ADVERTISEMENT

ಅಂಬರ ಚುಂಬಿತ ಗಡಿಯಾರ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 19:30 IST
Last Updated 20 ಮಾರ್ಚ್ 2012, 19:30 IST
ಅಂಬರ ಚುಂಬಿತ ಗಡಿಯಾರ
ಅಂಬರ ಚುಂಬಿತ ಗಡಿಯಾರ   

ಬೆಂಗಳೂರು ಬೆಳೆಯುತ್ತಿದೆ. ವರ್ಷಗಳುರುಳಿದಂತೆ ಇಲ್ಲಿ ಹೊಸತುಗಳ ಸೇರ್ಪಡೆ. ಜಯನಗರದ ಸೌತ್ ಎಂಡ್ ವೃತ್ತದ ರಸ್ತೆಯಲ್ಲಿ ಕಸದ ರಾಶಿ, ಮೂತ್ರ ವಿಸರ್ಜನೆಯ `ಪಬ್ಲಿಕ್ ಟಾಯ್ಲೆಟ್~ ಆಗ್ದ್ದಿದ ಜಾಗ ಇನ್ನು ಕೆಲವೇ ತಿಂಗಳಲ್ಲಿ ಪ್ರವಾಸಿ ತಾಣವಾದರೂ ಅಚ್ಚರಿಯಿಲ್ಲ. ಏಕೆಂದರೆ, ಅಲ್ಲೊಂದು ಗಡಿಯಾರ ಗೋಪುರ ಗಂಟೆ ಬಾರಿಸಲಿದೆ.

ದೇಶದಲ್ಲಿ ಈ ಬಗೆಯ ಇನ್ನೊಂದು ಗೋಪುರ ಗಡಿಯಾರ ಇಲ್ಲವಂತೆ. ಆರು ರಸ್ತೆಗಳು ಕೂಡುವ ಈ ಸೌತ್ ಎಂಡ್ ವೃತ್ತಕ್ಕೆ ಹೊಂದಿಕೊಂಡಂತಿರುವ, ತ್ರಿಕೋನಾಕೃತಿಯ, ಸುಮಾರು 750 ಚದರ ಅಡಿಗಳಷ್ಟು ವಿಸ್ತಿರ್ಣದಲ್ಲಿ ಗಡಿಯಾರ ರೂಪುಗೊಳ್ಳುತ್ತಿದೆ. ಕಳೆದ ಎರಡು ತಿಂಗಳಿನಿಂದ ಕಾಮಗಾರಿ ಭರದಿಂದ ಸಾಗಿದೆ.

ನಗರದಲ್ಲಿ ಹೆಚ್ಚು ಸಂಚಾರದಟ್ಟಣೆಯ ಸ್ಥಳಗಳ ಪೈಕಿ ಸೌತ್ ಎಂಡ್ ವೃತ್ತ ಕೂಡ ಒಂದು. ಮೂತ್ರ ವಿಸರ್ಜನೆಯ ಜಾಗವಾಗಿದ್ದ ಇಲ್ಲಿ ವಿಶಿಷ್ಟವಾದ `ಅಂಬರ ಚುಂಬನ~ ಹೆಸರಿನಲ್ಲಿ ಈ ಗಡಿಯಾರ ಗೋಪುರವನ್ನು ನಿರ್ಮಿಸಲು ಡಿಸೆಂಬರ್‌ನಲ್ಲಿ ಚಾಲನೆ ನೀಡಲಾಯಿತು. ಸುಮಾರು 54 ಅಡಿ ಎತ್ತರದ ಈ ಗಡಿಯಾರ ಗೋಪುರವು ಮೂರು ಪಿಲ್ಲರ್‌ಗಳನ್ನು ಹೊಂದಿದೆ. ಸಂಪೂರ್ಣ ಹಸಿರು ಬಣ್ಣದ `ಹಾಸನ್ ಗ್ರೀನ್ ಗ್ರಾನೈಟ್~ನಿಂದ ನಿರ್ಮಾಣವಾಗುತ್ತಿದೆ.

ತಲಾ ಏಳು ಅಡಿ ವ್ಯಾಸದ ಮೂರು ಬೃಹತ್ ಗಡಿಯಾರಗಳನ್ನು ಮೂರು ದಿಕ್ಕಿನಲ್ಲಿ ಅಳವಡಿಸಲಾಗುತ್ತಿದೆ. ಗೋಪುರದ ಒಂದು ದಿಕ್ಕಿಗೆ 30 ಅಡಿ ಎತ್ತರದಲ್ಲಿ ಮೆಟ್ರೊ ರೈಲು ಹಾದುಹೋಗುವುದು ವಿಶೇಷ ಆಕರ್ಷಣೆ.

ಯೂರೋಪ್‌ನ ಸ್ವೀಡನ್‌ನಲ್ಲಿರುವ ಎರಡು ಪಿಲ್ಲರ್‌ಗಳ 48 ಅಡಿ ಎತ್ತರದ ಗಡಿಯಾರ ಗೋಪುರವನ್ನು ಈ ಸೌತ್ ಎಂಡ್ ಗೋಪುರ ಮೀರಿಸುತ್ತದೆ. ವಾರದ ಏಳು ದಿನಗಳನ್ನು ವಿಶೇಷವಾಗಿ ಸೂಚಿಸಲು ಕಾಮನಬಿಲ್ಲಿನ ಏಳು ಬಣ್ಣಗಳನ್ನು ಹೋಲುವ ದೀಪಾಲಂಕಾರದ ವ್ಯವಸ್ಥೆಯನ್ನು ಈ ಗಡಿಯಾರ ಗೋಪುರದಲ್ಲಿ ಅಳವಡಿಸಲಾಗುತ್ತದೆ.

ವಾರದ ಒಂದೊಂದು ದಿನವನ್ನು ಒಂದೊಂದು ಬಣ್ಣವು ಪ್ರತಿನಿಧಿಸಲಿದೆ. ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ `ಅಂಬರ ಚುಂಬನ~ ಗಡಿಯಾರ ಗೋಪುರದ ಕಾಮಗಾರಿಯು ಮೇ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಜೂನ್ ತಿಂಗಳ ಮೊದಲ ವಾರದಲ್ಲಿ ಉದ್ಘಾಟನೆಯಾಗಲಿದೆ.

ಈ ಮೊದಲು ಇಲ್ಲಿ ಕಸ ಹಾಕುತ್ತಿದ್ದರು. ಹೋಟೆಲ್, ಶಾಲಾ ಕಾಲೇಜು ಮತ್ತು ದ್ವಿಚಕ್ರವಾಹನ ಸವಾರರು ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದ ಇಲ್ಲಿ ಏನಾದರೂ ಮಾಡಬೇಕೆಂದು ಚಿಂತಿಸಿ ಇಂಟರ್‌ನೆಟ್‌ನಲ್ಲಿ ಸ್ವೀಡನ್‌ನ ಗೋಪುರವನ್ನು ನೋಡಿ ಅದೇ ಮಾದರಿಯಲ್ಲೇ ಇಲ್ಲೊಂದು ಗಡಿಯಾರ ಗೋಪುರ ನಿರ್ಮಾಣ ಮಾಡಲಾಗುತ್ತಿದೆ ಎನ್ನುತ್ತಾರೆ ಬಿಬಿಎಂಪಿ ಪಾಲಿಕೆ ಸದಸ್ಯ ಎನ್.ಆರ್.ರಮೇಶ್.

ಎರಡು ಮುಳ್ಳುಗಳ ಗಡಿಯಾರದ ಗೋಪುರ ಮೆಟ್ರೊ ರೈಲು ಸಾಗುವ ಹಾದಿಯಲ್ಲೂ ಆಕರ್ಷಕವಾಗಿ ಕಾಣಲಿದೆ. ನಗರ ನಿಜಕ್ಕೂ ಬದಲಾಗುತ್ತಿದೆಯಲ್ಲವೇ? 
 

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.