರ‌್ಯಾಂಪ್ ಏರಿದರು.
ರ‌್ಯಾಂಪ್‌ನ ಸುತ್ತ ವೈನ್ ಶೀಶೆ ಹಿಡಿದ ಪ್ರೇಕ್ಷಕರ ಕಣ್ಣಿಗೆ ಕಣ್ಣುಕೊಟ್ಟು ಅರೆಕ್ಷಣ ನಿಂತು ಮತ್ತೆ ಹಜ್ಜೆ ಹಾಕುತ್ತಾ ಸಾಗಿದರು. ನಂತರದ ಸರತಿ `ಕ್ಲಾಸಿಕ್~ ಶ್ರೇಣಿಯ ಶರ್ಟ್‌ಗಳದ್ದು. ಆನಂತರ `ಲಕ್ಷುರಿ~ ಶ್ರೇಣಿಯ ಮಿರಮಿರನೆ ಮಿಂಚುವ ಶರ್ಟ್‌ಗಳನ್ನು ತೊಟ್ಟು ಮಾಡೆಲ್‌ಗಳು `ರ‌್ಯಾಂಪಾಟ~ ಮುಗಿಸಿದರು.
ನಂತರ ಶೋಗೆ ಕಳೆ ನೀಡುವ ಸಲುವಾಗಿಯೇ ವಿವಿಧ ಕ್ಷೇತ್ರಗಳ ಗಣ್ಯರೂ ವಯಾ ಮೊಂಟೆನಪೊ ಶರ್ಟ್‌ಗಳನ್ನು ತೊಟ್ಟು ರ‌್ಯಾಂಪ್ ಏರಿದ್ದು ವಿಶೇಷ. ಅವರಲ್ಲಿ ಚಲನಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್, ರೆಸ್ಟೋರೆಂಟ್ ನಡೆಸುವ ಅಭಿಜಿತ್ ಹಾಗೂ ಪ್ರೆಸ್ಟೀಜ್ ಸಮೂಹದ ರಿಜ್ವಾನ್ ರಜಾಕ್ ಮುಂತಾದವರಿದ್ದರು.
ಚಪ್ಪಾಳೆ, ಶಿಳ್ಳೆಗಳ ಮೂಲಕ ಇವರನ್ನು ಅಭಿನಂದಿಸಲಾಯಿತು. ಅಂತಿಮವಾಗಿ ವಯಾ ಮೊಂಟೆನಪೊ ವಿನ್ಯಾಸಕ ಯುರೋಪ್‌ನ ಫ್ರಾನ್ಸಿಸ್ಕೊ ರೊಸ್ಸಿ ವೇದಿಕೆ ಏರಿ ಪ್ರತಿಯೊಬ್ಬ ಮಾಡೆಲ್‌ಗೂ ಅಭಿನಂದಿಸಿ ಶೋಗೆ ತೆರೆ ಎಳೆದರು.
ಈಜಿಪ್ಟ್‌ನ ಶ್ರೇಷ್ಠ ಗುಣಮಟ್ಟದ ನಯವಾದ ಹತ್ತಿಯಿಂದ ತಯಾರಾಗಿರುವ ವಯಾ ಮೊಂಟೆನಪೊ ಸಿದ್ಧ ಶರ್ಟ್‌ಗಳು ಹಾಗೂ ಧರಿಸುವವರ ಅಳತೆಗೆ ಅನುಗುಣವಾಗಿ ಸಿದ್ಧಪಡಿಸಿದ ಶರ್ಟ್‌ಗಳನ್ನು ಪ್ರಸ್ತುತಪಡಿಸಿದೆ. ಹೀಗಾಗಿ ಕಿಮಾಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಪುರಷ ತಮ್ಮ ದೇಹದ ಅಳತೆಗೆ ತಕ್ಕಂತೆ ತಮ್ಮಿಷ್ಟದ ಶರ್ಟ್‌ಗಳನ್ನು ಆಯ್ಕೆ ಮಾಡಿಕೊಂಡು, ಅದಕ್ಕನುಗುಣವಾದ ಕಾಲರ್, ಕಫ್ ಇತ್ಯಾದಿಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವಿದೆ.
ಇದಕ್ಕೆ ಹೆಚ್ಚುವರಿ ಒಂದು ಸಾವಿರ ರೂಪಾಯಿ ನೀಡಬೇಕಷ್ಟೆ. ವಯಾ ಮೊಂಟೆನಪೊ ಶರ್ಟ್‌ಗಳ ಆರಂಭಿಕ ಬೆಲೆ ನಾಲ್ಕು ಸಾವಿರ ರೂಪಾಯಿ. ಗರಿಷ್ಠ 15 ಸಾವಿರ ರೂಪಾಯಿವರೆಗಿನ ಶರ್ಟ್‌ಗಳು ಲಭ್ಯ.
ಶೋ ಮುಗಿದರೂ ಪರಸ್ಪರ ಮಾತಿನಲ್ಲಿದ್ದ ಅತಿಥಿಗಳು ಕಿಮಾಯದಲ್ಲಿದ್ದ ಸಂಗ್ರಹದತ್ತ ಹೊರಳಿದರು. ಪುರುಷರು ಹೊಸ ಶರ್ಟ್‌ಗಳ ವಿಭಾಗದತ್ತ ಕಣ್ಣು ಹಾಕಿದರೆ, ಮಹಿಳೆಯರು ದುಬಾರಿ ಬೆಲೆಯ ಅತ್ಯಾಕರ್ಷಕ ಸಲ್ವಾರ್, ಘಾಗ್ರಾಗಳನ್ನು ನೋಡುವುದರಲ್ಲಿ ಮಗ್ನರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.