ADVERTISEMENT

ಅಲೆಲೆ ದೊಡ್ಡಾಲದ ಅಲೆ

ಎಸ್‌.ಸಂಪತ್‌
Published 4 ಜೂನ್ 2018, 19:30 IST
Last Updated 4 ಜೂನ್ 2018, 19:30 IST
ದೊಡ್ಡಾಲದ ಮರ
ದೊಡ್ಡಾಲದ ಮರ   

ರಾತ್ರಿ ಇಡೀ ಮಳೆಯಲ್ಲಿ ನೆನೆದು ಶವರ್‌ಬಾತ್‌ ಮಾಡಿದ ಸುಂದರಿ ಕೂದಲು ಇಳಿಬಿಟ್ಟಂತೆ ಆಲದ ಮರ ಹೊಳೆಹೊಳೆಯುತ್ತಿತ್ತು. ಬೆಳಗಿನ ಹೂಂಬಿಸಿಲು ಈ ಹೊಳಪಿಗೆ ಮೆರುಗು ನೀಡಿತ್ತು. ಎಳೆಚಿಗುರೆಲೆಗಳು ಮಿಣಮಿಣ ಮಿನುಗುತ್ತಿದ್ದವು. ಕಂದು ಕೆಂಬಣ್ಣಕ್ಕೆ ತಿರುಗಿ, ಕಡು ಹಸಿರು ಬಣ್ಣಕ್ಕಿಳಿಯುತ್ತಿರುವ ಬಲಿತೆಲೆಗಳು ತೂಗಾಡಿ ಸ್ವಾಗತ ಕೋರುತ್ತಿದ್ದವು.

ಆಲದ ಮರವ ಸುತ್ತುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ. ವಿಜ್ಞಾನವೂ ಈ ಮಾತನ್ನು ಸಮರ್ಥಿಸುತ್ತದೆ. ದೊಡ್ಡಾಲದ ಮರದ ಬಳಿಯೇನಾದರೂ ಹೋದರೆ ಮನಸ್ಸೂ ಪ್ರಫುಲ್ಲಗೊಳ್ಳುತ್ತದೆ.

ಬೆಂಗಳೂರಿನ ಸೆರಗಂಚಿನಲ್ಲಿರುವ ಕೇತೋಹಳ್ಳಿಯ ದೊಡ್ಡ ಆಲದ ಮರವು ನಗರದಿಂದ 28 ಕಿ.ಮೀ ದೂರದಲ್ಲಿದೆ. ನಾನೂರು ವರ್ಷಗಳಷ್ಟು ಹಳೆತಾಗಿರುವ ಈ ಮರ, ತನ್ನ ಬಿಳಲುಗಳನ್ನು ಅಲ್ಲಲ್ಲಿ ಇಳಿಬಿಟ್ಟು, ಅವೂ ಉಪಮರಗಳಾಗಿ ಆಲದ ಸಂಸಾರವೇ ಅಲ್ಲಿ ಹುಟ್ಟಿತು. ಛತ್ರಿಯಂತೆ ಅಗಲಗಲವಾಗಿ ಬೆಳೆದ ಮೂಲಮರ 120 ಮೀಟರ್‌ಗಳಷ್ಟು ನೆರಳು ಕೊಡುವಂತೆ ಅಗಲವಾಯಿತು. ಮೂರೆಕರೆ ಭೂಮಿಯ ಮೇಲೆ ತಾನು ಸ್ಥಾಪಿತವಾಯಿತು.

ADVERTISEMENT

ಆದರೆ ಈಚೆಗೆ ಕಾಲನ ಹೊಡೆತಕ್ಕೆ ಎಂಬಂತೆ ಮರದ ಮುಖ್ಯ ಕಾಂಡ ಕೃಷವಾಗತೊಡಗಿತು. ಮರ ಒಣಗಲಾರಂಭಿಸಿತ್ತು. ಆದರೆ ಕೂಡಲೇ ಎಚ್ಚೆತ್ತಕೊಂಡ ತೋಟಗಾರಿಕಾ ಇಲಾಖೆ, ಉಳಿದ ಬಿಳಲುಗಳಿಗೆ ಪೋಷಣೆ ನೀಡುತ್ತಿದೆ. ಪ್ಲಾಸ್ಟಿಕ್‌ ಮುಕ್ತ ಪ್ರದೇಶವಾಗಿಸಿದೆ. ಆಲದ ಮರದ ನೆರಳಿನಲ್ಲಿ ನಡಿಗೆದಾರಿ ನಿರ್ಮಿಸಿತು. ಜನಸಂಚಾರ ಹೆಚ್ಚಾದಂತೆ ಇಲ್ಲಿ ಜೀವದ ಉಲಿವು ಕಾಣತೊಡಗಿತು. ಕೃಷವಾದ ಬಿಳಲುಗಳಿಗೆ ಪೌಷ್ಠಿಕಾಂಶವುಳ್ಳ ಮಣ್ಣನ್ನು ಹೆಚ್ಚು ಹೆಚ್ಚು ನೀಡಲಾರಂಭಿಸಿದರು. ಈಗ ಅಲ್ಲಲ್ಲಿ ಚಿಗುರು ಕಾಣುತ್ತಿದೆ.

ಪ್ರಧಾನ ಕಾಂಡದೊಂದಿಗೆ ಸಂಪರ್ಕ ಹೊಂದಿದ್ದ ಉಪಮರಗಳಲ್ಲಿ ಕೆಲವು ಕೃಷವಾಗತೊಡಗಿವೆ. ಅಳಿವಿನಂಚಿಗೆ ಬರುತ್ತಿವೆ. ಕೆಲವನ್ನು ಗೆದ್ದಲಿನಿಂಥ ಕೀಟಗಳೂ ಬಕ್ಷಿಸುತ್ತಿವೆ. ಕೊರಡು ಕೊನರುತ್ತಿರುವ ಈ ಗಳಿಗೆಯಲ್ಲಿ ಕೆಲವು ಬಿಳಲುಗಳಿಗೆ ಬೇಲಿ ಹಾಕಿ ಸಂರಕ್ಷಿಸಲಾಗುತ್ತಿದೆ. ಕಾವಲುಗಾರ ವೆಂಕಟೇಶ್‌ ಆಗಾಗ ಆವರಣದಲ್ಲೆಲ್ಲ ಸುತ್ತು ಹಾಕುತ್ತಾರೆ. ಮಣ್ಣು ಸಡಿಲಗೊಳಿಸುತ್ತಾರೆ. ಕೆಲ ಪ್ರವಾಸಿಗರಿಂದ ಮರವನ್ನು ರಕ್ಷಿಸುವುದೇ ಕಷ್ಟವೆಂದು ಹೇಳುತ್ತಾರೆ.

ಕೆಲವರು ಈ ಬಿಳಲುಗಳು ಬಲಿಷ್ಠವಾಗಿವೆ ಎಂಬಂತೆ ಅವುಗಳಲ್ಲಿ ಜೋಕಾಲಿ ಜೀಕುತ್ತಾರೆ. ತಮ್ಮ ಪರಾಕ್ರಮ ತೋರುವಂತೆ ಅವುಗಳಿಗೆ ನೇತಾಡುತ್ತಾರೆ. ಕೆಲವರಂತೂ ಹಗ್ಗದಂತೆ ಬಳಸಿ ಟಾರ್ಜನ್‌ನಂತೆ ಹಾರಾಡಲು ಯತ್ನಿಸುತ್ತಾರೆ. ಆಗೆಲ್ಲ ಮರ ಘಾಸಿಗೊಳ್ಳುತ್ತದೆ. ಪ್ರವಾಸಿಗರ ಕೆಲ ಕ್ಷಣದ ಮೋಜಿನ ಪರಿಣಾಮ, ನೈಸರ್ಗಿಕವಾಗಿ ಸರಿಪಡಿಸಿಕೊಳ್ಳಲು ಅದೆಷ್ಟೋ ದಿನಗಳಾಗುತ್ತವೆ. ಹಾಗಾಗಿಯೇ ಇದೀಗ ಎಳೆ ಬಿಳಲು, ಪೊದೆಗಳಿಗೆ ಬೇಲಿ ಹಾಕಿ ಕಾಯಲಾಗುತ್ತಿದೆ ಎನ್ನುತ್ತಾರೆ ವೆಂಕಟೇಶ್‌.

ಈ ಕಾವಲಿನೊಂದಿಗೆ ಮರದ ದೇಖುರೇಕಿಗೆ ಇಲಾಖೆಯೂ ಇನ್ನಷ್ಟು ಮುತುವರ್ಜಿ ವಹಿಸಿ ಕಾಲಕಾಲಕ್ಕೆ ಮಣ್ಣು ಹಾಕಿಸಿದರೆ ಒಳಿತಾಗುತ್ತದೆ.

ಪ್ರವಾಸಿ ತಾಣ: ದೊಡ್ಡ ಆಲದ ಮರವನ್ನು ವೀಕ್ಷಿಸಲು ರಾಜ್ಯ ಮತ್ತು ರಾಷ್ಟ್ರದ ವಿವಿಧ ಭಾಗಗಳಿಂದ ‍ಪ್ರವಾಸಿಗರು ಬರುತ್ತಾರೆ. ವಾರಾಂತ್ಯದಲ್ಲಿ ಇವರ ಸಂಖ್ಯೆ ಹೆಚ್ಚು. ಒಂದು ದಿನದ ಪಿಕ್‌ನಿಕ್‌ಗೆಂದು ಇಲ್ಲಿಗೆ ಬರುವವರೂ ಹೆಚ್ಚಿದ್ದಾರೆ. ಆಲದ ಮರದ ಸುತ್ತಲೂ ‘ಫೆನ್ಸಿಂಗ್‌’ ಹಾಕಲಾಗಿದ್ದು, ಒಳಗೆ ನಡೆದಾಡಲು ‘ವಾಕಿಂಗ್‌ ಪಾಥ್‌’ ಕೂಡ ಇದೆ. ಕುಳಿತುಕೊಳ್ಳಲು ಅಲ್ಲಲ್ಲಿ ಆಸನದ ವ್ಯವಸ್ಥೆಯೂ ಇದೆ.

ಮರದ ಪ್ರಧಾನ ಕಾಂಡ ನಾಶವಾಗಿರುವ ಜಾಗದಲ್ಲಿ ಮುನೇಶ್ವರ ದೇವಾಲಯ ನಿರ್ಮಿಸಲಾಗಿದೆ. ಕೇತೋಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಈ ದೇವಾಲಯದ ಭಕ್ತರು. ದೊಡ್ಡ ಆಲದ ಮರದ ಪ್ರದೇಶವನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ಕೇಂದ್ರ ಎಂದು ಘೋಷಿಸಿದೆ. ಅಲ್ಲದೆ ಈ ಮರವನ್ನು ‘ಪಾರಂಪರಿಕ ವೃಕ್ಷ’ ಎಂದು ಘೋಷಿಸಲು ಕೇಂದ್ರಕ್ಕೆ ಪ್ರಸ್ತಾವನೆಯನ್ನೂ ಕಳುಹಿಸಿದೆ.

**

ಹೋಗುವುದು ಹೇಗೆ?

ಬೆಂಗಳೂರು– ಮೈಸೂರು ರಸ್ತೆಯಲ್ಲಿ ಕೆಂಗೇರಿ ಮೂಲಕ ರಾಜರಾಜೇಶ್ವರಿ ದಂತ ವೈದ್ಯಕೀಯ ಕಾಲೇಜು ಬಳಿ ಬಲ ತಿರುವು ತೆಗೆದುಕೊಳ್ಳಬೇಕು. ಇಲ್ಲಿಂದ ದೊಡ್ಡ ಆಲದ ಮರಕ್ಕೆ ಕೇವಲ ಎಂಟು ಕಿ.ಮೀ. ಸಮೀಪದ ರೈಲ್ವೆ ಗೇಟ್‌ ದಾಟಿ ರಾಮೋಹಳ್ಳಿ ಮಾರ್ಗವಾಗಿ ಮುಂದೆ ಸಾಗಿದರೆ ಕೇತೋಹಳ್ಳಿ ಸಿಗುತ್ತದೆ. ಅಲ್ಲಿನ ಬಸ್‌ ನಿಲ್ದಾಣದ ವೃತ್ತದ ಎದುರು ನಿಂತು ನೋಡಿದರೆ ದೊಡ್ಡ ಆಲದಮರ ಕಾಣುತ್ತದೆ.

ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್. ಮಾರುಕಟ್ಟೆಯಿಂದ ನೇರವಾಗಿ ಈ ಸ್ಥಳಕ್ಕೆ ಬಿಎಂಟಿಸಿ ಬಸ್ಸಗಳಿವೆ.

ಸಮೀಪದ ಇತರ ಸ್ಥಳಗಳು: ಸ್ವಂತ ವಾಹನದಲ್ಲಿ ಇಲ್ಲಿಗೆ ಹೋಗುವವರು ಸಮೀಪದ ಕೆಲ ಪ್ರವಾಸಿ ತಾಣಗಳಿಗೂ ಭೇಟಿ ನೀಡಬಹುದು. ಮಂಚನಬೆಲೆ ಜಲಾಶಯ, ತಿಪ್ಪಗೊಂಡನಹಳ್ಳಿ ಜಲಾಶಯ, ಸಾವನದುರ್ಗ, ಮಾಗಡಿ ರಂಗನಾಥಸ್ವಾಮಿ ದೇವಾಲಯ, ಕಲ್ಯಾ ಬೆಟ್ಟಕ್ಕೆ ಹೋಗಿ ಬರಬಹುದು. ಅಲ್ಲದೆ ಆಲದ ಮರದ ಬಳಿಯೇ ಮುಕ್ತಿ ನಾಗ ದೇವಾಲಯವೂ ಇದೆ.

**

* ಕೇತೋಹಳ್ಳಿಯಲ್ಲಿರುವ ಆಲದ ಮರ ದೇಶದ ನಾಲ್ಕನೇ ಅತ್ಯಂತ ದೊಡ್ಡ ಆಲದ ಮರ ಎಂಬ ಖ್ಯಾತಿ ಹೊಂದಿದೆ. ಆಂಧ್ರ ಪ್ರದೇಶದ ಅನಂತಪುರದ ತಿಮ್ಮಮ್ಮ ಮರಿಮನ್‌, ಕೋಲ್ಕತ್ತದ ಗ್ರೇಟ್‌ ಬ್ಯಾನಿಯನ್‌ ಟ್ರಿ, ಚೆನ್ನೈನ ಅಡ್ಯಾರ್‌ ಬ್ಯಾನಿಯನ್‌ ಟ್ರಿ ಮೊದಲ ಮೂರು ಸ್ಥಾನಗಳಲ್ಲಿವೆ.

* ದೊಡ್ಡ ಆಲದ ಮರವು 95 ಅಡಿಗಿಂತಲೂ ಎತ್ತರವಿದ್ದು, ಮೇಲ್ಭಾಗದಲ್ಲಿ 120 ಮೀಟರ್‌ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ.

* ಹಲವಾರು ಪಕ್ಷಿಗಳು, ಕೋತಿಗಳಿಗೆ ಇದು ಆಶ್ರಯ ತಾಣ. ಕೆಲ ಜೇನುಗೂಡುಗಳು ಈ ಮರದಲ್ಲಿವೆ.

**

ಆಲದಮರದ ಆವರಣಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಇಲ್ಲಿನ ಕೆಲ ಬೇರು, ರೆಂಬೆ, ಕೊಂಬೆಗಳು ಪುನಶ್ಚೇತನಗೊಳ್ಳುತ್ತಿದ್ದು, ಚಿಗುರಿವೆ. ಅಲ್ಲದೆ ಪ್ರಬಲ ಮತ್ತು ವೇಗವಾಗಿ ಬೆಳೆಯುತ್ತಿವೆ.

–ವೆಂಕಟೇಶ್‌, ದೊಡ್ಡ ಆಲದ ಮರದ ಕಾವಲುಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.