ಅಡುಗೆ ಕೋಣೆಯಂತೆ ಸಿಂಗಾರಗೊಂಡ ಪ್ರಾಂಗಣ. `ರ‍್ಯಾಷನಲ್' ಎಂದು ಬರೆದ ಯಂತ್ರದಲ್ಲಿ ಬೇಯುತ್ತಿದ್ದ ಮಾಂಸ, ಬ್ರೆಡ್‌ಗಳು. ಪಕ್ಕದ ಟೇಬಲ್ ಮೇಲೆ ಕತ್ತರಿಸಿ ಬೇಯಿಸಿ ಕೆಂಪಾಗಿಸಿದ್ದ ಮಾಂಸದ ತುಂಡುಗಳು, ಹಣ್ಣು ತರಕಾರಿಗಳು, ಬ್ರೆಡ್, ಆಮ್ಲೆಟ್. ಕತ್ತರಿ ಹಿಡಿದು ಆಹಾರ ತಯಾರಿಯಲ್ಲಿ ನಿರತರಾಗಿದ್ದ ಬಾಣಸಿಗ.
ಈ ದೃಶ್ಯ ಕಂಡುಬಂದಿದ್ದು ವೈಟ್‌ಫೀಲ್ಡ್‌ನ ಕೆಟಿಪಿಒದ ಆವರಣದಲ್ಲಿ ಜೂನ್ 12ರಿಂದ 14ರವರೆಗೆ ನಡೆದ `ವಿಶ್ವ ಆಹಾರ ಆದರಾತಿಥ್ಯ' ಮೇಳದಲ್ಲಿ. ವಿಶಾಲವಾದ ಆ ಪ್ರಾಂಗಣದಲ್ಲಿ ಅಡುಗೆ ಕೋಣೆಗೆ, ಹೋಟೆಲ್‌ಗೆ, ರೆಸ್ಟೋರೆಂಟ್‌ಗಳಿಗೆ ಅವಶ್ಯವಿರುವ ಎಲ್ಲಾ ಸಾಮಗ್ರಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಇಟಲಿ, ಇಂಡೋನೇಷ್ಯಾ, ಮಲೇಷ್ಯಾ, ಜರ್ಮನಿ, ಆಸ್ಟ್ರೇಲಿಯಾದ ಕಂಪೆನಿಗಳು ಭಾಗವಹಿಸಿದ್ದವು.
ಬಂದ ಹಲವು ವಿದೇಶಿಗರನ್ನು ತಮ್ಮತ್ತ ಸೆಳೆಯುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದು ಬಾಣಸಿಗ ರಾಹುಲ್ ಬಜಾಜ್. ಜರ್ಮನಿಯ ಆಹಾರ, ಅಲ್ಲಿನ ರ‍್ಯಾಷನಲ್ ಕಂಪೆನಿಯ ಸೆಲ್ಫ್ ಕುಕ್ಕಿಂಗ್ ಸೆಂಟರ್ ಯಂತ್ರದ ಬಗ್ಗೆ ವಿವರಿಸುತ್ತಾ ಎರಡೇ ನಿಮಿಷದಲ್ಲಿ ಆಹಾರಗಳನ್ನು ಬೇಯಿಸಿ ಹಂಚಿದರು ರಾಹುಲ್.
ಮಾತನಾಡುತ್ತಲೇ ಫಟಾಫಟ್ ಆಮ್ಲೆಟ್ ತಯಾರಿಸಿ ನೆರೆದವರ ಬಾಯಲ್ಲಿ ನೀರೂರಿಸಿದರು. `ಬೆಂಗಳೂರು ಅಂತರರಾಷ್ಟ್ರೀಯವಾಗಿ ಪ್ರಖ್ಯಾತವಾಗಿದೆ. ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸಲು ಖುಷಿ ಎನಿಸುತ್ತಿದೆ. ಜನರ ಸ್ಪಂದನೆ ಖುಷಿ ನೀಡಿದೆ. ನಮ್ಮ ಈ ಯಂತ್ರದಲ್ಲಿ ಒಂದೇ ಬಾರಿಗೆ ಬೇರೆ ಬೇರೆ ಪದಾರ್ಥಗಳನ್ನು ಬೇಯಿಸಬಹುದು' ಎಂದರು.
ಆಮದುದಾರರು, ವಿತರಕರು, ಆಹಾರ ಮತ್ತು ಪಾನೀಯ ತಯಾರಕ ಕಂಪೆನಿಗಳವರು, ಹೋಟೆಲ್ ಹಾಗೂ ರೆಸ್ಟೋರೆಂಟ್‌ಗೆ ಬೇಕಾದ ವಸ್ತುಗಳ ಮಾರಾಟ ವ್ಯವಸ್ಥಾಪಕರು, ಆದರಾತಿಥ್ಯ ಕ್ಷೇತ್ರದ ವೃತ್ತಿಪರರು, ಬಾಣಸಿಗರು, ಪಾಕಪ್ರವೀಣರು, ವ್ಯಾಪಾರ ಸಂಸ್ಥೆಗಳು, ಹೋಟೆಲ್ ಉದ್ಯಮಿಗಳು, ಆತಿಥ್ಯ ಕೇಂದ್ರದ ಒಳಾಂಗಣ ತಜ್ಞರು ಹೀಗೆ ಅನೇಕರು ಇಲ್ಲಿ ಪಾಲ್ಗೊಂಡು ಕ್ಷೇತ್ರದಲ್ಲಾಗಿರುವ ಅಭಿವೃದ್ಧಿ, ಸಂಶೋಧನೆಗಳ ಬಗ್ಗೆ ತಿಳಿಸಿ ಅಚ್ಚರಿ ಮೂಡಿಸಿದರು.
ಕಾರ್ಯಕ್ರಮವನ್ನು ಆಯೋಜಿಸಿದ್ದ `ಫುಡ್ ಅಂಡ್ ಹಾಸ್ಪಿಟಾಲಿಟಿ' ಸಂಸ್ಥೆಯವರ ಪ್ರಕಾರ ಸುಮಾರು 300ಕ್ಕೂ ಹೆಚ್ಚು ಕಂಪೆನಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.
`ಕಾರ್ಯಕ್ರಮವನ್ನು ಆಯೋಜಿಸುವುದಕ್ಕೂ ಮೊದಲು ತುಸು ಆತಂಕವಿತ್ತು. ಈಗ ಖುಷಿ ಎನಿಸುತ್ತಿದೆ. ಇದು 20ನೇ ಆವೃತ್ತಿಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ವ್ಯಾಪಾರದಲ್ಲಿ ಶೇ 20ರಷ್ಟು ಹೆಚ್ಚಳವಾಗಿದೆ. ಪಾಲ್ಗೊಂಡ ದೇಶಕ್ಕೆ ಹೋಲಿಸಿದರೆ ಶೇ 50ರಷ್ಟು ಅಭಿವೃದ್ಧಿ ಕಂಡುಬಂದಿದೆ.
ಆದರಾತಿಥ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ವಿಶ್ವದ ಉತ್ತಮ ಸರಕುಗಳನ್ನು ಪ್ರದರ್ಶಿಸುವುದು ನಮ್ಮ ಉದ್ದೇಶ. ಜಾಗತಿಕವಾಗಿಯೂ ಬೆಂಗಳೂರು ಆಕರ್ಷಕ ನಗರವಾಗಿದೆ' ಎನ್ನುತ್ತಾರೆ ಆಯೋಜಕರಲ್ಲೊಬ್ಬರಾದ ಫಿರಾ ಮಿಲಾನೊದ ವ್ಯವಸ್ಥಾಪಕ ನಿರ್ದೇಶಕ ವೆುಹುಲ್ ಲ್ಯಾನ್‌ವರ್ಸ್ ಶಾ.
ಅದ್ದೂರಿ ರೆಸ್ಟೊರೆಂಟ್‌ಗಳಲ್ಲಿ ಕಾಣಸಿಗುವ ಪಾತ್ರೆಗಳು, ಸಾಮಗ್ರಿಗಳನ್ನು ನೋಡುತ್ತಾ ಅಂದ ಚೆಂದಗಳ ತೂಕ ಮಾಡುತ್ತಿದ್ದ ಮನಸ್ಸಿಗೆ ಸಿಹಿಯ ರುಚಿ ಹತ್ತಿಸಿದ್ದು ಇಂಡೋನೇಷ್ಯಾದ ಕಂಪೆನಿ. `ಗಾನ್ ಮ್ಯಾಡ್' ಎಂಬ ಮಾವಿನ ಹಣ್ಣಿನ ಸುವಾಸನೆಯ ಚಾಕೊಲೇಟ್ ಒಂದನ್ನು ಕೈಗಿತ್ತು `ಹ್ಯಾವ್ ಇಟ್' ಎಂದು ಒತ್ತಾಯ ಮಾಡಿದರು ಇಂಡೋನೇಷ್ಯಾದ ಅಭ್ಯರ್ಥಿಗಳು.
ಮುಜುಗರದಿಂದಲೇ ಅದನ್ನು ಬಾಯಿಗಿಟ್ಟುಕೊಳ್ಳುತ್ತಿದ್ದಂತೆ ವ್ಹಾವ್ ಎಂದಿತು ಮನಸ್ಸು. ನಮ್ಮ ಮುಖದ ಭಾವನೆಗಳನ್ನು ಅರಿತೊಡನೆ `ಇದು ಇಂಡೋನೇಷ್ಯಾ ಕಂಪೆನಿಯದ್ದು. ಆದರೆ ತಯಾರಾಗುವುದು ಬೆಂಗಳೂರಿನಲ್ಲೇ' ಎಂದಳು ಜಿಂಕೆ ಕಣ್ಣಿನ ಮಹಿಳೆ.
`ನಮ್ಮ ದೇಶದ ಕಂಪೆನಿಗಳ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಮೇಳದಲ್ಲಿ ಪಾಲ್ಗೊಂಡಿದ್ದೇವೆ. ಭಾರತ ಬೃಹತ್ ಮಾರುಕಟ್ಟೆಯನ್ನು ಹೊಂದಿದೆ. ಆರ್ಥಿಕವಾಗಿ ಬೆಂಗಳೂರು ಸದೃಢವಾಗಿದೆ. ಹೂಡಿಕೆದಾರರಿಗೆ ಇದು ಉತ್ತಮ ತಾಣವಾಗಿದೆ. ಭಾಗವಹಿಸುತ್ತಿರುವುದಕ್ಕೆ ಸಂತೋಷವಾಗಿದೆ' ಎನ್ನುತ್ತಾರೆ ಅಲ್ಲಿನ ವ್ಯಾಪಾರ ಇಲಾಖೆ ರಾಯಭಾರಿ ಬೂಡಿ ಸ್ಯಾಂಟೊಸೊ.
`ನಾನು ಎಂಟು ವರ್ಷದಿಂದ ಬೆಂಗಳೂರಿನಲ್ಲಿದ್ದೇನೆ. ವೈಟ್‌ಫೀಲ್ಡ್‌ನಲ್ಲಿರುವ ಇನ್‌ಕ್ಯಾಂತೊ ಎಂಬ ಇಟಾಲಿಯನ್ ರೆಸ್ಟೊರೆಂಟ್‌ನಲ್ಲಿ ಬಾಣಸಿಗನಾಗಿದ್ದೇನೆ. ಕರ್ನಾಟಕದ ಸಚಿವರು ಇಲ್ಲಿಗೆ ಭೇಟಿ ನೀಡಿದ್ದರು. ಅವರಿಗೆ ನಾನು ಮಾಡಿದ ಅಡುಗೆಯನ್ನು ಉಣಬಡಿಸಿದೆ. ಚೆನ್ನಾಗಿದೆ ಎಂದರು. ಇಂಥ ಮೇಳದಲ್ಲಿ ಭಾಗವಹಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ' ಎನ್ನುತ್ತಾರೆ ರಮೇಶ್ ಸಿಂಗ್ ಮೆಹ್ರಾ.
ಅಡುಗೆ ಮನೆಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ನೋಡಿದ ಮನಸ್ಸಿಗೆ ತರಕಾರಿ ಕತ್ತರಿಸುವ ಯಂತ್ರವನ್ನು ಕಂಡು ಲೇಸ್ ತಿಂದಷ್ಟು ಖುಷಿಯಾಯಿತು. ವಿಧವಿಧದ ಆಕಾರದಲ್ಲಿ ಕತ್ತರಿಸುವ ಅವಕಾಶ ಇರುವ ಅದರ ಬೆಲೆ ಮಾತ್ರ ಮನಸ್ಸನ್ನು ಮನೆಯತ್ತ ತಿರುಗಿಸಿತ್ತು.
`ಮುಂಬೈನಿಂದ ಬಂದಿದ್ದು. ತರಕಾರಿ ಕತ್ತರಿಸುವುದಕ್ಕೆ ಸಂಬಂಧಿಸಿದ ಎಲ್ಲಾ ನಮೂನೆಯ ಕಟರ್‌ಗಳು ನಮ್ಮಲ್ಲಿವೆ. ಎಲೆಕೂಸು, ಕ್ಯಾರೆಟ್, ಆಲೂಗಡ್ಡೆ ಏನೇ ಇರಲಿ ನಿಮಗೆ ಬೇಕಾದ ಆಕಾರದಲ್ಲಿ ಥಟ್ಟಂತ ಕತ್ತರಿಸಬಹುದು. ನಮ್ಮ ಉತ್ಪನ್ನಗಳನ್ನು ಪ್ರದರ್ಶಿಸುವುದಕ್ಕೆ ಅವಕಾಶ ಸಿಕ್ಕಿದ್ದು ಖುಷಿ ನೀಡಿದೆ' ಎಂದು ಒಂದಿಷ್ಟು ತರಕಾರಿಯನ್ನು ಕತ್ತರಿಸಿ ಯಂತ್ರದ ಮಹಿಮೆಯನ್ನು ತೋರಿಸಿದರು ಪ್ಲಾಸ್ಟ್ ಕೇರ್ ಕಂಪೆನಿಯ ಮಾರಾಟ ಪ್ರತಿನಿಧಿ ವಿಭೋರ್ ಅಗರ್‌ವಾಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.