ADVERTISEMENT

ಅಹೋರಾತ್ರಿ ಸಂಗೀತದಲ್ಲಿ...

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST
ಅಹೋರಾತ್ರಿ ಸಂಗೀತದಲ್ಲಿ...
ಅಹೋರಾತ್ರಿ ಸಂಗೀತದಲ್ಲಿ...   

ಬಾನ್ಸುರಿ ವಾದಕ ಪಂಡಿತ ಹರಿಪ್ರಸಾದ ಚೌರಾಸಿಯಾ ಅವರಿಗೆ ಪ್ರಸಕ್ತ ಸಾಲಿನ ಗುರುರಾವ್ ದೇಶಪಾಂಡೆ ರಾಷ್ಟ್ರೀಯ ಪುರಸ್ಕಾರ ಹಾಗೂ `ಗುರುಗಂಧರ್ವ~ ಬಿರುದು ನೀಡಲಾಯಿತು. ಇತ್ತೀಚೆಗೆ ಐಐಎಸ್‌ಸಿ ಝಂಖಾನಾ ಸಭಾಂಗಣದಲ್ಲಿ 29ನೇ ಅಹೋರಾತ್ರಿ ಸಂಗೀತ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅತಿಥಿಗಳಾಗಿ ಆಗಮಿಸಿದ್ದ ಇಸ್ಕೋ ಸಂಸ್ಥೆ ಮುಖ್ಯಸ್ಥ ಚಿರುದಾಸ, ಕೆನರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ರಾಮನ್, ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು ಪ್ರಶಸ್ತಿ ವಿಜೇತ ಚೌರಾಸಿಯಾ ಅವರನ್ನು ಅಭಿನಂದಿಸಿದರು. 

ಕಸ್ತೂರಿ ಆಟ್ರಾವಾಲ್ಕರ್ ತಮ್ಮ ಸುಶ್ರಾವ್ಯ ಕಂಠದಿಂದ ರಾಗಬಿಹಾಗ ಹಾಗೂ ನಾಟ್ಯಗೀತಗಳನ್ನು ಪ್ರಸ್ತುತಪಡಿಸಿ ಕೇಳುಗರನ್ನು ಆನಂದಗೊಳಿಸಿದರು. ಚೌರಾಸಿಯಾ ಅವರೂ ತಮ್ಮ ಬಾನ್ಸುರಿವಾದನದಲ್ಲಿ ಕೀರ್ವಾಣಿ ರಾಗ ಹಾಗೂ ಯಮುನ ರಾಗವನ್ನು ನುಡಿಸಿದಾಗ ಕೇಳುಗರಿಗೆ ಕೃಷ್ಣ ವೃಂದಾವನದಲ್ಲಿ ಕುಳಿತ ಅನುಭವವಾಯಿತು.

ಯುವಗಾಯಕರಾದ ಎಸ್. ರಮಣಿ ಕರ್ನಾಟಕಿ ಸಂಗೀತದಲ್ಲಿ ಜನರನ್ನು ರಂಜಿಸಿದರೆ, ಹಿಂದುಸ್ತಾನಿ ಗಾಯಕಿ ಶ್ರುತಿ ಸಾಡೋಲಿಕರ್ ನಾಟ್ಯಸಂಗೀತವನ್ನು ಪ್ರಸ್ತುತಪಡಿಸಿದರು. ರಾಮದೇಶಪಾಂಡೆ ಮಾಲ್‌ಕೌಂಸ್ ಹಾಗೂ ಲಲಿತಪಂಚಮ ರಾಗಗಳನ್ನು ಹಾಡಿ ಬಳಿಕ ಭಜನೆ ಕಾರ್ಯಕ್ರಮ ನಡೆಸಿದರು.

ಕೊನೆಯಲ್ಲಿ ವಿನಾಯಕ ತೊರವಿ ತಮ್ಮ ಗಂಭೀರ ಕಂಠದ ಮೂಲಕ ಬೆಳಗಿನ ರಾಗಗಳಾದ ಜೀವನಪುರಿಯನ್ನು ವಿದ್ವತ್ಪೂರ್ಣ ಆಲಾಪನೆ, ಆಕರ್ಷಕ ರಾಗಚಾಲನೆಯ ಮೂಲಕಹಾಡಿ ಜನರಿಗೆ ಸಂಗೀತ ರಸದೌತಣ ಉಣಬಡಿಸಿದರು. ಭಜನ ಹಾಗೂ ಭೈರವಿ ರಾಗಗಳನ್ನು ಹಾಡಿ ಸಂಗೀತ ಪ್ರೇಮಿಗಳ ಮನ ತಣಿಸಿದಾಗ ಮುಂಜಾನೆ ಸೂರ್ಯ ಪರದೆ ಸರಿಸಿ ತನ್ನ ಆಗಮನದ ಸೂಚನೆ ನೀಡುತ್ತಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT