ADVERTISEMENT

ಅನ್ವೇಷಣೆಗಳ ಜುಗಾಡ್ ಇನೊವೇಷನ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2012, 19:30 IST
Last Updated 7 ಜೂನ್ 2012, 19:30 IST
ಅನ್ವೇಷಣೆಗಳ ಜುಗಾಡ್ ಇನೊವೇಷನ್
ಅನ್ವೇಷಣೆಗಳ ಜುಗಾಡ್ ಇನೊವೇಷನ್   

ಜಗತ್ತಿನಲ್ಲಿ ದಿನನಿತ್ಯ ಹಲವು ಅನ್ವೇಷಣೆಗಳು ನಡೆಯುತ್ತಲೇ ಇರುತ್ತವೆ. ನಮ್ಮ ಸಮಸ್ಯೆಗಳಿಗೆ ಪರಿಹಾರಗಳೂ ನಮ್ಮ ಸುತ್ತಮುತ್ತಲೇ ಇರುತ್ತವೆ. ಅದನ್ನು ಗುರುತಿಸಲು ಕ್ರಿಯಾಶೀಲತೆ ಮತ್ತು ಸರಳ ಯೋಚನೆಗಳು ಕೈಗೂಡಿದರೆ ಸಾಕು ಎಂಬುದನ್ನು ಹೇಳಹೊರಟಿದೆ `ಜುಗಾಡ್ ಇನೊವೇಷನ್~ ಪುಸ್ತಕ.

ವೈಟ್‌ಫೀಲ್ಡ್‌ನಲ್ಲಿನ ಸ್ಯಾಪ್ ಲ್ಯಾಬ್ಸ್ ಇಂಡಿಯಾದಲ್ಲಿ ಜೂನ್ 6ರಂದು ಈ `ಜುಗಾಡ್ ಇನೊವೇಷನ್~ ಪುಸ್ತಕ ಬಿಡುಗಡೆಯಾಯಿತು. ನವಿ ರಾದ್‌ಜೌ, ಡಾ. ಜಯದೀಪ್ ಪ್ರಭು ಮತ್ತು ಡಾ. ಸೈಮೋನ್ ಅಹುಜಾ ಎಂಬ ಮೂವರು ಪುಸ್ತಕದ ಲೇಖಕರು ನಮ್ಮಳಗಿನ ಕ್ರಿಯಾಶೀಲತೆಯನ್ನು ಒರೆಗೆ ಹಚ್ಚಿದರೆ ಏನೆಲ್ಲಾ ಕಾರ್ಯಗಳು ಸಾಧ್ಯ ಎಂಬುದನ್ನು ಈ ಪುಸ್ತಕದ ಮೂಲಕ ಹೇಳಹೊರಟಿದ್ದಾರೆ.

`ಸರಳ, ಕಡಿಮೆ ಸಂಪನ್ಮೂಲ ಮತ್ತು ಕ್ರಿಯಾಶೀಲತೆ ಈ ಮೂರು ಅಂಶಗಳತ್ತ ಬೆಳಕು ಚೆಲ್ಲಿರುವ ಈ ಪುಸ್ತಕದ ಹೆಸರಿನಲ್ಲಿಯೇ ಕ್ರಿಯಾಶೀಲತೆ ಅಡಗಿದೆ. ಕಡಿಮೆ ವೆಚ್ಚದ ವಾಹನವೊಂದಕ್ಕೆ ಜುಗಾಡ್ ಎಂಬ ಹೆಸರಿದೆ.

ಹಳ್ಳಿಗಾಡುಗಳಲ್ಲಿ ಈ ವಾಹನ ಹೆಚ್ಚು ಬಳಕೆಯಲ್ಲಿದೆ. ಜುಗಾಡ್ ಎನ್ನುವುದನ್ನು ಒಂದು ಪರಿಕಲ್ಪನೆಯಾಗಿ ತೆಗೆದುಕೊಂಡರೆ ಅದನ್ನು ಹಿಂದಿಯಲ್ಲಿ ಕ್ರಿಯಾಶೀಲತೆ ಮತ್ತು ನಮ್ಮ ಸುತ್ತಲಿನ ಕೆಲವು ಸರಳ ಕೆಲಸ ಎಂದು ವಿವರಿಸಲಾಗುತ್ತದೆ. ತುಂಬಾ ಕಷ್ಟಕರ ಸಮಸ್ಯೆಯನ್ನು ಅತಿ ಸರಳವಾಗಿ ನಿವಾರಿಸಬಹುದು ಎಂಬುದನ್ನು ಸಂಕೇತಿಸಲು ಜುಗಾಡ್ ಎಂಬ ಪದ ಬಳಸಲಾಗಿದೆ~ ಎನ್ನುತ್ತಾರೆ ಲೇಖಕರು.

`ಅನ್ವೇಷಣೆಯೆಂದರೆ ದೊಡ್ಡ ಮೊತ್ತದಲ್ಲಿ, ತಂತ್ರಜ್ಞಾನವನ್ನು ಉಪಯೋಗಿಸಿಯೇ ಮಾಡಬೇಕೆಂದೇನಿಲ್ಲ. ನಮಗೆ ನಿಲುಕುವುದರಿಂದಲೇ ಹೊಸತನ್ನು ಕಂಡುಹಿಡಿಯಬಹುದು ಎಂಬುದಕ್ಕೆ ಹಲವು ಉದಾಹರಣೆಗಳನ್ನು ಪುಸ್ತಕದಲ್ಲಿ ನೀಡಲಾಗಿದೆ. ನಮ್ಮ ಯೋಚನಾ ಕ್ರಮ, ತಂತ್ರಗಾರಿಕೆ, ಕ್ರಿಯಾಶೀಲತೆ ಇವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂಬ ಅಂಶವನ್ನು ಎತ್ತಿಹಿಡಿಯುವುದು ಪುಸ್ತಕದ ಉದ್ದೇಶ~ ಎಂದು ವಿವರಿಸಿದರು.

ಲೇಖಕರೊಂದಿಗೆ ಸ್ಯಾಪ್‌ನ ವ್ಯವಸ್ಥಾಪಕ ನಿರ್ದೇಶಕ ವಿ. ಆರ್. ಫೆರೋಸ್, ಜಿಇ ಹೆಲ್ತ್‌ಕೇರ್‌ನ ಉಪಾಧ್ಯಕ್ಷ ಜಯದೀಪ್ ನಾಗ್, ಎಂಬ್ರೇಸ್‌ನ ಸಹ ಸಂಸ್ಥಾಪಕಿ ಜೇನ್ ಚೆನ್ ಉಪಸ್ಥಿತರಿದ್ದರು. ಜೇನ್ ಚೆನ್ ಕಡಿಮೆ ವೆಚ್ಚದ ಇನ್‌ಕ್ಯೂಬೇಟರ್ ಅನ್ನು ಅಲ್ಲಿ ಪರಿಚಯಿಸಿದರು.

ಸ್ಯಾಪ್ ಇಂಡಿಯಾ ಸಂಸ್ಥೆಯೂ ತನ್ನ ಉದ್ಯೋಗಿಗಳಿಗೆ ಅನ್ವೇಷಣೆಗೆ ಅವಕಾಶ ನೀಡುತ್ತಿರುವುದರಿಂದ ಈ ಸಂಸ್ಥೆ ಕುರಿತಾಗಿಯೂ ಪುಸ್ತಕದಲ್ಲಿ ಉಲ್ಲೇಖವಿದೆ. `ಭಾರತ ಅತಿ ಬಲಶಾಲಿ ದೇಶ. ಇಲ್ಲಿ ಹಲವು ಪ್ರತಿಭೆಗಳಿವೆ. ಇಲ್ಲಿರುವ ಹೇರಳ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಅದಕ್ಕೆ ಈ ಪುಸ್ತಕ ಪ್ರೋತ್ಸಾಹ ನೀಡಲಿದೆ ಎಂದರು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಫೆರೋಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.