ADVERTISEMENT

ಅಬ್ಬಬ್ಬಾ ಐಪಿಎಲ್ ಬಂತು ಐವಿಎಲ್!

ಪ್ರಮೋದ ಜಿ.ಕೆ
Published 1 ಜೂನ್ 2011, 19:30 IST
Last Updated 1 ಜೂನ್ 2011, 19:30 IST

ಅಬ್ಬಬ್ಬಾ ಐಪಿಎಲ್...!. ಅದೆಂತಾ ಮೋಡಿ ಮಾಡಿತು ನೋಡಿ. ಕೇವಲ ನಾಲ್ಕು ವರ್ಷಗಳ ಹಿಂದೆಯಷ್ಟೇ ಜನ್ಮ ತಳೆದ ಇಂಡಿಯನ್ ಪ್ರೀಮಿಯರ್ ಲೀಗ್~ ಎನ್ನುವ ಕೂಸು ವಿಶ್ವದ ಎಲ್ಲಾ ಕ್ರೀಡಾ ಪ್ರೇಮಿಗಳನ್ನು ತನ್ನತ್ತ ಸೆಳೆಯಿತು.
 
ಇದರ ಪ್ರಭಾವ ನಿತ್ಯವೂ ಹೆಚ್ಚಾಗುತ್ತಿದೆ. 2008ರಲ್ಲಿ ಮೊದಲ ಬಾರಿಗೆ ಚುಟುಕು ಕ್ರಿಕೆಟ್ ಆರಂಭವಾದಾಗ ಮೂಗು ಮುರಿದವರೇ ಹೆಚ್ಚು. ಮುಂದಿನ ನಾಲ್ಕು ವರ್ಷಗಳಲ್ಲಿ ಅದು ಮಾಡಿದ ಮೋಡಿ ಮಾತ್ರ ಎಲ್ಲರೂ ಮೆಚ್ಚುವಂಥದ್ದು!

ಈ ಮೊದಲು ಕೇವಲ ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿದ್ದ ಚುಟುಕು ಆಟ ಈಗ ಎಲ್ಲ ಕ್ರೀಡೆಗಳನ್ನು ಆವರಿಸಿಕೊಳ್ಳುತ್ತಿದೆ. ತನ್ನ ಪ್ರಭಾವವನ್ನು ಎಲ್ಲೆಡೆಗೂ ಬೀರುತ್ತಿದೆ.

ಇಂಡಿಯನ್ ವಾಲಿ ಲೀಗ್, ಕಬಡ್ಡಿ ಪ್ರೀಮಿಯರ್ ಲೀಗ್ ಹಾಗೂ ಬಾಕ್ಸಿಂಗ್ ಪ್ರೀಮಿಯರ್ ಲೀಗ್ ಹೀಗೆ ಎಲ್ಲಾ ಕಡೆಯೂ ಐಪಿಎಲ್ ತನ್ನ ನೆರಳು ಹಾಕಿದೆ.

ಚುಟುಕು ಕ್ರಿಕೆಟ್‌ಗೆ ಹರಿದು ಬಂದ ಕೋಟಿ ಕೋಟಿ ಹಣ, ತಾರಾ ಮೆರುಗು, ಉದ್ಯಮಿಗಳ ಪಾಲ್ಗೊಳ್ಳುವಿಕೆ, ಚಿಯರ್ ಗರ್ಲ್‌ಗಳ ಮೋಡಿ, ಅಭಿಮಾನಿಗಳ ಬೆಂಬಲ ಈ ಎಲ್ಲಾ ಕಾರಣಗಳಿಂದ ಐಪಿಎಲ್‌ಗೆ ಖ್ಯಾತಿ ಸಿಕ್ಕಿತು. ಇದರಿಂದ ಪ್ರಭಾವಿತಗೊಂಡ ವಿವಿಧ ಕ್ರೀಡಾ ಸಂಸ್ಥೆಯವರು ಇದೇ ಮಾದರಿಯನ್ನು ಅನುಸರಿಸಲು ಮುಂದಾದರು.

ಇದರ ಪರಿಣಾಮವಾಗಿಯೇ ಜನ್ಮ ತೆಳೆದಿದ್ದು ಇಂಡಿಯನ್ ವಾಲಿ ಲೀಗ್ (ಐವಿಎಲ್).ಈ ಲೀಗ್‌ನ ಮೊದಲ ಆವೃತ್ತಿ ಉದ್ಯಾನ ನಗರಿ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇದಕ್ಕಾಗಿ 1.5 ಕೋಟಿ ರೂಪಾಯಿಯನ್ನು ಖರ್ಚು ಮಾಡಲಾಗಿದೆ. ಐಪಿಎಲ್ ಇದ್ದಂತೆಯೇ ಇಲ್ಲಿಯೂ ಕಲಾವಿದರೂ ಹಾಡುತ್ತಾರೆ, ಕುಣಿಯುತ್ತಾರೆ.

ವಾಲಿಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐವಿಎಲ್ ನಡೆಯುತ್ತಿರುವುದರಿಂದ ಹಣ ಗಳಿಕೆಗಿಂತ ಜನರನ್ನು ಆಕರ್ಷಿಸುವುದೇ ಇದರ ಮೊದಲ ಉದ್ದೇಶ. ಅದಕ್ಕಾಗಿ ಒಂದು ದಿನದ ಟಿಕೆಟ್ ದರವನ್ನು ಕೇವಲ 100 ರೂಪಾಯಿ ಎಂದು ನಿಗದಿಗೊಳಿಸಲಾಗಿದೆ.
 
ಇದಕ್ಕೆ ತವರು ನೆಲದ ಕ್ರೀಡಾಭಿಮಾನಿಗಳು ಉತ್ತಮ ಪ್ರತಿಕ್ರಿಯೆ ತೋರಿಸುತ್ತಿದ್ದಾರೆ.`ಐಪಿಎಲ್‌ನಲ್ಲಿ ಇರುವ ಗ್ಲಾಮರ್ ಐವಿಎಲ್‌ನಲ್ಲಿಯೂ ಇದ್ದರೆ ಇನ್ನೂ ಚೆಂದ~ ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕನಸಿನ ಕೂಸಾಗಿದ್ದ ಐಪಿಎಲ್‌ಗೆ ಜನಪ್ರಿಯತೆ ಸಿಕ್ಕಿದ್ದೇ ತಡ. ಅದೇ ಹಾದಿಯಲ್ಲಿ ವಿವಿಧ ಕ್ರೀಡೆಗಳು ಹೆಜ್ಜೆ ಹಾಕಿದವು.

ಈಗ ಅದೇ ಹಾದಿಯಲ್ಲಿ ನಡೆಯುತ್ತಿರುವ `ಕಬಡ್ಡಿ ಪ್ರೀಮಿಯರ್ ಲೀಗ್~ ಸಹ ವಿಜಯವಾಡದಲ್ಲಿ ಜೂನ್8ರಿಂದ ಆರಂಭವಾಗಲಿದೆ. ಇಲ್ಲಿಯೂ ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ. ಇದೇ ಮಾದರಿಯಲ್ಲಿ ಡಿಸೆಂಬರ್‌ನಲ್ಲಿ ಬಾಕ್ಸಿಂಗ್ ಪ್ರೀಮಿಯರ್ ಲೀಗ್ ಸಹ ಆರಂಭವಾಗಲಿದೆ.

`ಚುಟುಕು ಕ್ರಿಕೆಟ್‌ನಿಂದ ಪ್ರಭಾವಿತಗೊಂಡು ಹೆಜ್ಜೆಯೂರಿದ ಐವಿಎಲ್, ಕೆಪಿಎಲ್ ಮುಂದೊಂದು ದಿನ ಐಪಿಎಲ್ ಹಾದಿಯಲ್ಲಿಯೇ ಯಶಸ್ವಿಯಾಗಿ ಸಾಗುತ್ತದೆ.

ಐಪಿಎಲ್‌ಗೆ ಸಿಕ್ಕ ಜನಪ್ರಿಯತೆ, ಹಣ, ತಾರಾ ಮೆರುಗು ಈ ಕ್ರೀಡೆಗಳಿಗೂ ಸಿಗುತ್ತದೆ~ ಎನ್ನುವುದು ಸಂಘಟಕರ ಆಶಯ. ಆದರೆ ಸಿಗಲಿದೆಯೇ ಹೊಳಪಿನ ಪ್ರಭಾವಳಿ ಎನ್ನುವುದು ಮಾತ್ರ ಸದ್ಯಕ್ಕೆ ಕುತೂಹಲ...!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.