ADVERTISEMENT

‘ಅಲ್ಲಾಹ್‌ ನಂಬಿ ಕಷ್ಟ ಮರೆಯುವೆ’

ಮಂಜುನಾಥ ರಾಠೋಡ
Published 11 ಜೂನ್ 2017, 19:30 IST
Last Updated 11 ಜೂನ್ 2017, 19:30 IST
‘ಅಲ್ಲಾಹ್‌ ನಂಬಿ ಕಷ್ಟ ಮರೆಯುವೆ’
‘ಅಲ್ಲಾಹ್‌ ನಂಬಿ ಕಷ್ಟ ಮರೆಯುವೆ’   

ನನ್ನ ಹೆಸರು ಮುಮ್ತಾಜ್‌ ಖಾನ್. 19 ವರ್ಷದಿಂದ ನಗರದಲ್ಲಿ ಆಟೊ ಓಡಿಸುತ್ತಿದ್ದೇನೆ. ಮುಂಚೆ ಟೈಲರಿಂಗ್ ಮಾಡುತ್ತಿದ್ದೆ. ಆದರೆ ಸಕ್ಕರೆ ಕಾಯಿಲೆ ಮತ್ತು ಗ್ಯಾಂಗ್ರಿನ್‌ ಆದ ಕಾರಣ ಡಾಕ್ಟರ್‌ ಕಾಲು ಕತ್ತರಿಸಿದರು. ಆಗಿನಿಂದ ಆಟೊ ಬಾಡಿಗೆ ಪಡೆದು ಓಡಿಸುತ್ತಿದ್ದೇನೆ.

ಚಾಮುಂಡಿ ನಗರ, ಅಪ್ಪಣ್ಣ ಬ್ಲಾಕ್‌ನ ಸಣ್ಣ ಮನೆಯಲ್ಲಿ ನಾನು ನನ್ನ ಹೆಂಡತಿ, ಮೂವರು ಮಕ್ಕಳು ವಾಸವಾಗಿದ್ದೇವೆ. ದಿನಕ್ಕೆ ₹200–300 ಸಂಪಾದನೆ ಆಗುತ್ತದೆ. ನನ್ನ ಪತ್ನಿಯೂ ಕೆಲಸಕ್ಕೆ ಹೋಗುತ್ತಾಳೆ, ಹಾಗಾಗಿ ಸಂಸಾರ ಹೇಗೊ ನಡೀತಿದೆ. ಮುಂಚೆ ಇನ್ನೂ ಹೆಚ್ಚು ಸಂಪಾದನೆ ಮಾಡುತ್ತಿದ್ದೆ, ಇತ್ತೀಚೆಗೆ ಕಣ್ಣು ಸ್ವಲ್ಪ ಮಂಜಾಗುತ್ತಿದೆ. ಸುಸ್ತು ಬೇರೆ ವಯಸ್ಸು 50 ಆಯ್ತಲ್ಲ. ಸಕ್ಕರೆ ಕಾಯಿಲೆ ಬಿಟ್ಟಿಲ್ಲ.

ಟೈಲರಿಂಗ್ ಮಾಡುವಾಗ ಒಳ್ಳೆ ಸಂಪಾದನೆ ಆಗ್ತಾ ಇತ್ತು, ಯಾವುದಕ್ಕೂ ಕಮ್ಮಿ ಇರಲಿಲ್ಲ. ಆದರೆ ಈ ಕಾಯಿಲೆ ಬಂದು ಎಲ್ಲ ಹಾಳು ಮಾಡಿಬಿಡ್ತು. ಕಾಸು ಇದ್ದವರಿಗೆ ಕಾಯಿಲೆ ಬಂದ್ರೆ ತಡ್ಕೋತಾರೆ ನಮ್ಮಂತೋರಿಗೆ ಆಗಲ್ಲ. ಬಡವನಿಗೆ ಬರೋ ಕಾಯಿಲೆ ಒಬ್ಬ ವ್ಯಕ್ತಿನ ಮಾತ್ರ ತಿನ್ನೊಲ್ಲ ಮನೆ ಮಂದಿಯನ್ನೆಲ್ಲಾ ತಿನ್ನುತ್ತೆ.

ADVERTISEMENT

ಪಡಿತರ ಚೀಟಿಯ ಅಕ್ಕಿ ಮೂರು ಹೊತ್ತು ಹೊಟ್ಟೆ ತುಂಬಿಸುತ್ತೆ. ಹೆಂಡ್ತಿ ಮಕ್ಕಳು ಬಹಳ ಒಳ್ಳೆಯವರು. ಕಷ್ಟ ಅರ್ಥ ಮಾಡ್ಕೊಂಡು ಜೀವನ ಮಾಡ್ತಾ ಇದ್ದಾರೆ.

ದೊಡ್ಡ ಮಗಳಿಗೆ ಆರೋಗ್ಯ ಸರಿಯಿಲ್ಲ, ಸ್ವಲ್ಪ ಬುದ್ಧಿಭ್ರಮಣೆ. ಹಾಗಾಗಿ ಮನೆಯಲ್ಲೇ ಇರುತ್ತಾಳೆ. ಸಣ್ಣ ಮಗಳು ಒಂಬತ್ತನೇ ತರಗತಿ ಓದ್ತಿದ್ದಾಳೆ. ಮಧ್ಯದವಳು ಬಹಳ ಚೂಟಿ. ಪಿಯುಸಿ ಸೈನ್ಸ್‌ ಓದುತ್ತಾ ಇದ್ದಾಳೆ. 10ನೇ ಕ್ಲಾಸ್‌ನಲ್ಲೂ ಒಳ್ಳೆ ಮಾರ್ಕ್ಸ್‌ ತಂಗೊಡಿದ್ದಳು. ತುಂಬಾ ಚೆನ್ನಾಗಿ ಓದ್ತಾಳೆ. ಅವಳಿಗಿನ್ನೂ ಪುಸ್ತಕ ಕೊಡಿಸಿಲ್ಲ.

ದಿನಾಲೂ ಕೇಳ್ತಾ ಇರ್ತಾಳೆ. ರಂಜಾನ್ ಮುಗಿಯುವ ಮುಂಚೆ ಕೊಡಿಸಿಬಿಡ್ತೀನಿ. ಆಕೆನಾ ಚೆನ್ನಾಗಿ ಓದಿಸ್ತೀನಿ. ಅದೇ ನನ್ನ ಆಸೆ. ಸಣ್ಣ ಮಗಳೂ ಚೆನ್ನಾಗಿ ಓದ್ತಾಳೆ.
ಪ್ರತಿ ದಿನ ಬೆಳಿಗ್ಗೆ 9 ಗಂಟೆಗೆ ಮಕ್ಕಳನ್ನು ಸ್ಕೂಲಿಗೆ ಬಿಟ್ಟು ಡ್ಯೂಟಿ ಮೇಲೆ ಹೋಗ್ತೀನಿ. 11 ಗಂಟೆ ವರೆಗೂ ಗಾಡಿ ಓಡಿಸಿ ಮನೆಗೆ ಬಂದು ಸ್ವಲ್ಪ ವಿಶ್ರಾಂತಿ ತಗೋತೀನಿ. ಮತ್ತೆ ಮಧ್ಯಾಹ್ನ 3ರಿಂದ ಸಂಜೆ 6 ಗಂಟೆ ವರೆಗೂ ಓಡಿಸ್ತೀನಿ.

ಕೆಲವು ಪ್ರಯಾಣಿಕರು ನನ್ನ ಸ್ಥಿತಿ ನೋಡಿ ಮೀಟರ್‌ಗಿಂತ ಹೆಚ್ಚಿಗೆ ಕೊಡೋಕೆ ಬರ್ತಾರೆ, ನಾನು ತಗೊಳಲ್ಲ. ಆದರೆ ಬಲವಂತ ಮಾಡಿ ಕೊಟ್ಬಿಡ್ತಾರೆ. ಇನ್ನು ಕೆಲವರು ‘ಇವನು ಏನು ಗಾಡಿ ಓಡಿಸ್ತಾನೆ’ ಅಂತ ಆಟೊನೇ ಹತ್ತಲ್ಲ ಆಗೆಲ್ಲಾ ಬೇಜಾರಾಗುತ್ತೆ.

ಬೇರೆಯವರ ಬದುಕು ನೋಡಿದರೆ ಒಮ್ಮೊಮ್ಮೆ ಬೇಜಾರಾಗುತ್ತೆ. ದೇವರು ಯಾಕಪ್ಪಾ ಈ ರೀತಿ ಮಾಡ್ದಾ ಅಂತ. ಆದರೆ ಏನೂ ಮಾಡೋಕಾಗಲ್ಲ ಹಣೆಬರಹ ಅನುಭವಿಸಲೇ ಬೇಕು. ಅಲ್ಲಾಹು ಮೇಲೆ ನಂಬಿಕೆ ಇದೆ. ಆತ ಬಡವರ ಕೈ ಬಿಡಲ್ಲ. ಅವನನ್ನು ನಂಬಿ ಕಷ್ಟ ಮರೆಯುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.