ADVERTISEMENT

ಆತ್ಮದ ಅನಾವರಣ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 19:30 IST
Last Updated 17 ಜನವರಿ 2012, 19:30 IST

ಖ್ಯಾತ ಕಲಾವಿದರಾದ ದೆಹಲಿಯ ಅನಿತಾ ತಿವಾರಿ, ಬೆಂಗಳೂರಿನ ಫಾತಿಮಾ, ಹೈದರಾಬಾದ್‌ನ ನರಸಿಂಹಲು ಖಂಡೆ ಮತ್ತು ಕಪ್ಪಾರಿ ಕಿಶನ್ ಹಾಗೂ ಮುಂಬೈನ ಶಿರ್‌ವಾಡ್ಕರ್ ಅವರ ಅಪರೂಪದ ಕಲಾಕೃತಿಗಳು ಜ.20ರವರೆಗೆ ಪ್ರದರ್ಶನಗೊಳ್ಳಲಿವೆ.

ವಿಷಯ ಸುಖಗಳ ಅಪೇಕ್ಷೆ, ಇಂದ್ರಿಯಗಳ ಹಸಿವನ್ನು ಕಣ್ಣು ಹಾಗೂ ಮನಸ್ಸಿನ ಮೂಲಕ ಅಭಿವ್ಯಕ್ತಿಗೊಳಿಸಬಹುದು. ಆದರೆ ಆತ್ಮದ ಕಣ್ಣನ್ನು ಕಾಣುವುದು ಹೇಗೆ? ಆತ್ಮದ ಅರಿವನ್ನು ಬಿಂಬಿಸುವಂತಿವೆ ಅನಿತಾ ಅವರ ಸೋಲ್ ಆರ್ಟ್ ಚಿತ್ರಕಲಾಕೃತಿಗಳು.

ಭಾರತೀಯ ಪರಂಪರೆಯಲ್ಲಿ ಅಧ್ಯಾತ್ಮಕ್ಕೆ ವಿಶಿಷ್ಟ ಸ್ಥಾನವಿದೆ. ಅಮರತ್ವದ ಸಂಕೇತದಂತಿರುವ ಆತ್ಮದ ಪರಿಕಲ್ಪನೆಯನ್ನು ಸಂತರು, ಋಷಿಮುನಿಗಳು ಪ್ರತಿಪಾದಿಸುವ ಪ್ರಯತ್ನವನ್ನು ಹಿಂದಿನಿಂದಲೂ ಮಾಡಿದ್ದಾರೆ. ಆತ್ಮ ಸೃಷ್ಟಿಕರ್ತನಿದ್ದಂತೆ. ಆತ್ಮದ ಪರಿಕಲ್ಪನೆ ಮನುಷ್ಯನ ಅನುಭವ, ವಿಚಾರಶಕ್ತಿ, ನಂಬಿಕೆ ಮೊದಲಾದವುಗಳನ್ನು ಮೀರಿದ್ದು, ಕಾಲಾತೀತವಾದುದು.

ಅಗಣಿತ ಕವಲುಗಳ ಮೊತ್ತ ಮನುಷ್ಯನ ಜೀವನ. ದೇಹದಲ್ಲಿ ಆತ್ಮವೆನ್ನುವುದು ಅಗೋಚರವಾಗಿ ಮಿಳಿತಗೊಂಡಿದೆ. ಮನುಷ್ಯನ ಮನಸ್ಸಿನಲ್ಲಿರುವ ಆಸೆ ಆಕಾಂಕ್ಷೆಗಳು, ಬಾಹ್ಯ ಸೌಂದರ್ಯ ಇವೆಲ್ಲವೂ ಇಲ್ಲಿ ಬಿಂಬಿತವಾಗಿವೆ. ಆತ್ಮದ ಬೆಳಕನ್ನು ಬಿಂಬಿಸುವ ಪ್ರಯತ್ನ ಹಾಗೂ ಅದನ್ನು ಅರಿಯುವ ಹೆಚ್ಚಿನ ಯತ್ನ ಇವರ ಕಲಾಕೃತಿಗಳಲ್ಲಿ ಕಾಣಬಹುದು.

ಇವರ ಕಲಾಕೃತಿಗಳೆಲ್ಲವೂ ಅಧ್ಯಾತ್ಮ ಅನುಭವ ಕಟ್ಟಿಕೊಡುತ್ತದೆ. ಇವರು ಕಲೆಯ ಮೂಲಕ ನಿಸರ್ಗ ಮತ್ತು ದೇವರನ್ನು ಒಂದುಗೂಡಿಸುವ ಪ್ರಯತ್ನ ಕೂಡಾ ಮಾಡಿದ್ದಾರೆ. ಅಧ್ಯಾತ್ಮದ ಅನ್ವೇಷಣೆಯಲ್ಲಿ ತೊಡಗಿರುವಂತೆ ಕಾಣುವ ಈ ಕಲಾಕೃತಿಗಳು ಶಾಂತಿ ಹಾಗೂ ಆತ್ಮದ ಪರಿಶುದ್ಧತೆಯನ್ನು ನೋಡುಗರಿಗೆ ಕಟ್ಟಿಕೊಡುತ್ತವೆ.

ಪ್ರಕೃತಿ ಜೀವಂತಿಕೆಯ ಸಂಕೇತ. ಪ್ರಕೃತಿ ಜೀವಶಕ್ತಿಯ ಕೇಂದ್ರಬಿಂದು. ಈ ಚಿತ್ರಕಲಾಕೃತಿಗಳೂ ಸಹ ನಿಸರ್ಗದಿಂದ ಸ್ಫೂರ್ತಿಗೊಂಡಿದೆ. ನಿಸರ್ಗದ ರಮ್ಯ ಚೆಲುವನ್ನು ಆಸ್ವಾದಿಸುವಾಗ ಮನಸ್ಸು ಪರವಶಗೊಳ್ಳುತ್ತದೆ. ಅಧ್ಯಾತ್ಮದ ಸೆಳೆತಕ್ಕೆ ಸಿಲುಕುತ್ತದೆ. ಈ ಕಲಾಕೃತಿಗಳು ಆಧ್ಯಾತ್ಮಿಕ ಅನುಭವ, ಸಂತೋಷ, ಶಾಂತಿಯ ಭಾವ ತಂದುಕೊಡುತ್ತವೆ. ಚಿತ್ರಕಲಾಕೃತಿಗಳಲ್ಲಿರುವ ಅಲಂಕಾರ ದಿವ್ಯಾನಂದ ನೀಡುತ್ತದೆ. ಕಲಾಕೃತಿಗಳಲ್ಲಿರುವ ನೆರಳು ಬೆಳಕಿನ ಸಂಯೋಜನೆಗೆ ಎಲ್ಲ ಬಣ್ಣಗಳು ಹದವಾಗಿ ಬೆರೆತಿವೆ.

`ನಾನು ಸದಾ ಕಾಲ ನನ್ನ ಕೆಲಸ ಮತ್ತು ಬದುಕಿನ ಬಗ್ಗೆ ವಿವಿಧ ದೃಷ್ಟಿಕೋನದಲ್ಲಿ ಸ್ವವಿಮರ್ಶೆ ಮಾಡಿಕೊಳ್ಳುತ್ತಿರುತ್ತೇನೆ. ಈ ಯೋಚನೆಗಳಲ್ಲಿ ಲೌಕಿಕ ಮತ್ತು ಅಧ್ಯಾತ್ಮದ ಭಾವಗಳು ತುಂಬಿಕೊಂಡಿರುತ್ತವೆ~ ಎನ್ನುತ್ತಾರೆ ಕಲಾವಿದೆ ಅನಿತಾ ತಿವಾರಿ. 

ಹೆಣ್ಣಿನ ಮನೋತುಮುಲಗಳು ಹೆಣ್ಣಿಗೇ ಹೆಚ್ಚು ಅರ್ಥವಾಗುತ್ತವೆ ಎಂಬುದಕ್ಕೆ ಅನಿತಾ ಅವರ `ಟಾಕಿಂಗ್ ಟು ಹೆವೆನ್~ ಕಲಾಕೃತಿ ಉದಾಹರಣೆ. ದಿಗಂತವನ್ನು ದಿಟ್ಟಿಸುತ್ತಿರುವ ಆ ಯುವತಿಯ ಕಂಗಳು ಸುಖದ ಸ್ವಪ್ನದಲ್ಲಿ ತೇಲುತ್ತಿವೆ. ಹಗಲುಗನಸು ಕಾಣುವಂತೆ ಕೂತಿರುವ ಭಂಗಿಯಲ್ಲಿ ಆಕೆಯ ಮನಸ್ಸಿನಲ್ಲಿ ನಡೆಯುತ್ತಿರುವ ಸಂಘರ್ಷಗಳೆಲ್ಲವೂ ಆಕೆಯ ಮುಖದಲ್ಲಿ ಬಿಂಬಿತಗೊಂಡಿವೆ.

ಕಲಾವಿದ ಖಂಡೆ ಅವರ ಕಲಾಕೃತಿಗಳಲ್ಲಿ ಜನಪದದ ಸೊಗಡಿದೆ. ಕಿಶನ್ ಅವರು ತಮ್ಮ ಕುಂಚದಲ್ಲಿ ಹೆಣ್ಣಿನ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ.

ಸ್ಥಳ: ರಿನೈಸೆನ್ಸ್ ಗ್ಯಾಲರಿ, 104, ವೆಸ್ಟ್‌ಮಿನಿಸ್ಟರ್ 13, ಕನ್ನಿಂಗ್‌ಹ್ಯಾಂ ರಸ್ತೆ. ಬೆಳಿಗ್ಗೆ 11ರಿಂದ ಸಂಜೆ 7. 
 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.