ADVERTISEMENT

ಆತ್ಮೋನ್ನತಿಗೆ ಸಂಗೀತ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 19:30 IST
Last Updated 20 ಜೂನ್ 2011, 19:30 IST
ಆತ್ಮೋನ್ನತಿಗೆ ಸಂಗೀತ
ಆತ್ಮೋನ್ನತಿಗೆ ಸಂಗೀತ   

ನಮ್ಮ `ಸ್ವರ~ ಪ್ರಕೃತಿ. ಆದರೆ, ಸಂಗೀತ ಒಂದು ಸಂಸ್ಕೃತಿ. ಸಾಮಾನ್ಯವಾಗಿ ಸಂಗೀತವನ್ನು ಇಷ್ಟಪಡದವರೇ ಇಲ್ಲ. ಒಳ್ಳೆಯ ಸಂಗೀತ ಮನಸ್ಸಿಗೆ ಮುದ ನೀಡುತ್ತದೆ. ಸುಶ್ರಾವ್ಯ ಸಂಗೀತ ಕೇಳುವುದರಿಂದ ಮಾನಸಿಕ ಒತ್ತಡ ಕಡಿಮೆ ಆಗಿ ಮನಸ್ಸು ಹಗುರವಾಗುತ್ತದೆ.

ಅದಕ್ಕೆ ಭಾಷೆಯ ಅಗತ್ಯವಿಲ್ಲ. ನಿಜವಾಗಿ ಸಂಗೀತ ಆಸ್ವಾದಿಸುವವರು ಯಾವುದೇ ಸಂಗೀತವನ್ನು ಕೇಳಬಲ್ಲರು. ಖ್ಯಾತ ಸಾಹಿತಿ ಲಾಂಗ್ ಫೆಲೋ ಹೇಳುವಂತೆ `ಸಂಗೀತ ಎಂಬುದು ಇಡೀ ಮನುಕುಲಕ್ಕೆ ಸುಲಭವಾಗಿ ಅರ್ಥವಾಗುವ ಏಕೈಕ ಭಾಷೆ~.

ಸಂಗೀತಕ್ಕೆ ಅಸಾಧಾರಣವಾದ ಶಕ್ತಿ ಹಾಗೂ ವ್ಯಾಪ್ತಿ ಇದೆ. ನದಿಯ ಮೊರೆತದಂತೆ ಇದರ ಶ್ರುತಿ. ಮಂದ ಮಾರುತದಂತೆ ಇದರ ಚಲನವಲನ. ಸಖನಂತೆ ಬಂದು ನಮ್ಮ ಜೊತೆ ಸಲ್ಲಾಪಗೈಯುವುದು. ಮನದ ನೋವನ್ನೆಲ್ಲಾ ಮರೆಸಿ ಹೋಗುವುದು.
 
ಸಂಗೀತ ಕೇಳುವುದು ಆರೋಗ್ಯಕ್ಕೆ ಹಿತ. ಹಲವು ರೋಗಗಳನ್ನು ಶಮನಗೊಳಿಸುವ ಚಿಕಿತ್ಸಾ ಸಾಮರ್ಥ್ಯ ಸಂಗೀತಕ್ಕಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.

 ಬರಡಾದ ವಾತಾವರಣದಲ್ಲಿ ಸಂತೋಷದ ಕಾರಂಜಿ ಚಿಮ್ಮಿಸಿ ಆನಂದ ಲಹರಿ ಸೃಷ್ಟಿಸುವ ತಾಕತ್ತು ಸಂಗೀತಕ್ಕೆ ಇದೆ. ರೊಚ್ಚಿಗೆದ್ದ ಮನಸ್ಸು ಮತ್ತು ದಣಿದ ದೇಹಕ್ಕೆ ಆರಾಮ ನೀಡಬಲ್ಲದು. ಈ ಕಾರಣದಿಂದಲೇ ರೈತರು, ಕೃಷಿಕರು, ಕಾರ್ಮಿಕರು ಹಾಡುತ್ತ ದುಡಿಮೆ ಮಾಡುತ್ತಾರೆ.

ಭತ್ತದ ಸಸಿ ನೆಡುವಾಗ, ಉಳುವಾಗ, ಪೈರು ಕಟಾವು ಮಾಡುವಾಗ, ಅಕ್ಕಿ, ಗೋಧಿ, ರಾಗಿ ಬೀಸುವಾಗ ಹಳ್ಳಿಗರು ಹಾಡುವ ಹಾಡುಗಳು ಸರಳ, ಸುಂದರ ಶಬ್ದಗಳಿಂದ ಕೂಡಿದ ಜಾನಪದ ಸಂಗೀತ ಎನಿಸಿದೆ.

ಸಂಗೀತ ಪ್ರಯೋಗ ಎರಡು ಬಗೆಯದಾಗಿದೆ. ಒಂದು ಗಾಯನ ಸಂಗೀತ, ಮತ್ತೊಂದು ವಾದ್ಯ ಸಂಗೀತ. ವಿದೇಶಿಯರಲ್ಲಿ ಗಾನ ಸಂಗೀತಕ್ಕೆ ಹೆಚ್ಚಿನ ಮನ್ನಣೆಯಿದೆ. ಗಾಯನ ಬಹುಮಟ್ಟಿಗೆ ಸಾಂದರ್ಭಿಕವಾಗಿರುತ್ತದೆ.

ಭಾರತೀಯ ಸಂಗೀತದಲ್ಲಿ ಹಾಡುಗಾರನಿಗೆ ಸುಮಧುರವಾದ ಕಂಠ ಹಾಗೂ ಒಳ್ಳೆಯ ರಾಗ ಜ್ಞಾನದ ಜೊತೆಗೆ ಪಕ್ಕವಾದ್ಯಗಳ ಮೇಳವಿರಬೇಕು. ಪಕ್ಕವಾದ್ಯಗಳು ಸಂಗೀತಗಾರನಿಗೆ ನೆರಳಿನಂತಿರಬೇಕು. ಮುಂದಿನಿಂದ ಮಾರ್ಗದರ್ಶನ ಮಾಡುತ್ತಾ ಹಿಂದಿನಿಂದ ಹುರಿದುಂಬಿಸಿ ಬೆನ್ನು ತಟ್ಟುವ ಗೆಳೆಯರಂತಿರಬೇಕು. ಆಗ ಮಾತ್ರ ಕೇಳುಗರಿಗೆ ನಾದ ಸೌಖ್ಯ ಪ್ರಾಪ್ತವಾಗುತ್ತದೆ.

ಸಂಗೀತ ಕೇಳುಗರನ್ನು ಪ್ರಚೋದಿಸಬಾರದು, ಉದ್ರೇಕಿಸಬಾರದು. ಬದಲಾಗಿ ಸೌಖ್ಯವನ್ನೂ ಸಂತಸವನ್ನೂ ಸಾಂತ್ವನವನ್ನೂ ನೀಡಬೇಕು. ಆ ಶಕ್ತಿ ಭಾರತೀಯ ಸಂಗೀತಕ್ಕೆ ಇದೆ. ಪಾಶ್ಚಾತ್ಯ ಸಂಗೀತ ಕೇಳುಗರ ಮನಸ್ಸು ಕೆರಳಿಸಿದರೆ, ಭಾರತೀಯ ಸಂಗೀತ ಮನಸ್ಸನ್ನು ಅರಳಿಸುತ್ತದೆ. ಭಾರತೀಯ ಸಂಗೀತದಲ್ಲಿ ಸುಂದರ ಸಾಹಿತ್ಯವಿದೆ. ಸೂಕ್ಷ್ಮ ಸಂದೇಶವಿದೆ.

ಸಂಗೀತ ಆತ್ಮೋಲ್ಲಾಸಕ್ಕೂ ಹೌದು, ಆತ್ಮೋನ್ನತಿಗಾಗಿಯೂ ಹೌದು. ಮಕ್ಕಳಲ್ಲಿ ಬಾಲ್ಯದಿಂದಲೇ ಸಂಗೀತ ಪ್ರೇಮ ಮೂಡಿಸುವುದರಿಂದ, ಸಂಗೀತ ಕಲಿಸುವುದರಿಂದ ಸಂಸ್ಕಾರ ನೀಡಿದಂತಾಗುತ್ತದೆ. ಇಂತಹ ಸಂಗೀತ ಸದಾ ನಮ್ಮ ಸಂಗಾತಿಯಾಗಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.