ADVERTISEMENT

ಆನ್‌ಲೈನ್‌ನಲ್ಲಿ ಹಾಡುಹಕ್ಕಿಗಳು!

ಪ್ರಜಾವಾಣಿ ವಿಶೇಷ
Published 20 ಜೂನ್ 2013, 19:59 IST
Last Updated 20 ಜೂನ್ 2013, 19:59 IST

ಹೊರಗಡೆ ಭಾರಿ ಮಳೆ ಸುರಿಯುವಾಗ, ಇನ್ನೇನು ಮಳೆ ಸುರಿದೇಬಿಟ್ಟಿತು ಎಂಬಂಥ ಕರಿಮೋಡಗಳು ದಟ್ಟೈಸಿ ತಂಗಾಳಿ ಬೀಸುವಾಗ, ಸದ್ದಿಲ್ಲದೆ ಬಾನು ಗುಡುಗಿದಾಗ ಎಂದೋ ಮನದೊಳಗೆ ಕುಳಿತ ಹಾಡು ಗುನುಗಿ ನಾವೇ ಅಚ್ಚರಿಗೊಳಗಾಗುತ್ತೇವೆ. ಮಲ್ಹಾರ ರಾಗ ಹಾಡಿ ಮಳೆ ಸುರಿಸಿದ ಸಂಗೀತ ವಿದ್ವಾಂಸರ ಬಗ್ಗೆಯೂ ಕೇಳಿದ್ದೇವೆ. ಎಷ್ಟೋ ಮಂದಿಯ ಪಾಲಿಗೆ ಸಂಗೀತವೆಂಬುದು ಚಿಕಿತ್ಸೆಯೂ ಹೌದು.

ಸಂಗೀತದ ಮೂಲಪಾಠ ಕಲಿಯದೆಯೇ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದವರೂ ನಮ್ಮ ನಡುವೆ ಇದ್ದಾರೆ. ವಾಹಿನಿಗಳು ನಡೆಸುವ ರಿಯಾಲಿಟಿ ಶೋಗಳು ಅಂಥವರ ಕನಸು ನನಸು ಮಾಡುವ ವೇದಿಕೆಗಳಾಗುತ್ತವೆ. ಐಟಿ/ ಕಾರ್ಪೊರೇಟ್ ಜಗತ್ತು ಕೂಡಾ ವಾರಾಂತ್ಯವೆಂದರೆ ಸಂಗೀತಧ್ಯಾನದಲ್ಲಿ ತೊಡಗುತ್ತದೆ.

ಯುಬಿ ಸಿಟಿಯ ಮೂಲಕ ವಿಶ್ವದರ್ಜೆಯ ಕಲಾವಿದರನ್ನು, ವಿದ್ವಾಂಸರನ್ನು ಬೆಂಗಳೂರಿಗೆ ಕರೆಸಿ ಸಂಗೀತದ ರಸದೌತಣ ಉಣಬಡಿಸುತ್ತಿರುವ ಕಿಂಗ್‌ಫಿಶರ್ ಕಂಪೆನಿ ಯುವ ಗಾಯಕರಿಗೆಂದೇ ಒಂದು ವಿಶೇಷ ವೇದಿಕೆಯನ್ನು ಆರಂಭಿಸಿದೆ. ಜೂನ್ 21, ವಿಶ್ವ ಸಂಗೀತ ದಿನದ ಹಿನ್ನೆಲೆಯಲ್ಲಿ ಒದಗಿಸಿರುವ ಅವಕಾಶವಿದು.

ಆನ್‌ಲೈನ್‌ನಲ್ಲೇ ಗಾಯನ!
`ಕಿಂಗ್‌ಫಿಶರ್ ಸ್ಟ್ರಾಂಗ್ ಬ್ಯಾಕ್‌ಸ್ಟೇಜ್' ಹೆಸರಿನ ಈ ಕಾರ್ಯಕ್ರಮ ಆನ್‌ಲೈನ್‌ನಲ್ಲೇ ನಡೆಯುವುದು ವಿಶೇಷ. ಫ್ರೈಡೇಮೂವೀಸ್ ಡಾಟ್‌ಕಾಮ್ ಎಂಬ ಜಾಲತಾಣದ ಸಹಯೋಗದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮವಿದು.

ಇದು ಸ್ಪರ್ಧೆಯಲ್ಲ. ಇದಕ್ಕೆ ಫೇಸ್‌ಬುಕ್, ವೆಬ್‌ಸೈಟ್, ಕಿಂಗ್‌ಫಿಶರ್‌ನ ಫೇಸ್‌ಬುಕ್ ಪೇಜ್ ಮತ್ತು ಯೂಟ್ಯೂಬ್‌ಗಳೇ ವೇದಿಕೆ. ಸಂಗೀತದಲ್ಲಿ ಪಳಗಿರುವ ಯುವ ಪ್ರತಿಭೆಗಳಿಗೆ ವೇದಿಕೆ ನೀಡಿ ಅವರ ಪ್ರತಿಭೆಗೆ ಅವಕಾಶ ಕಲ್ಪಿಸುವುದಷ್ಟೇ ಇದರ ಉದ್ದೇಶ. ಒಂದು ವರ್ಷವಿಡೀ ನಡೆಯುವ ಈ ಕಾರ್ಯಕ್ರಮದಲ್ಲಿ ದೇಶದ ಯಾವುದೇ ಮೂಲೆಯಿಂದ ಆಸಕ್ತರು ಪಾಲ್ಗೊಳ್ಳಬಹುದು. (ಹೆಚ್ಚಿನ ವಿವರ Freidaymoviez.com/ http://www.kingfisherworld.com ನಲ್ಲಿದೆ).

ಮನ್ನು ಸಿಂಗ್‌ನ `ಖುದಾ'
ವಿಪ್ರೊದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಮನ್ನು ಸಿಂಗ್ ಬೆಂಗಳೂರಿನಿಂದ ಈ ಆನ್‌ಲೈನ್ ಗಾಯನದಲ್ಲಿ ಪಾಲ್ಗೊಂಡಿರುವ ಮೊದಲಿಗ. ಯೂಟ್ಯೂಬ್‌ನಲ್ಲಿ, ಕಿಂಗ್‌ಫಿಶರ್ ಫೇಸ್‌ಬುಕ್ ಪೇಜ್‌ನಲ್ಲಿ ಮನ್ನು `ಖುದಾ' ಹೇಳುತ್ತಿದ್ದಾರೆ.

ಸಂಗೀತವೆಂದರೇನು ಎಂದು ಕೇಳಿದರೆ, `ಅದು ನನ್ನ ಪಾಲಿನ ಔಷಧಿ. ನಾನು ಎಲ್ಲೋ ಕಳೆದುಹೋಗುತ್ತಿದ್ದೇನೆ ಅನಿಸಿದಾಗ ಯಾವುದಾದರೊಂದು ಹಾಡು ಹಾಡಿ ಚೈತನ್ಯ ತುಂಬಿಸಿಕೊಳ್ಳುತ್ತೇನೆ' ಎನ್ನುವ ಮನ್ನು ಅವರ ಸ್ವರ ಭಾರವಾಗುತ್ತದೆ.

`ಬದುಕಿನಲ್ಲಿ ಏನನ್ನು ಬೇಕಾದರೂ ಕಳೆದುಕೊಳ್ಳಲು ನಾನು ಸಿದ್ಧ. ಆದರೆ ಸಂಗೀತವನ್ನಲ್ಲ. ಕಾಲೇಜಿನಲ್ಲಿ ಬ್ಯಾಂಡ್ ಒಂದಕ್ಕೆ ಹಾಡುತ್ತಿದ್ದೆ. ಅಣ್ಣನೂ ಸ್ವಂತ ಬ್ಯಾಂಡ್ ಹೊಂದಿದ್ದ. ಆ ಸಂದರ್ಭದಲ್ಲೇ ಜೊತೆಯಾದ ಭರತ್ ಹನ್ಸ್ ಮತ್ತು ಸೌರಬ್ ಮಲ್ಹೋತ್ರಾ ಅವರಿಗೂ ಸಂಗೀತವೆಂದರೆ ಪ್ರಾಣ. ಅವರು ಗಿಟಾರ್, ಡ್ರಮ್ಸ ಬಾರಿಸಿದರೆ ನಾನು ಹಾಡುತ್ತಿದ್ದೆ. ಹಾಗೆ ಹಾಡಿದ್ದನ್ನೆಲ್ಲ ರೆಕಾರ್ಡ್ ಮಾಡಿಕೊಂಡು ಅವರು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಂತರ್ಜಾಲದಲ್ಲಿ ಹರಿಯಬಿಡುತ್ತಿದ್ದರು.

ಆದರೆ ಹುಡುಗಾಟಿಕೆಗೆ ಮಾಡಿದ ಆ ಕೆಲಸ ನನಗೆ ಕಿಂಗ್‌ಫಿಶರ್‌ನ ಆನ್‌ಲೈನ್ ಗಾಯನಕ್ಕೆ ವೇದಿಕೆಯೊದಗಿಸುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ. `ಖುದಾ' ಬರೆದು ಸ್ವರಸಂಯೋಜನೆ ಮಾಡಿದ್ದೂ ಅವರೇ' ಎಂದು ಮನ್ನು ಕೃತಜ್ಞತೆ ಸಲ್ಲಿಸುತ್ತಾರೆ.

ಐದು ನಿಮಿಷ 16 ಸೆಕೆಂಡುಗಳ ಅವಧಿಯ ಈ ಹಾಡಿನಲ್ಲಿ ಮನ್ನು ಹಾಡುಗಾರಿಕೆಯ ಶಕ್ತಿಯನ್ನೆಲ್ಲ ಬಸಿದುಕೊಟ್ಟಿದ್ದಾರೆ. ಅಕೂಸ್ಟಿಕ್ ಗಿಟಾರ್ ಬಾರಿಸುವ ಕಲೆಯೂ ಮನ್ನುಗೆ ಕರಗತವಾಗಿದೆಯಂತೆ.

`ಉದ್ಯೋಗ ಮತ್ತು ಅಭಿರುಚಿಯನ್ನು ಸರಿದೂಗಿಸಿಕೊಂಡು ಹೋಗುವುದು ಸ್ವಲ್ಪ ಕಷ್ಟವಾಗುತ್ತಿದೆ. ಆದರೆ ಎರಡೂ ಬೇಕಲ್ವಾ. ನಾನು ಹಿನ್ನೆಲೆ ಗಾಯಕನಾಗಿ ಚಿತ್ರರಂಗದಲ್ಲಿ ಹೆಸರು ಮಾಡಬೇಕು ಮತ್ತು ನ್ಯೂಯಾರ್ಕ್‌ನ ವೇದಿಕೆಯಲ್ಲಿ ತುಂಬಿದ ಸಭಾಂಗಣದಲ್ಲಿ ಹಾಡಬೇಕು. ಈ ಆನ್‌ಲೈನ್ ಗಾಯನದ ಅವಕಾಶ ನನ್ನ ಕನಸು ಸಾಕಾರಗೊಳ್ಳುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆ ಎಂದು ಭಾವಿಸುತ್ತೇನೆ' ಎಂದು ಅವರು ಹೇಳುತ್ತಾರೆ.

ಈ ತಿಂಗಳು ನಾಲ್ಕು ಮಂದಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದ್ದು, ಆಸಕ್ತರು ಆಲಿಸಿ `ಕಮೆಂಟ್' ದಾಖಲಿಸಬಹುದು. ಮುಂದಿನ ದಿನಗಳಲ್ಲಿ ಪ್ರತಿ ವಾರ ಒಂದೊಂದು ವಿಡಿಯೊ ವೀಕ್ಷಿಸುವ ಅವಕಾಶವಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.