ADVERTISEMENT

ಅಭಿಷೇಕ್ ತಂಡಕ್ಕೆ ಗೇಮ್ ಗೀಳು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2011, 19:30 IST
Last Updated 25 ಮಾರ್ಚ್ 2011, 19:30 IST
ಅಭಿಷೇಕ್ ತಂಡಕ್ಕೆ ಗೇಮ್ ಗೀಳು
ಅಭಿಷೇಕ್ ತಂಡಕ್ಕೆ ಗೇಮ್ ಗೀಳು   

‘ನಾನೂ ಗೇಮ್ ಆಡ್ತೇನೆ... ಮೊಬೈಲ್ ಫೋನ್, ಕಂಪ್ಯೂಟರ್, ವೀಡಿಯೊ ಗೇಮ್... ಹೀಗೆ ಎಲ್ಲಾ. ನಾನಂತೂ ಇದಕ್ಕೆ ಅಡಿಕ್ಟ್ ಆಗಿದ್ದೀನಿ...’
ಹೀಗೆಂದು ಹೇಳುತ್ತಲೇ ಇದ್ದರು ಸಾಕ್ಷಾತ್ ‘ಜ್ಯೂನಿಯರ್ ಬಿಗ್-ಬಿ’. ಅಂದ್ರೆ ಹಿಂದಿ ಚಿತ್ರನಟ ಅಭಿಷೇಕ್ ಬಚ್ಚನ್.

ಗೇಮ್ ಅಂದಾಗ ಅವರ ಅಭಿನಯದಲ್ಲಿ ಬಿಡುಗಡೆ ಆಗುತ್ತಿರುವ ಚಿತ್ರವೂ ಅದೇ ಅರ್ಥ ಹೊಂದಿದೆ ಅನ್ನುವುದು ಅರ್ಥಪೂರ್ಣ. ಚಿತ್ರದಲ್ಲಿ ನಟಿಸಿರುವ ಬಾಲಿವುಡ್ ಬೆಡಗಿಯರಾದ ಕಂಗನಾ ರಣಾವತ್, ಮಿಸ್ ಇಂಡಿಯಾ ವರ್ಲ್ಡ್ ಸಾರಾ ಜೀನ್ ಡಯಾಸ್, ನಿರ್ದೇಶಕ ರಿತೇಶ್ ಸಿದ್ವಾನಿ, ನಿರ್ಮಾಪಕ ಅಭಿನಯ್ ದೇವ್, ಝಪಕ್‌ನ ಶ್ರೇಯಸ್ ಸಿಗ್ಷಿಯಾ ಮತ್ತಿತರರು ಈ ಸಂದರ್ಭದಲ್ಲಿ ಅಭಿಷೇಕ್ ಜತೆಯಲ್ಲಿ ಇದ್ದರು.

ಮುಂದಿನ ತಿಂಗಳು ತೆರೆ ಕಾಣಲಿರುವ ತಮ್ಮ ನೂತನ ಚಿತ್ರ ‘ಗೇಮ್’ನ ಪ್ರಚಾರಕ್ಕಾಗಿ ಝಪಕ್.ಕಾಂ ಸಹಯೋಗದಲ್ಲಿ ಫೋರಂ ಮಾಲ್‌ನ ಪಿವಿಆರ್‌ಗೆ ಬಂದಿದ್ದ ಅವರು ಗೇಮ್ ಚಿತ್ರದ ಮಾಹಿತಿ ಆಧರಿಸಿದ ರಸಪ್ರಶ್ನೆ ಕೇಳಿ ಸಭಿಕರ ಜತೆ ವಿನೂತನ ‘ಗೇಮ್’ ಆಡಿದರು. ಚಿತ್ರತಂಡದ ಇತರ ಕಲಾವಿದರೂ ಸಭಿಕರತ್ತ ಪ್ರಶ್ನೆಗಳನ್ನು ಎಸೆದರು.

ಗೇಮ್ ಸಿನಿಮಾದ ಪ್ರಚಾರಕ್ಕಾಗಿ ‘ಝಪಕ್.ಕಾಂ’ ಸಾರಥ್ಯದಲ್ಲಿ ಅಭಿಷೇಕ್ ಸಿನಿಮಾ ಹಾಗೂ ಗೇಮ್ ಆಧರಿತ ಪ್ರಶ್ನೆಗಳನ್ನು ಕೇಳಲಾಗಿತ್ತು. ಬೆಂಗಳೂರಿನ ಸಚಿನ್ ಕಶ್ಯಪ್ ವಿಜೇತರಾಗಿದ್ದರು.

‘ಗೇಮ್‌ನಲ್ಲಿ ಸಾರಾ ಹೆಸರೇನು? ನಾನು ಅಮಿತಾಭ್ ಬಚ್ಚನ್ ಜತೆ ಎಷ್ಟು ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದೇನೆ?...’ ಇದು ಚಿತ್ರ ತಂಡ ಸಭಿಕರ ಮುಂದಿಟ್ಟ ಪ್ರಶ್ನೆಗಳ ಸ್ಯಾಂಪಲ್! ಅಭಿಷೇಕ್ ಕೇಳಿದ ಬಂಪರ್ ಬಹುಮಾನದ ಪ್ರಶ್ನೆ ‘ಅಪ್ಪನ ಜತೆ ನಟಿಸಿದ ಚಿತ್ರಗಳ ಹೆಸರೇನು ಎಂಬುದಾಗಿತ್ತು.

ದೇಶದಾದ್ಯಂತ 10 ರಿಂದ 15 ಕಡೆಗಳಲ್ಲಿ ಇಂತಹ ‘ಗೇಮ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ವಿಜೇತರಾದವರನ್ನು ಇದೇ 30ರಂದು ಮುಂಬೈನಲ್ಲಿ ನಡೆಯುವ ಗ್ರ್ಯಾಂಡ್ ಫಿನಾಲೆಗೆ ಆಹ್ವಾನಿಸಲಾಗುತ್ತಿದೆ. ಅಲ್ಲಿ ಗೆಲ್ಲುವ ನಾಲ್ವರು ಗೇಮ್ ಚಿತ್ರತಂಡದ ಜತೆ ದುಬೈಗೆ ಹೋಗುವ ಬಹುಮಾನ ಗಿಟ್ಟಿಸಿಕೊಳ್ಳಲಿದ್ದಾರೆ.

ಬೆಂಗಳೂರು ಸುತ್ತಿನಲ್ಲಿ ಗೆದ್ದ ಸಚಿನ್ ಕಶ್ಯಪ್ ಅವರಿಗೆ ಮುಂಬೈಗೆ ಪ್ರಯಾಣದ ಟಿಕೆಟ್-ಬಹುಮಾನಗಳನ್ನು ಅಭಿಷೇಕ್ ಅವರು ಸ್ವತಃ ಹಸ್ತಾಂತರಿಸಿದರು. ‘ಗೇಮ್’ನ ಗೇಮ್ ಇನ್ನೂ ಮುಂದುವರಿದಿದೆ. ನೀವು ಕೂಡ ಭಾಗವಹಿಸ ಬೇಕೆಂದಿದ್ದರೆ: www.game.zapak.com ಲಾಗಿನ್ ಆಗಿ ಗೇಮ್ ಸಿನಿಮಾ ಬಗ್ಗೆ  ಪ್ರಶ್ನೋತ್ತರದಲ್ಲಿ ಭಾಗವಹಿಸಿ, ವಿಜೇತರಾದರೆ, ನೀವೂ ಮುಂಬೈ-ಗ್ರ್ಯಾಂಡ್ ಫಿನಾಲೆಯಲ್ಲಿ ನೆಚ್ಚಿನ ತಾರೆಯರೊಂದಿಗೆ ಗೇಮ್ ಆಡಬಹುದು.

 ‘ಗೇಮ್’ ಸಿನಿಮಾ ಗ್ರೀಸ್‌ನ ‘ಸಾಮೋಸ್ ದ್ವೀಪ’ದಲ್ಲಿ ನಡೆಯುವ ವಿಲಕ್ಷಣ ಕತೆ. ದ್ವೀಪದ ಮಾಲೀಕ  ಕಬೀರ್ ಮಲ್ಹೋತ್ರಾ ನೀಡಿದ ಆಹ್ವಾನದಂತೆ ನಾಲ್ವರು ಅಪರಿಚಿತರು ಅಲ್ಲಿಗೆ ಆಗಮಿಸುತ್ತಾರೆ. ಮುಂದಿನದು ಊಹೆಗೂ ನಿಲುಕದ ಕಥಾನಕ, ಪ್ರತಿ ಕ್ಷಣವೂ ಕುತೂಹಲಕಾರಿ, ಅನಿರೀಕ್ಷಿತ ತಿರುವು. 5 ಅಂತರರಾಷ್ಟ್ರೀಯ ನಗರಗಳ ಸುತ್ತ ಕಥೆ ಗಿರಕಿ ಹೊಡೆಯುತ್ತದೆ. ಪ್ರೇಮ, ಕೊಲೆ, ಸೇಡು, ಪ್ರಾಯಶ್ಚಿತ್ತ, ಪರಸ್ಪರ ಗುಮಾನಿ. ಇಡಿ ಕುಟುಂಬಕ್ಕೆ ಮನರಂಜನೆ ನೀಡುವಂತಿದೆ ಎಂದರು ನಿದೇರ್ಶಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.