ADVERTISEMENT

ಆಚಾರ್ಯ ಹಬ್ಬ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST

ಕಾಲೇಜಿನ ಆವರಣದ ತುಂಬೆಲ್ಲಾ ಬಣ್ಣ ಬಣ್ಣದ ಹಕ್ಕಿಗಳು. ಎಂದಿನಂತೆ ಕ್ಲಾಸಿಗೆ ಟೈಮಾಯ್ತು ಎಂದು ಓಡುವ ಅವಸರವಿಲ್ಲ. ತಮ್ಮಿಷ್ಟದಂತೆ ಅಲಂಕಾರ ಮಾಡಿಕೊಂಡು ಲಲನೆಯರು ಕ್ಯಾಂಪಸ್‌ನಲ್ಲಿ ಹೆಜ್ಜೆ ಹಾಕುತ್ತಿದ್ದರೆ.... ಹಾ... ಹುಡುಗರ ಕಣ್ಣುಗಳು ಉರಿ ಬಿಸಿಲಲ್ಲೂ ತಂಪು ತಂಪು... ಕೂಲ್ ಕೂಲ್...

ಕಾಲೇಜು ದಿನವೆಂದರೆ ಹಾಗೇನೆ. ಅಲ್ಲಿ ಸಂಭ್ರಮದ ಬುಗ್ಗೆ ಮನೆಮಾಡಿರುತ್ತದೆ. ಇಂತಹ ಸಂಭ್ರಮಕ್ಕೆ ಸಾಕ್ಷಿಯಾಗಿ `ಆಚಾರ್ಯ ಹಬ್ಬ-2012~ ನಡೆಯುತ್ತಲಿದೆ. ಬೆಂಗಳೂರಿನಲ್ಲಿ ನಡೆಯುವ ಕಾಲೇಜು ಹಬ್ಬಗಳಲ್ಲಿ ಅತಿ ದೊಡ್ಡ ಹಬ್ಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇದು ನಾಳೆಯಿಂದ  (ಮಾರ್ಚ್ 15ರಿಂದ 17ರವರೆಗೆ) ಮೂರು ದಿನಗಳವರೆಗೆ  ಹಬ್ಬ ನಡೆಯಲಿದೆ.

ಸೋಲದೇವನಹಳ್ಳಿಯಲ್ಲಿರುವ ಆಚಾರ್ಯ ಇನ್‌ಸ್ಟಿಟ್ಯೂಟ್‌ನ ನಾಗರತ್ನಮ್ಮ ಸಭಾಂಗಣದಲ್ಲಿ ಈ ಹಬ್ಬ  ನಡೆಯಲಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಆಗಸಕ್ಕೆ ಬಲೂನ್‌ಗಳನ್ನು ಹಾರಿಬಿಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಲಾಗುವುದು.

ಬಲೂನ್‌ಗಳ ಜತೆಗೆ ತಮ್ಮ ಸಂಭ್ರಮವನ್ನೂ ಹರಿಬಿಟ್ಟು `ಡಿಂಕ ಚಿಕ~... `ಛಮ್ಮಕ್ ಛಲ್ಲೊ~ ಹಾಡಿಗೆ ಹೆಜ್ಜೆ ಹಾಕುವ ಆ ಮಜವೇ ಬೇರೆ ಎನ್ನುತ್ತಾರೆ ವಿದ್ಯಾರ್ಥಿಗಳು.

ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕರೂ ಹಬ್ಬದಲ್ಲಿ ಭಾಗಿಯಾಗುತ್ತಾರೆ. ಹಾಡು, ಮೋಜು ಮಸ್ತಿ ಜತೆಗೆ ಸ್ಪರ್ಧೆಗಳೂ ವಿದ್ಯಾರ್ಥಿಗಳಿಗಾಗಿ ಕಾದಿರುತ್ತವೆ. ಯಾರಿಗೇನೂ ಕಮ್ಮಿಯಿಲ್ಲ ಎಂಬಂತೆ ಸ್ಪರ್ಧೆಗಿಳಿಯಲೂ ಅಷ್ಟೇ ಉತ್ಸಾಹ ತುಂಬಿರುತ್ತದೆ. ಅವರ ಪ್ರತಿಭೆಯನ್ನು ಪರೀಕ್ಷಿಸಲು ರಸಪ್ರಶ್ನೆ, ಕಂಪ್ಯೂಟರ್ ಗೇಮ್, ಪೋಸ್ಟರ್ ಪೇಟಿಂಗ್, ಫೇಸ್ ಪೇಟಿಂಗ್, ನೃತ್ಯ ಮೊದಲಾದ ಸ್ಪರ್ಧೆಗಳು ಅಲ್ಲಿ ಏರ್ಪಟ್ಟಿರುತ್ತವೆ.

ಸ್ಪರ್ಧೆಯಾಯಿತು ಇನ್ನು ಮನರಂಜನೆಗೆ? ಸ್ಕಿಟ್, ಕಿರು ನಾಟಕ, ಫ್ಯಾಶನ್ ಷೋ ಮೊದಲಾದ ವೇದಿಕೆಯ ಕಾರ್ಯಕ್ರಮಗಳಿಗೂ ವಿದ್ಯಾರ್ಥಿಗಳು ತಯಾರು.
ಬೆಂಗಳೂರಿನ ಸುಮಾರು 60 ಕಾಲೇಜುಗಳ 20 ಸಾವಿರ ವಿದ್ಯಾರ್ಥಿಗಳು ಈ ಹಬ್ಬದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
 
ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಇರಾಕ್, ಭೂತಾನ್, ಆಫ್ಘಾನಿಸ್ತಾನ್, ದಕ್ಷಿಣ ಕೊರಿಯ ಮೊದಲಾದ ದೇಶಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಸಂಸ್ಕೃತಿ ವಿನಿಮಯವಾದಂತಾಗುತ್ತದೆ ಎನ್ನುತ್ತಾರೆ ಕೋರ್ ಕಮಿಟಿಯ ಸದಸ್ಯ ಶ್ರೀಕಾಂತ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.