ADVERTISEMENT

ಅದು ಕೇಟ್ ನೈಟ್!

ಪ್ರಜಾವಾಣಿ ವಿಶೇಷ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST
ಅದು ಕೇಟ್ ನೈಟ್!
ಅದು ಕೇಟ್ ನೈಟ್!   

ವಯಸ್ಸು 14 ಇದ್ದಾಗಲೇ ಫ್ಯಾಷನ್ ಜಗತ್ತಿನೊಂದಿಗೆ ಸಖ್ಯ ಬೆಳೆಸಿಕೊಂಡವರು ಕೇಟ್ ಎಲಿಜಬೆತ್. ಆನಂತರದಲ್ಲಿ ಅವರಿಗೆ ಫ್ಯಾಷನ್ ಜತೆಗಿನ ನಂಟು ಗಾಢವಾಯಿತು.

ಬೇಟೆಗಾಗಿ ಕಾಯುತ್ತಾ ಕಡಲ ಕಿನಾರೆಯಲ್ಲಿ ಕುಳಿತು ಶತಮಾನವನ್ನೇ ಕಳೆದು ಬಿಡುವ ಹಕ್ಕಿಯ ಸಂಯಮದಂತೆ; ಮ್ಯಾಗಝಿನ್ ಒಂದರ ಮುಖಪುಟಕ್ಕಾಗಿ ಮರಳುಗಾಡಿನಲ್ಲಿ ಅಂಗಾತ ಮಲಗಿ ಆ ಹಕ್ಕಿಯ ಭಾವವನ್ನೆ ಮುಖದಲ್ಲಿ ಮೈದುಂಬಿಕೊಂಡು ತಮ್ಮ ಬಂಗಾರದಂತಹ ಮೈಬಣ್ಣದ ಜತೆಗೆ ದೇಹಸಿರಿಯನ್ನು ಪ್ರದರ್ಶಿಸಿದ್ದು ಫ್ಯಾಷನ್ ಜಗತ್ತಿನಲ್ಲಿ ಸಂಚಲನ ಉಂಟುಮಾಡಿತು.

ಫ್ಯಾಷನ್ ಜಗತ್ತಿನಲ್ಲಿ ಗಳಿಸಿದ ಜನಪ್ರಿಯತೆ ಕೇಟ್‌ಗೆ ನಟಿಯಾಗುವ ಅವಕಾಶವನ್ನು ಕೂಡ ದೊರಕಿಸಿಕೊಟ್ಟಿತು. ಜತೆಗೆ ಹಲವು ಕಂಪೆನಿಗಳ ರಾಯಭಾರಿ ಕೂಡ ಆದರು. ಇವರ ಚೆಲುವಿಗೆ `ಮಿಸ್ ಗ್ರೇಟ್ ಬ್ರಿಟನ್ ಫೋಟೊಜೆನಿಕ್~ ಹಾಗೂ `ಮಿಸ್ ಇಂಗ್ಲೆಂಡ್~ ಪ್ರಶಸ್ತಿ ಕೂಡ ಲಭಿಸಿದೆ.  ಬ್ರಿಟನ್‌ನ ಟ್ಯಾಬ್ಲಾಯ್ಡಗಳು ಹಾಗೂ ಹಲವಾರು ಜನಪ್ರಿಯ ನಿಯತಕಾಲಿಕೆಗಳ ಮುಖಪುಟದಲ್ಲಿ ಕೇಟ್ ಕಾಣಿಸಿಕೊಂಡಿದ್ದಾರೆ.

`ಟೇಕ್ ಎ ಬ್ರೇಕ್~ ಎಂಬ ಮ್ಯಾಗಝಿನ್ ತನ್ನ ಮುಖಪುಟದ `ಕವರ್ ಗರ್ಲ್~ ಆಗಿ ಅವರ ಚಿತ್ರವನ್ನು16 ಬಾರಿ ಪ್ರಕಟಿಸಿರುವುದು ಆಕೆಯ ಜನಪ್ರಿಯತೆಗೆ ಸಾಕ್ಷಿ. ಕೇಟ್ ಚಿಕ್ಕ ವಯಸ್ಸಿನಲ್ಲಿಯೇ ಯಶಸ್ಸು, ಖ್ಯಾತಿ ಎರಡನ್ನು ಗಳಿಸಿಕೊಂಡವರು.

ಇಷ್ಟೆಲ್ಲಾ ಏಣಿಯನ್ನು ಚಕಚಕನೆ ಏರಿರುವ ಅವರ ವಯಸ್ಸು ಈಗ 28. ಮೂಲ ಬ್ರಿಟನ್. ಖ್ಯಾತ ಹಿನ್ನೆಲೆ ಗಾಯಕ ಲಕ್ಕಿ ಆಲಿ (58) ಅವರ ಮೂರನೇ ಪತ್ನಿಯಾದ ನಂತರ ಬೆಂಗಳೂರಿನಲ್ಲೇ ವಾಸ. ಕೇಟ್ ಈಗ ಭಾರತೀಯ ಹೆಣ್ಣುಮಗಳು. ಡ್ಯಾನಿ ಎಂಬ 7 ತಿಂಗಳ ಪುಟ್ಟಮಗುವಿನ ತಾಯಿ.

ಹೀಗೆ ಫ್ಯಾಷನ್ ಲೋಕದಲ್ಲಿ  ತಮ್ಮದೇ ಛಾಪು ಮೂಡಿಸಿದ ಕೇಟ್ ಕೇವಲ ರ‌್ಯಾಂಪ್ ಮೇಲೆ ಬೆಕ್ಕಿನ ನಡಿಗೆ ಹಾಕುವುದೊಂದನ್ನೇ ರೂಢಿಸಿಕೊಳ್ಳಲಿಲ್ಲ. ಅವಕಾಶ ವಂಚಿತರು, ಅಸಹಾಯಕರಿಗೆ ಸಾಂತ್ವನ ನೀಡುವ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಕ್ಯಾನ್ಸರ್ ಪೀಡಿತರ ಚಿಕಿತ್ಸೆಗಾಗಿ ಶ್ರಮಿಸುತ್ತಿರುವ ಇಂಗ್ಲೆಂಡ್‌ನ ಆ್ಯಂಟನಿ ನೋಲನ್ ಬೋನ್ ಮಾರೋ ಟ್ರಸ್ಟ್‌ಗೆ ಒಂದು ಲಕ್ಷ ಪೌಂಡ್ ನಿಧಿ ಸಂಗ್ರಹಣೆ ಮಾಡಿಕೊಟ್ಟು ಮಾನವೀಯತೆಯನ್ನೂ ಮೆರೆದರು.

ಡ್ಯಾನಿಗೆ ಅಮ್ಮನಾದ ನಂತರ ಹೊರಗೆಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದ ಕೇಟ್, ಭಾನುವಾರ (ಫೆ.19) ಕೋರಮಂಗಲದ ಫೋರಂ ಮಾಲ್‌ನಲ್ಲಿ ಕಾಣಿಸಿಕೊಂಡರು. ಮಾಲ್‌ಗೆ ಎಂಟು ವರ್ಷ ತುಂಬಿದ ಸಮಾರಂಭ ಅದು. ಅಲ್ಲಿನ ದೊಡ್ಡ ಕೆಂಪುಹಾಸು, ಝಗಮಗಿಸುವ ವಿದ್ಯುತ್ ದೀಪಗಳು ಮಾಲ್‌ನ ಬರ್ತ್‌ಡೇ ಸಮಾರಂಭಕ್ಕೊಂದು ಅದ್ದೂರಿತನ ತಂದುಕೊಟ್ಟಿತ್ತು.

ರಾಜೇಶ್ ಶೆಟ್ಟಿ ಮತ್ತು ಸೋಚ್ ವಿನ್ಯಾಸ ಮಾಡಿದ್ದ ದಿರಿಸು ಧರಿಸಿ ರ‌್ಯಾಂಪ್ ಮೇಲೆ ಹೆಜ್ಜೆ ಹಾಕಿದ  ಕೇಟ್ ಎಲ್ಲರನ್ನೂ ಬೆರಗುಗೊಳಿಸಿದರು. ಕ್ಯಾಟ್‌ವಾಕ್ ಮಾಡುವಾಗ ಅವರ ಅಭಿಮಾನಿಗಳ ಮನಸ್ಸಿನಲ್ಲಿ ಆಗುತ್ತಿದ್ದ ಖುಷಿ ಹೇಳತೀರದು. ಕೆಲವರಂತೂ ಆಕೆಗೆ ನಿಂತಲ್ಲಿಂದಲೇ ಮುತ್ತು ತೇಲಿಬಿಟ್ಟು ಕೃತಾರ್ಥರಾದರು.

ಕೇಟ್ ರ‌್ಯಾಂಪ್ ಹತ್ತುವುದಕ್ಕೂ ಮುನ್ನ ವಿನ್ಯಾಸಕಾರರು ಸಿದ್ಧಪಡಿಸಿದ ಸೀರೆ, ಗಾಗ್ರ, ಎಥ್ನಿಕ್ ವೇರ್, ಮಾಡ್ ಡ್ರೆಸ್‌ಗಳನ್ನು ಧರಿಸಿ ರ‌್ಯಾಂಪ್ ಮೇಲೆ  ಇತರೆ ಎಂಟು ರೂಪದರ್ಶಿಯರು ಹೆಜ್ಜೆಹಾಕಿದರು. ನಡುನಡುವೆ ನಿರೂಪಕರ ಮಾತಿನ ಕಚಗುಳಿ ಕೂಡ ಇತ್ತು. ಕೇಟ್ ಮಾತು ಕೇಳಬೇಕೆಂದು ನಿಂತಿದ್ದ ಅವರ ಅಭಿಮಾನಿಗಳು ಕ್ಯಾಟ್‌ವಾಕ್ ಮಾತ್ರ ನೋಡಿ ಸಂತಸ ಪಟ್ಟುಕೊಂಡರು.

ಅವರು ಮಾತನಾಡದಿದ್ದರೂ ಚೆಲುವು ಚೆಲ್ಲುತ್ತಾ ಅಭಿಮಾನಿಗಳನ್ನು ಮೂಕಪ್ರೇಕ್ಷಕರನ್ನಾಗಿಸಿದರು. ಪುಟ್ಟ ಮಗುವಿನ ತಾಯಿಯಾದರೂ ಕೇಟ್ ಈಗಲೂ ತಮ್ಮ ದೇಹಾಕಾರವನ್ನು ಮಾಡೆಲ್‌ಗಳಂತೆಯೇ ಉಳಿಸಿಕೊಂಡಿರುವ ಕುರಿತೂ ಕೆಲವರ ನಡುವೆ ಸಣ್ಣದನಿಯಲ್ಲಿ ಮಾತುಗಳು ವಿನಿಮಯಗೊಂಡವು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.