ADVERTISEMENT

ಅಪಾರ್ಟ್‌ಮೆಂಟ್ ಹುಡುಗರ ಹವ್ಯಾಸಿ ಬ್ಯಾಂಡ್‌

ಸವಿತಾ ಎಸ್.
Published 4 ಅಕ್ಟೋಬರ್ 2012, 19:30 IST
Last Updated 4 ಅಕ್ಟೋಬರ್ 2012, 19:30 IST

ಈ ಐದು ಹುಡುಗರು ಬಾಲ್ಯದ ಗೆಳೆಯರು. ಆಟ ಆಡುವುದಕ್ಕಾಗಲೀ, ಸಿನಿಮಾ ನೋಡಲಿಕ್ಕಾಗಲೀ ಎಲ್ಲರೂ ಜತೆಯಲ್ಲೇ ಹೋಗುತ್ತಿದ್ದರು. ಇವರ ಭೇಟಿಗೆ ನಿರ್ದಿಷ್ಟ ಜಾಗವೂ ಇರಲಿಲ್ಲ. ಆದರೂ ಪ್ರತಿನಿತ್ಯ ಸೇರುತ್ತಿದ್ದರು.

ಜಗತ್ತಿನ ಎಲ್ಲ ಸಂಗತಿಗಳು ಇವರ ಹರಟೆಯ ನಡುವೆ ಬಂದು ಹೋಗುತ್ತಿದ್ದವು. ರಾಜಕೀಯ, ಸಾಂಸ್ಕೃತಿಕ ವಿಚಾರಗಳನ್ನು ತಮ್ಮದೇ ದೃಷ್ಟಿಕೋನದಲ್ಲಿ ವಿಮರ್ಶಿಸುತ್ತಿದ್ದರು. ಪರೀಕ್ಷೆ ಬಂದರೆ ಮಾತ್ರ ಅವರ ಈ ಎಲ್ಲ ಚಟುವಟಿಕೆಗಳಿಗೆ ವಿರಾಮ.

ಎಚ್7 ತಂಡದ ಹುಟ್ಟಿನ ಹಿಂದೆ ಒಂದು ಅಚ್ಚರಿಯ ಸಂಗತಿ ಅಡಗಿದೆ. ಈ ತಂಡ ಹುಟ್ಟಿದ್ದು ಒಂದು ಗಿಟಾರ್‌ನ ಆಗಮನದಿಂದ. ವರ್ಷದ ಹಿಂದೆ ನಡೆದ ಚರ್ಚಾ ವೇದಿಕೆಗೆ ಅತಿಥಿಯಾಗಿ ಗಿಟಾರ್ ಬಂದಿತ್ತು. ಅಚ್ಚರಿಯೆಂದರೆ ಆ ಹುಡುಗರಲ್ಲಿ ಮೂವರ ನೆಚ್ಚಿನ ವಾದನ ಗಿಟಾರ್.

ಈ ಐದೂ ಮಂದಿಗೆ ಸಂಗೀತ ಇಷ್ಟದ ಸಂಗತಿಯಾದರೂ ಆ ಬಗ್ಗೆ ಅವರು ಅದುವರೆಗೂ ಒಮ್ಮೆಯೂ ತುಟಿ ಬಿಚ್ಚಿ ಮಾತನಾಡಿರಲಿಲ್ಲ. ಎಲ್ಲರ ಅಭಿರುಚಿ ಒಂದೇ ಎಂದು ತಿಳಿಯುತ್ತಲೇ ಮಾತು ಸಂಗೀತದತ್ತ ಹೊರಳಿತು. ಅಂತರ್ಜಾಲವೇ ಅವರಿಗೆ ಮಾಹಿತಿಯ ಮೂಲವಾಯಿತು. ಹೀಗೆ ಅತಿಥಿಯಾಗಿ ಬಂದಿದ್ದ ಗಿಟಾರ್‌ನಿಂದ ರೂಪುಗೊಂಡ ತಂಡ `ಎಚ್7~.

ಐವರ ಪೈಕಿ ಮೂವರು ವಿದ್ಯಾರ್ಥಿಗಳು. ಹಾಗಾಗಿ ತಂಡ ಕಟ್ಟುವ ಬಗ್ಗೆ ಅವರಲ್ಲಿ ಒಮ್ಮತ ಇರಲಿಲ್ಲ. ಸ್ವಂತ ಸ್ಟುಡಿಯೋ ತೆರೆಯಲು ಆರ್ಥಿಕ ಅಡಚಣೆಗಳೂ ಇದ್ದವು. ಪಾರ್ಕ್, ವಿಶಾಲವಾದ ಮರದ ಕೆಳಗಿನ ಜಾಗ, ಕ್ಲಬ್, ಅಪಾರ್ಟ್‌ಮೆಂಟ್‌ನ ತಾರಸಿಗಳು ಅಭ್ಯಾಸದ ತಾಣಗಳಾದವು.

ಒಂದು ಬಾರಿ ಪಾರ್ಕ್‌ನಲ್ಲಿ ತನ್ಮಯರಾಗಿ ಗಿಟಾರ್ ನುಡಿಸುತ್ತಿದ್ದಾಗ ಒಂದಷ್ಟು ಮಂದಿ ಪಾದಚಾರಿಗಳು ಬಂದು ಸುತ್ತುವರಿದಿದ್ದರಂತೆ. ಸಂಗೀತ ಮುಗಿಯತ್ತಲೇ ಅವರೆಲ್ಲಾ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದು ಮರೆಯಲಾರದ ಅನುಭವವಂತೆ.

`ಸಂಗೀತ ತಂಡವೊಂದನ್ನು ಕಟ್ಟುತ್ತೇವೆ ಎಂಬ ಕನಸು ಯಾರಿಗೂ ಇರಲಿಲ್ಲ. ನಮ್ಮ ವಾದನ ಕೇಳುತ್ತಿದ್ದ ಕೆಲ ಮಂದಿ ನೀವೂ ಏಕೆ ತಂಡ ರಚಿಸಬಾರದು ಎಂದು ಕೇಳುತ್ತಿದ್ದರು. ಅದೇ ಮಾತುಗಳು ನಮ್ಮನ್ನು ಪ್ರೇರೇಪಿಸಿದ್ದು. ಸ್ವಂತ ಸ್ಟುಡಿಯೋ ಸ್ಥಾಪಿಸುವಷ್ಟು ಕಾಸು ಕೈಯಲ್ಲಿಲ್ಲ. ಕಾರ್ಯಕ್ರಮಗಳನ್ನು ನೀಡುತ್ತಲೇ ಪ್ರಸಿದ್ಧಿಗೆ ಬಂದ ಬಳಿಕ ಸ್ಟುಡಿಯೋ ತೆರೆಯುವ ಕನಸಿದೆ~ ಎಂದರು ತಂಡದ ಪ್ರಮುಖ ಗಾಯಕ ಚಿರಾಗ್.
 
ಬಿಎನ್‌ಎಂಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಅವರು ಪರೀಕ್ಷೆ ಬಂದರೆ ಕಲಿಕೆಗೂ ಬ್ರೇಕ್ ಹಾಕಬೇಕಾಗುತ್ತದೆ ಎಂದು ಬೇಸರಿಸಿಕೊಳ್ಳುತ್ತಾರೆ.
ಕಳೆದ ವಾರವಷ್ಟೇ ತಂಡ ಇನ್‌ಆರ್ಬಿಟ್ ಮಾಲ್‌ನ ಒಳಾಂಗಣದಲ್ಲಿ ಸಾವಿರಾರು ಮಂದಿಯ ಮುಂದೆ ಕಾರ್ಯಕ್ರಮ ನೀಡಿ ಚಪ್ಪಾಳೆ ಗಿಟ್ಟಿಸಿಕೊಂಡಿದೆ.
 
`ಇಷ್ಟೊಂದು ಜನರ ಮುಂದೆ ಕಾರ್ಯಕ್ರಮ ನೀಡಿದ್ದು ಇದೇ ಮೊದಲು. ಈ ಹಿಂದೆ ಬೀದಿ, ಕಾಲೊನಿ, ಕಾಲೇಜುಗಳಲ್ಲಷ್ಟೆ ಪ್ರದರ್ಶನ ನೀಡಿದ್ದೆವು. ಬೇರೆಯವರು ಸಂಯೋಜಿಸಿರುವ ಸಂಗೀತವನ್ನೇ ಮತ್ತೆ ನುಡಿಸುವುದರಲ್ಲಿ ಹೊಸತನವಿಲ್ಲ. ಸಂಗೀತ ಹೀಗೇ ಇರಬೇಕು ಎಂಬ ಕಟ್ಟುಪಾಡನ್ನು ಮೀರಬೇಕು. ನಾವು ನುಡಿಸಿದ್ದೇ ಸಂಗೀತವಾಗಬೇಕು.

ಕೇಳುಗರಿಗೆ ಅದು ಇಷ್ಟವಾಗಬೇಕು. ಅದರಲ್ಲಿ ಹೊಸತನ ಇರಬೇಕು...~ ಎನ್ನುವ ಚಿರಾಗ್‌ಗೆ ಓದು ಮುಗಿದು ವೃತ್ತಿ ಬದುಕು ಆರಂಭವಾದರೂ ಸಂಗೀತವನ್ನು ಪ್ರವೃತ್ತಿಯಾಗಿ ಮುಂದುವರಿಸುವ ಆಸೆಯಿದೆಯಂತೆ.

`ವಿದ್ವಾನ್ ಆಗಿದ್ದ ಅಜ್ಜಿಯೇ ನನ್ನ ಸಂಗೀತದ ಗುರು. ಅವರಿಂದಲೇ ನಾನು ಸಂಗೀತದ ಮೂಲಮಂತ್ರ ಕಲಿತೆ. ಪಕ್ಕದ ಮನೆಯವರು ಮನೆ ಬದಲಾಯಿಸುವ ವೇಳೆ ಅವರಲ್ಲಿದ್ದ ಗಿಟಾರ್ ಒಂದನ್ನು ನನಗೆ ಉಡುಗೊರೆಯಾಗಿ ಕೊಟ್ಟು ಹೋದರು. ಅದಕ್ಕೂ ಮುನ್ನ ನನಗೆ ಅದನ್ನು ಹೇಗೆ ನುಡಿಸುವುದು ಎಂದೂ ತಿಳಿದಿರಲಿಲ್ಲ. ಅಂತರ್ಜಾಲದಲ್ಲಿ ಹುಡುಕಾಡುತ್ತಾ ಗಿಟಾರ್ ನುಡಿಸುವುದನ್ನು ಕಲಿತೆ~ ಎನ್ನುವ ಚಿರಾಗ್ ಬಾಲ್ಯದಲ್ಲೇ ತಬಲಾ ಕಲಿತಿದ್ದರಂತೆ.

`ಜಯನಗರದ ಒಂದೇ ಬೀದಿಯ ಗೆಳೆಯರಾದ ನಾವೆಲ್ಲಾ ವೃತ್ತಿ ಬದುಕಿನಲ್ಲಿ ಕವಲೊಡೆದು ನಮ್ಮದೇ ಬದುಕನ್ನು ಕಂಡುಕೊಳ್ಳುವತ್ತ ಮುನ್ನುಗ್ಗುತ್ತಿದ್ದವರು. ಸಂಗೀತ ನಮ್ಮನ್ನೆಲ್ಲಾ ಎಳೆದು ತಂದು ಮತ್ತೆ ಒಗ್ಗೂಡಿಸಿತು. ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರಿಂದ ನಮ್ಮ ಅಭ್ಯಾಸ ಇತರರಿಗೆ ಕಿರಿಕಿರಿ ಮಾಡಬಾರದು ಎಂಬ ಕಾರಣಕ್ಕೆ ಈಗ ಪ್ರತಿದಿನ ಸಂಜೆ ಏಳರಿಂದ ಹತ್ತು ಗಂಟೆವರೆಗೆ ತಾರಸಿ ಮೇಲೆ ಗಿಟಾರ್ ನುಡಿಸುತ್ತೇವೆ.

ನಿತ್ಯ ಕನಿಷ್ಠ ಎರಡು ಗಂಟೆ ಅಭ್ಯಾಸಕ್ಕೆ ಮೀಸಲಿಟ್ಟಿದ್ದೇವೆ~ ಎಂದರು ಸಾಗರ್. ಖಾಸಗಿ ಕಂಪೆನಿಯೊಂದರಲ್ಲಿ ಪ್ರೋಗ್ರಾಮರ್ ಆಗಿರುವ ಸಾಗರ್ ಕಳೆದ ಐದು ವರ್ಷಗಳಿಂದ ಗಿಟಾರ್ ಕಲಿಯುತ್ತಿದ್ದಾರೆ. ಅಲ್ಲೂ ಕಲೆ-ಸಂಸ್ಕೃತಿಗೆ ಪ್ರೋತ್ಸಾಹ ಸಿಗುತ್ತಿರುವುದರಿಂದ ಸಂಗೀತಾಭ್ಯಾಸ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ಸಾಗಿದೆ ಎಂದು ಖುಷಿ ಹಂಚಿಕೊಂಡರು.

ಅಕ್ಷಯ್ ಕುಮಾರ್, ಜೋಗಿ ನಾಯಕ್, ಅನಿರುದ್ಧ್ ಅನಂತ್ ತಂಡದ ಸದಸ್ಯರು. ತಮ್ಮದೇ ಸಂಗೀತ ಸಂಯೋಜನೆಯ ಹೊಸ ಆಲ್ಬಂ ಹೊರತರಬೇಕೆನ್ನುವ ಮಹದಾಸೆ ಈ ತಂಡದ್ದು.
ಮಾಹಿತಿಗೆ: 97396 55459.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.