ಅರವತ್ತಕ್ಕೆ ಅರಳಿ ನಿಂತಿದ್ದಾರೆ ಕಲಾವಿದ ಎಸ್.ಸೀತಾರಾಮು. ಚೌಕಟ್ಟುಗಳ ಒಳಗೆ ಅವರು ಹಿಡಿದಿಟ್ಟಿರುವ ಹಸಿರರಾಜಿಗೆ ಮರುಳಾಗದೇ ಇರುವುದು ಅಸಾಧ್ಯ. ಕೊಲಾಜ್ ಹಾಗೂ ಕಂಪ್ಯೂಟರ್ ಕಲಾಕೃತಿಗಳ ಪ್ರದರ್ಶನಕ್ಕೆ ಅವರಿಟ್ಟ ಹೆಸರು `ಬ್ಲಾಸಮ್ಸ~. ವಸಂತನ ಹಬ್ಬ ಎಂದೇ ಕರೆಯಲಾಗುವ ಹೋಳಿ ಹುಣ್ಣಿಮೆಯ ದಿನ (ಮಾರ್ಚ್ 8) ಇವರ `ಓಕುಳಿಯಾಟ~ ಆರಂಭವಾಗಿದೆ.
ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಬೆಚ್ಚನೆ ಬಣ್ಣಗಳೊಡನೆ ತಂಪು ವರ್ಣಗಳನ್ನೂ ಸೇರಿಸಿ ಕಟ್ಟಿದ ಸುಮಾರು 25 ಬಗೆಬಗೆಯ `ಹೂಮಾಲೆ~ಗಳನ್ನು ಕಾಣಬಹುದು.
ಇವರ ಬಹುತೇಕ ಕಲಾಕೃತಿಗಳ ವಸ್ತು ನಿಸರ್ಗ ಸಿರಿ. ಬಗೆಬಗೆಯ ಬಣ್ಣದ ಕಾಗದಗಳನ್ನು ಹೆಕ್ಕಿ ತಂದು ಅವುಗಳನ್ನೆಲ್ಲ ಕರಾರುವಾಕ್ಕಾಗಿ ಕತ್ತರಿಸಿ ಪೋಣಿಸಿಟ್ಟು ತಮ್ಮದೇ ಆದ ಪ್ರಕೃತಿಯನ್ನು ಸೃಷ್ಟಿಸಿದ್ದಾರೆ.
ವಾಸ್ತವಕ್ಕೆ ಹತ್ತಿರವಾದ ಆದರೆ ವಾಸ್ತವ ಚಿತ್ರಣವಲ್ಲದ ಪ್ರಖ್ಯಾತ ಕಲಾಪ್ರಕಾರವಾದ `ಸರ‌್ರಿಯಲಿಸಂ~ನ ಪ್ರಭಾವ ಅವರ ಕಲಾಕೃತಿಗಳ ಮೇಲಿದೆ. ಶುದ್ಧ ಕೊಲಾಜ್ ಕಲಾಕೃತಿಗಳನ್ನೇ ರೂಪಿಸಬೇಕು ಎಂಬ ಹಠದಿಂದ ಎಲ್ಲಿಯೂ ಬಣ್ಣದ ಸ್ಪರ್ಶ ನೀಡದೆ ಕಾಗದವನ್ನೇ ಬಣ್ಣಗಳ ಹಿನ್ನೆಲೆಯಾಗಿ ಬಳಸಿಕೊಂಡಿದ್ದಾರೆ.
ಸುಮಾರು 15 ಕೊಲಾಜ್ ಕಲಾಕೃತಿಗಳು ಲ್ಯಾಂಡ್‌ಸ್ಕೇಪ್ ಆಕಾರದಲ್ಲಿವೆ. ಕೊಲಾಜ್‌ನಲ್ಲೇ ಮೂಡಿರುವ ಮತ್ತೊಂದು ಕಲಾಕೃತಿ ಗಣೇಶನದ್ದು. ಆಭರಣಗಳ ಕುರಿತ ಪತ್ರಿಕಾ ಜಾಹೀರಾತುಗಳನ್ನೇ ಒಪ್ಪವಾಗಿ ಜೋಡಿಸಿರುವ ಈ ಕಲಾಕೃತಿಯ ಹೆಸರು `ಆಭರಣೇಶ~.
ಉಳಿದವು ಸುಮಾರು 10 ಕಂಪ್ಯೂಟರ್ ಕಲಾಕೃತಿಗಳು. `ಪೇಂಟ್ ಬ್ರಶ್~ನಂತಹ ಸಾಮಾನ್ಯ ಂಶ ಈ ಕಲಾಕೃತಿಗಳ ಚಿಮ್ಮುಹಲಗೆ. ಒಂದೇ ಬಣ್ಣದ ಹಲವು ಛಾಯೆಗಳನ್ನು ಒಳಗೊಂಡು ರಚಿಸಿರುವ ಕಲಾಕೃತಿ `ಬ್ಲೂ ಸರ್ಕಲ್ಸ್~. `ಫಾಲ್ ಕಲರ್ಸ್~, `ಕಾಸ್ಮಿಕ್ ಲಿಂಗ~ಮೊದಲಾದವು ಸುಲಭವಾಗಿ ನೋಡುಗರನ್ನು ಆಕರ್ಷಿಸಬಲ್ಲ ಕಲಾಕೃತಿಗಳು.
ಸೀತಾರಾಮು ಓದಿದ್ದು ವಿಜ್ಞಾನ. ವೃತ್ತಿಗಾಗಿ ಅವಲಂಬಿಸಿದ್ದು ವಿತ್ತಲೋಕವನ್ನು. ಆದರೆ ಅವರ ಸೃಜನಶೀಲ ಮನಸ್ಸು ಆಶ್ರಯಿಸಿದ್ದು ಕಲೆಯನ್ನು. ಬ್ಯಾಂಕ್ ಒಂದರ ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತಿ ಹೊಂದಿದ ಇವರು ಕಲೆಯತ್ತ ಮುಖ ಮಾಡಿದ್ದು ಆಕಸ್ಮಿಕ.
ಮರದ ಕಾರ್ಖಾನೆಯೊಂದರ ವಸ್ತುಸ್ಥಿತಿ ಪರೀಕ್ಷಿಸಲು ಹೋಗಿದ್ದ ಸಂದರ್ಭದಲ್ಲಿ ಸಿಕ್ಕ ಕೊರಡೊಂದು ಇವರೊಳಗೆ ಕೊನರಿತು. ಬ್ಲೇಡು ಮತ್ತಿತರ ಹತಾರಗಳನ್ನು ಬಳಸಿ ಅದಕ್ಕೊಂದು ರೂಪು ನೀಡಿದರು. ಸಹೋದ್ಯೋಗಿಗಳಿಗೆ ತೋರಿಸಿದರು.
ಇಂಥ ಸಂದರ್ಭದಲ್ಲಿ ಬ್ಯಾಂಕ್‌ಗೆ ಬಂದ ಗ್ರಾಹಕರೊಬ್ಬರಿಗೆ ಇವರ ಕೆತ್ತನೆ ಕೆಲಸ ಇಷ್ಟವಾಯಿತು. ಅವರು ಶ್ರೀಗಂಧ, ದಂತ, ಚಾಣ ಮತ್ತಿತರ ಅಗತ್ಯ ವಸ್ತುಗಳನ್ನು ಒದಗಿಸಿದರು. 2011ರಲ್ಲಿ ನಗರದ ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಇವರ ಕಾಷ್ಠಶಿಲ್ಪಗಳು ಪ್ರದರ್ಶನಗೊಂಡವು.
ಅದರ ಮುಂದುವರಿದ ಭಾಗವೇ ಈ ಚಿತ್ರಕಲಾ ಪ್ರದರ್ಶನ.
ಅವರಿಗೆ ಉಳಿ ಚಾಣಗಳನ್ನು ತಂದಿಟ್ಟುಕೊಳ್ಳುವ ಹವ್ಯಾಸವೂ ಇದೆ. ಆಧುನಿಕ ತಂತ್ರಜ್ಞಾನದ ಸಲಕರಣೆಗಳನ್ನು ವಿದೇಶಗಳಿಂದ ತರುತ್ತಾರೆ. ಅವುಗಳನ್ನು ಬಳಸಿ ಒಣಗಿದ ಮರಗಳಿಗೆ ಜೀವ ಮೂಡಿಸುತ್ತಾರೆ.
ಸುಮಾರು ಒಂದು ವರ್ಷದ ಅವಧಿಯಲ್ಲಿ ಕೊಲಾಜ್ ಕಲಾಕೃತಿಗಳು ಮೈ ತಳೆದಿವೆ. ಒಂದೊಂದು ಕೃತಿ ಪೂರ್ಣಗೊಳಿಸಲು ಸರಾಸರಿ ಹತ್ತು ದಿನಗಳು ಹಿಡಿದಿವೆ. ಸ್ವೀಡನ್ ಹಾಗೂ ಅಮೆರಿಕದ ಸ್ಯಾನ್ ಹೋಸೆಯ ಆಸಕ್ತ ಸಂಗ್ರಹಕಾರರು ಇವರ ಕೃತಿಗಳನ್ನು ಪಡೆದಿದ್ದಾರೆ. ಇದೇ 11ರವರೆಗೆ ಪರಿಷತ್ತಿನಲ್ಲಿ ಪ್ರದರ್ಶನ ನಡೆಯಲಿದೆ. ಸಮಯ ಬೆಳಿಗ್ಗೆ 10.30ರಿಂದ ಸಂಜೆ 7.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.